ಬಮೂಲ್‌ ತೆರಿಗೆ ವಿವಾದ: ಕಾನೂನು ಸಮರಕ್ಕೆ ದಾರಿ ಮಾಡಿಕೊಡುತ್ತಾ ಡಿ.ಕೆ. ಸುರೇಶ್ ಹೇಳಿಕೆ?
x

ಬಮೂಲ್‌ ತೆರಿಗೆ ವಿವಾದ: ಕಾನೂನು ಸಮರಕ್ಕೆ ದಾರಿ ಮಾಡಿಕೊಡುತ್ತಾ ಡಿ.ಕೆ. ಸುರೇಶ್ ಹೇಳಿಕೆ?

ಸಹಕಾರ ತತ್ವದಡಿ ನಡೆಯುವ ಸಂಸ್ಥೆಗಳು ತೆರಿಗೆಯಿಂದ ಹೊರತಾಗಿರಬೇಕು ಎಂಬುದು ಒಂದು ವಾದವಾದರೆ, ಕಾನೂನಾತ್ಮಕವಾಗಿ ತೆರಿಗೆ ಪಾವತಿ ಕಡ್ಡಾಯ ಎಂಬುದು ಮತ್ತೊಂದು ವಾಸ್ತವವಾಗಿದೆ.


Click the Play button to hear this message in audio format

ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ಅವರು, ಬಮೂಲ್ ಲಾಭಾಂಶದಲ್ಲಿ ಕೇಂದ್ರಕ್ಕೆ ತೆರಿಗೆ ಪಾವತಿಸುವುದಿಲ್ಲ ಎಂದು ನೀಡಿರುವ ಹೇಳಿಕೆ ಇದೀಗ ರಾಜ್ಯ ರಾಜಕೀಯ ಮತ್ತು ಸಹಕಾರ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಹಕಾರ ತತ್ವದಡಿ ನಡೆಯುವ ಸಂಸ್ಥೆಗಳು ತೆರಿಗೆಯಿಂದ ಹೊರತಾಗಿರಬೇಕು ಎಂಬುದು ಒಂದು ವಾದವಾದರೆ, ಕಾನೂನಾತ್ಮಕವಾಗಿ ತೆರಿಗೆ ಪಾವತಿ ಕಡ್ಡಾಯ ಎಂಬುದು ಮತ್ತೊಂದು ವಾಸ್ತವವಾಗಿದೆ.

ಸಹಕಾರ ಸಂಘಗಳು ರೈತರ ಒಡೆತನದಲ್ಲಿರುವ ಸಂಸ್ಥೆಗಳು. ಇವು ಲಾಭಗಳಿಸುವ ಉದ್ದೇಶಕ್ಕಿಂತ ಹೆಚ್ಚಾಗಿ, ಸದಸ್ಯರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ, ಬಮೂಲ್‌ ಕೇಂದ್ರಕ್ಕೆ ತೆರಿಗೆ ನೀಡುವುದಿಲ್ಲ ಎಂಬ ನಿಲುವನ್ನು ಪ್ರದರ್ಶಿಸಿದೆ. ಆದರೆ, ಭಾರತೀಯ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ನಿರ್ದಿಷ್ಟ ವಿನಾಯಿತಿಗಳನ್ನು ಹೊರತುಪಡಿಸಿ, ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಒಕ್ಕೂಟಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಡಿ.ಕೆ. ಸುರೇಶ್ ಅವರ ಹೇಳಿಕೆಯು ರಾಜಕೀಯವಾಗಿ ಒಂದು ನಿಲುವನ್ನು ಬಿಂಬಿಸಿದರೂ, ಆರ್ಥಿಕವಾಗಿ ಇದು ಸಂಕೀರ್ಣವಾದ ಕಾನೂನು ಪ್ರಕ್ರಿಯೆಯನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಸಹಕಾರ ಸಂಘಗಳು - ತೆರಿಗೆ ಕಾನೂನುಗಳು

ಸಹಕಾರ ಸಂಘಗಳ ಕಾಯ್ದೆ1959ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಇವುಗಳನ್ನು ನಿಯಂತ್ರಿಸುತ್ತವೆ. ಆದರೆ, ಆದಾಯ ತೆರಿಗೆ ಕಾಯ್ದೆಯು ಕೇಂದ್ರ ವಿಷಯವಾಗಿದೆ. ಸಹಕಾರ ಸಂಘಗಳಿಗೆ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ತೆರಿಗೆ ವಿನಾಯಿತಿಗಳಿವೆ. ಆದರೆ, ಈ ವಿನಾಯಿತಿಗಳು ಸೀಮಿತವಾಗಿರುತ್ತವೆ. ಹಾಲಿನ ಸಂಸ್ಕರಣೆ, ಮಾರುಕಟ್ಟೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಿಂದ ಬರುವ ಲಾಭದ ಮೇಲೆ ಆದಾಯ ತೆರಿಗೆ ಇಲಾಖೆಯು ಸೂಕ್ಷ್ಮವಾಗಿ ಗಮನಹರಿಸುತ್ತದೆ. ದೊಡ್ಡ ಒಕ್ಕೂಟಗಳು ಕೇವಲ ಸದಸ್ಯರಿಂದ ಬರುವ ಆದಾಯವಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳ ಮಾರಾಟದ ಮೂಲಕ ಗಳಿಸುವ ಲಾಭಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಜಿಎಸ್‌ಟಿ ಇದು ಪರೋಕ್ಷ ತೆರಿಗೆಯಾಗಿದೆ. ಹಾಲಿನ ಉತ್ಪನ್ನಗಳು ಮತ್ತು ಇತರ ಸೇವೆಗಳ ಮೇಲೆ ಜಿಎಸ್‌ಟಿ ಅನ್ವಯಿಸುತ್ತದೆ. ಇದನ್ನು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸುವುದು ಕಡ್ಡಾಯ. ಇಲ್ಲಿ ಸಹಕಾರ ಸಂಘ ಎಂಬ ವಿನಾಯಿತಿ ಅನ್ವಯವಾಗುವುದಿಲ್ಲ. ಯಾಕೆಂದರೆ ಇದು ಗ್ರಾಹಕರಿಂದ ಸಂಗ್ರಹಿಸುವ ತೆರಿಗೆಯಾಗಿದೆ.

ತೆರಿಗೆ ಪಾವತಿಸದಿದ್ದರೆ ಎದುರಾಗುವ ಅಪಾಯಗಳು

ತೆರಿಗೆ ಪಾವತಿಸದಿರುವುದು ಒಂದು ಆರ್ಥಿಕ ಅಪರಾಧವಾಗಿ ಪರಿಗಣಿಸಲ್ಪಡುತ್ತದೆ. ಒಂದು ವೇಳೆ ಬಮೂಲ್ ಈ ನಿಲುವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಕಾನೂನು ಕ್ರಮಗಳು ಎದುರಾಗಬಹುದು. ಆದಾಯ ತೆರಿಗೆ ಇಲಾಖೆಯು ತಕ್ಷಣವೇ ವಿಚಾರಣೆಗೆ ನೋಟಿಸ್ ನೀಡಬಹುದು. ತೆರಿಗೆ ಪಾವತಿಸದಿದ್ದರೆ, ಬಾಕಿ ಇರುವ ತೆರಿಗೆಯ ಮೇಲೆ ಹೆಚ್ಚಿನ ಬಡ್ಡಿ ಮತ್ತು ದಂಡ ವಿಧಿಸಲಾಗುತ್ತದೆ. ದೀರ್ಘಕಾಲದವರೆಗೆ ತೆರಿಗೆ ಪಾವತಿಸದೇ ಇದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯಡಿ ಒಕ್ಕೂಟದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವ ಅಥವಾ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇಲಾಖೆಗೆ ಇರುತ್ತದೆ. ಜಿಎಸ್‌ಟಿ ಪಾವತಿಸದಿದ್ದರೆ, ಅದು ನೇರವಾಗಿ ತೆರಿಗೆ ವಂಚನೆ ಪ್ರಕರಣವಾಗುತ್ತದೆ. ಇದು ಒಕ್ಕೂಟದ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗಿದೆ.

ರೈತರ ಮೇಲೆ ಬೀರುವ ಪರಿಣಾಮ

ಯಾವುದೇ ಒಕ್ಕೂಟದ ಲಾಭದ ಒಂದು ಭಾಗವು ರೈತರಿಗೆ ಪ್ರೋತ್ಸಾಹಧನದ ರೂಪದಲ್ಲಿ ಸಿಗುತ್ತದೆ. ಒಂದು ವೇಳೆ ತೆರಿಗೆ ಕಟ್ಟದಿರುವುದರಿಂದ ದಂಡದ ಮೊತ್ತ ಹೆಚ್ಚಾದರೆ, ಒಕ್ಕೂಟದ ಒಟ್ಟಾರೆ ಆರ್ಥಿಕ ಆರೋಗ್ಯ ಕುಸಿಯುತ್ತದೆ. ತೆರಿಗೆ ಮತ್ತು ದಂಡದ ಮೊತ್ತವನ್ನು ಪಾವತಿಸಲು ಒಕ್ಕೂಟವು ತನ್ನ ಮೀಸಲು ನಿಧಿಯಿಂದ ಹಣ ಬಳಸಬೇಕಾಗುತ್ತದೆ. ಇದು ಅಂತಿಮವಾಗಿ ರೈತರಿಗೆ ನೀಡುವ ಹಾಲಿನ ದರ ಅಥವಾ ಬೋನಸ್‌ನಲ್ಲಿ ಕಡಿತಕ್ಕೆ ಕಾರಣವಾಗುತ್ತದೆ. ಬಮೂಲ್‌ನ ನವೀಕರಣ, ಹೊಸ ಡೈರಿ ಘಟಕಗಳ ಸ್ಥಾಪನೆ ಮತ್ತು ತಾಂತ್ರಿಕ ಉನ್ನತೀಕರಣಕ್ಕೆ ಬೇಕಾದ ಹಣದ ಕೊರತೆ ಉಂಟಾಗಬಹುದು.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಮೂಲಕ ಕೇಂದ್ರ ಸರ್ಕಾರವು ಹೈನುಗಾರಿಕೆ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಗಳು, ತಾಂತ್ರಿಕ ನೆರವು, ಮಾರುಕಟ್ಟೆ ವಿಸ್ತರಣೆ ಮತ್ತು ವಿವಿಧ ಸಬ್ಸಿಡಿಗಳನ್ನು ನೀಡುತ್ತದೆ. ಕೇಂದ್ರದೊಂದಿಗೆ ನೇರ ಸಂಘರ್ಷಕ್ಕಿಳಿದಾಗ, ಕೇಂದ್ರದ ನೆರವಿನ ಯೋಜನೆಗಳನ್ನು ರಾಜ್ಯದ ಒಕ್ಕೂಟಗಳು ಪಡೆಯಲು ತೊಂದರೆಯಾಗಬಹುದು. ಇದು ಕರ್ನಾಟಕದ ಹಾಲು ಉತ್ಪಾದಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರಾಜಕೀಯ ಹಿತಾಸಕ್ತಿಗಳಿಗಾಗಿ ಆರ್ಥಿಕ ಸ್ವಾಯತ್ತತೆಯನ್ನು ಪಣಕ್ಕಿಡುವುದು ರೈತರಿಗೆ ನಷ್ಟ ಉಂಟುಮಾಡುತ್ತದೆ ಎನ್ನಲಾಗಿದೆ.

ಸಹಕಾರ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಬಮೂಲ್‌ನಂತಹ ಒಕ್ಕೂಟಗಳು ಬಲವಾಗಿರಬೇಕಾದ ಅಗತ್ಯವಿದೆ. ಆದರೆ, ಕಾನೂನನ್ನು ಮೀರಿ ಕೆಲಸ ಮಾಡುವುದರಿಂದ ಸಮಸ್ಯೆಗಳೇ ಹೆಚ್ಚಾಗಲಿವೆ. ತೆರಿಗೆ ವಿನಾಯಿತಿ ಬೇಕೆಂದಿದ್ದರೆ, ಅದನ್ನು ಕಾನೂನು ಹೋರಾಟದ ಮೂಲಕ ಅಥವಾ ಕೇಂದ್ರ ಸರ್ಕಾರದೊಂದಿಗೆ ನಿಯೋಗದ ಮೂಲಕ ಮನವರಿಕೆ ಮಾಡಿಕೊಟ್ಟು ಪಡೆಯಬೇಕು. ಏಕಪಕ್ಷೀಯವಾಗಿ ತೆರಿಗೆ ಕಟ್ಟುವುದಿಲ್ಲ ಎಂದು ಘೋಷಿಸುವುದು ಕಾನೂನುಬದ್ಧವಲ್ಲ. ಒಕ್ಕೂಟಗಳು ತಮ್ಮ ಹಣಕಾಸಿನ ವಹಿವಾಟುಗಳನ್ನು ಪಾರದರ್ಶಕವಾಗಿಟ್ಟುಕೊಂಡು, ಆದಾಯ ತೆರಿಗೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಬೇಕು. ಸಹಕಾರ ಸಂಘಗಳನ್ನು ರಾಜಕೀಯ ದಾಳವಾಗಿ ಬಳಸಬಾರದು. ರೈತರ ಹಿತದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸುವುದು ಒಕ್ಕೂಟದ ಜವಾಬ್ದಾರಿಯಾಗಿದೆ ಎಂದು ಮೂಲಗಳು ಹೇಳಿವೆ.

ಲಾಭಾಂಶದ ಮೇಲೆ ತೆರಿಗೆ

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಬಮೂಲ್‌ ನಿರ್ದೇಶಕ ಪಿ.ನಾಗರಾಜ್‌, ಲಾಭಾಂಶದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಕಡಿಮೆ ಲಾಭ ಹೊಂದಿದ್ದರೆ ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ. ಬಮೂಲ್‌ಗೆ ಬರುವ ಆದಾಯದಲ್ಲಿ ರೈತರಿಗೆ ಪ್ರೋತ್ಸಾಹ ಧನನೀಡಲಾಗುವುದು. ಲಾಭಾಂಶ ಕಡಿಮೆ ತೋರಿಸಿದಾಗ ತೆರಿಗೆಯ ಮೊತ್ತವು ಕಡಿಮೆ ಇರುತ್ತದೆ. ಪ್ರೋತ್ಸಾಹ ಧನವಾಗಿ ನೀಡಿದರೆ ರೈತರಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಿದಂತಾಗುತ್ತದೆ ಎಂದರು.

ಸಾಮಾನ್ಯ ಲೆಕ್ಕ ತಂತ್ರ..!

ಲಾಭಾಂಶವನ್ನು ಕಡಿಮೆ ತೋರಿಸುವುದು ಒಂದು ಸಾಮಾನ್ಯ ಲೆಕ್ಕಪತ್ರ ತಂತ್ರವಾಗಿದೆ. ಕಾರ್ಯಾಚರಣೆಯ ವೆಚ್ಚಗಳು, ನಿರ್ವಹಣಾ ವೆಚ್ಚಗಳು, ಜಾಹೀರಾತು, ಹೊಸ ಉಪಕರಣಗಳ ಖರೀದಿ ಅಥವಾ ಮೂಲಸೌಕರ್ಯ ಅಭಿವೃದ್ಧಿಯನ್ನು ತೋರಿಸುವ ಮೂಲಕ ನಿವ್ವಳ ಲಾಭವನ್ನು ಕಡಿಮೆ ಮಾಡಬಹುದು. ಸಹಕಾರ ಸಂಘಗಳು ತಮ್ಮ ಆದಾಯವನ್ನು ರೈತರಿಗೆ ನೀಡುವ ಬೋನಸ್ ಅಥವಾ ದರ ಏರಿಕೆಯ ರೂಪದಲ್ಲಿ ವಿತರಿಸುವ ಮೂಲಕ ತಮ್ಮ ಕಡಿತಗೊಳಿಸಬಹುದಾದ ಆದಾಯವನ್ನು ಕಡಿಮೆ ಮಾಡುತ್ತವೆ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಗಳು ಒಕ್ಕೂಟದ ಆರ್ಥಿಕ ಸ್ಥಿರತೆಯನ್ನು ಆಧರಿಸಿರುತ್ತವೆ. ಲೆಕ್ಕಪತ್ರಗಳಲ್ಲಿ ಪದೇ ಪದೇ ನಷ್ಟ ಅಥವಾ ಅತೀ ಕಡಿಮೆ ಲಾಭ ತೋರಿಸಿದರೆ, ಅಂತಹ ಸಂಸ್ಥೆಗಳಿಗೆ ಸಾಲ ಸಿಗುವುದು ಅಥವಾ ಸಬ್ಸಿಡಿ ಮಂಜೂರಾಗುವುದು ಕಷ್ಟವಾಗುತ್ತದೆ. ರೈತರಿಗೆ ಸಿಗುವ ಬೋನಸ್ ಅಥವಾ ಪ್ರೋತ್ಸಾಹಧನವು ಲಾಭಾಂಶವನ್ನು ಅವಲಂಬಿಸಿರುತ್ತದೆ. ಲಾಭ ಕಡಿಮೆ ತೋರಿಸಿದರೆ, ನೇರವಾಗಿ ರೈತರಿಗೆ ಸಿಗುವ ಲಾಭಾಂಶದಲ್ಲಿ ಕಡಿತವಾಗುವ ಸಾಧ್ಯತೆಯೂ ಇರುತ್ತದೆ ಎನ್ನಲಾಗಿದೆ.

Read More
Next Story