
Women's Day 2026| ಸೋಬಾನೆ ಚಿಕ್ಕಮ್ಮ ಹಳಿಯೂರು ಬಚ್ಚಮ್ಮ; ಜನಪದಕ್ಕೆ ಉಸಿರಾದ ಹಳ್ಳಿ ಕೋಗಿಲೆ
ಸೋಬಾನೆ ಪದ, ತತ್ವಪದ ಜೊತೆಗೆ ಕೋಲಾಟ, ಭಜನೆ ಮತ್ತು ನಾಟಕಗಳಲ್ಲಿಯೂ ಇವರು ಸೈ ಎನಿಸಿಕೊಂಡಿದ್ದಾರೆ. ಯುವಜನ ಮೇಳಗಳ ಮೂಲಕ ಹೊಸ ತಲೆಮಾರಿಗೆ ಜಾನಪದ ಸಂಸ್ಕೃತಿ ಪರಿಚಯಿಸುವಲ್ಲಿ ಇವರ ಪಾತ್ರ ದೊಡ್ಡದಿದೆ.
"ಹಸಿರು ಬಳೆ ತೊಟ್ಟು, ಹಸೆಗೆ ಕುಳಿತ ಹೆಣ್ಣಿಗೆ ಸೋಬಾನೆ ಎನ್ನಿರೇ...ಸುಖದ ಮಳೆ ಸುರಿಯಲಿ ಈ ಮನೆಗೆ, ಬೀಸೋ ಕಲ್ಲು ಬೆಲ್ಲದ ಅಚ್ಚು, ಸುರಿಯೋ ರಾಗಿ ಮುತ್ತಿನ ಹರಳು...ಸೋಬಾನೆ ಸುಖದ ಹಾದಿಗೆ ಆಧಾರ..."
ಮೌಖಿಕ ಪರಂಪರೆಯಲ್ಲಿ ತಲೆಮಾರುಗಳಿಂದ ಜೀವಂತಿಕೆ ಪಡೆದಿರುವ ಸೋಬಾನೆ ಹಾಡು, ತತ್ವ ಪದಗಳು, ಗೀಗಿ ಪದಗಳು ಗ್ರಾಮೀಣ ಭಾಗದ ಅಮೂಲ್ಯ ಸಾಹಿತ್ಯ ಭಂಡಾರ. ಜನಪದ ಸಾಹಿತ್ಯದಲ್ಲಿ ಸುಂದರ ಮತ್ತು ಭಾವನಾತ್ಮಕವಾದ ಗೀತೆಗಳ ಮೂಲಕವೇ ಸಂಬಂಧ ಬೆಸೆಯುವ, ಮೌಲ್ಯಗಳನ್ನು ಪಸರಿಸುವ ಈ ಪದಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ಜನರ ಬಾಯಲ್ಲಿ ಗುನುಗುತ್ತವೆ.
ಮದುವೆಯ ಅರಿಶಿಣ ಶಾಸ್ತ್ರ, ಸೀಮಂತ, ಹೆಣ್ಣು ಋತುಮತಿಯಾಗುವ ಸಂದರ್ಭ ಸೋಬಾನೆ ಪದಗಳೇ ಕಾರ್ಯಕ್ರಮದ ಭೂಷಣ. ಕೆಲವೊಂದು ಹಬ್ಬ ಹರಿದಿನಗಳು ಸೇರಿದಂತೆ ಹೊಲಗದ್ದೆಯಲ್ಲಿ ಕಾಯಕ ಮಾಡುವಾಗಲೂ ಹಿರಿಯರ ಬಾಯಲ್ಲಿ ಜನಪದ ಗೀತೆಗಳ ಭಾವ ಲಹರಿ ಸರಾಗವಾಗಿ ಹರಿಯುತ್ತದೆ.
ಇಂತಹ ಮೌಖಿಕ ಪರಂಪರೆ ಇಂದು ಪಾಶ್ಚಿಮಾತ್ಯ ಸಂಗೀತದ ಅಬ್ಬರದಲ್ಲಿ ನೆನಪಿನ ಗರ್ಭ ಸೇರುತ್ತಿವೆ. ಆದಾಗ್ಯೂ, ಅಲ್ಲೊಂದು, ಇಲ್ಲೊಂದು ದನಿಯು ಜೀವಹನಿಯಂತೆ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದೆ. ಅಂತಹ ದನಿಗಳಲ್ಲಿ ದೇವನಹಳ್ಳಿ ತಾಲೂಕಿನ ಹಳಿಯೂರು ಗ್ರಾಮದ ಬಚ್ಚಮ್ಮ ಅವರ ದನಿಯೂ ಒಂದು. ದಶಕಗಳಿಂದ ಸೋಬಾನ ಪದಗಳಲ್ಲೇ ಉಸಿರಾಡಿದ ಬಚ್ಚಮ್ಮ ಅವರ ಕಲಾಸಾಧನೆಗೆ ಜಾನಪದ ಅಕಾಡೆಮಿಯ ಗೌರವ ಸಂದಿದೆ.
ಬಾಲ್ಯದಲ್ಲೇ ಕಷ್ಟ ಉಂಡ ಬಚ್ಚಮ್ಮ
1954ರಲ್ಲಿ ಸಾದಪ್ಪ-ನಾರಾಯಣಮ್ಮ ದಂಪತಿಯ ಮಗಳಾಗಿ ಜನಿಸಿದ ಬಚ್ಚಮ್ಮ ಅವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಕಡು ಬಡತನದ ಕಾರಣ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ, ಎಳೆಯ ವಯಸ್ಸಿನಲ್ಲೇ ಬಾಲ ಕಾರ್ಮಿಕಳಾಗಿ ದುಡಿಯಬೇಕಾಯಿತು. ಅಂತಹ ಕಠಿಣ ದಿನಗಳಲ್ಲಿ ದಣಿವು ನೀಗಿಸಿದ್ದು ಹಿರಿಯರು ಹಾಡುತ್ತಿದ್ದ ಸೋಬಾನೆ ಪದಗಳು. ಕೆಲಸದ ನಡುವೆ ತಾವೇ ಗುನುಗುತ್ತಿದ್ದ ದೇಸಿ ಹಾಡುಗಳು ಕ್ರಮೇಣ ನೋವಿಗೆ ಮದ್ದೆರೆದವು.
15ನೇ ವಯಸ್ಸಿನಲ್ಲಿ ಜಯಪ್ಪ ಅವರ ಕೈಹಿಡಿದ ಬಚ್ಚಮ್ಮ ಅವರು ಸಂಸಾರದ ನೊಗ ಹೊರಬೇಕಾಯಿತು. ಅಡುಗೆ, ಭತ್ತ ಕುಟ್ಟುವುದು, ರಾಗಿ ಬೀಸುವುದರ ನಡುವೆಯೂ ಅವರ ಕಂಠದಿಂದ ಬರುತ್ತಿದ್ದ ಸೋಬಾನೆ ಪದಗಳ ಪಸೆ ಆರಲಿಲ್ಲ. ಉಸಿರಿನ ಕಣ ಕಣದಲ್ಲೂ ಹೊರಹೊಮ್ಮುತ್ತಿದ್ದ ಸೋಬಾನೆ ಹಾಗೂ ತತ್ವ ಪದಗಳೇ ಇಂದು ಅವರನ್ನು ದೊಡ್ಡ ವೇದಿಕೆಗೆ ತಂದು ನಿಲ್ಲಿಸಿವೆ.
ಜಾನಪದ ಅಕಾಡೆಮಿ ಪ್ರಶಸ್ತಿ
ಮೂರು ದಶಕಗಳ ಹಿಂದೆ ಆಕಾಶವಾಣಿಯಲ್ಲಿ ಹಾಡಿನ ಅವಕಾಶ ಒಲಿದು ಬರುವ ಮೂಲಕ ಬಚ್ಚಮ್ಮ ಬದುಕಿಗೆ ದೊಡ್ಡ ತಿರುವು ಸಿಕ್ಕಿತು. ಅಂದಿನಿಂದ ಅವರ ಜಾನಪದ ಪಯಣವು ಹಾಡಿಗೆ ಸೀಮಿತವಾಗದೇ ಕೆಳವರ್ಗದ ಮಹಿಳೆಯರ ಸಬಲೀಕರಣಕ್ಕೂ ವಿಸ್ತರಿಸಿತು. ಜಾನಪದ ಕಲಾ ತಂಡಗಳನ್ನು ಕಟ್ಟಿದರು.
ಸೋಬಾನೆ ಪದ, ತತ್ವಪದ ಜೊತೆಗೆ ಕೋಲಾಟ, ಭಜನೆ ಮತ್ತು ನಾಟಕಗಳಲ್ಲಿಯೂ ಇವರು ಸೈ ಎನಿಸಿಕೊಂಡಿದ್ದಾರೆ. ಯುವಜನ ಮೇಳಗಳ ಮೂಲಕ ಹೊಸ ತಲೆಮಾರಿಗೆ ಜಾನಪದ ಸಂಸ್ಕೃತಿ ಪರಿಚಯಿಸುವಲ್ಲಿ ಇವರ ಪಾತ್ರ ದೊಡ್ಡದಿದೆ.
ಮನೆಯವರ ಬೆಂಬಲವೇ ಶ್ರೀರಕ್ಷೆ
ಬಚ್ಚಮ್ಮ ಅವರ ಈ ಸುದೀರ್ಘ ಪಯಣದಲ್ಲಿ ಅವರ ಪತಿ ಜಯಪ್ಪ ಅವರ ಸಹಕಾರ ಅತೀ ಮುಖ್ಯವಾದುದು. ಹೆಂಡತಿಯ ಕಲಾಸೇವೆಗೆ ನೆರಳಾಗಿ ನಿಂತ ಕಾರಣದಿಂದಲೇ ಇಂದು ಬಚ್ಚಮ್ಮ ಅವರು ಹಳ್ಳಿಯಿಂದ ರಾಜ್ಯ ಮಟ್ಟದವರೆಗೆ ಗುರುತಿಸಿಕೊಳ್ಳಲು ಸಾಧ್ಯವಾಯಿತು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಗೌರವದಿಂದ ಹಿಡಿದು ಈಗಿನ ಅಕಾಡೆಮಿ ಪ್ರಶಸ್ತಿಯವರೆಗೆ ಬಚ್ಚಮ್ಮ ಅವರ ಹಾದಿ ಸರಳವಾಗಿರಲಿಲ್ಲ. ಆದರೆ, ಜನಪದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಬೇಕೆಂಬ ಅವರ ಹಠವನ್ನೂ ಅವರ ಬಿಡಲಿಲ್ಲ. ಹಾಗಾಗಿಯೇ, ಪುಟ್ಟ ಗ್ರಾಮವಾದ ಹಳಿಯೂರಿನ ಬಚ್ಚಮ್ಮ ಇಂದು ಸೋಬಾನೆ ಚಿಕ್ಕಮ್ಮನ ರೀತಿ ಮನೆ ಮಾತಾಗಿದ್ದಾರೆ.
ರಾಗಿ ಬೀಸುವ ಕಲ್ಲಿನ ನಾದದಲ್ಲಿ, ಭತ್ತ ಕುಟ್ಟುವ ಒನಕೆಯಲ್ಲಿ ಕಂಡುಕೊಂಡ 'ಸೋಬಾನೆ ಪದ'ಗಳು ಕೇವಲ ಹಾಡುಗಳಲ್ಲ, ಅವು ಶ್ರಮಜೀವಿಗಳ ಬದುಕಿನ ಉಸಿರು ಕೂಡ ಆಗಿವೆ. ಆಕಾಶವಾಣಿಯಿಂದ ಆರಂಭವಾದ ಕಲಾ ಪಯಣ, ಇಂದು ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿವರೆಗೂ ಬಂದು ನಿಂತಿದೆ. ಬಚ್ಚಮ್ಮ ಅವರು ಕೇವಲ ಸೋಬಾನೆ ಪದಗಳಿಗೆ ಸೀಮಿತರಾಗದೇ ತತ್ವ ಪದ, ಜನಪದ ಕಲಾತಂಡ, ಕೋಲಾಟ, ಮತ್ತು ಭಜನಾ ಮಂಡಳಿಗಳಿಗೆ ತರಬೇತಿ ನೀಡಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ, ಯುವ ಪೀಳಿಗೆಗೆ ರಾಗಿ ಬೀಸುವ ಪದ ಮತ್ತು ಜನಪದ ಕುಣಿತದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಳ್ಳಿಯ ಸೊಗಡಿನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮರೆಯಾಗುತ್ತಿದ್ದ ಗ್ರಾಮೀಣ ರಂಗಭೂಮಿಗೆ ಮರುಜೀವ ನೀಡಿದ್ದಾರೆ. ಆದರೆ, ಇತ್ತೀಚಿನ ಯುವಪೀಳಿಗೆ ಆಧುನೀಕತೆಗೆ ಒಗ್ಗಿಕೊಂಡಿರುವುದರಿಂದ ಜಾನಪದ ಸೊಗಡಿನ ಹರಿವು ಅಷ್ಟಾಗಿಲ್ಲ. ನಮ್ಮ ತಲೆಮಾರಿನವರಲ್ಲೇ ಆ ಸೊಗಡು ಉಳಿದಿದೆ. ಮುಂದಿನ ತಲೆಮಾರಿಗೆ ಅದು ಇರುತ್ತದೋ, ಇಲ್ಲವೋ ವಿಶ್ವಾಸವಿಲ್ಲ ಎಂದು ಬಚ್ಚಮ್ಮ ಬೇಸರ ಹೊರಹಾಕುತ್ತಾರೆ.

