
AI Job Loss| ಎಐನಿಂದ ಉದ್ಯೋಗ ನಷ್ಟ: ಭೀತಿ ಬೇಕಿಲ್ಲ; ಕೌಶಲ್ಯವರ್ಧನೆಗೆ 'ನಿಪುಣ ಕರ್ನಾಟಕ'
ಸರ್ಕಾರವು ಉದ್ಯಮದ ದಿಗ್ಗಜರನ್ನು ಒಳಗೊಂಡ ಐಟಿ ವಿಷನ್ ಗ್ರೂಪ್ ಜೊತೆ ಕೈಜೋಡಿಸಿದೆ. ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳ ಮುಖಂಡರ ಮಾರ್ಗದರ್ಶನವಿದೆ.
ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ಯುವಜನಾಂಗಕ್ಕೆ ಆಸರೆಯಾಗಲು ಹಾಗೂ ಅವರನ್ನು ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸಲು ಕರ್ನಾಟಕ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, 'ನಿಪುಣ ಕರ್ನಾಟಕ' ಎಂಬ ಯೋಜನೆ ಜಾರಿಗೆ ಸಿದ್ಧತೆ ಕೈಗೊಂಡಿದೆ.
ಯೋಜನೆಯ ಯಶಸ್ವಿ ಜಾರಿಗೆ ಸರ್ಕಾರವು ಉದ್ಯಮದ ದಿಗ್ಗಜರನ್ನು ಒಳಗೊಂಡ ಐಟಿ ವಿಷನ್ ಗ್ರೂಪ್ ಜೊತೆ ಕೈಜೋಡಿಸಿದೆ. ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳ ಮುಖಂಡರ ಮಾರ್ಗದರ್ಶನದಲ್ಲಿ, ಮಾರುಕಟ್ಟೆಗೆ ಯಾವ ರೀತಿಯ ಕೌಶಲ್ಯಗಳ ಅಗತ್ಯವಿದೆ ಎಂಬುದನ್ನು ಗುರುತಿಸಿ ತರಬೇತಿ ರೂಪಿಸಲಾಗುತ್ತಿದೆ. ಗೂಗಲ್, ಮೈಕ್ರೋಸಾಫ್ಟ್, ಎನ್ವಿಡಿಯಾ ಮತ್ತು ಇಂಟೆಲ್‌ನಂತಹ ಜಾಗತಿಕ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು, ಅವರ ತಂತ್ರಜ್ಞಾನ ವೇದಿಕೆಗಳ ಮೂಲಕ ಯುವಕರಿಗೆ ತರಬೇತಿ ಮತ್ತು ಪ್ರಮಾಣಪತ್ರ ನೀಡಲು ಯೋಜಿಸಲಾಗಿದೆ ಎಂದು ಐಟಿ ಇಲಾಖೆಯ ಮೂಲಗಳು ಹೇಳಿವೆ.
ಈ ಕುರಿತು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, "ರಾಜ್ಯ ಸರ್ಕಾರವು ಐಟಿ ವಿಷನ್ ಗ್ರೂಪ್ ಮೂಲಕ ಪ್ರಮುಖ ಕಂಪನಿಗಳ ಸಿಇಒ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಒಂದು ಸಮೀಕ್ಷೆಯನ್ನು ಕೈಗೊಂಡಿದೆ," ಎಂದರು.
"ಶೇ. 95 ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯ ತರಬೇತಿಯ ಅಗತ್ಯವಿದೆ ಎಂದು ಹೇಳಿವೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು ಶೇ. 85ರಷ್ಟು ಕಂಪನಿಗಳು ತಮ್ಮ ದೈನಂದಿನ ಕೆಲಸಗಳನ್ನು ಎಐ ಮೂಲಕ ನಿರ್ವಹಿಸಲು ಯೋಜಿಸಿವೆ. ಎಐ ನಿಂದ ಉದ್ಯೋಗ ನಷ್ಟವಾಗುತ್ತದೆ ಎಂಬ ಆತಂಕದ ನಡುವೆಯೂ ಶೇ.75 ರಷ್ಟು ಸಂಸ್ಥೆಗಳು ಉದ್ಯೋಗ ಸೃಷ್ಟಿಯಾಗುವ ಆಶಾವಾದವನ್ನು ಸಹ ವ್ಯಕ್ತಪಡಿಸಿವೆ. ಶೇ.70 ಕಂಪನಿಗಳು ಎಐ ಸಂಬಂಧಿತ ಕ್ಷೇತ್ರಗಳಲ್ಲಿ ನೇಮಕಾತಿಯನ್ನು ಹೆಚ್ಚಿಸಲು ಯೋಜಿಸಿವೆ. ಮುಂದಿನ ದಿನದಲ್ಲಿ ಐಟಿ ಕಾರ್ಯಾಚರಣೆಗಳು, ಗ್ರಾಹಕ ಸೇವೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಮಾರಾಟ ವಿಭಾಗಗಳಲ್ಲಿ ಎಐ ಪ್ರಭಾವ ಹೆಚ್ಚಾಗಿ ಕಂಡುಬರಲಿದೆ. ಹೀಗಾಗಿ ಸರ್ಕಾರವು ರಾಜ್ಯದ ಯುವಜನಾಂಗವನ್ನು ಈ ನಿಟ್ಟಿನಲ್ಲಿ ತಯಾರು ಮಾಡಲು ಸನ್ನದ್ಧವಾಗಿದೆ," ಎಂದು ಖರ್ಗೆ ಹೇಳಿದರು.
ಯಾಕೆ ಈ ಯೋಜನೆ?
ಯುವಜನತೆಯ ಕೌಶಲ್ಯ ಮತ್ತು ಮಾರುಕಟ್ಟೆಯ ಅಗತ್ಯಗಳ ನಡುವೆ ಇರುವ ದೊಡ್ಡ ಕಂದಕವನ್ನು ಮುಚ್ಚಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ನಿಪುಣ ಕರ್ನಾಟಕ ಯೋಜನೆಯಾಗಿದೆ. ಈ ಯೋಜನೆಯ ಪ್ರಮುಖ ಗುರಿ ಯುವಕರನ್ನು ಕೇವಲ ಪದವೀಧರರನ್ನಾಗಿ ಮಾಡುವುದಲ್ಲ, ಬದಲಾಗಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವುದು.
ಇದಕ್ಕಾಗಿ ಪುನರ್ ಪ್ರಶಿಕ್ಷಣ ಮತ್ತು ಕೌಶಲ್ಯವರ್ಧನೆ ಎಂಬ ಎರಡು ಆಯಾಮಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಉದ್ಯೋಗ ಕಳೆದಂತೆ ಯುವಜನಾಂಗವನ್ನು ತಯಾರಿ ಮಾಡಲು ಸರ್ಕಾರವು ಕೇವಲ ಸಾಂಪ್ರದಾಯಿಕ ಕಂಪ್ಯೂಟರ್ ಶಿಕ್ಷಣಕ್ಕೆ ಸೀಮಿತವಾಗದೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಅಧ್ಯಯನ (ಎಂಎಲ್) ಮೂಲಕ ಯಂತ್ರಗಳು ಮನುಷ್ಯನಂತೆ ಯೋಚಿಸುವಂತೆ ಮಾಡುವ ಕಲೆಯನ್ನು ಕಲಿಸಿಕೊಡಲಾಗುತ್ತದೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮಾಹಿತಿ ಸುರಕ್ಷತೆ ಅತೀ ಅಗತ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ಯುವಜನಾಂಗವನ್ನು ತಯಾರಿಗೊಳಿಸಲಾಗುವುದು.
ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಕೇಂದ್ರ
ಕ್ವಾಂಟಮ್ ಕಂಪ್ಯೂಟಿಂಗ್ ಎಐಗಿಂತ ಮುಂದಿನ ಹಂತದ ತಂತ್ರಜ್ಞಾನವಾಗಿದೆ. ಇದರ ಮಹತ್ವವನ್ನು ಅರಿತ ಸರ್ಕಾರವು ಐಐಟಿ ಧಾರವಾಡದ ಸಹಯೋಗದಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಕೇಂದ್ರವನ್ನು ಆರಂಭಿಸಿದೆ. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಎಐನಂತಹ ಉನ್ನತ ತಂತ್ರಜ್ಞಾನಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುತ್ತದೆ.
ಇದು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತರಬೇತಿ ನೀಡುವ ಗುರಿ ಹೊಂದಿದೆ. ಕ್ವಾಂಟಮ್ ಕಂಪ್ಯೂಟಿಂಗ್ ಸಾಮಾನ್ಯ ಕಂಪ್ಯೂಟರ್‌ಗಳಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಕೆಲಸ ಮಾಡಬಲ್ಲದು. ಇದು ಎಐನ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ. ಈ ಕ್ಷೇತ್ರದಲ್ಲಿ ಜಾಗತಿಕವಾಗಿ ತಜ್ಞರ ಕೊರತೆಯಿದೆ. ಇದನ್ನು ನೀಗಿಸಲು ಕರ್ನಾಟಕ ಈಗಲೇ ಸನ್ನದ್ಧವಾಗುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕ್ವಾಂಟಮ್-ಎಐ ಶಾಲೆಗಳನ್ನು ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಲಿದೆ.
ಭವಿಷ್ಯದಲ್ಲಿ ಹ್ಯಾಕಿಂಗ್ ತಡೆಯಲು ಕ್ವಾಂಟಮ್- ರಕ್ಷಣಾ ನೆಟ್‌ವರ್ಕ್‌ಗಳು ಅತೀ ಅಗತ್ಯವಾಗಿರುತ್ತದೆ. ಈ ಕ್ಷೇತ್ರದಲ್ಲಿ ತರಬೇತಿ ಮತ್ತು ಪ್ರಮಾಣಪತ್ರ ನೀಡುವುದರಿಂದ ಯುವಜನಾಂಗ ಜಾಗತಿಕ ಸೈಬರ್ ಸುರಕ್ಷತಾ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ ಎಂದು ಹೇಳಲಾಗಿದೆ.
ಯೋಜನೆಯ ಉದ್ದೇಶ
ನಿಪುಣ ಕರ್ನಾಟಕ ಯೋಜನೆಯು ಕೇವಲ ಒಂದು ತರಬೇತಿ ಕಾರ್ಯಕ್ರಮವಲ್ಲ, ಬದಲಾಗಿ ಮಾನವ ಸಂಪನ್ಮೂಲವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಒಂದು ಸಮಗ್ರ ವ್ಯವಸ್ಥೆಯಾಗಿದೆ. ಎಐನಿಂದ ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿರುವವರಿಗೆ ಪರ್ಯಾಯ ತಂತ್ರಜ್ಞಾನಗಳ ತರಬೇತಿ ನೀಡುವುದು ಮತ್ತು ಈಗಾಗಲೇ ಕೆಲಸದಲ್ಲಿರುವವರಿಗೆ ಎಐ ಬಳಕೆಯ ಉನ್ನತ ತರಬೇತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ರಾಜ್ಯದ ಯುವಜನಾಂಗ ಕೇವಲ ಸ್ಥಳೀಯ ಉದ್ಯೋಗ ಮಾರುಕಟ್ಟೆಗೆ ಸೀಮಿತವಾಗದೆ, ಜಾಗತಿಕ ಮಟ್ಟದ ಟೆಕ್ ಕಂಪನಿಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವಂತೆ ಸಜ್ಜುಗೊಳಿಸುವುದಾಗಿದೆ.
ಎಐ ತರಬೇತಿ ನೀಡುವ ಮೂಲಕ ಕೈಗಾರಿಕಾ ಅಗತ್ಯತೆಗಳು ಹಾಗೂ ಉದ್ಯೋಗಿಗಳ ಕೌಶಲ್ಯದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಎಐ, ಎಂಎಲ್, ಡೇಟಾ ಸೈನ್ಸ್, ಸೈಬರ್ ಸುರಕ್ಷತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು. ಕೇವಲ ಬೆಂಗಳೂರಿಗೆ ಸೀಮಿತವಾಗದೆ, 2ನೇ ಹಂತ, 3ನೇ ಹಂತದ ನಗರಗಳ ಯುವಕರಿಗೂ ಗುಣಮಟ್ಟದ ತರಬೇತಿ ನೀಡುವುದು ಮತ್ತು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಐಟಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ನೆರವು ನೀಡುವ ಉದ್ದೇಶವನ್ನು ಒಳಗೊಂಡಿದೆ.
ಈ ಯೋಜನೆಯು ಕೇವಲ ಉದ್ಯೋಗ ರಕ್ಷಿಸುವುದಲ್ಲದೆ, ಹೊಸ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಕೌಶಲ್ಯಪೂರ್ಣ ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗದಾತರಾಗಿ ಬೆಳೆಯಲು ಬೇಕಾದ ಪರಿಸರ ವ್ಯವಸ್ಥೆಯನ್ನು ಇದು ನಿರ್ಮಿಸುತ್ತದೆ.
ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ ಐಟಿ ಕ್ಷೇತ್ರವು ಗಣನೀಯ ಕೊಡುಗೆ ನೀಡುತ್ತಿದೆ. ನಿಪುಣ ಕರ್ನಾಟಕದ ಮೂಲಕ ಈ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸಿ, ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯತ್ತ ಸಾಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಪ್ರತಿಭೆಗಳ ಉತ್ಪಾದನಾ ಕೇಂದ್ರ
ಎಐ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತರಬೇತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರವು ಐಐಟಿ ಹಳೆಯ ವಿದ್ಯಾರ್ಥಿಗಳ ಕೇಂದ್ರ ಬೆಂಗಳೂರು ಸಹಭಾಗಿತ್ವದಲ್ಲಿ ಸ್ಥಾಪಿಸಿರುವ ಕೇಂದ್ರವೇ ಪ್ರತಿಭೆಗಳ ಉತ್ಪಾದನಾ ಕೇಂದ್ರವಾಗಿದೆ. ಈ ಕೇಂದ್ರವು ಶೈಕ್ಷಣಿಕ ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಐದು ವರ್ಷಗಳ ಅವಧಿಗೆ ಸ್ಥಾಪಿಸಲಾದ ಈ ಕೇಂದ್ರವು ಭವಿಷ್ಯದ ತಾಂತ್ರಿಕ ನಾಯಕರುಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಹೊಸ ಪದವೀಧರರು ಮತ್ತು ಈಗಾಗಲೇ ಕೆಲಸ ಮಾಡುತ್ತಿರುವ ವೃತ್ತಿಪರರಿಗೆ ತಮ್ಮ ಕೌಶಲ್ಯವನ್ನು ನವೀಕರಿಸಿಕೊಳ್ಳಲು ಇಲ್ಲಿ ಅವಕಾಶವಿದೆ.
ಇಲ್ಲಿ ನೀಡಲಾಗುವ ಪ್ರಮಾಣಪತ್ರಗಳು ಉದ್ಯಮ ವಲಯದಲ್ಲಿ ಹೆಚ್ಚಿನ ಮನ್ನಣೆ ಹೊಂದಿವೆ. ಎಐ ತಂತ್ರಜ್ಞಾನವನ್ನು ಹೇಗೆ ಬೇಕೋ ಹಾಗೆ ಬಳಸಬಾರದು. ಅದಕ್ಕೆ ಕೆಲವು ನೈತಿಕ ಚೌಕಟ್ಟುಗಳಿವೆ. ಈ ಕೇಂದ್ರವು ಜವಾಬ್ದಾರಿಯುತ ಎಐ ಬಗ್ಗೆ ವಿಶೇಷ ಒತ್ತು ನೀಡುತ್ತದೆ. ಇದು ಸಮಾಜಕ್ಕೆ ಮಾರಕವಾಗದಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕುರಿತು ತರಬೇತಿ ನೀಡಲಾಗುತ್ತದೆ. ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲ, ಉದ್ಯೋಗ ಸೃಷ್ಟಿಕರ್ತರಾಗಲು ಬಯಸುವ ಯುವಕರಿಗೆ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಸ್ಟಾರ್ಟ್ ಅಪ್‌ಗಳಿಗೆ ಅಗತ್ಯವಿರುವ ತಾಂತ್ರಿಕ ಸಾಧನಗಳು ಮತ್ತು ನೈಜ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವ ಅನುಭವವನ್ನು ಈ ಕೇಂದ್ರ ಒದಗಿಸುತ್ತದೆ.
ಉದ್ಯೋಗ ನಷ್ಟವನ್ನು ಹೇಗೆ ತಡೆಯುತ್ತವೆ?
ಸರ್ಕಾರದ ಈ ಕ್ರಮಗಳು ಉದ್ಯೋಗ ನಷ್ಟವನ್ನು ತಡೆಯಲು ಸಹಕಾರಿಯಾಗಲಿವೆ. ಎಐ ಪ್ರಭಾವ ಹೆಚ್ಚಳವಾಗುವುದರಿಂದ ಉದ್ಯೋಗ ಕಡಿತವಾಗಲಿದೆ ಎಂಬ ಆತಂಕ ದೂರವಾಗಲಿದೆ. ಅಲ್ಲದೇ, ಎಐ ಬಳಸಿಕೊಂಡು ಕೆಲಸ ಮಾಡುವುದು ಹೇಗೆ? ಎಂಬ ವಿಶ್ವಾಸವನ್ನು ಮೂಡಿಸಲು ಯುವಜನಾಂಗದಲ್ಲಿ ಈ ಯೋಜನೆಗಳು ಉಪಯೋಗವಾಗಲಿವೆ. ಕರ್ನಾಟಕವು ಕೇವಲ ಸಾಫ್ಟ್‌ವೇರ್ ಎಂಜಿನಿಯರ್‌ಗಳ ರಾಜ್ಯವಾಗಿ ಉಳಿಯದೆ, ಉನ್ನತ ತಂತ್ರಜ್ಞಾನದ ತಜ್ಞರ ತವರೂರಾಗಲಿದೆ. ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಈಗಲೇ ತರಬೇತಿ ನೀಡುವುದರಿಂದ, ಮುಂದಿನ ದಶಕದಲ್ಲಿ ಕರ್ನಾಟಕವು ಜಾಗತಿಕ ಮಟ್ಟದ ತಾಂತ್ರಿಕ ಹಬ್ ಆಗಿ ಮುಂದುವರಿಯಲಿದೆ. ಅಲ್ಲದೇ, ಯಾವುದೇ ಖಾಸಗಿ ಸಂಸ್ಥೆಗಳು ನೀಡದಷ್ಟು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸರ್ಕಾರವು ವಿಶ್ವದರ್ಜೆಯ ಸಂಸ್ಥೆಗಳಾದ ಐಐಟಿ ಮತ್ತು ಐಐಐಟಿಗಳ ಸಹಯೋಗದಲ್ಲಿ ತರಬೇತಿ ನೀಡಲಾಗುತ್ತಿದೆ.

