ಬೆಂಗಳೂರು ದಕ್ಷಿಣದಲ್ಲಿ ಎಐ ಸಿಟಿ;  ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆಯುವುದೇ ʼವರ್ಕ್‌-ಲಿವ್‌-ಪ್ಲೇʼ ಕಲ್ಪನೆ
x

ಬೆಂಗಳೂರು ದಕ್ಷಿಣದಲ್ಲಿ ಎಐ ಸಿಟಿ; ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆಯುವುದೇ ʼವರ್ಕ್‌-ಲಿವ್‌-ಪ್ಲೇʼ ಕಲ್ಪನೆ

ಎಐ ಸಿಟಿ ಯೋಜನೆಯು ಇಂದು ನಿನ್ನೆಯದಲ್ಲ, ಬದಲಾಗಿ ಸುಮಾರು ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿತ್ತು. ಈಗ 'ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ'ದ ಮೂಲಕ ರಾಜ್ಯ ಸರ್ಕಾರ ಇದಕ್ಕೆ ಮರುಜೀವ ನೀಡಲಾಗಿದೆ.


ದಶಕಗಳಿಂದ ದೇಶದ ಸಿಲಿಕಾನ್‌ ವ್ಯಾಲಿ ಎಂದೇ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಐಟಿ-ಬಿಟಿ ವಲಯದಲ್ಲಿ ಪ್ರಗತಿ ಸಾಧಿಸಿರುವ ನಗರವನ್ನು ಈಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರವು ಮುಂದಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬೃಹತ್‌ ಎಐ ಸಿಟಿ ನಿರ್ಮಿಸಲು ತೀರ್ಮಾನಿಸಿದೆ. ಸುಮಾರು 7,481 ಎಕರೆ ವಿಸ್ತೀರ್ಣದಲ್ಲಿ, 18,104 ಕೋಟಿ ರೂ.ಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಈ ಯೋಜನೆ ಕೇವಲ ಒಂದು ಕೈಗಾರಿಕಾ ಪ್ರದೇಶವಲ್ಲ, ಬದಲಾಗಿ ಇದು ದೇಶದ ಭವಿಷ್ಯದ ತಂತ್ರಜ್ಞಾನದ ಕೇಂದ್ರಬಿಂದುವಾಗಲಿದೆ. ಅಲ್ಲದೇ, ದಕ್ಷಿಣ ಬೆಂಗಳೂರಿನಲ್ಲಿ ಎಐ ಸಿಟಿ ನಿರ್ಮಾಣ ಆಗುವುದರಿಂದ ಈ ಭಾಗಕ್ಕೆ ಪ್ರತ್ಯೇಕ ವಿಮಾನ ನಿಲ್ದಾಣದ ಅವಶ್ಯಕತೆ ಅನಿವಾರ್ಯವಾಗಲಿದ್ದು, ಎರಡನೇ ವಿಮಾನ ನಿಲ್ದಾಣವು ಇಲ್ಲಿಯೇ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತಾವಿತ ಎಐ ಸಿಟಿಯು ಒಂದು ಸಮಗ್ರ ನಗರ ಪರಿಕಲ್ಪನೆ ಹೊಂದಿದೆ. ಪ್ರಸ್ತುತ ಬೆಂಗಳೂರಿನ ಐಟಿ ಹಬ್‌ಗಳಾದ ಎಲೆಕ್ಟ್ರಾನಿಕ್ ಸಿಟಿ ಅಥವಾ ವೈಟ್‌ಫೀಲ್ಡ್‌ಗಳು ಕೇವಲ ವಾಣಿಜ್ಯ ಕೇಂದ್ರಗಳಾಗಿ ಬೆಳೆದಿವೆ, ಇದರಿಂದಾಗಿ ವಸತಿ ಮತ್ತು ಕೆಲಸದ ಸ್ಥಳದ ನಡುವೆ ಭಾರಿ ಅಂತರವಿದ್ದು, ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಆದರೆ, ಹೊಸ ಎಐ ಸಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅಲ್ಲಿಯೇ ವಸತಿ ಸೌಲಭ್ಯ ಇರಲಿದೆ. ಶಾಲೆಗಳು, ಆಸ್ಪತ್ರೆಗಳು ಮತ್ತು ಮನರಂಜನಾ ಕೇಂದ್ರಗಳು ಒಂದೇ ಸೂರಿನಡಿ ಇರಲಿವೆ. ಅತ್ಯಾಧುನಿಕ ರಸ್ತೆಗಳು, 24/7 ನಿರಂತರ ವಿದ್ಯುತ್ ಮತ್ತು ನೀರಿನ ಸಂಪರ್ಕದೊಂದಿಗೆ, ಸ್ಮಾರ್ಟ್ ಸಿಟಿ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗುವುದು. ಪರಿಸರ ಸಮತೋಲನ ಕಾಯ್ದುಕೊಳ್ಳಲು ಗ್ರೀನ್ ಬೆಲ್ಟ್ ಮತ್ತು ಪರಿಸರ ಸ್ನೇಹಿ ಕಟ್ಟಡಗಳಿಗೆ ಆದ್ಯತೆ ನೀಡಲಾಗುತ್ತದೆ.

ನನೆಗುದಿಗೆ ಬಿದ್ದಿದ್ದ ದಶಕದ ಯೋಜನೆ

ಯೋಜನೆಯು ಇಂದು ನಿನ್ನೆಯದಲ್ಲ, ಬದಲಾಗಿ ಸುಮಾರು ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿತ್ತು. ಈಗ 'ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ' ಮೂಲಕ ಇದಕ್ಕೆ ಮರುಜೀವ ನೀಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ 9 ಪ್ರಮುಖ ಗ್ರಾಮಗಳ ವ್ಯಾಪ್ತಿಯಲ್ಲಿ ಈ ನವನಗರ ನಿರ್ಮಾಣವಾಗಲಿದೆ. ಬೈರಮಂಗಲ, ಬನ್ನಿಗಿರಿ, ಹೊಸೂರು, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಲುಸಂದ್ರ ಹಾಗೂ ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ ಗ್ರಾಮಗಳನ್ನು ಒಳಗೊಳ್ಳಲಿದೆ. ಸುಮಾರು 7,481 ಎಕರೆ ಪ್ರದೇಶವನ್ನು ಯೋಜನೆಗಾಗಿ ಗುರುತಿಸಲಾಗಿದೆ. ಈ ಪ್ರದೇಶವನ್ನು ಈಗಾಗಲೇ ಅಭಿವೃದ್ಧಿ ವಲಯ ಎಂದು ಘೋಷಿಸಿ, ಭೂಸ್ವಾಧೀನದ ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.

ಈ ಯೋಜನೆಯ ಯಶಸ್ಸಿನ ಮೊದಲ ಹೆಜ್ಜೆಯಾಗಿ ಸರ್ಕಾರವು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಿದೆ. ಇದು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಾಗಿ ಹೂಡಿಕೆದಾರರಲ್ಲಿ ಭರವಸೆ ಮೂಡಿಸುವ ತಂತ್ರವಾಗಿದೆ. ಬೆಂಗಳೂರು ಎಂಬ ಬ್ರ್ಯಾಂಡ್ ಹೆಸರನ್ನು ಬಳಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದ ಕಂಪನಿಗಳನ್ನು ಈ ಪ್ರದೇಶಕ್ಕೆ ಆಕರ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶ. ಇದು ಈ ಪ್ರದೇಶದ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಮೌಲ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎನ್ನಲಾಗಿದೆ.

ಎಐ ಸಿಟಿಯ ಮುಖ್ಯ ಉದ್ದೇಶವೆಂದರೆ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಡೇಟಾ ಅನಾಲಿಟಿಕ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನ ಆಧಾರಿತ ಕಂಪನಿಗಳನ್ನು ಒಂದೇ ಪ್ರದೇಶದಲ್ಲಿ ತರುವುದಾಗಿದೆ. ಇದರಿಂದ ಉದ್ಯಮಗಳಿಗೆ ಬೇಕಾದ ಪೂರಕ ಪರಿಸರ ನಿರ್ಮಾಣವಾಗುತ್ತದೆ ಹಾಗೂ ಜಾಗತಿಕ ಹೂಡಿಕೆದಾರರನ್ನು ಸೆಳೆಯಲು ಸುಲಭವಾಗುತ್ತದೆ ಎಂಬುದು ಸರ್ಕಾರದ ಭರವಸೆಯಾಗಿದೆ.

ಎರಡನೇ ವಿಮಾನ ನಿಲ್ದಾಣಕ್ಕೆ ಸಹಕಾರಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಉತ್ತರ ಭಾಗದಲ್ಲಿದೆ. ದಕ್ಷಿಣ ಬೆಂಗಳೂರಿನಲ್ಲಿ ಎಐ ಸಿಟಿ ನಿರ್ಮಾಣವಾಗುವುದರಿಂದ, ಈ ಭಾಗಕ್ಕೆ ಪ್ರತ್ಯೇಕ ವಿಮಾನ ನಿಲ್ದಾಣದ ಅವಶ್ಯಕತೆ ಅನಿವಾರ್ಯವಾಗಿದೆ. ಸರ್ಕಾರವು ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಅಥವಾ ನೆಲಮಂಗಲ-ಕುಣಿಗಲ್ ರಸ್ತೆಯ ಪ್ರದೇಶಗಳಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ. ಈ ಮೂರು ಜಾಗಗಳ ಪೈಕಿ ಒಂದನ್ನು ಅಂತಿಮಗೊಳಿಸಲು ಸರ್ಕಾರವು ತೀರ್ಮಾನಿಸಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಎರಡನೇ ವಿಮಾನ ನಿಲ್ದಾಣವು ಎಐ ಸಿಟಿಗೆ ಬರುವ ಜಾಗತಿಕ ಉದ್ಯಮಿಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ, ಇದು ದೇವನಹಳ್ಳಿ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಿಡದಿವರೆಗೆ ಮೆಟ್ರೋ ರೈಲು ಸಂಪರ್ಕ ವಿಸ್ತರಿಸುವ ಯೋಜನೆಯು ಎಐ ಸಿಟಿಗೆ ಜೀವನಾಡಿಯಾಗಲಿದೆ. ಇದು ನಗರದ ಇತರ ಭಾಗಗಳಿಂದ ಕೆಲಸಕ್ಕೆ ಬರುವವರಿಗೆ ವೇಗದ ಮತ್ತು ಅಗ್ಗದ ಸಾರಿಗೆಯನ್ನು ಒದಗಿಸುತ್ತದೆ.

ಪ್ರಸ್ತುತ ಚಲ್ಲಘಟ್ಟವರೆಗೆ ಇರುವ ಮೆಟ್ರೋ ಮಾರ್ಗವನ್ನು ಬಿಡದಿವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬೆಂಗಳೂರಿನ ಕೇಂದ್ರ ಭಾಗದಿಂದ ಉಪನಗರಕ್ಕೆ ಕೇವಲ 30-40 ನಿಮಿಷಗಳಲ್ಲಿ ತಲುಪಲು ಸಾಧ್ಯವಾಗುತ್ತದೆ. ನಗರದ ಒಳಗಿನ ರಸ್ತೆಗಳು 70 ಮೀಟರ್ ಅಗಲವಿರಲಿವೆ. ಅಲ್ಲದೆ, 30 ಕಿ.ಮೀಟರ್‌ಗೂ ಅಧಿಕ ಉದ್ದದ ಸಂಪರ್ಕ ರಸ್ತೆಗಳು ಹಳೆ ಬೆಂಗಳೂರು ಮತ್ತು ಹೊಸ ಉಪನಗರವನ್ನು ಬೆಸೆಯಲಿವೆ.

ಹಣಕಾಸು ನಿರ್ವಹಣೆ - ಉದ್ಯೋಗದ ಮೇಲೆ ಪ್ರಭಾವ

18,104 ಕೋಟಿ ರೂ. ಹೂಡಿಕೆಯು ರಾಜ್ಯದ ಜಿಡಿಪಿಗೆ ಭಾರಿ ಕೊಡುಗೆ ನೀಡಲಿದೆ. ಈ ಯೋಜನೆಯಿಂದ ಲಕ್ಷಾಂತರ ತಾಂತ್ರಿಕ ಪದವೀಧರರಿಗೆ ನೇರ ಉದ್ಯೋಗ ದೊರೆಯಲಿದೆ. ಜೊತೆಗೆ ನಿರ್ಮಾಣ, ಸೇವಾ ವಲಯ ಮತ್ತು ಸಣ್ಣ ಉದ್ಯಮಗಳಿಗೆ ಪರೋಕ್ಷವಾಗಿ ಭಾರಿ ಅವಕಾಶಗಳು ಸೃಷ್ಟಿಯಾಗಲಿವೆ. ಎಐ ಸಿಟಿಯಲ್ಲಿ ಕೇವಲ ದೊಡ್ಡ ಕಂಪನಿಗಳಷ್ಟೇ ಅಲ್ಲದೆ, ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರತ್ಯೇಕ ಇನ್ಕ್ಯುಬೇಷನ್ ಸೆಂಟರ್‌ಗಳನ್ನು ಸ್ಥಾಪಿಸಲು ಅವಕಾಶವಿದೆ. 18,133 ಕೋಟಿ ರೂ.ಗಳ ಬೃಹತ್ ವೆಚ್ಚವನ್ನು ಸರಿದೂಗಿಸಲು ಸರ್ಕಾರವು ಸಾಲದ ಮೊತ್ತಕ್ಕೆ ಭದ್ರತೆ ನೀಡಲು ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಯೋಜನಾ ನಿರ್ವಹಣೆ ಸಮಾಲೋಚಕ ಸಂಸ್ಥೆಯನ್ನು ಟೆಂಡರ್ ಮೂಲಕ ಆಯ್ಕೆ ಮಾಡಿ, ವಿಶ್ವದರ್ಜೆಯ ನಗರ ನಿರ್ಮಾಣದ ಜವಾಬ್ದಾರಿಯನ್ನು ನೀಡಲಾಗುವುದು. ಇದು ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ.

ಇಷ್ಟು ದೊಡ್ಡ ಮಟ್ಟದ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಮುಖ ಸವಾಲಾಗಿದೆ. ಕೆಲವು ರೈತ ಸಂಘಟನೆಗಳು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಅವರಿಗೆ ಸೂಕ್ತ ಮಾರುಕಟ್ಟೆ ದರ ಮತ್ತು ಹಕ್ಕುಗಳನ್ನು ನೀಡುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸರ್ಕಾರದ ಮುಂದಿರುವ ದೊಡ್ಡ ಕೆಲಸವಾಗಿದೆ. ಇಂತಹ ಬೃಹತ್ ಯೋಜನೆಗಳು ರಾಜಕೀಯ ಕಾರಣಗಳಿಂದ ವಿಳಂಬವಾಗುವ ಸಾಧ್ಯತೆ ಇರುತ್ತದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಅಗತ್ಯ. ರೈತರಿಗೆ ಮತ್ತು ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅಲ್ಲದೆ, ನೆಲಮಂಗಲ ಅಥವಾ ಕನಕಪುರ ರಸ್ತೆಯ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸುವುದು ಕೂಡ ಮುಖ್ಯವಾಗಿದೆ. ಕೆರೆಗಳ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಹೇಳಲಾಗಿದೆ.

ಯೋಜನೆಯಿಂದಾಗುವ ಲಾಭಗಳು

ನಗರದ ಜನಸಂಖ್ಯೆ ಮತ್ತು ವಾಹನ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ದಕ್ಷಿಣ ಕರ್ನಾಟಕದ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಲಭ್ಯವಾಗಲಿದೆ. ಹಳೆಯ ಬೆಂಗಳೂರು ಉತ್ತರಕ್ಕೆ ಬೆಳೆದಿದ್ದರೆ, ಈ ಯೋಜನೆಯಿಂದ ದಕ್ಷಿಣ ಭಾಗವು ಆರ್ಥಿಕವಾಗಿ ಸದೃಢವಾಗಲಿದೆ. ಕೆಲಸದ ಸ್ಥಳದ ಹತ್ತಿರವೇ ವಸತಿ ಪರಿಲ್ಪನೆಯು ಉದ್ಯೋಗಿಗಳ ಜೀವನಮಟ್ಟವನ್ನು ಸುಧಾರಿಸಲಿದೆ ಎನ್ನಲಾಗಿದೆ.

Read More
Next Story