
ಕರ್ನಾಟಕದಲ್ಲಿ ಕ್ಷೀಣಿಸಿದ ಅಕ್ಕಿ ಉತ್ಪಾದನೆ; ವಿದೇಶಗಳಲ್ಲಿ ಭಾರೀ ಬೇಡಿಕೆಗೆ ಬೆಲೆ ದುಬಾರಿ
ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳ ಸಲುವಾಗಿ ಈ ಭಾಗದ ರೈತರ ಎರಡನೇ ಬೆಳೆ ನೀರು ಹರಿಸಿಲ್ಲ. ಇದರಿಂದ ಶೇ90ಕ್ಕೂ ಹೆಚ್ಚು ರೈತರು ಭತ್ತ ಬೆಳೆಯಲಾಗಿಲ್ಲ.
ಅಡುಗೆ ಅನಿಲದ ಬೆನ್ನಲ್ಲೇ ಅಕ್ಕಿಯ ದರವೂ ಗ್ರಾಹಕರ ಜೇಬು ಸುಡುತ್ತಿದೆ. ಕರ್ನಾಟಕದ ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಇದೀಗ ಅಕ್ಕಿ ಉತ್ಪಾದನೆ ಕ್ಷೀಣಿಸಿದೆ. ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ಭತ್ತದ ಬೆಳೆಯ ಪ್ರಮಾಣ ಹಾಗೂ ಅಕ್ಕಿಯ ಉತ್ಪಾದನೆ ಕುಸಿದಿದೆ. ಇದರಿಂದ ಬೆಲೆ ಹೆಚ್ಚಾಗಿ ಗ್ರಾಹಕರಿಗೆ ಹೊರೆಯಾಗಿದೆ.
ಈ ಮಧ್ಯೆ, ಅತಿ ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಇಳುವರಿ ಕುಂಠಿತವಾಗಿರುವ ಕಾರಣ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ. ತುಂಗಭದ್ರಾ ನದಿ ತೀರದಲ್ಲಿ ಬೆಳೆಯುವ ಭತ್ತಕ್ಕೆ ದೇಶ-ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಆದರೆ, ಲಭ್ಯತೆ ಕಡಿಮೆ ಇರುವ ಕಾರಣ ಬೆಲೆ ದುಬಾರಿಯಾಗಿದೆ. ಪ್ರಸ್ತುತ, ಸೋನಾ ಮಸೂರಿ ಅಕ್ಕಿ ಕ್ವಿಂಟಾಲ್ ಮೇಲೆ 60-100 ರೂ. ಹೆಚ್ಚಾಗಿದೆ. ಈಗ ಅದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಅಕ್ಕಿ ಬೆಲೆ ಏರಿಕೆಯಾಗಿದ್ದು ಏಕೆ?
ತುಂಗಭದ್ರಾ ಜಲಾಶಯದಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ, ಈ ಬಾರಿ ಕ್ರೆಸ್ಟ್ ಗೇಟ್ಗಳ ಬದಲಾವಣೆ ಸಲುವಾಗಿ ಈ ಭಾಗದ ರೈತರ ಎರಡನೇ ಬೆಳೆ ನೀರು ಹರಿಸಿಲ್ಲ. ಇದರಿಂದ ಶೇ90ಕ್ಕೂ ಹೆಚ್ಚು ರೈತರು ಭತ್ತ ಬೆಳೆಯಲಾಗಿಲ್ಲ. ಕಳೆದ ವರ್ಷ ದಾಸ್ತಾನು ಇರಿಸಿಕೊಂಡಿದ್ದ ಅಕ್ಕಿಯನ್ನೇ ಈಗ ಅಕ್ಕಿ ಗಿರಣಿಗಳ ಮಾಲೀಕರ ವಿದೇಶಗಳಿಗೆ ರಫ್ತು ಮಾಡಿದ್ದಾರೆ. ಈಗ ದಾಸ್ತಾನು ಖಾಲಿಯಾಗಿರುವುದರಿಂದ ಬೆಲೆ ದುಬಾರಿಯಾಗುತ್ತಿದೆ.
ಜೂನ್- ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಉತ್ತಮ ಒಳ ಹರಿವು ಆರಂಭವಾಗುತ್ತಿದ್ದಂತೆ ರೈತರಿಗೆ ಭತ್ತ ನಾಟಿ ಮಾಡಲು ನೀರು ಹರಿಸಲಾಗುತ್ತದೆ. ಎರಡನೇ ಬೆಳೆಯನ್ನು ನವೆಂಬರ್ –ಡಿಸೆಂಬರ್ ಅವಧಿಯಲ್ಲಿ ಬೆಳೆಯಲಾಗುತ್ತದೆ. ಆಗ ಜಲಾಶಯದಲ್ಲಿ ಕನಿಷ್ಠ 85-90 ಟಿಎಂಸಿ ನೀರು ಇರಲೇಬೇಕು. ಭತ್ತವನ್ನು ಮಾರ್ಚ್ –ಜೂನ್ ಅವಧಿಯಲ್ಲಿ ಕಟಾವು ಮಾಡಲಾಗುತ್ತದೆ. ಒಂದು ವೇಳೆ ನೀರಿನ ಕೊರತೆಯಿದ್ದಲ್ಲಿ ಕೇವಲ ಆಯ್ದ ಒಣ ಬೇಸಾಯದ ಬೆಳೆಗಳಿಗೆ ಮಾತ್ರ ನೀರು ಹರಿಸಿ, ಭತ್ತಕ್ಕೆ ನಿರ್ಬಂಧ ಹೇರಲಾಗುತ್ತದೆ. ಆದರೆ, ಈ ಬಾರಿ ಜಲಾಶಯದಿಂದ ನೀರು ಬಿಡದಿರುವ ಕಾರಣ ರೈತರು ಭತ್ತ ಬೆಳೆದಿಲ್ಲ. ಕೊಳವೆಬಾವಿ ಆಶ್ರಿತ ರೈತರು ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಭತ್ತ ಬೆಳೆದಿದ್ದರು. ಹಾಗಾಗಿ, ಭತ್ತದ ಉತ್ಪಾದನೆ ಕುಸಿತ ಕಂಡಿದ್ದು, ಬೆಲೆ ಗಗನಮುಖಿಯಾಗಿದೆ.
ನೆರೆ ರಾಷ್ಟ್ರಗಳಿಗೆ ಅಕ್ಕಿ ರಫ್ತು
ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಮಧ್ಯಾಪ್ರಾಚ್ಯದ ರಾಷ್ಟ್ರಗಳಿಗೆ ಅಕ್ಕಿಯ ರಫ್ತು ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆ ಎದುರಾಗಿದೆ. ಇದರಿಂದ ಬೆಲೆ ಏರಿಕೆ ಕಂಡಿದೆ.
ಉತ್ಪಾದನೆ ಕುಸಿದಿರುವ ಕಾರಣಕ್ಕಾಗಿ ಅಕ್ಕಿಯ ಬೆಲೆ ದುಬಾರಿಯಾಗಿದೆ. ವಿಯೆಟ್ನಾಂ, ಥೈಲ್ಯಾಂಡ್ ಹಾಗೂ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತಿರುವ ಅಕ್ಕಿಯ ಬೆಲೆಯಲ್ಲಿ ಶೇ 20 ರಷ್ಟು ಹೆಚ್ಚಳವಾಗಿದೆ. ಹಾರ್ಮುಜ್ ಜಲಸಂಧಿ ಮುಚ್ಚಿದ್ದರೂ ಅದರ ಸಮೀಪದ ಬಂದರುಗಳಿಂದ ಅರಬ್ ರಾಷ್ಟ್ರಗಳಿಗೆ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಕಳೆದೊಂದು ತಿಂಗಳಲ್ಲಿ ಶ್ರೀಲಂಕಾ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ 44 ಸಾವಿರ ಟನ್ ಅಕ್ಕಿ ರಫ್ತಾಗಿದೆ ಎಂದು ರಾಯಚೂರಿನ ಸಾವಿತ್ರಿ ರೈಸ್ ಮಿಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕರ ನಾಗ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಎಲ್ಲೆಲ್ಲಿ ಅಕ್ಕಿ ಕಣಜ?
ಭಾರತದಲ್ಲಿ ಪಶ್ಚಿಮ ಬಂಗಾಳ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದೆ. ಇಲ್ಲಿ ವರ್ಷಕ್ಕೆ ಮೂರು ಬಾರಿ ಭತ್ತ ಬೆಳೆಯಲಾಗುತ್ತದೆ. ಉತ್ತರ ಪ್ರದೇಶ ಎರಡನೇ ಅತಿ ದೊಡ್ಡ ಭತ್ತ ಉತ್ಪಾದಿಸುವ ರಾಜ್ಯ. ಗಂಗಾ ನದಿಯ ಫಲವತ್ತಾದ ಬಯಲು ಪ್ರದೇಶಗಳಲ್ಲಿ ಅಕ್ಕಿಯನ್ನು ಹೇರಳವಾಗಿ ಬೆಳೆಯಲಾಗುತ್ತದೆ.
ಪಂಜಾಬ್ನಲ್ಲಿ ಸುಧಾರಿತ ನೀರಾವರಿ ಪದ್ಧತಿಯಿಂದಾಗಿ ಅಕ್ಕಿ ಉತ್ಪಾದನೆ ಯತೇಚ್ಛವಾಗಿದೆ. ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಗೆ ಪಂಜಾಬ್ ರಾಜ್ಯ ಹೆಸರುವಾಸಿಯಾಗಿದೆ. ತಮಿಳುನಾಡಿನ ಕಾವೇರಿ ನದಿಯ ಮುಖಜ ಭೂಮಿಯು ದಕ್ಷಿಣ ಭಾರತದ ಪ್ರಮುಖ ಅಕ್ಕಿ ಬೆಳೆಯುವ ಪ್ರದೇಶವಾಗಿದೆ.

