Special Interview: Agriculture Department prepares to sell more than 20 indigenous seeds
x

ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜು ಎ.ಸಿ.

ವಿಶೇಷ ಸಂದರ್ಶನ: ಕೃಷಿ ಇಲಾಖೆಯಿಂದ 20ಕ್ಕೂ ಹೆಚ್ಚು ದೇಸಿ ಬಿತ್ತನೆ ಬೀಜಗಳ ಮಾರಾಟಕ್ಕೆ ಸಿದ್ಧತೆ

ಐದು ವರ್ಷಗಳ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜು ಎ.ಸಿ. ಅವರು 'ದಿ ಫೆಡರಲ್ ಕರ್ನಾಟಕ'ದೊಂದಿಗಿನ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


Click the Play button to hear this message in audio format

ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರೈತರು ಬೆಳೆದ ಸಾಂಪ್ರದಾಯಿಕ ಮತ್ತು ದೇಸಿ ಬಿತ್ತನೆ ಬೀಜಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಮಾರಾಟ ಮಾಡುವ ವಿನೂತನ ಯೋಜನೆಗೆ ಚಾಲನೆ ನೀಡಿದೆ. ಖಾಸಗಿ ಬೀಜ ಕಂಪನಿಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಮತ್ತು ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಈ ಐದು ವರ್ಷಗಳ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜು ಎ.ಸಿ. ಅವರು 'ದಿ ಫೆಡರಲ್ ಕರ್ನಾಟಕ'ದೊಂದಿಗಿನ ಸಂದರ್ಶನದಲ್ಲಿ ಈ ಕುರಿತು ಸಮಗ್ರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

2000ಕ್ಕೂ ಹೆಚ್ಚು ದೇಸಿ ತಳಿಗಳ ಸಂಗ್ರಹ

ರಾಜ್ಯದಾದ್ಯಂತ 602ಕ್ಕೂ ಹೆಚ್ಚು ರೈತರಿಂದ 20 ಬೆಳೆಗಳ 2000ಕ್ಕೂ ಹೆಚ್ಚು ದೇಸಿ ತಳಿಗಳನ್ನು ಕೃಷಿ ಇಲಾಖೆ ಈಗಾಗಲೇ ಸಂಗ್ರಹಿಸಿದೆ. ಬೆಂಗಳೂರಿನ ಜಿಕೆವಿಕೆ (GKVK) ಜೀನ್ ಬ್ಯಾಂಕ್‌ನಲ್ಲಿ ಇವುಗಳನ್ನು ಶೇಖರಿಸಿಡಲಾಗಿದ್ದು, ಪ್ರಸ್ತುತ ಮೌಲ್ಯಮಾಪನ ಮತ್ತು ಸಂಶೋಧನಾ ಕಾರ್ಯಗಳು ನಡೆಯುತ್ತಿವೆ. ಈ ಬೃಹತ್ ಯೋಜನೆಯಲ್ಲಿ ರಾಜ್ಯದ 5 ಕೃಷಿ ವಿಶ್ವವಿದ್ಯಾಲಯಗಳ 15ಕ್ಕೂ ಹೆಚ್ಚು ವಿಜ್ಞಾನಿಗಳು 9 ವಿವಿಧ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆಗೆ ಆಯ್ಕೆಯಾದ ಪ್ರಮುಖ ಬೆಳೆಗಳು ಹೀಗಿವೆ

ಭತ್ತ, ರಾಗಿ ಮತ್ತು ಬಿಳಿಜೋಳ, ತೊಗರಿ, ಹಲಸಂದೆ ಮತ್ತು ಉದ್ದು, ಆರು ಬಗೆಯ ಸಿರಿಧಾನ್ಯಗಳು (ರಾಗಿ, ಹಾರಕ, ಬರಗು ಇತ್ಯಾದಿ), ಎಳ್ಳು, ಹುಚ್ಚೆಳ್ಳು ಮತ್ತು ಮೆಣಸಿನಕಾಯಿ.

ರೈತರ ಹೆಸರಿನಲ್ಲೇ ತಳಿ ಬಿಡುಗಡೆ

ಈ ಯೋಜನೆಯ ಅತ್ಯಂತ ವಿಶೇಷ ಅಂಶವೆಂದರೆ, ಯಾವ ರೈತರು ನಿರ್ದಿಷ್ಟ ತಳಿಯನ್ನು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದಾರೋ, ಅದೇ ರೈತನ ಹೆಸರಿನಲ್ಲಿ ಬಿತ್ತನೆ ಬೀಜವನ್ನು ಬಿಡುಗಡೆ ಮಾಡಲಾಗುವುದು. ಇದುವರೆಗೆ ಕೇವಲ ವಿಜ್ಞಾನಿಗಳು ಅಥವಾ ಸ್ಥಳಗಳ ಹೆಸರಿನಲ್ಲಿ ತಳಿಗಳನ್ನು ಪರಿಚಯಿಸಲಾಗುತ್ತಿತ್ತು. ಇದರ ಜೊತೆಗೆ ತಳಿ ಸಂರಕ್ಷಕರಿಗೆ ಸರ್ಕಾರದಿಂದ 15 ಸಾವಿರದಿಂದ 10 ಲಕ್ಷ ರೂಪಾಯಿವರೆಗೆ ಆರ್ಥಿಕ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಮಂಡ್ಯದ ಗನಿಖಾನ್, ಸಿರಸಿಯ ಆರ್.ಜಿ. ಭಟ್, ಬೆಳ್ತಂಗಡಿಯ ದೇವರಾಯ ಹಾಗೂ ಬೆಳಗಾವಿಯ ಶಂಕರ್ ರಂಗಟ್ಟಿ ಸೇರಿದಂತೆ ಹಲವು ರೈತರಿಗೆ ಈಗಾಗಲೇ ನೇರ ನಗದು ವರ್ಗಾವಣೆ (DBT) ಮೂಲಕ ಪ್ರೋತ್ಸಾಹಧನ ಪಾವತಿಸಲಾಗಿದೆ.

2028ರ ವೇಳೆಗೆ ಮಾರುಕಟ್ಟೆಗೆ ಲಭ್ಯ

ಪ್ರಸ್ತುತ ಎರಡನೇ ವರ್ಷದ ಮೌಲ್ಯಮಾಪನ ನಡೆಯುತ್ತಿದ್ದು, ತಳಿಗಳ ಪೌಷ್ಟಿಕಾಂಶ (ಕಬ್ಬಿಣಾಂಶ, ಜಿಂಕ್, ಫೈಬರ್) ಮತ್ತು ವಾತಾವರಣದ ವೈಪರೀತ್ಯ ತಡೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಅಧ್ಯಯನ ಮುಂದುವರಿದಿದೆ. 2027ರ ಅಂತ್ಯದ ವೇಳೆಗೆ ಸಂಪೂರ್ಣ ಜೀನೋಮಿಕ್ ಮತ್ತು ನ್ಯೂಟ್ರಿಷನಲ್ ಸಂಶೋಧನೆಗಳು ಮುಕ್ತಾಯಗೊಳ್ಳಲಿವೆ. 2028ರ ನಂತರ ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಅಧಿಕೃತವಾಗಿ ಈ ದೇಸಿ ಬಿತ್ತನೆ ಬೀಜಗಳನ್ನು ಸಾರ್ವಜನಿಕ ಮಾರಾಟಕ್ಕೆ ಒದಗಿಸುವ ಗುರಿಯನ್ನು ಇಲಾಖೆ ಹೊಂದಿದೆ. ಜರ್ಮನ್ ಸಂಸ್ಥೆ GIZ ಮತ್ತು ಸ್ವಿಟ್ಜರ್ಲೆಂಡ್‌ನ FiBL ಸಂಸ್ಥೆಗಳೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಕೃಷಿ ಇಲಾಖೆ ಕೈಜೋಡಿಸಿದೆ.

ಪಾರದರ್ಶಕತೆಗಾಗಿ ಪ್ರತ್ಯೇಕ ಜಿಯೋ ಡ್ಯಾಶ್‌ಬೋರ್ಡ್

ಸಾರ್ವಜನಿಕರು ಮತ್ತು ರೈತರ ಅನುಕೂಲಕ್ಕಾಗಿ ಇಲಾಖೆಯು ಜಿಯೋ-ಸ್ಪೇಷಿಯಲ್ ಡ್ಯಾಶ್‌ಬೋರ್ಡ್ ಒಂದನ್ನು ಸಿದ್ಧಪಡಿಸಿದೆ. ಈ ತಂತ್ರಜ್ಞಾನದ ಮೂಲಕ ಯಾವ ರೈತ ಯಾವ ಭಾಗದಲ್ಲಿ ಯಾವ ನಿರ್ದಿಷ್ಟ ತಳಿಯನ್ನು ಬೆಳೆಯುತ್ತಿದ್ದಾನೆ ಎಂಬ ನಿಖರ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದು. ಇದು ರೈತರಿಂದ ರೈತರಿಗೆ ನೇರ ಬಿತ್ತನೆ ಬೀಜಗಳ ಮಾರಾಟ ಪ್ರಕ್ರಿಯೆಗೂ ಭವಿಷ್ಯದಲ್ಲಿ ದೊಡ್ಡ ಮಟ್ಟದ ನೆರವಾಗಲಿದೆ.

Read More
Next Story