Zip-coding beyond pin-code: A new dating trend attracting city youth
x

ಹೈಬ್ರಿಡ್ ಕೆಲಸದ ಸಂಸ್ಕೃತಿ, ಬಿಡುವಿಲ್ಲದ ವೇಳಾಪಟ್ಟಿ ಮತ್ತು ನಗರ ಜೀವನಶೈಲಿಗಳು ಸಂಬಂಧಗಳನ್ನು ಮರುರೂಪಿಸುತ್ತಿರುವ ಈ ಕಾಲದಲ್ಲಿ, 'ಪ್ರಾಕ್ಸಿಮಿಟಿ ಡೇಟಿಂಗ್' ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಕೇವಲ ಒಂದು ಸಣ್ಣ ಅಂತರದಲ್ಲಿ ಅಥವಾ ಹತ್ತಿರದ ಓಣಿಗಳಲ್ಲಿಯೇ ಆರಾಮದಾಯಕ ಒಡನಾಟ, ಹೊಂದಾಣಿಕೆ ಮತ್ತು ಆತ್ಮೀಯ ಸಂಬಂಧವನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತಿದೆ.

ಪಿನ್-ಕೋಡ್ ಮೀರದ ಝಿಪ್-ಕೋಡಿಂಗ್: ಸಿಟಿ ಯುವಕರನ್ನು ಸೆಳೆಯುತ್ತಿರುವ ಹೊಸ ಡೇಟಿಂಗ್

ಜಾಗರ್ಸ್ ಪಾರ್ಕ್ಗಳು, ಕೋ-ವರ್ಕಿಂಗ್ ತಾಣಗಳು ಮತ್ತು ಕ್ಯಾಂಪಸ್ ಜಿಮ್ಗಳಿಂದ ಹಿಡಿದು ಕೆಫೆ ಹಾಗೂ ರೆಸ್ಟೋ-ಬಾರ್ಗಳವರೆಗೆ, ಇಂದು 'ಹೈಪರ್ಲೋಕಲ್ ಡೇಟಿಂಗ್' ಟ್ರೆಂಡ್ ಆಗುತ್ತಿದೆ. ಯುವ ವೃತ್ತಿಪರರು ಸುಲಭವಾದ ಮತ್ತು ಹೆಚ್ಚು ಸಹಜವಾದ ಒಡನಾಟಕ್ಕಾಗಿ ತಮ್ಮದೇ ನೆರೆಹೊರೆಯವರಿಂದ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.


Click the Play button to hear this message in audio format

ಪ್ರತಿದಿನ ಬೆಳಿಗ್ಗೆ ಆರಕ್ಕೆ ಎಲ್ವಿಸ್ ದಿನ ಆರಂಭವಾಗುತ್ತದೆ. ಎದ್ದ ತಕ್ಷಣ ಆತ ಫಟಾಫಟ್ ತಯಾರಾಗಿ ತನ್ನ ವಿಶಾಲವಾದ ವಸತಿ ಸಂಕೀರ್ಣದಲ್ಲಿರುವ ಜಾಗರ್ಸ್ ಪಾರ್ಕ್ಗೆ ತೆರಳುತ್ತಾನೆ. ಅಲ್ಲಿ ಆತ ಭೇಟಿ ಮಾಡುವ ಗೆಳತಿಯ ಹೆಸರು ಲೀಸಾ. ಅವರಿಬ್ಬರೂ ಜೊತೆ-ಜೊತೆಯಲ್ಲಿ ವಾಕಿಂಗ್ ಮತ್ತು ವ್ಯಾಯಾಮ ಆರಂಭಿಸುತ್ತಾರೆ. ಹೀಗೆ ಒಂದು ತಾಸು ಕಳೆದ ಬಳಿಕ ಆತ ತನ್ನ ಅಪಾರ್ಟ್ಮೆಂಟ್ಗೆ ಮರಳಿ ಸ್ನಾನ ಮುಗಿಸಿ ಲಘು ಉಪಾಹಾರ ಸೇವಿಸುತ್ತಾನೆ. ಆನಂತರ ತನಗೆ ಆರಾಮವೆನ್ನಿಸುವ ಕ್ಯಾಶುಯಲ್ ಬಟ್ಟೆ ಧರಿಸಿ ಲ್ಯಾಪ್ಟಾಪ್ ಬ್ಯಾಗ್ ಹಿಡಿದು ಹತ್ತಿರದಲ್ಲಿಯೇ ಇರುವ ʼಕೋ-ವರ್ಕಿಂಗ್ ಸ್ಪೇಸ್ʼಗೆ ತೆರಳುತ್ತಾನೆ. ಅಲ್ಲಿ ಆತ ಮತ್ತೆ ಲೀಸಾ ಭೇಟಿ ಮಾಡುತ್ತಾನೆ. ಇಬ್ಬರೂ ಅಲ್ಲಿಂದಲೇ ಆನ್ಲೈನ್ ಮತ್ತು ಆಫ್ಲೈನ್ ಮೋಡ್ನಲ್ಲಿ ಕೆಲಸ ಶುರುಹಚ್ಚಿಕೊಳ್ಳುತ್ತಾರೆ.

ಗಂಟೆಗಳ ಕಾಲ ಅವರು ಡಿಜಿಟಲ್ ಪರದೆಯ ಮುಂದೆ ಕಳೆದ ಬಳಿಕ ಊಟದ ವಿರಾಮದ ವೇಳೆ ಇಬ್ಬರೂ ಸೇರಿ ಪಕ್ಕದಲ್ಲಿಯೇ ಇರುವ ರೆಸ್ಟೋ-ಬಾರ್ನಲ್ಲಿ ಕಳೆಯುತ್ತಾರೆ. ಅದೇ ರೀತಿ ಸಂಜೆಯೂ ಕೆಲಸದ ಬಳಿಕ ಅವರು ಜೊತೆಯಲ್ಲಿಯೇ ವ್ಯಾಯಾಮ ಮಾಡಲು ಕ್ಯಾಂಪಸ್ ಜಿಮ್ಗೆ ತೆರಳುತ್ತಾರೆ. ರಾತ್ರಿ ವೇಳೆ ತಮ್ಮ ಬಹುರಾಷ್ಟ್ರೀಯ ಕಂಪನಿಯ ಕೆಲಸದ ನಡುವೆಯೇ ಸಿಗುವ ಸಮಯದಲ್ಲಿಯೇ ಹರಟೆ ಕೊಚ್ಚುತ್ತಾ ವಾರಾಂತ್ಯದ ಪ್ರವಾಸಗಳ ಬಗ್ಗೆ ಯೋಜನೆ ರೂಪಿಸುತ್ತಾರೆ.

ಲೋಕಲ್ ಕೆಫೆಟೇರಿಯಾಕ್ಕೆ ತೆರಳಿ ರುಚಿಕಟ್ಟಾದ ತಿಂಡಿಗಳನ್ನು ತಿನ್ನುವುದು, ಬಿಸಿ ಬಿಸಿ ಕಾಫಿ ಕುಡಿಯುವುದು, ಸನಿಹದಲ್ಲೇ ಇರುವ ಜುಹು ಬೀಚ್ನಲ್ಲಿ ಅಡ್ಡಾಡುವುದು ಅಥವಾ ಹತ್ತಿರದಲ್ಲೇ ಇರುವ ಐಷಾರಾಮಿ ಮಲ್ಟಿಫ್ಲೆಕ್ಸ್ನಲ್ಲಿ ಬಾಲಿವುಡ್ ಬ್ಲಾಕ್ಬಸ್ಟರ್ ಸಿನೆಮಾ ನೋಡುವುದು ಅವರ ಯೋಜನೆಗಳಲ್ಲಿ ಸೇರಿರುತ್ತದೆ.

ಅವರಿಬ್ಬರು ಪರಸ್ಪರ ಭೇಟಿಯಾಗಿದ್ದು ಮತ್ತು ಪರಿಚಿತರಾಗಿದ್ದು ಕೆಲವು ವರ್ಷಗಳ ಹಿಂದೆ. ಅವರು ಒಂದೇ ಗ್ರೀನ್ಫೀಲ್ಡ್ ಪ್ರಾಪರ್ಟಿಯ ಬೇರೆ ಬೇರೆ ಬ್ಲಾಕ್ಗಳಲ್ಲಿ ಫ್ಲಾಟ್ಗಳನ್ನು ಖರೀದಿಸಿ ವಾಸಿಸಲು ಬಂದಿದ್ದರು. ಹಾಗೆ ಪರಿಚಿತರಾದವರು ತಕ್ಷಣವೇ ಒಬ್ಬರಿಗೊಬ್ಬರು ನಿಕಟವಾದರು. ಕಾಲಕ್ರಮೇಣ ಅವರ ಸ್ನೇಹ ಬೆಳೆಯಿತು. ಇಬ್ಬರ ಆಸಕ್ತಿಗಳು ಪರಸ್ಪರ ಮ್ಯಾಚ್ ಆದವು. ಆದ್ದರಿಂದಲೇ ಅವರ ನಡುವೆ ಪ್ರೀತಿ ಚಿಗುರೊಡೆಯಿತು. ಈಗ ಈ ಪ್ರೇಮಿಗಳು ಡೇಟಿಂಗ್ನಲ್ಲಿ ನಿರತರಾಗಿದ್ದಾರೆ ಮತ್ತು ಪ್ರೇಮದ ಸುಂದರ ಕ್ಷಣಗಳನ್ನು ಸವಿಯುವಲ್ಲಿ ತಲ್ಲೀನರಾಗಿದ್ದಾರೆ.

ಏನಿದು ಝಿಪ್-ಕೋಡಿಂಗ್

ತಮ್ಮದೇ ಆಜೂಬಾಜಿನ ಪರಿಸರದಲ್ಲಿ ಸಂಗಾತಿಯನ್ನು ಅರಸುವುದು ಮತ್ತು ಪತ್ತೆ ಮಾಡುವುದು ಮೇಲ್ನೋಟಕ್ಕೆ ತೀರಾ ಸುಲಭದ ಅಥವಾ ನಂಬಲಿಕ್ಕಾಗದ ಸಂಗತಿಯಂತೆ ಕಾಣಬಹುದು. ಆದರೆ ಸದ್ಯದ ಡೇಟಿಂಗ್ ಜಗತ್ತಿನ ಹೊಸ ಟ್ರೆಂಡ್ ಆಗಿರುವ “ಝಿಪ್-ಕೋಡಿಂಗ್” ಹೇಳುತ್ತಿರುವುದು ಕೂಡ ಇದನ್ನೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಈ ರೀತಿಯ ಸಂಬಂಧದ ಶೈಲಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಟ್ರೆಂಡ್ ಒಂಟಿಯಾಗಿರುವವರು ಡೇಟಿಂಗ್ ವಿಷಯದಲ್ಲಿ ಹೆಚ್ಚು ಸಾಹಸ ಪ್ರವೃತ್ತರಾಗಲು ಅಥವಾ ಹೊಸ ಪ್ರಯೋಗಗಳಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವುದಿಲ್ಲ.

“ಮನೆಯ ವಿಚಾರದಲ್ಲಿ ಹೆಚ್ಚು ವ್ಯಾಮೋಹ ಹೊಂದಿರುವವರು ತಮ್ಮದೇ ಪರಿಧಿಯೊಳಗೆ ಇರಲು ಮತ್ತು ತಮ್ಮದೇ ಪರಿಚಿತ ಸ್ಥಳಗಳಲ್ಲಿ ಸಂಗಾತಿಯನ್ನು ಹುಡುಕುವ ಹಂಬಲ ಹೊಂದಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಗಡಿಗಳನ್ನು ದಾಟಿ ಹೋಗುವುದಿಲ್ಲ, ಹೆಚ್ಚು ಕಷ್ಟಪಡುವುದಿಲ್ಲ ಅಥವಾ ತಮ್ಮ ಜೀವನ ಸಂಗಾತಿಯನ್ನು ದೂರದೂರದ ಪ್ರದೇಶಗಳಿಗೆ ಹೋಗುವುದು ಅವರಿಗೆ ಇಷ್ಟವಿಲ್ಲದ ಸಂಗತಿ. ತಮ್ಮ ವ್ಯಾಪ್ತಿಯೊಳಗೇ ಲಭ್ಯವಿರುವ ಆಯ್ಕೆಗಳಿಂದಲೇ ಅವರು ತೃಪ್ತರಾಗುತ್ತಾರೆ,” ಎಂದು ದೇಹಭಾಷಾ ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.

ದೂರದೂರಿನ ಸಂಬಂಧಗಳು, ವರ್ಚುವಲ್ ಮ್ಯಾಚ್ಮೇಕಿಂಗ್ ಮತ್ತು ಅಂತರರಾಜ್ಯ ಅಥವಾ ಅಂತರರಾಷ್ಟ್ರೀಯ ವಿವಾಹಗಳ ಈ ಯುಗದಲ್ಲಿ, ಕೆಲವು ಜನರು ಮಾತ್ರ ತಮ್ಮ ವೈಯಕ್ತಿಕ ಆಯ್ಕೆಗಳ ವಿಷಯದಲ್ಲಿ ತಮ್ಮದೇ ಆದ ಸೀಮಿತ ಪ್ರದೇಶಕ್ಕೆ ಅಂಟಿಕೊಳ್ಳಲು ಬಯಸುತ್ತಾರೆ. ಪ್ರಾಯೋಗಿಕ ಆಧುನಿಕ ಜೀವನದ ಶುಷ್ಕ ಮರುಭೂಮಿಯಲ್ಲಿ, ಒಂದೇ ಪ್ರದೇಶಕ್ಕೆ ಸೇರಿದ ಹುಡುಗ-ಹುಡುಗಿಯ ಭೇಟಿಯ ಕಥೆಯು ನಿಸ್ಸಂದೇಹವಾಗಿ ಮಧ್ಯಕಾಲೀನ ಕಾಲ್ಪನಿಕ ಕಥೆಯ ಓಯಸಿಸ್ನಂತೆ ಭಾಸವಾದರೆ ಅಚ್ಚರಿಯಿಲ್ಲ.

ಪ್ರಸ್ತುತ ಚಾಲ್ತಿಯಲ್ಲಿರುವ ಹತ್ತು ಹಲವು ಡೇಟಿಂಗ್ ಶೈಲಿಗಳಿಗೆ ವ್ಯತಿರಿಕ್ತವಾಗಿ, ಆಧುನಿಕ ಸಂಬಂಧಗಳ ಜಗತ್ತಿನಲ್ಲಿ 'ಜಿಪ್-ಕೋಡಿಂಗ್' ಶೈಲಿಯು ಸಾಮೀಪ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಒಂಟಿತನ ಅನುಭವಿಸುತ್ತಿರುವ ಮತ್ತು ಸಂಗಾತಿಗಾಗಿ ಹಾತೊರೆಯುವವರು ನಿರ್ದಿಷ್ಟವಾಗಿ ತಮ್ಮ ಹತ್ತಿರದಲ್ಲೇ ವಾಸಿಸುವ ಸಂಗಾತಿಗಳಿಗಾಗಿ ಹುಡುಕಾಟ ನಡೆಸುತ್ತಾರೆ—ಅದು ಒಂದೇ ಕಟ್ಟಡದ ಕಾರಿಡಾರ್ ಆಗಿರಬಹುದು, ಒಂದೇ ಬ್ಲಾಕ್ ಆಗಿರಬಹುದು, ಒಂದೇ ಪೋಸ್ಟಲ್ ಕೋಡ್ ಹಂಚಿಕೊಳ್ಳುವ ಪ್ರದೇಶವೂ ಆಗಿರಬಹುದು ಅಥವಾ ಅಲ್ಲೇ ಎಲ್ಲೋ ಪಕ್ಕದ ಬಡಾವಣೆಯೂ ಆದೀತು. ಇದರ ಪರಿಣಾಮವಾಗಿ, ಇಂತಹ ದಂಪತಿಗಳು ಯಾವಾಗಲೂ ಒಬ್ಬರಿಗೊಬ್ಬರು ಲಭ್ಯವಿರುತ್ತಾರೆ ಮತ್ತು ಪರಸ್ಪರ ದೂರವಿರಲು ಸಾಧ್ಯವಾಗದಷ್ಟು ಹತ್ತಿರವಾಗುತ್ತಾರೆ.

ಔಪಚಾರಿಕತೆಯಲ್ಲ, ಸಹಜತೆಗೆ ಆದ್ಯತೆ

ಜಿಪ್-ಕೋಡಿಂಗ್ ಎನ್ನುವುದು ತಮ್ಮದೇ ವಾಸಸ್ಥಳದ ಸುತ್ತಮುತ್ತ ಅಥವಾ ಒಂದೇ ಪಿನ್ ಕೋಡ್ ವ್ಯಾಪ್ತಿಯಲ್ಲಿ ʼಆತ್ಮ ಸಂಗಾತʼರನ್ನು ಹುಡುಕುವ ಮತ್ತು ಅವರೊಂದಿಗೆ ಬೆರೆಯುವ (ಹಲವು ಬಾರಿ ಯಾವುದೇ ಹೆಚ್ಚಿನ ನಿರೀಕ್ಷೆಗಳಿಲ್ಲದೆ) ಪ್ರಕ್ರಿಯೆಯಾದ ಕಾರಣ, ಈ ರೀತಿಯ ಸಂಬಂಧವು ಇಂದಿನ ಪ್ರಚಾರಕ್ಕಿಂತ ಹೆಚ್ಚು ಹಳೆಯ ಶೈಲಿಯದ್ದೇ ಎಂದು ಯಾರಾದರೂ ಆಶ್ಚರ್ಯಪಡಬಹುದು.

"ಇಲ್ಲಿ, ನಾನು ಉಲ್ಟಾ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ—ಇದು ಕೇವಲ ಮಾನವ ಸಹಜವಾದ ಮುನ್ಸೂಚನೆಯಲ್ಲವೇ? ಕೆಲವೊಮ್ಮೆ ಸರಳ ಎನ್ನುವಂತಹ ವಿಷಯಗಳು ದೀರ್ಘಕಾಲ ಉಳಿಯುತ್ತವೆ ಮತ್ತು ಮ್ಯಾಜಿಕ್ ಸೃಷ್ಟಿಸುತ್ತವೆ. ನಮಗೆ ತಿಳಿದಿರುವ ಜನರ ಸುತ್ತಲೇ ಇರಬೇಕೆಂಬ ನಮ್ಮ ಮೂಲಭೂತ ಪ್ರವೃತ್ತಿ ಎಂದಿಗೂ ಮಾಯವಾಗಿಲ್ಲ. ಮನುಷ್ಯರು ಸ್ವಭಾವತಃ ಸಂಘಜೀವಿಗಳು. ಹೌದು, ಹೆಚ್ಚಿನ ಆಯ್ಕೆಗಳಿದ್ದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂಬ ಭ್ರಮೆಯೊಂದಿಗೆ ನಾವು ಈ ಪ್ರವೃತ್ತಿಯನ್ನು ಸ್ವಲ್ಪ ಸಮಯದವರೆಗೆ ಹತ್ತಿಕ್ಕಿದ್ದೆವು. ಆದರೆ ಆ ಮೂಲ ಗುಣ ನಮ್ಮಲ್ಲಿ ಹಾಗೆಯೇ ಉಳಿದಿದೆ," ಎನ್ನುತ್ತಾರೆ ಲೈಫ್ ಕೋಚ್ ಕೃಷ್ಣನ್ ಪರಮೇಶ್ವರನ್.

“ನಮ್ಮ ಬಾಲ್ಯ ಅತ್ಯಂತ ವರ್ಣರಂಜಿತವಾಗಿತ್ತು ಮತ್ತು ಸುರಕ್ಷಿತವೂ ಆಗಿತ್ತು. ಅದಕ್ಕೆ ಮುಖ್ಯ ಕಾರಣ ನಮ್ಮ ಸುತ್ತ ಇದ್ದ ಸಮುದಾಯಗಳು. ಕುಟುಂಬದ ಯಾವುದೇ ಸಮಾರಂಭವಿರಲಿ, ಕೊನೆಗೆ ಅಂತ್ಯಕ್ರಿಯೆಯೇ ಇರಲಿ, ಯಾರಿಗೂ ಆಮಂತ್ರಣಗಳನ್ನು ಕಳುಹಿಸುವ ಅಗತ್ಯ ಇರುತ್ತಿರಲಿಲ್ಲ. ಮನೆಯ ಬಾಗಿಲು ಸದಾ ತೆರೆದಿರುತ್ತಿದ್ದವು ಮತ್ತು ಸ್ವಾಗತಿಸಲು ಕೈಗಳು ಚಾಚಿಕೊಂಡಿರುತ್ತಿದ್ದವು; ಇದು ಪರಸ್ಪರ ನಂಬಿಕೆ ಮತ್ತು ಆತ್ಮೀಯತೆಯನ್ನು ಪ್ರತಿಬಿಂಬಿಸುತ್ತಿತ್ತು. ಜನರು ತಮ್ಮ ಆಪ್ತ ವಲಯದವರೊಂದಿಗೆ ಹಾಗೂ ದೂರದ ಸಂಬಂಧಿಕರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಹಾಗಾಗಿ, ನನ್ನ ಪ್ರಕಾರ, 'ಝಿಪ್-ಕೋಡಿಂಗ್' ಎಂಬುದು ಕೇವಲ ಹೊಸ ಹೆಸರಿನೊಂದಿಗೆ ಮರುಜೀವ ಪಡೆದಿದೆಯೇ ಹೊರತು, ಇದು ಎಂದಿಗೂ ಸಂಪೂರ್ಣವಾಗಿ ಮರೆಯಾಗಿರಲಿಲ್ಲ." ಎನ್ನುತ್ತಾರೆ ಪರಮೇಶ್ವರನ್.

ಝಿಪ್-ಕೋಡಿಂಗ್ ಪರಿಕಲ್ಪನೆಯನ್ನು ಹೇಗೆ ಗುರುತಿಸಬೇಕು ಎಂಬುದು ಸಂಪೂರ್ಣವಾಗಿ ಒಬ್ಬರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ಲೈಫ್ ಕೋಚ್ ವಸುಧಾ ಝಾ. "ಹಿಂದೆ ಜನ ಹೆಚ್ಚಾಗಿ ಒಂದೇ ಪ್ರದೇಶದೊಳಗೆ ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿದ್ದರು, ಆದ್ದರಿಂದ ಜಿಪ್-ಕೋಡಿಂಗ್ ಹಳೆಯ ವಿಚಾರ ಎಂದು ಅನಿಸಬಹುದು. ಹಂಚಿಕೊಂಡ ನೆರೆಹೊರೆಗಳು, ಕೌಟುಂಬಿಕ ನೆಟ್ವರ್ಕ್ಗಳು ಅಥವಾ ಪರಿಚಿತ ಸಾಮಾಜಿಕ ಗುಂಪುಗಳ ಮೂಲಕ ಇದು ಸುಲಭವಾಗಿ ಸಾಧ್ಯವಾಗುತ್ತಿತ್ತು. ಆದರೂ, ಇದು ಒಂದು ರೀತಿಯಲ್ಲಿ ಆಧುನಿಕತೆಯ ಮುಖವಾಡವನ್ನೂ ತೊಟ್ಟಿದೆ. ಇಂದಿನ ಅನೇಕ ಡೇಟಿಂಗ್ ಆಪ್ಗಳು 'ಲೊಕೇಶನ್ ಫಿಲ್ಟರ್'ಗಳನ್ನು ಬಳಸುತ್ತವೆ, ಇದು ಮೂಲಭೂತವಾಗಿ ಅದೇ ಹಳೆಯ ಆಲೋಚನೆಯನ್ನು ಡಿಜಿಟಲ್ ರೂಪದಲ್ಲಿ ಬಲಪಡಿಸುತ್ತಿದೆ," ಎಂಬ ಅವಲೋಕನವನ್ನು ಅವರು ಮುಂದಿಡುತ್ತಾರೆ.

ಜೆನ್ ಜಿ ಮಿಶ್ರಭಾವ

ಜೆನ್ ಜಿ ಮತ್ತು ಮಿಲೇನಿಯಲ್ಗಳು ಜಿಪ್-ಕೋಡಿಂಗ್ ಅಥವಾ ತಮ್ಮದೇ ಸಮುದಾಯ ಅಥವಾ ಜಿಲ್ಲೆಯ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದಾರೆ. ವೈವಿಧ್ಯಮಯ ಆಯ್ಕೆಗಳಿಗಾಗಿ ಸ್ಥಳೀಯ ಪರಿಸರವನ್ನು ಪರಿಶೋಧಿಸುವ ಕಲ್ಪನೆ ಇಷ್ಟವೇ ಎಂದು ಕೇಳಿದಾಗ, 25 ವರ್ಷದ ಪಿಆರ್ ಎಕ್ಸಿಕ್ಯೂಟಿವ್ ಶಿಖಾ ಝಾ ಹೀಗೆ ವಿವರಿಸುತ್ತಾರೆ: "ನಿಮ್ಮದೇ ವಲಯದೊಳಗೆ ಡೇಟಿಂಗ್ ಮಾಡುವುದು ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ ಎಂಬುದು ನನ್ನ ಭಾವನೆ. ಇದು ಒಂದಷ್ಟು ಅನುಕೂಲತೆ, ಕಂಫರ್ಟ್ ಭಾವನೆ ಮತ್ತು ಸುಲಭ ಸಾಧ್ಯ ಒಡನಾಟವನ್ನು ನೀಡುತ್ತದೆ. ಮುಖ್ಯವಾಗಿ, ಒಬ್ಬರ ಬ್ಯುಸಿ ವೇಳಾಪಟ್ಟಿಯನ್ನು ನಿರ್ವಹಿಸಲು ಸಹಕಾರಿ."

“ಆದರೆ, ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ, ನನ್ನನ್ನು ನಾನು ಒಂದು ಸೀಮಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ತಕ್ಷಣದ ಸುತ್ತಮುತ್ತಲಿನ ಪ್ರದೇಶಗಳನ್ನು ಮೀರಿ ಸಂಬಂಧಗಳನ್ನು ಹುಡುಕುವುದು ನಮ್ಮ ಅನುಭವಗಳನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಮತ್ತು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ, ಇದು ವ್ಯಕ್ತಿತ್ವ ರೂಪಿಸಿಕೊಳ್ಳಲು ಬಹಳ ಮುಖ್ಯ," ಎಂಬ ಅಭಿಪ್ರಾಯವನ್ನು ಸೇರಿಸಲೂ ಅವರು ಬಯಸುತ್ತಾರೆ.

ಝಾ ಅವರ ಮಾತುಗಳಿಗೆ ದೆಹಲಿ ಮೂಲದ 30 ರ ಹರೆಯದ ವೃತ್ತಿಪರ ಗೌರವ್ ಜೈನ್ ಕೂಡ ಧ್ವನಿಗೂಡಿಸುತ್ತಾರೆ. "ಝಿಪ್-ಕೋಡಿಂಗ್ನಲ್ಲಿ ನಿರಾಕರಿಸಲಾಗದ ಆಕರ್ಷಣೆಯಿದೆ: ಪರಿಚಿತ ಓಣಿಗಳು ಮತ್ತು ಗಲ್ಲಿಗಳು, ಚಿರಪರಿಚಿತ ಕೆಫೆಗಳು ಮತ್ತು ಡೇಟ್ಗಾಗಿ ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ಆದರೆ ನಿಮ್ಮ ಹೃದಯವನ್ನು ಒಂದು ನಿರ್ದಿಷ್ಟ ಪಿನ್ ಕೋಡ್ಗೆ ಮಾತ್ರ ಸೀಮಿತಗೊಳಿಸುವುದು ಎಂದರೆ, ಇತರ ಸುಂದರ ಮತ್ತು ಅನಿರೀಕ್ಷಿತ ಅವಕಾಶಗಳನ್ನು ಕಳೆದುಕೊಂಡಂತೆ ಎಂದೂ ಅರ್ಥವಾಗಬಹುದು. ಹೃದಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ವಿಳಾಸದ ಪಟ್ಟಿ ಮುಕ್ತವಾಗಿ ಮತ್ತು ನಮ್ಯವಾಗಿರಬೇಕು," ಎನ್ನುತ್ತಾರೆ ಅವರು.

ಹಳೆಯ ಕಾಲದ ಪ್ರೇಮ

ಬಾಲ್ಕನಿ ಮತ್ತು ಟೆರೇಸ್ ಪ್ರೇಮಗಳು, ಸುಗಂಧಭರಿತ ಮತ್ತು ಎಚ್ಚರಿಕೆಯಿಂದ ಲಕೋಟೆಯಲ್ಲಿಟ್ಟ ಪತ್ರಗಳು, ಪರ್ಫ್ಯೂಮ್ ಸಿಂಪಡಿಸಿದ ಕರವಸ್ತ್ರಗಳು, ಕೆಂಪು ಗುಲಾಬಿಗಳು, ಮಡಚಿದ ಚೀಟಿಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮುಗ್ಧ ಪ್ರೇಮ ಬರಹಗಳು ಮತ್ತು ಅನಾಲಾಗ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ಕ್ಷಣಗಳು - ಹೀಗೆ ಹಿಂದಿನ ಕಾಲದ ದೈನಂದಿನ ಜೀವನದ ನಿರಾಳ ಲಯದ ಭಾಗವಾಗಿದ್ದ ಹಳೆಯ ಪ್ರಪಂಚದ ಮೋಡಿ ಝಿಪ್-ಕೋಡಿಂಗ್ನಲ್ಲಿ ಎದ್ದು ಕಾಣುತ್ತದೆಯೇ?

"ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಇದು ಅತ್ಯುತ್ತಮವಾದ ಮರುಶೋಧನೆ. ಕಿಟಕಿ ಸರಳುಗಳ ನಡುವೆ ವಿನಿಮಯವಾಗುವ ನೋಟಗಳು, ಹಸ್ತಲಿಖಿತ ಸಂದೇಶಗಳು ಮತ್ತು ಆಪ್ತ ಸಂವಹನದ ಮೂಲಕ ಆ ಸಿಹಿಯಾದ, ಕ್ಲಾಸಿಕ್ ಭಾವನೆಗಳನ್ನು ಇದು ಮರುಸೃಷ್ಟಿಸುತ್ತದೆ. ಆದರೆ ಈ ವಿಶಿಷ್ಟ ಚೇಷ್ಠೆಗಳು ಕೇವಲ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕಿಲ್ಲ. ಅವು ಕೇವಲ ಹಿಂದಿನ ದಶಕಗಳನ್ನು ಪ್ರತಿಬಿಂಬಿಸುತ್ತವೆ," ಎಂಬ ವಾದ ಝಾ ಅವರದ್ದು.

ಸಮಾಜಶಾಸ್ತ್ರಜ್ಞರು ಹೆಚ್ಚಾಗಿ ನಂಬುವಂತೆ, ಹಿಂದಿನ ಕಾಲದ ಸಂಬಂಧಗಳು - ಅಂದರೆ ಒಂದೇ ಕಟ್ಟಡ, ರಸ್ತೆ ಅಥವಾ ಬಡಾವಣೆಯಂತಹ ಸಣ್ಣ ವ್ಯಾಪ್ತಿಯೊಳಗೆ ಚಿಗುರುತ್ತಿದ್ದ ಬಾಂಧವ್ಯಗಳು - ವಿಭಿನ್ನವಾದ ಗುಣಲಕ್ಷಣವನ್ನು ಹೊಂದಿದ್ದವು. ಅವು ಹಂತಹಂತವಾಗಿ, ಸಹಜವಾಗಿ ಮತ್ತು ಯಾವುದೇ ಪೂರ್ವಯೋಜಿತ ವೇಳಾಪಟ್ಟಿ ಇಲ್ಲದೆ ಬೆಳೆಯುತ್ತಿದ್ದವು. ಅಂತಿಮವಾಗಿ, ಎಲ್ಲವನ್ನೂ ಯೋಜಿಸಲು ಸಾಧ್ಯವಿಲ್ಲವಲ್ಲವೇ?

"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಂತಹ ಬಾಂಧವ್ಯವು ಕೇವಲ 'ಸ್ವೈಪ್ ರೈಟ್' (swiping right) ಮಾಡುವುದರಿಂದ ಬರುವಂಥವುಗಳಲ್ಲ. ಕಾಲಾನಂತರದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುವುದರಿಂದ ಇದು ಮೂಡುತ್ತದೆ. ಇದಕ್ಕೆ ನಾನು ನೀಡಬಲ್ಲ ಏಕೈಕ ಉಪಮೆ ಎಂದರೆ 'ದಮ್ ಬಿರಿಯಾನಿ'. ನೀವು ಪಾತ್ರೆಯನ್ನು ಮುಚ್ಚಿ ಸೀಲ್ ಮಾಡುತ್ತೀರಿ, ಉರಿಯನ್ನು ಕಡಿಮೆ ಇಡುತ್ತೀರಿ ಮತ್ತು ಪದೇ ಪದೇ ಪರೀಕ್ಷಿಸಲು ಮುಚ್ಚಳವನ್ನು ತೆಗೆಯುವುದಿಲ್ಲ. ಅಡೆತಡೆಯಿಲ್ಲದೆ ಅದು ಎಷ್ಟು ಹೆಚ್ಚು ಬೇಯುತ್ತದೆಯೋ, ಅಷ್ಟು ಹೆಚ್ಚು ರುಚಿಯಾಗಿರುತ್ತದೆ. ಜಿಪ್-ಕೋಡಿಂಗ್ ಪ್ರೇಮ ಕೂಡ ಹೀಗೆಯೇ ಕೆಲಸ ಮಾಡುತ್ತದೆ," ಎನ್ನುವ ಅಭಿಪ್ರಾಯ ಕೃಷ್ಣನ್ ಪರಮೇಶ್ವರನ್ ಅವರದ್ದು.

ಪರಿಚಿತದ ಎಳೆಯನ್ನು ಹಿಡಿದು

ದೂರದ ಪ್ರಯಾಣಕ್ಕೆ ವ್ಯಯವಾಗುವ ಸಮಯವನ್ನು ಉಳಿಸಲು ಅನೇಕ ದಂಪತಿಗಳು ಸ್ಥಳೀಯ ಕೆಫೆಗಳಲ್ಲಿ ಭೇಟಿಯಾಗುತ್ತಾರೆ, ಹತ್ತಿರದ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಾರೆ, ನೆರೆಹೊರೆಯ ಪುಸ್ತಕದಂಗಡಿಯಲ್ಲಿ ಪುಸ್ತಕ ಹುಡುಕುತ್ತಾರೆ, ಹತ್ತಿರದ ಕಿರಾಣಿ ಅಂಗಡಿಗಳಲ್ಲಿ ಶಾಪಿಂಗ್ ಮಾಡುತ್ತಾರೆ ಮತ್ತು ಸ್ಥಳೀಯ ಉಪಾಹಾರ ಮಂದಿರಗಳಲ್ಲಿ ಊಟ ಮಾಡುತ್ತಾರೆ. ತಮ್ಮದೇ ಸಮುದಾಯ ಮತ್ತು ಪರಿಸರದೊಳಗೆ ಸಂಗಾತಿಗಳನ್ನು ಹುಡುಕುವುದು ಸಮಾನ ಮನಸ್ಕರ ಸಂಪರ್ಕವನ್ನು ಖಚಿತಪಡಿಸುತ್ತದೆಯೇ ಮತ್ತು ಪರಿಚಿತ ಹಾದಿಯಲ್ಲಿ ಸಾಗಲು ಸಹಾಯ ಮಾಡುತ್ತದೆಯೇ?

“ನಾವು ಶೇರ್ ಮಾಡಿಕೊಂಡ ಭೌಗೋಳಿಕ ವಿವರಗಳು ನೈಸರ್ಗಿಕವಾಗಿ ಒಂದು ಸಾಮಾನ್ಯ ವೇದಿಕೆಯನ್ನು ಸೃಷ್ಟಿಸಬಹುದು. ಒಂದೇ ರೀತಿಯ ಸ್ಥಳೀಯ ಹ್ಯಾಂಗ್ಔಟ್ಗಳು, ದಿನಚರಿಯ ಒಂದೇ ಲಯ ಮತ್ತು ಪರಸ್ಪರ ಪರಿಚಿತವಿರುವ ಸಾಮಾಜಿಕ ವಲಯಗಳು ಖಂಡಿತವಾಗಿಯೂ ಅನುಕೂಲಕರ. ಆದರೆ ಸಮಾನ ಮನಸ್ಕರು ಎಂಬುದು ಮೌಲ್ಯಗಳು ಮತ್ತು ಪರಸ್ಪರ ಹೊಂದಾಣಿಕೆಯ ವಿಷಯವೇ ಹೊರತು ಜಿಪಿಎಸ್ ನಿರ್ದೇಶಾಂಕಗಳಲ್ಲ. ನಿಮ್ಮ ಆತ್ಮಸಂಗಾತಿಯು ಎರಡು ಗಲ್ಲಿಗಳ ಆಚೆ ಇರಬಹುದು ಅಥವಾ ಎರಡು ಭಿನ್ನ ಟೈಮ್ ಝೋನ್ಗಳಲ್ಲಿ ಇರಬಹುದು - ಅದು ದೊಡ್ಡ ವ್ಯತ್ಯಾಸವನ್ನೇನೂ ಮಾಡುವುದಿಲ್ಲ," ಎನ್ನುತ್ತಾರೆ ಜೈನ್.

ಶಿಖಾ ಝಾ ಇದನ್ನು ಪುನರುಚ್ಚರಿಸುತ್ತಾ, "ನಿಮ್ಮ ಸಂಗಾತಿಯನ್ನು ಒಂದೇ ರೀತಿಯ ಹ್ಯಾಂಗ್ಔಟ್ ತಾಣಗಳಲ್ಲಿ ಭೇಟಿಯಾಗುವುದು ಖಂಡಿತವಾಗಿಯೂ ಒಂದು ಆಹ್ಲಾದಕರ ದಿನಚರಿಯ ಭಾವನೆಗೆ ಕಾರಣವಾಗುತ್ತದೆ. ಆದರೆ ನಗರದ ಒಂದೇ ಭಾಗದವರಾದ ಮಾತ್ರಕ್ಕೆ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಯೋಚಿಸುತ್ತಾರೆ ಎಂದು ಅರ್ಥವಲ್ಲ. ಹೊಂದಾಣಿಕೆಯು ಸಾಮೀಪ್ಯಕ್ಕಿಂತ ಹೆಚ್ಚಾಗಿ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ," ಎಂದು ಅಭಿಪ್ರಾಯಪಡುತ್ತಾರೆ.

ಸಾಮಾನ್ಯವಾಗಿ 'ಝಿಪ್-ಕೋಡಿಂಗ್' ಜೀವನಕ್ಕೆ ಒಂದು ನಿರಾಳ ಭಾವವನ್ನು ಉಂಟು ಮಾಡುತ್ತದೆ ಎಂಬ ನಂಬಿಕೆಯಿದೆ. ಅಂದರೆ, ಪೀಕ್ ಅವರ್ಗಳಲ್ಲಿ ಟ್ರಾಫಿಕ್ನಲ್ಲಿ ಸಿಲುಕಿ ಸಂಗಾತಿಯನ್ನು ಭೇಟಿಯಾಗಲು ಓಡುವುದಕ್ಕಿಂತ, ಬದುಕಿನ ಪ್ರತಿ ಹಂತದಲ್ಲೂ ವಿರಾಮ ಪಡೆಯುತ್ತಾ, ಒಂದು ನಿಧಾನಗತಿಯ ಕಾದಂಬರಿಯಂತೆ ಪ್ರೇಮವು ಹಂತಹಂತವಾಗಿ ಅರಳಲು ಮತ್ತು ವಿಕಸನಗೊಳ್ಳಲು ಇದು ಅವಕಾಶ ನೀಡುತ್ತದೆ.

"ವಿಷಯಗಳು ತಮ್ಮದೇ ಆದ ವೇಗ ಮತ್ತು ಲಯದಲ್ಲಿ ಬೆಳೆಯುತ್ತ ಹೋಗುತ್ತವೆ. ರಾತ್ರಿ 11 ಗಂಟೆಗೆ ಕೊನೆಯ ರೈಲು ಇದೆ ಎಂಬ ಕಾರಣಕ್ಕೆ, ಕೇವಲ ಮೂರು ಗಂಟೆಗಳಲ್ಲಿ ಏನಾದರೂ ಅದ್ಭುತವಾಗಿ ಸಂಭವಿಸಬೇಕು ಎಂಬ ಒತ್ತಡ ಇಲ್ಲಿ ಇರುವುದಿಲ್ಲ," ಎನ್ನುತ್ತಾರೆ ಮಧ್ಯವಯಸ್ಕ ಮಾರ್ಕೆಟಿಂಗ್ ವೃತ್ತಿಪರರಾದ ಅಮೃತಾ ನಾಗ್.

ವಿಶ್ವವೇ ನಿಮ್ಮ ಕೈಯಲ್ಲಿ

ಮಾಧ್ಯಮಗಳ ಏಳಿಗೆ ಮತ್ತು ಇಂಟರ್ನೆಟ್ ಕ್ರಾಂತಿಯಿಂದಾಗಿ, ವಿಶ್ವದ ಯಾವುದೇ ಮೂಲೆಯ ಅಸಂಖ್ಯಾತ ಜನರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟದ ಮಾತಲ್ಲ. ಅದಕ್ಕಿರುವುದು ಕೇವಲ ಒಂದು ಕ್ಲಿಕ್ ಅಂತರ. ನಾವು ವೈವಿಧ್ಯಮಯ ಹಿನ್ನೆಲೆ ಮತ್ತು ದೃಷ್ಟಿಕೋನಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಸಂವಹನ ನಡೆಸಬಹುದು. ಇಡೀ ಜಗತ್ತೇ ನಮ್ಮ ಬೆರಳ ತುದಿಯಲ್ಲಿರುವಾಗ, ನಮ್ಮನ್ನು ನಾವೇ ಒಂದು ಸಣ್ಣ ವ್ಯಾಪ್ತಿಗೆ ಸೀಮಿತವಾಗಿ ಮಾಡುವ 'ಝಿಪ್-ಕೋಡಿಂಗ್' ಇಂದಿಗೂ ಉತ್ತಮ ಆಲೋಚನೆಯೇ?

"ಇನ್ಸ್ಟಾಗ್ರಾಮ್, ಡಿಎಮ್, ಡೇಟಿಂಗ್ ಆಪ್ಗಳು ಮತ್ತು ಜಾಗತಿಕ ಸಮುದಾಯಗಳ ಯುಗದಲ್ಲಿ, ನಿಮ್ಮನ್ನು ಒಂದು ನಿರ್ದಿಷ್ಟ ವ್ಯಾಪ್ತಿ ಅಥವಾ ಮಾನದಂಡಗಳಿಗೆ ಸೀಮಿತಗೊಳಿಸುವಂತೆ ಮಾಡುವುದು ತೀರಾ ಹಳೆಯ ಆಲೋಚನೆ ಎಂಬಂತೆ ಭಾಸವಾಗಬಹುದು. ವಿಶಾಲವಾದ ಆಯ್ಕೆಗಳ ಸಾಗರದಲ್ಲಿ ಝಿಪ್-ಕೋಡಿಂಗ್ ಎಂಬುದು ಕೇವಲ ಒಂದು ಮುತ್ತು ಅಷ್ಟೇ. ನಮ್ಮ ಸುಲಭ ಲಭ್ಯತೆಯು, ಅನ್ವೇಷಣೆಯ ಸಾಧ್ಯತೆಗಳಿಗಿರುವ ಮುಕ್ತ ಮನಸ್ಸನ್ನು ಎಂದಿಗೂ ಮೀರಿಸಬಾರದು," ಎನ್ನುತ್ತಾರೆ ಜೈನ್.

ಇಂಟರ್ನೆಟ್ ಜಗತ್ತನ್ನು ಪರಿಣಾಮಕಾರಿಯಾಗಿ ನಮ್ಮ ಕೈಮುಷ್ಟಿಗೆ ತಂದಿರುವಾಗ, ನಮ್ಮ ತಕ್ಷಣದ ಸುತ್ತಮುತ್ತಲಿನ ಪ್ರದೇಶಗಳನ್ನು ಮೀರಿ ಅನ್ವೇಷಿಸುವುದು ಸಮಂಜಸವಾಗಿದೆ. "ಝಿಪ್-ಕೋಡಿಂಗ್ ಎಂದರೆ ಪ್ರತ್ಯೇಕತೆ ಎಂದರ್ಥವಲ್ಲ. ಆರ್ಶದಾಯಕವಾಗಿ ಹೇಳುವುದಾದರೆ, ಇದು ನಮ್ಮ ಆಯ್ಕೆಗಳನ್ನು ಮುಕ್ತವಾಗಿಡುವುದು ಮತ್ತು ನಮ್ಮ ಹತ್ತಿರವಿರುವ ಮೌಲ್ಯಗಳನ್ನು ಗೌರವಿಸುವುದು - ಇವೆರಡರ ನಡುವೆ ಸಮತೋಲನ ಸಾಧಿಸುವುದೇ ಆಗಿದೆ," ಎಂದು ಮಾತು ಮುಗಿಸುತ್ತಾರೆ ಝಾ.

Read More
Next Story