ಜಾತಿ ಮೀರಿದ ಸಮಾನತೆಯ ಹರಿಕಾರ: ಬಾಬಾಸಾಹೇಬರಿಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಋಣಿ
x
ಇಂದು ಭಾರತದ ಉದ್ದಗಲಕ್ಕೂ ವಿದ್ಯಾರ್ಥಿಗಳು, ಕೂಲಿ-ಕಾರ್ಮಿಕರು, ಸಾಫ್ಟ್ವೇರ್ ಎಂಜಿನಿಯರ್‌ಗಳು ಸೇರಿ ಲಕ್ಷಾಂತರ ಮಂದಿ ಸಂವಿಧಾನ ನಿರ್ಮಾತೃ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ಮೊಂಬತ್ತಿಯನ್ನು ಬೆಳಗಿ ಅವರ ಜನುಮದಿನವನ್ನು ಆಚರಿಸುತ್ತಿದ್ದಾರೆ.

ಜಾತಿ ಮೀರಿದ ಸಮಾನತೆಯ ಹರಿಕಾರ: ಬಾಬಾಸಾಹೇಬರಿಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಋಣಿ

ಇಂದು (ಏ.14) ಅಂಬೇಡ್ಕರ್ ಜಯಂತಿ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿರುವ ಸಿದ್ಧಾಂತ ʼಭಾರತದ ಸಂವಿಧಾನʼದ ಶಿಲ್ಪಿಯ ಕಥೆಗೆ ಮರುಪಯಣ ಅತ್ಯಂತ ಪ್ರಸ್ತುತವಾಗಿದೆ.


Click the Play button to hear this message in audio format

1891ರ ಏಪ್ರಿಲ್ 14. ಅಂದಿನ ಕೇಂದ್ರೀಯ ಪ್ರಾಂತ್ಯದ (ಇಂದಿನ ಮಧ್ಯಪ್ರದೇಶ) ಮಿಲಿಟರಿ ಕಂಟೋನ್ಮೆಂಟ್ನಲ್ಲಿ ಗಂಡು ಮಗು ಜನಿಸುತ್ತದೆ. ಆ ಮಗು ಹುಟ್ಟಿದ್ದು ಅಂದಿನ ಸಮಾಜ "ಅಸ್ಪೃಶ್ಯ" ಎಂದು ಕರೆದ ಕುಟುಂಬದಲ್ಲಿ. ಆ ಮಗುವಿನ ಹೆಸರು ಭೀಮರಾವ್ ರಾಮ್ಜೀ ಅಂಬೇಡ್ಕರ್. ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಅಲ್ಲಿನ ನೀರಿನ ತೊಟ್ಟಿಯ ಬಳಿ ಆಟವಾಡಬಹುದಿತ್ತು, ಆದರೆ ಬಾಲಕ ಭೀಮ್ ಮತ್ತು ಅವನ ಒಡಹುಟ್ಟಿದವರಿಗೆ ಅದಕ್ಕೆ ಅವಕಾಶವಿರಲಿಲ್ಲ. ಅವರಿಗಾಗಿ ಪ್ರತ್ಯೇಕವಾದ ಮಣ್ಣಿನ ಮಡಕೆ ಇಡಲಾಗುತ್ತಿತ್ತು; ಒಂದು ವೇಳೆ ಅವರು ಸಾಮಾನ್ಯ ನಲ್ಲಿಯನ್ನು ಮುಟ್ಟಿದರೆ, ಆ ನೀರು 'ಅಶುದ್ಧ'ವಾಯಿತು ಎಂದು ಪರಿಗಣಿಸಲಾಗುತ್ತಿತ್ತು.

ಇಂದು, ಭಾರತದಾದ್ಯಂತ ವಿದ್ಯಾರ್ಥಿಗಳು, ಪೌರಕಾರ್ಮಿಕರು ಮತ್ತು ಸಾಫ್ಟ್ವೇರ್ ಇಂಜಿನಿಯರ್ಗಳು ಸೇರಿದಂತೆ ಲಕ್ಷಾಂತರ ಜನರು ಅವರ ಜನ್ಮದಿನದ ಅಂಗವಾಗಿ ಮೊಂಬತ್ತಿಗಳನ್ನು ಬೆಳಗುತ್ತಾರೆ, ಅವರ ಪುಸ್ತಕಗಳನ್ನು ಓದುತ್ತಾರೆ ಮತ್ತು ಅವರ ಪ್ರತಿಮೆಗಳ ಮುಂದೆ ಸೆಲ್ಫಿ ತೆಗೆದು ಹಂಚಿಕೊಳ್ಳುತ್ತಾರೆ. ಅಂದೊಮ್ಮೆ ಗುಟುಕು ನೀರಿಗಾಗಿ ಪರದಾಡಿದ್ದ ಅದೇ ಬಾಲಕ ಮುಂದೆ ಪ್ರತಿಯೊಬ್ಬ ಪ್ರಜೆಯ ಘನತೆಯ ಹಕ್ಕನ್ನು ಖಾತರಿಪಡಿಸುವ 'ಭಾರತದ ಸಂವಿಧಾನ'ವನ್ನು ಬರೆದ ಎಂಬುದನ್ನು ಅವರು ಈ ಮೂಲಕ ನೆನಪಿಸಿಕೊಳ್ಳುತ್ತಾರೆ.

ಅಂಬೇಡ್ಕರ್ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯ ಸುಬೇದಾರ್ ಆಗಿದ್ದ ರಾಮ್ಜೀ ಮಾಲೋಜಿ ಸಕ್ಪಾಲ್ ಅವರ 14ನೇ ಮಗು. ತಂದೆ ಮಗನ ಓದಿಗೆ ಬೆಂಬಲ ನೀಡಿದರೂ, ಶಾಲೆಯಲ್ಲಿ ಪ್ರತಿದಿನ ವರಿಗೆ ಎದುರಾಗುತ್ತಿದ್ದುದು ಬರೀ ಅವಮಾನಗಳೇ. ಶಿಕ್ಷಕರು ಆತನ ನೋಟ್ಬುಕ್ ಮುಟ್ಟಲು ನಿರಾಕರಿಸುತ್ತಿದ್ದರು. ಆತ ತರಗತಿಯ ಹೊರಗೆ ನೆಲದ ಮೇಲೆ ಕುಳಿತುಕೊಳ್ಳಬೇಕಿತ್ತು. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಆತ ಪ್ರತೀ ತರಗತಿಯಲ್ಲೂ ಪ್ರಥಮ ಸ್ಥಾನ ಗಳಿಸುತ್ತಾನೆ. ಆತನ ಮೇಲಿದ್ದ ಅನುಕಂಪದಿಂದಾಗಿ ಬ್ರಾಹ್ಮಣ ಶಿಕ್ಷಕರೊಬ್ಬರು ʼಅಂಬೇಡ್ಕರ್ʼ ಎಂಬ ಉಪನಾಮ ನೀಡಿದರು, ಈ ಹೆಸರಿನಿಂದ ಆತ "ಕೆಳಜಾತಿ”ಗೆ ಸೇರಿದವನು ಎಂಬಂತೆ ಧ್ವನಿಸುವುದು ಕಡಿಮೆಯಾಗಲಿ ಎಂಬುದು ಅವರ ಉದ್ದೇಶವಾಗಿತ್ತು.

ಶ್ರೇಣೀಕೃತ ವ್ಯವಸ್ಥೆ ಅಲುಗಾಡಿಸುವ ತಾಕತ್ತು

ಭೀಮ್ ರಾವ್ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿದ್ದು 1913ರಲ್ಲಿ. ಅದಕ್ಕೆ ನೆರವಾಗಿದ್ದು ಬರೋಡಾ ಮಹಾರಾಜರ ವಿದ್ಯಾರ್ಥಿವೇತನ. ಅಲ್ಲಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಬ್ಯಾರಿಸ್ಟರ್ ಪದವಿ. ಭೀಮ್ರಾವ್ ಸ್ವದೇಶಕ್ಕೆ ಮರಳುವ ಹೊತ್ತಿಗೆ ಹತ್ತಾರು ಭಾಷೆಗಳಲ್ಲಿ ನಿಷ್ಣಾತರಾಗಿದ್ದರು ಮತ್ತು ಶತಮಾನಗಳಷ್ಟು ಹಳೆಯ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಯನ್ನೇ ಅಲುಗಾಡಿಸಬಲ್ಲ ವಿಚಾರಗಳ ಆಯುಧ ಅವರ ಬಳಿಯಿತ್ತು.

ಅದಾಗಿ ಅಂಬೇಡ್ಕರ್ ಅವರು 'ಮಹದ್ ಸತ್ಯಾಗ್ರಹ'ದ ನೇತೃತ್ವ ವಹಿಸಿದ್ದು 1927ರಲ್ಲಿ. ಸಾರ್ವಜನಿಕ ಕೆರೆಯ ನೀರನ್ನು ಕುಡಿಯುವ ಹಕ್ಕು ತಮಗೂ ಇದೆ ಎಂದು "ಅಸ್ಪೃಶ್ಯರು" ನಡೆಸಿದ ಮೊದಲ ಬಹಿರಂಗ ಹಕ್ಕೊತ್ತಾಯ ಅದಾಗಿತ್ತು. ಮೇಲ್ಜಾತಿಯ ಗುಂಪುಗಳು ಅವರ ಮೇಲೆ ದಾಳಿ ಮಾಡಿದಾಗ, ಅಂಬೇಡ್ಕರ್ ತಮ್ಮ ಅನುಯಾಯಿಗಳಿಗೆ ಹೇಳಿದ ಮಾತು ಅತ್ಯಂತ ಮಾರ್ಮಿಕ: “ನಾವು ಕೇವಲ ನೀರಿಗಾಗಿ ಹೋರಾಡುತ್ತಿಲ್ಲ; ನಾವು ನಮ್ಮ ಆತ್ಮಗೌರವಕ್ಕಾಗಿ ಹೋರಾಡುತ್ತಿದ್ದೇವೆ.”

ಅಸ್ಪೃಶ್ಯತೆಯ ಮೂಲೋತ್ಪಾಟನೆ

ದಲಿತರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ಕಲ್ಪಿಸಬೇಕು ಎಂಬ ವಿಚಾರದಲ್ಲಿ ಅಂಬೇಡ್ಕರ್ ಅವರು ಮಹಾತ್ಮ ಗಾಂಧಿಯವರ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. 1932ರ 'ಪೂನಾ ಒಪ್ಪಂದ'ವು ಒಂದು ರಾಜಿ ಸೂತ್ರವಾಗಿತ್ತು, ಆದರೆ ನೈಜ ಸಮಾನತೆಗಾಗಿ ತಮ್ಮ ಆಗ್ರಹವನ್ನು ಮಂಡಿಸುವುದನ್ನು ಅಂಬೇಡ್ಕರ್ ನಿಲ್ಲಿಸಲಿಲ್ಲ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗುವಂತೆ ಅವರನ್ನು ಕೇಳಿಕೊಂಡರು. 1949ರ ನವೆಂಬರ್ 26, ರಂದು ಅಂಗೀಕರಿಸಲಾದ ಆ ಮಹತ್ವದ ದಸ್ತಾವೇಜು ಅಸ್ಪೃಶ್ಯತೆಯನ್ನು ಮೂಲೋತ್ಪಾಟನೆ ಮಾಡುವಲ್ಲಿ ಸಹಕಾರಿಯಾಯಿತು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಘೋಷಿಸಿತು ಮತ್ತು ಶತಮಾನಗಳ ಬಹಿಷ್ಕಾರವನ್ನು ಸರಿಪಡಿಸಲು ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಪರಿಚಯಿಸಿತು.

ಯಾರೂ ಊಹಿಸಿರದ ಕ್ರಾಂತಿ

ತಮ್ಮ ನಿಧನಕ್ಕೆ ಕೆಲವೇ ತಿಂಗಳುಗಳಿಗೂ ಮೊದಲು, 1956ರ ಅಕ್ಟೋಬರ್ 14ರಂದು ಅಂಬೇಡ್ಕರ್ ನಾಗ್ಪುರದಲ್ಲಿ ಸುಮಾರು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ತಮ್ಮ ಜನರು ಯಾವುದೇ ದ್ವೇಷವಿಲ್ಲದೆ ಜಾತಿ ವ್ಯವಸ್ಥೆಯನ್ನು ತೊರೆಯಬೇಕೆಂದು ಅವರು ಬಯಸಿದ್ದರು. ಅವರು ಅಂದು ಮಾಡಿದ ಘೋಷಣೆ ಹೀಗಿತ್ತು; "ನಾನು ಹಿಂದೂವಾಗಿ ಹುಟ್ಟಿರಬಹುದು, ಆದರೆ ಹಿಂದೂವಾಗಿ ಸಾಯುವುದಿಲ್ಲ."

ಒಮ್ಮೆ ಯಾವ ಸಮುದಾಯಗಳಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲ ಎಂದು ಹೇಳಲಾಗಿತ್ತೋ, ಅಂತಹ ಸಮುದಾಯಗಳ ನಡುವೆ ಇಂದು ಆ ನಿರ್ಧಾರವು ಜಾಗತಿಕ ಮಟ್ಟದ ಬೌದ್ಧ ಧರ್ಮದ ಪುನರುತ್ಥಾನವಾಗಿ ಬೆಳೆದಿದೆ. ಇಂದು ನೀವು ಯಾವುದೇ ಸರ್ಕಾರಿ ಕಾಲೇಜು ಹಾಸ್ಟೆಲ್ಗಳಿಗೆ ಅಥವಾ ಹಳ್ಳಿಯ ಅಂಗನವಾಡಿಗಳಿಗೆ ಭೇಟಿ ನೀಡಿದರೆ, ಅಲ್ಲಿ ನಿಮಗೆ ಅಂತಹ ಯುವಜನರು ಭೇಟಿಯಾಗುತ್ತಾರೆ—ಯಾರ ಅಜ್ಜ-ಅಜ್ಜಿಯಂದಿರಿಗೆ ಒಂದು ಕಾಲದಲ್ಲಿ ನ್ಯಾಯಾಲಯ ಅಥವಾ ಶಾಲೆಗಳನ್ನು ಪ್ರವೇಶಿಸಲು ಕೂಡ ಅನುಮತಿ ಇರಲಿಲ್ಲವೋ ಅಂತಹವರ ಮೊಮ್ಮಕ್ಕಳು ಇಂದು ಅಲ್ಲಿ ಆತ್ಮವಿಶ್ವಾಸದಿಂದ ಓದುತ್ತಿದ್ದಾರೆ.

ಅವರ ಪೋಷಕರು ಅಂಬೇಡ್ಕರ್ ತಂದ ಮೀಸಲಾತಿಯ ಫಲಾನುಭವಿಗಳು. ಆದರೆ ಈ ತಲೆಮಾರಿನ ಯುವಜನರು ತಮ್ಮ ಕುಟುಂಬದಲ್ಲೇ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಹೊಂದಿದವರು, ಯುಪಿಎಸ್ಸಿ ಪರೀಕ್ಷೆ ಎದುರಿಸುತ್ತಿರುವವರು ಅಥವಾ ಸ್ವಂತ ಸ್ಟಾರ್ಟ್ಅಪ್ಗಳನ್ನು ನಡೆಸುತ್ತಿರುವವರು. ಅವರು ಇಂದು ಹೊಸ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ (ಸಾಮಾಜಿಕ ಜಾಲತಾಣಗಳಲ್ಲಿನ ಜಾತಿ ತಾರತಮ್ಯ, ಕೆನೆಪದರದ ಚರ್ಚೆಗಳು, ಅರ್ಹತೆ ಮತ್ತು ಮೀಸಲಾತಿ ನಡುವಿನ ವಾದಗಳು ಇತ್ಯಾದಿ). ಆದರೆ ಅವರೆಲ್ಲರೂ ಇಂದಿಗೂ ಅದೇ ಮಂತ್ರವನ್ನು ನಂಬಿದ್ದಾರೆ: ”ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿ."

ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೀಲ ನಕ್ಷೆ

ಜಾತಿ ತಾರತಮ್ಯವನ್ನು ಎಂದೂ ಅನುಭವಿಸದವರೂ ಕೂಡ ಇಂದು, ಎಂದೆಂದೂ ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು. ಅವರು ನಮಗೆ ನೀಡಿದ ಸಂವಿಧಾನವು ವಾಕ್ ಸ್ವಾತಂತ್ರ್ಯ, ಮಹಿಳಾ ಹಕ್ಕುಗಳು ಮತ್ತು ಕಾರ್ಮಿಕರ ಘನತೆಯನ್ನು ರಕ್ಷಿಸುತ್ತದೆ; ಈ ವಿಚಾರಗಳೇ ಭಾರತದ ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟಿವೆ ಎಂಬುದು ಅಕ್ಷರಶಃ ಸತ್ಯ. ಬಾಬಾಸಾಹೇಬರು ನೀಡಿದ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಆ ಧೀರ ನೀಲಿ ನಕ್ಷೆಯಾದ ಸಂವಿಧಾನದ ಆಶಯಗಳನ್ನು ಇಂದು ಬಹುಸಂಖ್ಯಾತವಾದಿ ನೀತಿಗಳು, ಕಾನೂನುಗಳ ಆಯ್ದ ಜಾರಿ ಮತ್ತು ಸಾಂವಿಧಾನಿಕ ನಿಯಂತ್ರಣ ವ್ಯವಸ್ಥೆಗಳ ಅಧಃಪತನದ ಮೂಲಕ ಬಹಿರಂಗವಾಗಿ ಉಲ್ಲಂಘಿಸುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ.

ಜಗತ್ತಿನ ಏಕೈಕ ಅಚಲ ಪಠ್ಯ

ಇಂದು ನ್ಯಾಯಾಂಗ ಮತ್ತು ಚುನಾವಣಾ ಆಯೋಗದಿಂದ ಹಿಡಿದು, ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳವರೆಗೆ, ಮತ್ತು ಮಾಧ್ಯಮಗಳ ದೊಡ್ಡ ಭಾಗವೂ ಸಹ ಆಡಳಿತಾರೂಢ ಬಿಜೆಪಿಯ ಪ್ರಭಾವಕ್ಕೆ ಒಳಗಾದಂತೆ ಕಂಡುಬರುತ್ತಿರುವಾಗ, ಈ ಒಂದು ದಸ್ತಾವೇಜು (ಸಂವಿಧಾನ) ಮಾತ್ರ ವಿಶ್ವದ ಬೃಹತ್ ಪ್ರಜಾಪ್ರಭುತ್ವವನ್ನು ಆಳಬೇಕಾದ ಏಕೈಕ ಮತ್ತು ಅಚಲವಾದ ಪಠ್ಯ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ.

ಯಾವುದೇ ಸರ್ಕಾರ, ಯಾವುದೇ ಸಿದ್ಧಾಂತ ಅಥವಾ ಯಾವುದೇ ತಾತ್ಕಾಲಿಕ ಬಹುಮತವು ಸಂವಿಧಾನವನ್ನು ಮೀರಿ ನಿಲ್ಲಬಾರದು. ಸಾಲಿನಲ್ಲಿ ನಿಂತ ಕೊನೆಯ ವ್ಯಕ್ತಿಯ ಹಕ್ಕುಗಳು ಮತ್ತೆಂದೂ ಅಧಿಕಾರದಲ್ಲಿರುವವರ ದಯೆಯ ಮೇಲೆ ಅವಲಂಬಿತವಾಗಬಾರದು ಎಂಬ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಈ ಸಂವಿಧಾನವನ್ನು ರೂಪಿಸಿದರು. ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ, ಭಾರತದ ಭವಿಷ್ಯಕ್ಕೆ ಸಂವಿಧಾನವೇ ಏಕೈಕ ಕಾನೂನುಬದ್ಧ ಮಾರ್ಗದರ್ಶಕ ಎಂಬ ನಂಬಿಕೆಯೊಂದಿಗೆ ಅದನ್ನು ರಕ್ಷಿಸಲು ಮತ್ತು ಮರುಸ್ಥಾಪಿಸಲು ನಾವು ಒಟ್ಟಾಗಿ ಸಂಕಲ್ಪ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.

Read More
Next Story