ಮಕಾಡೆ ಮಲಗಿದ ಮೆಲಾನಿಯಾ ಟ್ರಂಪ್ ಸಾಕ್ಷ್ಯಚಿತ್ರ: ಕೋಟಿ ಡಾಲರ್ ಸುರಿದು ಕೈಸುಟ್ಟುಕೊಂಡ ಅಮೆಜಾನ್
ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಜೀವನದ 20 ದಿನಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ “ಮೆಲಾನಿಯಾ” ನಗೆಪಾಟಲಾಗಿದೆ. “ಖಾಲಿ ಚಿತ್ರಮಂದಿರದಲ್ಲಿ ಕುಳಿತು ಪಾಪ್-ಕಾರ್ನ್ ತಿನ್ನುವಂತಾಗಿದೆ”.

ಅಮೆರಿಕದ ಪ್ರಥಮ ಮಹಿಳೆ ಮತ್ತು ಸ್ಲೊವೇನಿಯಾದ ಮಾಜಿ ಮಾಡೆಲ್ ಮೆಲಾನಿಯಾ ಟ್ರಂಪ್ ಅವರನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ʼಮೆಲಾನಿಯಾʼ ಎಂಬ ಹೆಸರಿನ ಸಾಕ್ಷ್ಯಚಿತ್ರವು ಹೊಸದಾಗಿ ನಾಮಕರಣಗೊಂಡ ಟ್ರಂಪ್-ಕೆನಡಿ ಸೆಂಟರ್-ನಲ್ಲಿ ಅತ್ಯಂತ ವೈಭವೋಪೇತದಿಂದ ಪ್ರದರ್ಶನ ಕಂಡಿತ್ತು.
ಅದೀಗ ಮೊನ್ನೆ ತಾನೆ ಜನವರಿ 30ರಂದು ಶುಕ್ರವಾರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಆದರೆ ಈ ಚಿತ್ರವು ಇತ್ತೀಚಿನ ದಿನಗಳಲ್ಲಿಯೇ ದುಡ್ಡಿನ ಸುರಿಮಳೆಯನ್ನೇ ಸುರಿಸಿ ನಿರ್ಮಿಸಲಾದ ಒಂದು ಅರ್ಥಹೀನ ಸಾಹಸವೆಂದೇ ವಿಶ್ಲೇಷಿಸಲಾಗುತ್ತಿದೆ.
ಅನೇಕರು ಇದನ್ನು ಅತ್ಯಂತ ಹಾಸ್ಯಾಸ್ಪದ ಮತ್ತು ಮೂರ್ಖತನದ ಪರಮಾವಧಿ ಎಂದು ಬಣ್ಣಿಸಿದ್ದಾರೆ. ಇಲ್ಲಿ ʼರಾಯಲ್ʼ (ರಾಜವೈಭವ) ಎಂಬ ಪದವನ್ನು ಬ್ರಿಟಿಷ್ ಅರ್ಥದಲ್ಲಿ ಬಳಸಲಾಗಿಲ್ಲ. ಬದಲಾಗಿ ʼಖಾಲಿ ಚಿತ್ರಮಂದಿರದಲ್ಲಿ ಕುಳಿತು ಪಾಪ್-ಕಾರ್ನ್ ತಿನ್ನಿʼ ಎಂಬ ವ್ಯಂಗ್ಯಾರ್ಥದಲ್ಲಿ ಬಳಸಲಾಗಿದೆ. ಈ ಚಿತ್ರಕ್ಕಾಗಿ ವ್ಯರ್ಥವಾಗಿ ಕೋಟ್ಯಂತರ ರೂಪಾಯಿ ಪೋಲುಮಾಡಿರುವುದು ನಿಜಕ್ಕೂ ದುರಂತವೆನ್ನದೇ ವಿಧಿಯಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಈ ಸಾಕ್ಷ್ಯಚಿತ್ರವು ಸಾಮಾನ್ಯ ಸಾಕ್ಷ್ಯಚಿತ್ರ ನಿರ್ಮಾಪಕರು ಕೇವಲ ಕನಸು ಮಾತ್ರ ಕಾಣಬಹುದಾದ ಆರ್ಥಿಕ ಮತ್ತು ಸಾಂಸ್ಥಿಕ ಬೆಂಬಲವನ್ನು ಪಡೆದುಕೊಂಡಿರುವುದು ವಿಶೇಷ. ಜೆಫ್ ಬೆಜೋಸ್ ಅವರ ಒಡೆತನದ ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಚುನಾವಣೆಯ ಬಳಿಕ ನಡೆದ ಜಿದ್ದಾಜಿದ್ದಿನ ಬಿಡ್ಡಿಂಗ್-ನಲ್ಲಿ ಡಿಸ್ನಿ, ನೆಟ್-ಫ್ಲಿಕ್ಸ್ ಮತ್ತು ಪ್ಯಾರಾಮೌಂಟ್ ಪಿಕ್ಚರ್ಸ್ ನಂತಹ ದಿಗ್ಗಜರನ್ನು ಹಿಂದಿಕ್ಕಿ ಇದರ ಹಕ್ಕುಗಳನ್ನು ಪಡೆದುಕೊಂಡಿತ್ತು.
ಈ ಸ್ಯಾಕ್ಷ್ಯಚಿತ್ರಕ್ಕಾಗಿ ಅಮೆಜಾನ್ ನೀಡಿದ ನಲವತ್ತು ಮಿಲಿಯನ್ ಡಾಲರ್ (ಸುಮಾರು ನಾಲ್ಕು ಕೋಟಿ ಡಾಲರ್) ಮೊತ್ತದ ಬಿಡ್ ಉಳಿದವರಿಗಿಂತ ತೀರಾ ಅಧಿಕವಾಗಿತ್ತು. ವಿಶೇಷವಾಗಿ ಎರಡನೇ ಅತಿ ಹೆಚ್ಚು ಮೊತ್ತವನ್ನು ಆಫರ್ ಮಾಡಿದ್ದ ಡಿಸ್ನಿಯ 14 ಮಿಲಿಯನ್ ಡಾಲರ್ ಮೌಲ್ಯಕ್ಕಿಂತ ಇದು 26 ಮಿಲಿಯನ್ ಡಾಲರ್ ಹೆಚ್ಚಾಗಿತ್ತು. ಚಿತ್ರೋದ್ಯಮದ ತಜ್ಞರು ಈ ಮೊತ್ತವನ್ನು ʼಮಾರುಕಟ್ಟೆಯ ವಾಸ್ತವಕ್ಕೆ ಸಂಬಂಧವೇ ಇಲ್ಲದ ಬೆಲೆʼ ಎಂದು ವಿಶ್ಲೇಷಿಸಿದ್ದಾರೆ. ಅಲ್ಲದೆ ಒಂದು ಒಂದು ಸಾಕ್ಷ್ಯಚಿತ್ರಕ್ಕಾಗಿ ಇದುವರೆಗೂ ಪಾವತಿಸಲಾದ ಅತಿ ಹೆಚ್ಚಿನ ಬೆಲೆ ಇದಾಗಿರಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.
75 ಮಿಲಿಯನ್ ಡಾಲರ್ ಹೂಡಿಕೆ
ಜೆಫ್ ಬೆಜೋಸ್ ಅವರು ಫ್ಲೋರಿಡಾದ ಮಾರ್-ಲಾಗೋದಲ್ಲಿ ಮೆಲಾನಿಯಾ ಟ್ರಂಪ್ ಅವರ ಜೊತೆ ಒಂದು ದಿನ ಭೋಜನ ಮಾಡಿದರು. ಅದಾಗಿ ಕೆಲವೇ ದಿನಗಳಲ್ಲಿ ಒಪ್ಪಂದ ಫೈನಲ್ ಆಗಿತ್ತು. ವರದಿಗಳ ಪ್ರಕಾರ ಆ ಭೇಟಿಯ ಸಂದರ್ಭದಲ್ಲಿ ಮೆಲಾನಿಯಾ ಅವರೇ ನೇರವಾಗಿ ಈ ಯೋಜನೆಯ ಬಗ್ಗೆ ಬೆಜೋಸ್ ಅವರಿಗೆ ವಿವರಿಸಿದ್ದರು. ಕೇವಲ ಪರವಾನಗಿ ಶುಲ್ಕವಷ್ಟೇ ಅಲ್ಲದೇ ಅಮೆಜಾನ್ ಈ ಚಿತ್ರದ ಪ್ರಚಾರಕ್ಕಾಗಿ ಹೆಚ್ಚುವರಿಯಾಗಿ 35 ಮಿಲಿಯನ್ ಡಾಲರ್ ಹಣವನ್ನು ಖರ್ಚುಮಾಡಿದೆ. ಇದರೊಂದಿಗೆ ಅಮೆಜಾನ್ ಮಾಡಿದ ಒಟ್ಟು ಹೂಡಿಕೆ ಭರೋಬ್ಬರಿ 75 ಮಿಲಿಯನ್ ಡಾಲರ್.
ಇನ್ನೊಂದು ಅಂಶವೇನೆಂದರೆ ಈ ಸಾಕ್ಷ್ಯಚಿತ್ರಕ್ಕೆ ಮೆಲಾನಿಯಾ ಅವರೇ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು ಮತ್ತು ಚಿತ್ರದ ಸಂಪಾದಕೀಯ ನಿಯಂತ್ರಣವನ್ನು ಕೂಡ ಹೊಂದಿದ್ದರು. ಬಿಡ್ಡಿಂಗ್ ಮೊತ್ತದ ಶೇ.೭೦ಷ್ಟು ಭಾಗವನ್ನು, ಅಂದರೆ ಸುಮಾರು 28 ಮಿಲಿಯನ್ ಡಾಲರ್ (ಅಂದಾಜು 230 ಕೋಟಿ ರೂ.) ಹಣವನ್ನು ಅವರು ವೈಯಕ್ತಿಕವಾಗಿ ಪಡೆದಿದ್ದಾರೆ ಎಂದು ವರದಿಯಾಗಿದೆ. 2025ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪದಗ್ರಹಣಕ್ಕೆ ಮುಂಚಿತವಾಗಿ ಮೆಲಾನಿಯಾ ಅವರ ಜೀವನದ 20 ದಿನಗಳ ದಿನಚರಿಯನ್ನು ತೀರಾ ಹತ್ತಿರದಿಂದ ಚಿತ್ರಿಸಲಾಗಿದೆ. ಆದರೆ ಯಾವುದೇ ಮಾನದಂಡದಿಂದ ನೋಡಿದರೂ ಕೂಡ ಈ ಚಿತ್ರವು ಒಂದು ಸಂಪೂರ್ಣ ವೈಫಲ್ಯ ಎಂದೇ ಬಿಂಬಿತವಾಗಿದೆ.
ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತವರು ಬ್ರೆಟ್ ರಾಟ್ನರ್. ʼರಶ್ ಅವರ್ʼ ಚಿತ್ರದ ಮೂಲಕ ಇವರು ಜನಪ್ರಿಯತೆಯನ್ನು ಗಳಿಸಿದ್ದರೂ #Metoo ಚಳವಳಿಯ ಸಂದರ್ಭದಲ್ಲಿ ಎದುರಿಸಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳಿಂದಾಗಿ ಚಿತ್ರೋದ್ಯಮದಿಂದಲೇ ಬಹಿಷ್ಕಾರಕ್ಕೆ ಒಳಗಾದವರು. ಈ ಕಾರಣದಿಂದ ರಾಟ್ನರ್ ಅನೇಕ ವರ್ಷಗಳಿಂದ ಯಾವುದೇ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಚಿತ್ರಕ್ಕೆ ಅವರನ್ನೇ ನಿರ್ದೇಶಕರನ್ನಾಗಿ ಆಯ್ಕೆ ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆದರೆ ಉದ್ಯಮದ ಒಳಗಿರುವವರ ಮಾತನ್ನೇ ನಂಬುವುದಾದರೆ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಬೇರೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಟ್ನರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
ಅಷ್ಟಕ್ಕೂ ಈ ಚಿತ್ರಕ್ಕೆ ಅಮೆಜಾನ್ ಯಾಕಾದರೂ ಬೆಂಬಲ ನೀಡಿತು ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ವಿಶೇಷವಾಗಿ ಅಮೆಜಾನ್ ಈ ಚಿತ್ರದ ಹಕ್ಕುಗಳನ್ನು ಪಡೆದ ಹೊತ್ತಿನಲ್ಲೇ ಟ್ರಂಪ್ ಪದಗ್ರಹಣ ನಿಧಿಗೆ ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ಯಾವುದೇ ಅಧಿಕೃತ ಸಂಬಂಧವಿದೆ ಎಂದು ಒಪ್ಪಿಕೊಳ್ಳದೇ ಇದ್ದರೂ ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಮತ್ತು ರಾಜಕೀಯ ಜೊತೆ ಜೊತೆಯಲ್ಲಿ ಸಾಗುವ ಈ ಕಾಲದಲ್ಲಿ ಇದೊಂದು ʼಉಪಕಾರಕ್ಕೆ ಪ್ರತಿ ಉಪಕಾರʼ ಎಂಬ ನೀತಿಗೆ ಕಟ್ಟುಬಿದ್ದಿರುವುದನ್ನು ಸುಲಭಕ್ಕೆ ತಳ್ಳಿಹಾಕಲು ಸಾಧ್ಯವಿಲ್ಲ.
ಹೊಸತನವಿಲ್ಲದ ಶೈಲಿ…
ಇಷ್ಟೆಲ್ಲ ದುಂದುವೆಚ್ಚದ ಹೊರತಾಗಿಯೂ ಚಿತ್ರದಲ್ಲಿ ಅಸಾಧಾರಣವಾದದ್ದು ಏನಾದರೂ ಇದೆ ಎಂದರೆ ಅದೂ ಇಲ್ಲ. ಇದರ ಪ್ರಚಾರದ ಟ್ರೇಲರ್ ಬಿಡುಗಡೆಯಾದಾಗಲಂತೂ ಬಹುತೇಕ ಎಲ್ಲರೂ ಅಪಹಾಸ್ಯಮಾಡಿದ್ದರು. ಯಾಕೆಂದರೆ ಅದರಲ್ಲಿ ಮೆಲಾನಿಯಾ ಟ್ರಂಪ್ ಹೆಚ್ಚಾಗಿ ತಲೆ ತಿರುಗಿಸುವುದು, ಕೋಣೆಗಳಲ್ಲಿ ಅತ್ತಿಂದ್ದಿತ್ತ ಓಡಾಡುವುದು ಅಥವಾ ಕ್ಯಾಮರಾದತ್ತ ನೋಡದೇ ಸುಮ್ಮನೇ ದೃಷ್ಟಿ ನೆಟ್ಟಿರುವುದು ಮಾತ್ರ ಕಾಣಿಸುತ್ತದೆ. ಇಷ್ಟೆಲ್ಲ ಆಗಿಯೂ ಚಿತ್ರದ ಶೈಲಿಯೂ ಭಿನ್ನವಾಗಿಲ್ಲ. ಅದು ರಾಜಕೀಯ ಪ್ರಚಾರಗಳನ್ನೇ ನೆನಪಿಸುವಂತಿದೆ. ಯಾಕೆಂದರೆ ಹಳೆಯ ವಿಡಿಯೋ ತುಣುಕುಗಳನ್ನೇ ಜೋಡಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ರೋಲಿಂಗ್ ಸ್ಟೋನ್ಸ್ ತಂಡದ ಗಿಮ್ಮಿ ಶೆಲ್ಟರ್ ಅವರ ಹಾಡಿನ ಲಯಕ್ಕೆ ತಕ್ಕಂತೆ ಮೆನಾನಿಯಾ ತಮ್ಮ ವಿಶಿಷ್ಟವಾದ ʼರೆಡ್-ಬಾಟಮ್ʼ ಹೀಲ್ಸ್ ಧರಿಸಿ ಮಾರ್-ಎ-ಲಾಗೋದ ಹಜಾರಗಳಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಈ ಚಿತ್ರದಲ್ಲಿ ನಾವು ಕಾಣಬಹುದು. ಈ ಹಾಡಿನ ಆಯ್ಕೆ ಕೂಡ ತಮಾಷೆಯಂತೆ ಕಾಣಿಸುತ್ತಿದೆ. ಯಾಕೆಂದರೆ ಈ ಹಿಂದೆ ಇದೇ ತಂಡವು ತಮ್ಮ ಹಾಡುಗಳನ್ನು ಯಾವ ಕಾರಣಕ್ಕೂ ಬಳಸಬಾರದು ಎಂದು ಟ್ರಂಪ್ ಆಡಳಿತಕ್ಕೆ ಕಾನೂನುಬದ್ಧ ಎಚ್ಚರಿಕೆಗಳನ್ನು ನೀಡಿದ ಹಿನ್ನೆಲೆಯಿದೆ.
ಇಲ್ಲಿಂದ ಮುಂದೆ ನಾವು ಖಾಸಗಿ ವಿಮಾನವೊಂದನ್ನು ಪ್ರವೇಶಿಸುತ್ತೇವೆ. ಅಲ್ಲಿ ಕ್ಲಾಸ್ ಮೆರುಗಿಗಾಗಿ ಟ್ರಂಪ್ ಅವರ ʼತಲೆಯಾಡಿಸುವ ಗೊಂಬೆʼ ಕೂಡ ಇರುತ್ತದೆ. ಕೊನೆಗೆ ಈ ಪ್ರಯಾಣವು ವಿಪರೀತ ಅನ್ನುವಷ್ಟು ಚಿನ್ನದ ಅಲಂಕಾರವನ್ನು ಹೊಂಡಿರುವ ಟ್ರಂಪ್ ಟವರ್ ತಲುಪುತ್ತದೆ.
ಚಿತ್ರದ ಒಂದು ಹಂತದಲ್ಲಿ ಮೆಲಾನಿಯಾ ಕೊನೆಗೂ ಸಿನಿಮಾದ ಮೂಲ ಉದ್ದೇಶವನ್ನು ಬಿಚ್ಚಿಡುತ್ತಾ “ಎಲ್ಲರಿಗೂ ತಿಳಿಯುವ ಕುತೂಹಲವಿದೆ...” ಎನ್ನುತ್ತಾರೆ. ಆದರೆ, 1990ರ ದಶಕದ ಮ್ಯೂಸಿಕ್ ವಿಡಿಯೋ ಅಥವಾ ಯಾವುದೋ ದುಬಾರಿ ಸ್ಕ್ರೀನ್ಸೇವರ್ನಂತೆ ವೇಗವಾಗಿ ಸಾಗುವ ಈ ಸಾಕ್ಷ್ಯಚಿತ್ರದಲ್ಲಿ ಆ ಕುತೂಹಲಕ್ಕೆ ಕೊನೆಗೂ ಉತ್ತರವೇ ಸಿಗುವುದಿಲ್ಲ. ಬದಲಿಗೆ, ಈ 90 ನಿಮಿಷಗಳ ಕಾಲ 'ಪ್ರಥಮ ಮಹಿಳೆ' ಅದೆಷ್ಟು ಅಸ್ಪಷ್ಟವಾದ ಮಾತುಗಳನ್ನು ಆಡುತ್ತಾರೆಂದರೆ, ಬಜ್ಫೀಡ್ (Buzzfeed) ಲೇಖಕರೊಬ್ಬರು ಹೇಳಿದಂತೆ ಅದು “ಮಗಳ ಮದುವೆಗೆ ಗೈರಾದ ತಂದೆಯೊಬ್ಬ ChatGPT ಮೂಲಕ ಬರೆಸಿದ ಶುಭಾಶಯದಂತೆ” ಕೇಳಿಸುತ್ತದೆ. ಅವರ ಈ ನಿರ್ಭಾವುಕವಾದ ಮುಖಭಾವವು ಕೇವಲ ಒಂದು ಬಾರಿ ಮಾತ್ರ ಬದಲಾಗುತ್ತದೆ; ಅದು ತಾಯಿಯ ನಿಧನಕ್ಕಾಗಲಿ ಅಥವಾ ಇಸ್ರೇಲಿ ಸಂತ್ರಸ್ತರನ್ನು ಭೇಟಿಯಾದಾಗಲಿ ಅಲ್ಲ, ಬದಲಿಗೆ ಅವರು ಮೈಕೆಲ್ ಜಾಕ್ಸನ್ ಅವರ 'ಬಿಲ್ಲಿ ಜೀನ್' ಹಾಡಿಗೆ ಧ್ವನಿಗೂಡಿಸಿದಾಗ. ವ್ಯಂಗ್ಯದ ಸಂಗತಿ ಎಂದರೆ, ಅವರ ಧ್ವನಿಯನ್ನು ಕ್ಯಾಮೆರಾ ಹಿಂದಿದ್ದ ಬ್ರೆಟ್ ರಾಟ್ನರ್ ಅವರ ಧ್ವನಿ ಅಡಗಿಸಿಬಿಡುತ್ತದೆ.
ಸಿನಿಮಾವನ್ನು “ನಮ್ಮ ಕಾಲದ ಪ್ರೇಮಕಥೆ” ಎಂದು ಬಿಂಬಿಸಲು ಪ್ರಯತ್ನಿಸಿದಾಗ, ಅದರ ಫಲಿತಾಂಶವು ಯಾವುದೋ ಕಾರ್ಪೊರೇಟ್ ಕಂಪನಿಗಳ ವಿಲೀನದಂತೆ ನೀರಸವಾಗಿ ಕಾಣುತ್ತದೆ. ಮೆಲಾನಿಯಾ ಫೋನ್ನಲ್ಲಿ ತಮ್ಮ ಪತಿಯನ್ನು “ಮಿಸ್ಟರ್ ಪ್ರೆಸಿಡೆಂಟ್” ಎಂದು ಕರೆಯುವುದಕ್ಕೂ ನಾವು ಸಾಕ್ಷಿಯಾಗುತ್ತೇವೆ. ಅಷ್ಟೇ ಅಲ್ಲದೆ, ಪೋಷಕರಾಗಿ ಅವರ ಬಾಂಧವ್ಯ ಎಷ್ಟಿದೆ ಎಂದರೆ - ಡೊನಾಲ್ಡ್ ಅವರು ಮಗ ಬ್ಯಾರನ್ನನ್ನು “ಕ್ಯೂಟ್” ಎಂದರೆ, ಮೆಲಾನಿಯಾ “ಹೌದು, ನಾನವನನ್ನು ಪ್ರೀತಿಸುತ್ತೇನೆ” ಎಂದು ಉತ್ತರಿಸುತ್ತಾರೆ! ಅಧ್ಯಕ್ಷರ ಸಹಾನುಭೂತಿಯಂತೂ ಎದ್ದು ಕಾಣುತ್ತದೆ; ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಪತ್ನಿಯನ್ನು ಅವರು “ದಿಸ್ ಒನ್” ಎಂದು ಸಂಬೋಧಿಸಿ, ನಂತರ ಆಕೆ ಎಷ್ಟು “ಕಷ್ಟದ ವ್ಯಕ್ತಿ” ಎಂದು ಜೋಕ್ ಮಾಡಲು ಪ್ರಯತ್ನಿಸುತ್ತಾರೆ. ಈ ಕೌಟುಂಬಿಕ ನಾಟಕದ ನಡುವೆ ಪದಗ್ರಹಣ ಸಮಾರಂಭದ ಯೋಜನೆಯ ಗಂಭೀರ ಘಟನಾವಳಿಗಳು ಬರುತ್ತವೆ. ಅಲ್ಲಿನ ಅತಿ ದೊಡ್ಡ ಸಂಘರ್ಷವೆಂದರೆ, ಮೆಲಾನಿಯಾ ತಮ್ಮ ಹ್ಯಾಟ್ "ತುಂಬಾ ಶಾರ್ಪ್ ಆಗಿರಬೇಕು" ಎಂದು ಪಟ್ಟು ಹಿಡಿಯುವುದು ಮತ್ತು ಸ್ಟಾರ್ಟರ್ ಮೆನುವಿಗಾಗಿ ಕ್ಯಾವಿಯರ್ ಹೊಂದಿರುವ ಚಿನ್ನದ ಮೊಟ್ಟೆಗಳನ್ನು ಆರಿಸುವುದು!
ಗಿಲೀಟು ಮಾಡಿದ ಭಾವಚಿತ್ರ
ದೇಶವು ಬಂಧನ ಕೇಂದ್ರಗಳು ಮತ್ತು ಹಿಂಸಾಚಾರದಂತಹ ಗಂಭೀರ ಸಮಸ್ಯೆಗಳೊಂದಿಗೆ ಹೈರಾಣಾಗಿ ಹೋಗಿರುವಾಗ, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ 2025ರ ಸಂವಿಧಾನದ ಮೇಲಿನ ನಿಷ್ಠೆಯ ಪ್ರಮಾಣ ವಚನವನ್ನು ನೋಡುವುದು ಒಂದು ಕರಾಳ ಹಾಸ್ಯದಂತೆ ಭಾಸವಾಗುತ್ತದೆ. ಇದೇ ಕಾರಣಕ್ಕೆ ಅಮೆರಿಕ ಮತ್ತು ಬ್ರಿಟನ್ನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಈ ಸಾಕ್ಷ್ಯಚಿತ್ರವು ಕಟು ಟೀಕೆಗೆ ಒಳಗಾಗಿರುವುದರಲ್ಲಿ ಅಚ್ಚರಿಯಿಲ್ಲ. “ಮೆಲಾನಿಯಾ ಒಂದು ನಿರ್ಜೀವ ಸಾಕ್ಷ್ಯಚಿತ್ರ. ಇದು ಕೇವಲ ಗಿಲೀಟು ಮಾಡಿದ ಭಾವಚಿತ್ರದಂತಿದ್ದು, ಒಂದು ನಾಚಿಕೆಯೇ ಇಲ್ಲದ ಜಾಹೀರಾತಿನ ಮಟ್ಟಕ್ಕೆ ಇಳಿದಿದೆ ಮತ್ತು ಯಾವುದೋ ರಿಯಾಲಿಟಿ ಶೋನ ನಿರುಪಯುಕ್ತ ತುಣುಕುಗಳನ್ನು ಸೇರಿಸಿ ಪೋಣಿಸಿದಂತೆ ಭಾಸವಾಗುತ್ತದೆ” ಎಂಬ ಟೀಕೆಗಳು ವ್ಯಕ್ತವಾಗಿವೆ.
'ವೆರೈಟಿ' ಪತ್ರಿಕೆಯ ವಿಮರ್ಶೆಯಲ್ಲಿ ಹೀಗೆ ಹೇಳಲಾಗಿದೆ, “ಇದು ಬರೀ ಬಡಾಯಿ, ತೀರಾ ವೈಭವೀಕರಣದಿಂದ ಕೂಡಿದ ಚಿತ್ರ, ನಾಟಕೀಯತೆ ಅಥವಾ ರಾಜಕೀಯದಿಂದ ಮುಕ್ತವಾಗಿದೆ. ಇದು ವಾಸ್ತವವನ್ನು ಮರೆಮಾಚಲು ಮೇಲಿನ ಹಂತದಿಂದ ವಿನ್ಯಾಸಗೊಳಿಸಲಾದ ಒಂದು ರಿಯಾಲಿಟಿ ಶೋ.”
ಅಂತ್ಯವಿಲ್ಲದ ನರಕದಂತಿದೆ…
“ಈ ಚಿತ್ರದಲ್ಲಿ ಒಂದೇ ಒಂದು ಮೆಚ್ಚುವಂತಹ ಗುಣವಿಲ್ಲ. ಇದು 'ಯೂನಿಕಾರ್ನ್' ಚಿತ್ರಗಳಲ್ಲಿ ಒಂದು. ಇಲ್ಲಿನ ಮೋಜು ಪ್ರೇಕ್ಷಕರನ್ನು ತಲುಪುವುದಿಲ್ಲ ಮತ್ತು ಅತಿಥಿಗಳು ಒಂದು ದುಸ್ವಪ್ನದಂತೆ ಕಾಣುತ್ತಾರೆ; ಎರಡು ಗಂಟೆಗಳ ಕಾಲ ಮೆಲಾನಿಯಾರನ್ನು ಪರದೆಯ ಮೇಲೆ ನೋಡುವುದು ಅಂತ್ಯವಿಲ್ಲದ ನರಕದಂತೆ ಭಾಸವಾಗುತ್ತದೆ,” ಎಂದು 'ದಿ ಗಾರ್ಡಿಯನ್' ಪತ್ರಿಕೆಯ ಕ್ಸಾನ್ ಬ್ರೂಕ್ಸ್ ಬರೆದಿದ್ದಾರೆ.
'ಇಂಡಿಪೆಂಡೆಂಟ್' ಪತ್ರಿಕೆಯೂ ಕಟುವಾದ ಪದಗಳನ್ನು ಬಳಸಿದ್ದು, ಮೆಲಾನಿಯಾರನ್ನು “ಗರ್ವದ, ಮುಖ ಗಂಟಿಕ್ಕಿಕೊಂಡ ಶೂನ್ಯ ವ್ಯಕ್ತಿತ್ವ” ಎಂದು ಕರೆದಿದೆ. ಅಲ್ಲದೆ, ಈ ಸಾಕ್ಷ್ಯಚಿತ್ರವನ್ನು ಒಂದು “ಭೀಷಣ ಪ್ರಚಾರದ ತುಣುಕು" ಎಂದು ಬಣ್ಣಿಸಿದೆ. “ನಮ್ಮ ಅಮೆರಿಕದ ಬೀದಿಗಳು ಆಕ್ರೋಶ ಮತ್ತು ಶೋಕದಿಂದ ತುಂಬಿರುವಾಗ, ಟ್ರಂಪ್ ಕುಟುಂಬದ ಈ ಅಸಹ್ಯಕರ, ವೈಭವೋಪೇತ ಜೀವನಶೈಲಿಯು ಅವರನ್ನು ತಮ್ಮ ಅರಮನೆಯಲ್ಲಿ ಕೇಕ್ ತಿನ್ನುತ್ತಾ ಅಡಗಿ ಕುಳಿತಿರುವ ಮೇರಿ ಆಂಟೊಯಿನೆಟ್ನನ್ನು ಕಂಡಂತೆ ಭಾಸವಾಗುತ್ತದೆ” ಎಂದು ಟೀಕಿಸಿದೆ.ಈ ಸಾಕ್ಷ್ಯಚಿತ್ರದ ಬಿಡುಗಡೆಯ ಸಮಯವೇ ಅದರ ಹಿನ್ನಡೆಗೆ ಕಾರಣವಾಯಿತು. ಸಾರ್ವಜನಿಕ ಬಿಡುಗಡೆಗೆ ಕೆಲವು ದಿನಗಳ ಮೊದಲು, ಜನವರಿ 24 ರಂದು ಶ್ವೇತಭವನವು ಸುಮಾರು 70 ಆಹ್ವಾನಿತ ಅತಿಥಿಗಳಿಗಾಗಿ ಒಂದು ಖಾಸಗಿ ಪ್ರದರ್ಶನ ಆಯೋಜಿಸಿತ್ತು. ಇದರಲ್ಲಿ ಜೋರ್ಡಾನ್ನ ರಾಣಿ ರಾನಿಯಾ, ಮೈಕ್ ಟೈಸನ್, ಸ್ವಯಂ-ಸಹಾಯ ತಜ್ಞ ಟೋನಿ ರಾಬಿನ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಆಪಲ್ನ ಟಿಮ್ ಕುಕ್, ಜೂಮ್ನ ಎರಿಕ್ ಯುವಾನ್, ಎನ್ವೈಎಸ್ಇಯ ಲಿನ್ ಮಾರ್ಟಿನ್ ಮತ್ತು ಎಎಂಡಿಯ ಲಿಸಾ ಸು ಭಾಗವಹಿಸಿದ್ದರು. ವಿನ್ಯಾಸಕ ಆಡಮ್ ಲಿಪ್ಪೆಸ್, ಛಾಯಾಗ್ರಾಹಕಿ ಎಲೆನ್ ವಾನ್ ಅನ್ವರ್ತ್ ಮತ್ತು ಫಿಯೆಟ್ ವಾರಸುದಾರೆ ಅಜ್ಜಿ ಅಗ್ನೆಲ್ಲಿ ಕೂಡ ಉಪಸ್ಥಿತರಿದ್ದರು. ಇತ್ತ ಇವರೆಲ್ಲರೂ ಸಂಭ್ರಮದಲ್ಲಿದ್ದರೆ, ದೇಶದ ಉಳಿದ ಭಾಗವು ಮಿನಿಯಾಪೋಲಿಸ್ನಲ್ಲಿ ನಡೆದ ಗುಂಡಿನ ದಾಳಿಯ ಶೋಕದಲ್ಲಿ ಮುಳುಗಿತ್ತು.
ಅದೇ ದಿನ ಬೆಳಗ್ಗೆ, ಮಿನಿಯಾಪೋಲಿಸ್ನಲ್ಲಿ ಫೆಡರಲ್ ಏಜೆಂಟ್ಗಳು ನಡೆಸಿದ 'ವಲಸೆ ಮತ್ತು ಕಸ್ಟಮ್ಸ್ ಜಾರಿ' ಕಾರ್ಯಾಚರಣೆಯ ಸಂದರ್ಭದಲ್ಲಿ 37 ವರ್ಷದ ನರ್ಸ್ ಅಲೆಕ್ಸ್ ಪ್ರೆಟ್ಟಿ ಎಂಬುವವರ ಮೇಲೆ ಗುಂಡು ಹಾರಿಸಲಾಯಿತು. ಈ ಘಟನೆಯು ದೇಶಾದ್ಯಂತ ಪ್ರತಿಭಟನೆಗಳನ್ನು ಪ್ರಚೋದಿಸಿತು ಮತ್ತು ಟ್ರಂಪ್ ಆಡಳಿತದ ವಲಸೆ ಜಾರಿ ಪದ್ಧತಿಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಯಿತು. ಇದಕ್ಕೂ ಮೊದಲು ಜನವರಿಯಲ್ಲಿ, 'ಆಪರೇಷನ್ ಮೆಟ್ರೋ ಸರ್ಜ್' ವೇಳೆ 37 ವರ್ಷದ ಮತ್ತೊಬ್ಬ ಮಹಿಳೆ ರೆನೀ ನಿಕೋಲ್ ಗುಡ್ ಎಂಬುವವರ ಮೇಲೆ ಗುಂಡು ಹಾರಿಸಲಾಗಿತ್ತು.
2025ರ ಡಿಸೆಂಬರ್‌ನಲ್ಲಿ ಮಿನ್ನೇಸೋಟದಲ್ಲಿ ಪ್ರಾರಂಭವಾದ ಈ ಕಾರ್ಯಾಚರಣೆಯು, ದಾಖಲೆಗಳಿಲ್ಲದ ವಲಸಿಗರನ್ನು ಬಂಧಿಸಿ ಗಡೀಪಾರು ಮಾಡಲು ಅಮೆರಿಕದ ಇತಿಹಾಸದಲ್ಲೇ ನಡೆದ ಅತಿದೊಡ್ಡ ವಲಸೆ ಜಾರಿ ಕ್ರಮಗಳಲ್ಲಿ ಒಂದಾಗಿತ್ತು.
ಅಲ್ಲಿ ಗುಂಡಿನ ಮೊರೆತ.. ಇಲ್ಲಿ ಸಂಭ್ರಮ
ಜನವರಿ 30 ರಂದು 'ಟ್ರಂಪ್-ಕೆನಡಿ ಸೆಂಟರ್'ನಲ್ಲಿ ನಡೆದ ಪ್ರೀಮಿಯರ್ ಶೋಗೆ ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ಬೆಜೋಸ್ ಗೈರುಹಾಜರಾಗಿದ್ದರು. ದೇಶಾದ್ಯಂತ ಗುಂಡಿನ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಈ ಸಮಾರಂಭ ನಡೆದದ್ದು ಎಲ್ಲರಿಗೂ ಅಸಹಜವಾಗಿ ಕಂಡಿತು.
ಮೆಲಾನಿಯಾ ಈ ಸಮಾರಂಭಕ್ಕೆ ಡೋಲ್ಸ್ ಅಂಡ್ ಗಬ್ಬಾನಾ ವಿನ್ಯಾಸದ ಸ್ಕರ್ಟ್ ಸೂಟ್ ಧರಿಸಿ ಆಗಮಿಸಿದ್ದರು, ಮತ್ತು ಅಧ್ಯಕ್ಷ ಟ್ರಂಪ್ ಕಡು ನೀಲಿ ಬಣ್ಣದ ಸೂಟ್ ಹಾಗೂ ಬರ್ಗಂಡಿ ಟೈ ಧರಿಸಿದ್ದರು. ಕಪ್ಪು-ಬಿಳುಪಿನ 'MELANIA' ಹಿನ್ನೆಲೆಯನ್ನು ಹೊಂದಿದ್ದ ಚಾರ್ಕೋಲ್ ಬಣ್ಣದ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕಿದರು. ಈ ಖಾಸಗಿ ಪ್ರದರ್ಶನ ಮತ್ತು ಪ್ರೀಮಿಯರ್ ತಿಂಗಳುಗಳಷ್ಟು ಮೊದಲೇ ಯೋಜಿತವಾಗಿದ್ದರೂ, ಇವು ದೇಶದ ಪ್ರಸ್ತುತ ಪರಿಸ್ಥಿತಿಗೆ ಮತ್ತು ಜನರ ಭಾವನೆಗಳಿಗೆ ತೀರಾ ವಿರುದ್ಧವಾಗಿದ್ದವು.
ಪ್ರೀಮಿಯರ್ನಲ್ಲಿ 'USA TODAY'ಗೆ ನೀಡಿದ ಸಂದರ್ಶನದಲ್ಲಿ ಮೆಲಾನಿಯಾ ತಮ್ಮ ವಲಸೆ ಹಿನ್ನೆಲೆಯ ಬಗ್ಗೆ ಮಾತನಾಡಿದರು. ಅವರು 1996ರಲ್ಲಿ ಸ್ಲೊವೇನಿಯಾದಿಂದ ಮಾಡೆಲ್ ಆಗಿ ಕೆಲಸ ಮಾಡಲು ಅಮೆರಿಕಕ್ಕೆ ಬಂದಿದ್ದರು ಮತ್ತು 2006ರಲ್ಲಿ ಪೌರತ್ವವನ್ನು ಪಡೆದಿದ್ದರು. “ನಾನು ಒಬ್ಬ ವಲಸಿಗಳು, ಬೇರೆ ದೇಶದಿಂದ ಬಂದವಳು. ನಾನು ಅಮೆರಿಕದ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ,” ಎಂದು ಅವರು ಹೇಳಿದರು. ನೀವು ಗೇಟ್ನ ಹೊರಗೆ ಕಾಯುವವರಾಗದೆ, ಸ್ವತಃ ಸಂಭ್ರಮದ ಕೂಟ ಆಯೋಜಿಸುವವರಾಗಿದ್ದರೆ 'ಅಮೆರಿಕನ್ ಡ್ರೀಮ್' ಎಷ್ಟು ವಿಲಾಸಿಯಾಗಿರುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿರಲಿಲ್ಲ.
ಖಾಲಿ ಖಾಲಿ ಚಿತ್ರ ಮಂದಿರ!
ಈ ಸಾಕ್ಷ್ಯಚಿತ್ರ ಬಿಡುಗಡೆಯಾಗಿದ್ದು ಅಮೆರಿಕ ಮತ್ತು ಕೆನಡಾದ ಸುಮಾರು 1,500 ರಿಂದ 2,000 ಚಿತ್ರಮಂದಿರಗಳಲ್ಲಿ. ಟಿಕೆಟ್ಗಳು “ವೇಗವಾಗಿ ಮಾರಾಟವಾಗುತ್ತಿವೆ" ಎಂದು ಅಧ್ಯಕ್ಷ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್'ನಲ್ಲಿ ಹೇಳಿಕೊಂಡಿದ್ದರು. ಆದರೆ ಬಾಕ್ಸ್ ಆಫೀಸ್ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತಿದ್ದವು. ಮಾರ್-ಎ-ಲಾಗೋ ಹತ್ತಿರದ ಪಾಮ್ ಬೀಚ್ ಕೌಂಟಿಯಲ್ಲಿ, ಮೊದಲ ವಾರಾಂತ್ಯದಲ್ಲಿ ಕೇವಲ ಶೇ. 13ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಆಸ್ಟ್ರೇಲಿಯಾದಲ್ಲಿ ಪ್ರೇಕ್ಷಕರ ಸಂಖ್ಯೆ ಕೇವಲ ಶೇ. 4ರಷ್ಟಿದ್ದರೆ, ಲಂಡನ್ನ ಪ್ರಮುಖ ವ್ಯೂ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋಗೆ ಕೇವಲ ಒಂದೇ ಒಂದು ಟಿಕೆಟ್ ಮಾರಾಟವಾಗಿತ್ತು! ವರ್ಣಭೇದ ನೀತಿಯ ಆರೋಪಗಳ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಚಿತ್ರಮಂದಿರಗಳಿಂದ ಚಿತ್ರವನ್ನು ಅನಾಮತ್ತಾಗಿ ಕಿತ್ತುಹಾಕಲಾಗಿತ್ತು.
ಕಡಿಮೆ ಪ್ರೇಕ್ಷಕರ ಬಗ್ಗೆ ಪ್ರಶ್ನಿಸಿದಾಗ, ನಿರ್ಮಾಪಕ ರಾಟ್ನರ್ ಅವರು "ಚಿತ್ರದ ಮೌಲ್ಯವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ” ಎಂದು ವಾದಿಸಿ ಆದಾಯದ ವಿಷಯವನ್ನು ತಳ್ಳಿಹಾಕಿದರು. ಆದರೆ ಚಿತ್ರದ ಮೇಲೆ ಮಾಡಲಾದ ಬೃಹತ್ ಹೂಡಿಕೆಯನ್ನು ನೋಡಿದರೆ ಈ ವಾದವು ಟೊಳ್ಳು ಎಂದು ಅನಿಸುತ್ತದೆ. ಆರಂಭದಲ್ಲಿ ಈ ಚಿತ್ರವು ದೇಶೀಯವಾಗಿ 8ರಿಂದ 9 ಮಿಲಿಯನ್ ಡಾಲರ್ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 75 ಮಿಲಿಯನ್ ಡಾಲರ್ ಹೂಡಿಕೆಗೆ ಪ್ರತಿಯಾಗಿ ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಸುಮಾರು 70 ಮಿಲಿಯನ್ ಡಾಲರ್ಗಳಷ್ಟು ದೊಡ್ಡ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರದ ಬಗ್ಗೆ ಆಸಕ್ತಿ ಇಲ್ಲದಿರುವುದು ಮತ್ತು ದೇಶೀಯವಾಗಿ ಪ್ರೇಕ್ಷಕರು ತೀರಾ ಅಸಡ್ಡೆ ತೋರಿಸಿದ್ದು ಅಮೆಜಾನ್ ಒಂದು ತಿಂಗಳೊಳಗೆ ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಿ ಸ್ಟ್ರೀಮಿಂಗ್ ಮೂಲಕ ನಷ್ಟ ತುಂಬಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಚಿತ್ರ ಬಿಡುಗಡೆಗೂ ಮುನ್ನವೇ ಇದು "ಬಿಗ್ ಫ್ಲಾಪ್" ಆಗಲಿದೆ ಎಂದು CNN ಭವಿಷ್ಯ ನುಡಿದಿತ್ತು. ಮುಂಗಡ ಬುಕಿಂಗ್ ಎಷ್ಟು ಕಳಪೆಯಾಗಿತ್ತೆಂದರೆ, 'ಫೋರ್-ವಾಲಿಂಗ್' ವದಂತಿ ಹರಡಿದ್ದವು (ವಿತರಕರು ಬೇಡಿಕೆ ಇರುವಂತೆ ತೋರಿಸಲು ತಾವೇ ಟಿಕೆಟ್ ಖರೀದಿಸುವ ಪ್ರಕ್ರಿಯೆ). ಅಷ್ಟೇ ಅಲ್ಲದೆ, ಚಿತ್ರದ ನಿರ್ಮಾಣದ ಹಿಂದಿನ ಕಥೆಗಳೂ ಸಹ ಅಷ್ಟೇ ಗೊಂದಲಮಯವಾಗಿವೆ. ಕಾರ್ಮಿಕ ಸಮಸ್ಯೆಗಳು ಮತ್ತು ಅತಿಯಾದ ನಿರ್ಬಂಧಗಳ ವಾತಾವರಣದಿಂದಾಗಿ ಚಿತ್ರತಂಡದ ಬಹುಪಾಲು ಸದಸ್ಯರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ನಿರ್ಬಂಧಗಳು ಚಿತ್ರದ ವಿಷಯದಲ್ಲೂ ಎದ್ದು ಕಾಣುತ್ತವೆ. ಮೆಲಾನಿಯಾ ಸಿದ್ಧತೆಗಳ ಬಗ್ಗೆ ಚರ್ಚಿಸುವುದು, ಮಗ ಬ್ಯಾರನ್ನ ಪಾತ್ರವನ್ನು ಹೊಗಳುವುದು ಅಥವಾ ಅಧ್ಯಕ್ಷರ “ಹಾಸ್ಯಪ್ರಜ್ಞೆ” ಯ ಬಗ್ಗೆ ಉಲ್ಲೇಖಿಸುವ ದೃಶ್ಯಗಳು ಯಾವುದೇ ಗಹನ ಒಳನೋಟವನ್ನು ನೀಡುವುದಿಲ್ಲ. ಈ ಚಿತ್ರವು ಕೇವಲ ಗಮನಿಸುತ್ತದೆಯೇ ಹೊರತು, ಸತ್ಯವನ್ನು ಪ್ರಶ್ನಿಸುವುದಿಲ್ಲ.
ಜನರ ಅಸಹನೆ…
ಈ ಚಿತ್ರವು ಅದರ ಮೇಲಿನ ತೀವ್ರ ಟೀಕೆಗಳಿಂದಲೇ ನೆನಪಿನಲ್ಲಿ ಉಳಿಯಲಿದೆ. ಜಿಮ್ಮಿ ಕಿಮ್ಮೆಲ್ ಮೆಲಾನಿಯಾ ಟ್ರಂಪ್ ಅವರನ್ನು "ಯೂರೋಪಿಯನ್ ಸೈಬಾರ್ಗ್" ಎಂದು ಕರೆದಿದ್ದಾರೆ ಮತ್ತು ಈ ಸಾಕ್ಷ್ಯಚಿತ್ರವು ಅಮೆಜಾನ್ನಿಂದ ಟ್ರಂಪ್ ಕುಟುಂಬಕ್ಕೆ ನೀಡಲಾದ “75 ಮಿಲಿಯನ್ ಡಾಲರ್ ಲಂಚ” ಎಂದು ಲೇವಡಿ ಮಾಡಿದ್ದಾರೆ. “ದ ಟರ್ಮಿನೇಟರ್ ಚಿತ್ರದ ನಂತರ, ಒಬ್ಬ ಯೂರೋಪಿಯನ್ ಸೈಬಾರ್ಗ್ ಬಗ್ಗೆ ಈ ಮಟ್ಟಿನ ಕುತೂಹಲ ಮೂಡಿರಲಿಲ್ಲ,” ಎಂದು ಕಿಮ್ಮೆಲ್ ಹಾಸ್ಯ ಮಾಡಿದ್ದಾರೆ. ಇನ್ನು ವಿಡಂಬನಕಾರ ಪಾಲ್ ರುಡ್ನಿಕ್, “ಈ ಚಿತ್ರವು ಇತಿಹಾಸವನ್ನು ದಾಖಲಿಸುವುದನ್ನು ಬಿಟ್ಟು ಕೋಟಿಗಟ್ಟಲೆ ಹಣವನ್ನು ಎಣಿಸುವುದಕ್ಕಷ್ಟೇ ಸಂಬಂಧಿಸಿದ್ದಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಚಿತ್ರಕ್ಕೆ ಕಾಲ್ಪನಿಕ "TUMS-13" ರೇಟಿಂಗ್ ನೀಡಬೇಕು ಎಂಬಂತಹ ಹಾಸ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಇದು ಈ ಚಿತ್ರವು ಜನರಲ್ಲಿ ಉಂಟುಮಾಡಿರುವ ಅಸಹನೆಯ ಪ್ರತೀಕ.
ಖಾಲಿ ಬಿದ್ದಿರುವ ಚಿತ್ರಮಂದಿರಗಳಲ್ಲಿ ಬೆಳಕು ಮಸುಕಾಗುತ್ತಿದ್ದಂತೆ ಮತ್ತು ಮೀಮ್ಗಳು ಹೆಚ್ಚಾಗುತ್ತಿದ್ದಂತೆ, ಈ ಚಿತ್ರದ ಭವಿಷ್ಯವು ಸ್ಪಷ್ಟವಾಗಿದೆ. ಅಮೆಜಾನ್ನ ಕೃಪೆಯಿಂದಾಗಿ, ಇದು ಒಂದು ಪ್ರಮುಖ ಸಾಕ್ಷ್ಯಚಿತ್ರವಾಗಿ ಉಳಿಯದೆ, ಯಾವುದೋ ಅಲ್ಪ ವಿಷಯವನ್ನು ಅತಿ ಹೆಚ್ಚು ಖರ್ಚು ಮಾಡಿ ಹೇಳುವ ಒಂದು ವಿಲಾಸಿ ಸ್ಮಾರಕವಾಗಿ ಮಾತ್ರ ಉಳಿಯಲಿದೆ. ಇದರ ವೈಫಲ್ಯವು ಅಮೆರಿಕದ ತಂತ್ರಜ್ಞಾನ ದೈತ್ಯರಿಗೆ ಒಂದು ಪಾಠ ಎನ್ನದೆ ವಿಧಿಯಿಲ್ಲ. ಮರೀನಾ ಹೈಡ್ ಅವರು 'ದಿ ಗಾರ್ಡಿಯನ್'ನಲ್ಲಿ ಬರೆದಂತೆ, “ಇದರ ವಹಿವಾಟು ನಡೆಸುವ ವೆಚ್ಚವು ಶೀಘ್ರದಲ್ಲೇ ಈ ಉದ್ಯಮಿಗಳ ಒಟ್ಟಾರೆ ವ್ಯವಹಾರಕ್ಕೇ ಮಾರಕವಾಗಿ ಪರಿಣಮಿಸಬಹುದು.”

