Elevated Corridors | What are the benefits of elevated corridors to relieve traffic in the city?
x

ಸಾಂದರ್ಭಿಕ ಚಿತ್ರ

Elevated Corridors | ಬೆಂಗಳೂರಿನ ಟ್ರಾಫಿಕ್‌ಗೆ ಮುಕ್ತಿ: 13,262 ಕೋಟಿ ರೂ. ವೆಚ್ಚದ 11 ಹೊಸ ಎಲಿವೇಟೆಡ್‌ ಕಾರಿಡಾರ್‌ಗಳಿಗೆ ಸಂಪುಟ ಅಸ್ತು

ಯಶವಂತಪುರದಿಂದ ಹಳೇ ಮದ್ರಾಸ್ ರಸ್ತೆ ಮಾರ್ಗದಲ್ಲಿ ಎಲಿವೇಟೆಡ್‌ ಕಾರಿಡಾರ್ ನಿರ್ಮಾಣದ ನಂತರ ಬೈಕ್‌ ಹಾಗೂ ಕಾರುಗಳು ಕೇವಲ 25 ರಿಂದ 35 ನಿಮಿಷಗಳು, ಬಿಎಂಟಿಸಿ ಬಸ್ 50 ರಿಂದ 60 ನಿಮಿಷಗಳಲ್ಲಿ ತಲುಪಬಹುದಾಗಿದೆ.


Click the Play button to hear this message in audio format

ಸಿಲಿಕಾನ್‌ ಸಿಟಿ ಬೆಂಗಳೂರು ಐಟಿ-ಬಿಟಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರೂ, ಇಲ್ಲಿನ ಟ್ರಾಫಿಕ್‌ ಸಮಸ್ಯೆ ಜನರನ್ನು ಅಷ್ಟೇ ಹೈರಾಣಾಗಿಸಿದೆ. ರಾಜ್ಯ ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿರಲಿಲ್ಲ. ಇದೀಗ ರಾಜಧಾನಿಯ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ರಾಜ್ಯ ಸಚಿವ ಸಂಪುಟ, ನಗರದಲ್ಲಿ ಒಟ್ಟು 13,262.70 ಕೋಟಿ ರೂಪಾಯಿ ವೆಚ್ಚದಲ್ಲಿ ಹನ್ನೊಂದು ಹೊಸ ಎಲಿವೇಟೆಡ್‌ ಕಾರಿಡಾರ್‌ಗಳನ್ನು (ಮೇಲ್ಸೇತುವೆ ಜಾಲ) ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಿ-ಸ್ಟೈಲ್ (B-STYLE) ವತಿಯಿಂದ ನಗರದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಬೃಹತ್ ಯೋಜನೆ ಅನುಷ್ಠಾನಗೊಳ್ಳಲಿದ್ದು, ಸಾರ್ವಜನಿಕರಲ್ಲಿ ಸುಗಮ ಸಂಚಾರದ ಹೊಸ ಆಶಾಭಾವನೆ ಮೂಡಿಸಿದೆ.

ಎಲ್ಲೆಲ್ಲಿ ತಲೆ ಎತ್ತಲಿವೆ ನೂತನ ಕಾರಿಡಾರ್‌ಗಳು?

ನಗರದ ಪ್ರಮುಖ ಸಂಪರ್ಕ ಕೊಂಡಿಗಳನ್ನು ಬೆಸೆಯುವ ಉದ್ದೇಶದಿಂದ ಒಟ್ಟು ಹನ್ನೊಂದು ಮಾರ್ಗಗಳಲ್ಲಿ ಈ ಮೇಲ್ಸೇತುವೆಗಳು ನಿರ್ಮಾಣವಾಗಲಿವೆ. ಪ್ರಮುಖವಾಗಿ ಯಶವಂತಪುರ-ಮತ್ತಿಕೆರೆಯಿಂದ ಐಐಎಸ್‌ಸಿ, ಮೇಖ್ರಿ ವೃತ್ತ, ಜಯಮಹಲ್ ಮೂಲಕ ಹಳೆ ಮದ್ರಾಸ್ ರಸ್ತೆಯನ್ನು ಸಂಪರ್ಕಿಸುವ 28 ಕಿಲೋಮೀಟರ್ ಉದ್ದದ ಬೃಹತ್ ಕಾರಿಡಾರ್‌ ಅನ್ನು ಅತಿ ಹೆಚ್ಚು ಅಂದರೆ 4,621.45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದೇ ರೀತಿ ಮಾರೇನಹಳ್ಳಿಯ ರಾಗಿಗುಡ್ಡದಿಂದ ಕನಕಪುರ ರಸ್ತೆ ಮಾರ್ಗವಾಗಿ ತಲಘಟ್ಟಪುರದವರೆಗೆ 18.5 ಕಿಲೋಮೀಟರ್ ಉದ್ದದ ಮೇಲ್ಸೇತುವೆಯನ್ನು 2,956.32 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದರ ಜೊತೆಗೆ, ಹಳೆ ಮದ್ರಾಸ್ ರಸ್ತೆಯಿಂದ ಇಂದಿರಾನಗರ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ 5.2 ಕಿಲೋಮೀಟರ್ ಮಾರ್ಗಕ್ಕೆ 1,300 ಕೋಟಿ ರೂಪಾಯಿ ಹಾಗೂ ಸಿರ್ಸಿ ವೃತ್ತದಿಂದ ಮೈಸೂರು ರಸ್ತೆ ಮೂಲಕ ನಾಯಂಡಹಳ್ಳಿವರೆಗಿನ 5.2 ಕಿಲೋಮೀಟರ್ ಮಾರ್ಗಕ್ಕೆ 810 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಇನ್ನುಳಿದಂತೆ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗಿನ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈ ಓವರ್ ಲೂಪ್ ಒಳಗೊಂಡ ಏಳು ಕಿಲೋಮೀಟರ್ ಮಾರ್ಗವನ್ನು 725 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಶೂಲೆ ವೃತ್ತದಿಂದ ಆನೆಪಾಳ್ಯ, ಆಡುಗೋಡಿ ಮೂಲಕ ಸೇಂಟ್ ಜಾನ್ಸ್ ಆಸ್ಪತ್ರೆವರೆಗಿನ 5.3 ಕಿಲೋಮೀಟರ್ ಮಾರ್ಗವನ್ನು 716 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಪೈಪ್‌ಲೈನ್ ರಸ್ತೆ ಮೂಲಕ ಮಹಾಲಕ್ಷ್ಮಿ ಲೇಔಟ್ ತಲುಪುವ ಎರಡು ಕಿಲೋಮೀಟರ್ ಮಾರ್ಗಕ್ಕೆ 489 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಇದಲ್ಲದೆ ಯಲಹಂಕದ ದೊಡ್ಡಬಳ್ಳಾಪುರ ರಸ್ತೆಯಿಂದ ಕೋಗಿಲು ವೃತ್ತದವರೆಗೆ, ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್, ಅಡ್ಯಾರ್‌ ಆನಂದ್‌ ಭವನ ಹಾಗೂ ರಘುವನಹಳ್ಳಿ ಬಳಿ ಮತ್ತು ಎಂಇಐ ಜಂಕ್ಷನ್ ಬಳಿ ವಿಭಜಿತ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ 380 ಕೋಟಿ ರೂಪಾಯಿಗೆ ಟೆಂಡರ್ ಕರೆಯಲಾಗಿದ್ದ ಬೈಯಪ್ಪನಹಳ್ಳಿ ರೋಟರಿ ಫ್ಲೈ ಓವರ್ ಯೋಜನೆಗೆ ಇದೀಗ 436.44 ಕೋಟಿ ರೂಪಾಯಿಗಳ ಪರಿಷ್ಕೃತ ಅಂದಾಜು ಮೊತ್ತವನ್ನು ಸರ್ಕಾರ ಒಪ್ಪಿದೆ.

ಸಿಗ್ನಲ್ ಮುಕ್ತ ಸಂಚಾರ, ಪ್ರಯಾಣದ ಸಮಯ ಉಳಿತಾಯ

ಬೆಂಗಳೂರಿನ ರಸ್ತೆಗಳಲ್ಲಿ ಸಿಗ್ನಲ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ವಾಹನ ಸವಾರರು ಪ್ರತಿ ಕೂಡುರಸ್ತೆಯಲ್ಲೂ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಇದೆ. ಆದರೆ ಈ ಹೊಸ ಎಲಿವೇಟೆಡ್ ಕಾರಿಡಾರ್‌ಗಳು ಸಾಮಾನ್ಯ ರಸ್ತೆಗಿಂತ ಮೇಲಿರುವುದರಿಂದ ಯಾವುದೇ ಸಿಗ್ನಲ್‌ಗಳ ಅಡೆತಡೆಯಿಲ್ಲದೆ ವಾಹನಗಳು ಸರಾಗವಾಗಿ ಚಲಿಸಬಹುದು. ಸ್ಥಳೀಯವಾಗಿ ಸಂಚರಿಸುವವರು ಕೆಳಗಿನ ರಸ್ತೆಗಳಲ್ಲಿ ಪ್ರಯಾಣ ಮಾಡಿದರೆ, ದೂರದ ಪ್ರಯಾಣ ಮಾಡುವವರು ಈ ಮೇಲ್ಸೇತುವೆಗಳನ್ನು ಬಳಸಬಹುದು. ಇದರಿಂದಾಗಿ ಪ್ರಯಾಣದ ಸಮಯ ಅರ್ಧದಷ್ಟು ಉಳಿತಾಯವಾಗಲಿದೆ. ಉದಾಹರಣೆಗೆ, ಯಶವಂತಪುರದಿಂದ ಹಳೇ ಮದ್ರಾಸ್ ರಸ್ತೆಗೆ ಪ್ರಸ್ತುತ ಪೀಕ್ ಅವರ್‌ನಲ್ಲಿ 28 ಕಿಲೋಮೀಟರ್ ದೂರವನ್ನು ಕ್ರಮಿಸಲು ಸುಮಾರು 75 ರಿಂದ 105 ನಿಮಿಷ ಬೇಕಾಗುತ್ತದೆ. ಬಿಎಂಟಿಸಿ ಬಸ್‌ಗಳಲ್ಲಿ ಈ ಪ್ರಯಾಣಕ್ಕೆ 120 ನಿಮಿಷಗಳೇ ಬೇಕಾಗಬಹುದು. ಆದರೆ ಕಾರಿಡಾರ್ ನಿರ್ಮಾಣದ ನಂತರ ಕಾರು ಅಥವಾ ಬೈಕ್‌ಗಳಲ್ಲಿ ಕೇವಲ 25 ರಿಂದ 35 ನಿಮಿಷಗಳಲ್ಲಿ ಹಾಗೂ ಬಸ್‌ಗಳಲ್ಲಿ 50 ರಿಂದ 60 ನಿಮಿಷಗಳಲ್ಲಿ ಗುರಿಯನ್ನು ತಲುಪಬಹುದಾಗಿದೆ.

ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಕಡಿವಾಣ, ಐಟಿ-ಬಿಟಿ ವಲಯಕ್ಕೆ ಬೂಸ್ಟ್

ಐಟಿ-ಬಿಟಿ ಉದ್ಯೋಗಿಗಳನ್ನು ನಿತ್ಯ ಕಾಡುವ ಕುಖ್ಯಾತ ಸಿಲ್ಕ್ ಬೋರ್ಡ್ ಜಂಕ್ಷನ್ ಸಮಸ್ಯೆಗೆ ಈ ಯೋಜನೆ ಬಹುದೊಡ್ಡ ರಿಲೀಫ್ ನೀಡಲಿದೆ. ಹಳೇ ಮದ್ರಾಸ್‌ ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಪೀಕ್‌ ಅವರ್‌ನಲ್ಲಿ ಪ್ರಯಾಣಿಸಲು ಪ್ರಸ್ತುತ ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಬೇಕಾಗುತ್ತದೆ. ವಿಶೇಷವಾಗಿ ಕೆ.ಆರ್. ಪುರಂನಿಂದ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ ಈ ಪ್ರಯಾಣದ ಸಮಯ ಕೇವಲ 30 ರಿಂದ 40 ನಿಮಿಷಕ್ಕೆ ಇಳಿಕೆಯಾಗಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಒಂದರಲ್ಲೇ 20 ರಿಂದ 30 ನಿಮಿಷ ಉಳಿತಾಯವಾಗಲಿದೆ. ಈ ಯೋಜನೆಯು ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರ, ಮಾರತಹಳ್ಳಿ ಮತ್ತು ಬೆಳ್ಳಂದೂರಿನಂತಹ ಸಾಫ್ಟ್‌ವೇರ್ ಪಾರ್ಕ್‌ಗಳಿಗೆ ವೇಗದ ಸಂಪರ್ಕ ಒದಗಿಸುವುದರಿಂದ ನಗರದ ಆರ್ಥಿಕ ಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಜೊತೆಗೆ ಮೈಸೂರು ರಸ್ತೆ ಮತ್ತು ದೊಡ್ಡಬಳ್ಳಾಪುರ ರಸ್ತೆ ಕಾರಿಡಾರ್‌ಗಳಿಂದ ವಾಣಿಜ್ಯ ಸರಕು ಸಾಗಣೆಯೂ ಸುಲಭವಾಗಲಿದೆ.

ಇಂಧನ ಉಳಿತಾಯ, ಮಾಲಿನ್ಯ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆ

ನಿರಂತರ ಟ್ರಾಫಿಕ್‌ನಲ್ಲಿ ಸಿಲುಕಿ ವಾಹನವನ್ನು ಪದೇ-ಪದೇ ನಿಲ್ಲಿಸಿ ಚಲಾಯಿಸುವುದರಿಂದ ವಿಪರೀತ ಇಂಧನ ವ್ಯರ್ಥವಾಗುತ್ತದೆ. ಸುಗಮ ಸಂಚಾರದಿಂದಾಗಿ ಇಂಧನ ಬಳಕೆ ಕಡಿಮೆಯಾಗಿ ಜನರ ಹಣವೂ ಉಳಿತಾಯವಾಗುತ್ತದೆ. ಟ್ರಾಫಿಕ್‌ನಲ್ಲಿ ಸಿಲುಕಿದಾಗ ವಾಹನಗಳು ಹೊರಹಾಕುವ ಕಾರ್ಬನ್ ಮಾಲಿನ್ಯವು ಈ ಕಾರಿಡಾರ್‌ಗಳಿಂದ ಗಣನೀಯವಾಗಿ ಕಡಿಮೆಯಾಗಲಿದ್ದು, ನಗರದ ವಾಯು ಗುಣಮಟ್ಟ ಸುಧಾರಿಸಲಿದೆ. ಇದಲ್ಲದೆ, ಪಾದಚಾರಿಗಳು ಹಾಗೂ ನಗರದ ಒಳರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ಪ್ರಯಾಣಿಸುವುದಿಲ್ಲವಾದ್ದರಿಂದ ಕೆಳಗಿನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ತಗ್ಗಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಯೋಜನೆಯ ಭಾಗವಾಗಿ ಕೆಳಗಿನ ಸಾಮಾನ್ಯ ರಸ್ತೆಗಳನ್ನೂ ದುರಸ್ತಿಗೊಳಿಸುವುದರಿಂದ ಸ್ಥಳೀಯ ನಿವಾಸಿಗಳಿಗೂ ಅತ್ಯುತ್ತಮ ರಸ್ತೆ ಸಂಪರ್ಕ ಒದಗಿಸಿದಂತಾಗುತ್ತದೆ.

Read More
Next Story