ಮುಂದಿನ ವರ್ಷದಿಂದ ಬೆರಳ ತುದಿಯಲ್ಲೇ ಭೂ ದಾಖಲೆ; 67 ಕೋಟಿ ಪುಟಗಳ ಸ್ಕ್ಯಾನಿಂಗ್‌ ಪೂರ್ಣ
x
ಕೃಷ್ಣ ಬೈರೇಗೌಡ

ಮುಂದಿನ ವರ್ಷದಿಂದ ಬೆರಳ ತುದಿಯಲ್ಲೇ ಭೂ ದಾಖಲೆ; 67 ಕೋಟಿ ಪುಟಗಳ ಸ್ಕ್ಯಾನಿಂಗ್‌ ಪೂರ್ಣ

ಯೋಜನೆಯಡಿ ತಾಲ್ಲೂಕು ಕಚೇರಿ, ಡಿ.ಸಿ ಕಚೇರಿಗಳಲ್ಲಿನ ಎಲ್ಲ ಮೂಲ ಕಡತಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸುವುದರಿಂದ ತಲೆಮಾರುಗಳವರೆಗೆ ಸಂರಕ್ಷಿಸಿಡಬಹುದು.


Click the Play button to hear this message in audio format

ನಿಮ್ಮ ಜಮೀನಿಗೆ ಸಂಬಂಧಿಸಿದ ಮೂಲ ದಾಖಲೆಗಳು ಕಳೆದು ಹೋಗಿವೆಯೇ, ದಾಖಲೆಗಾಗಿ ಕಚೇರಿಗಳಿಗೆ ಅಲೆದು ಸಾಕಾಗಿದೆಯೇ, ಹಾಗಿದ್ದರೆ ಚಿಂತಿಸಬೇಡಿ. ನಿಮ್ಮ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳ ಸರ್ಟಿಫೈಡ್ ಕಾಪಿ ಬೇಕಿದ್ದರೆ ಬೆರಳ ತುದಿಯಲ್ಲೇ ಸಿಗಲಿದೆ.

ಹೌದು, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭೂ ಸುರಕ್ಷಾ ಯೋಜನೆಯಡಿ ಇನ್ನು ಮುಂದೆ ಮನೆಯಲ್ಲೇ ಕುಳಿತು ಮೂಲ ದಾಖಲೆಗಳ ಸರ್ಟಿಫೈಡ್‌ ಕಾಪಿ ಪಡೆಯಬಹುದಾಗಿದೆ. ನಿರ್ದಿಷ್ಟ ದಾಖಲೆ ಕೋರಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದಲ್ಲಿ ನೇರವಾಗಿ ನಿಮ್ಮ ಮೊಬೈಲ್ ಫೋನ್‌ನಲ್ಲೇ ದಾಖಲೆಗಳು ಲಭ್ಯವಾಗಲಿವೆ.

ಏನಿದು ಯೋಜನೆ?

ರಾಜ್ಯ ಸರ್ಕಾರ 2024 ರಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ತಾಲ್ಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಲ್ಲಿರುವ ಹಳೆಯ ಮತ್ತು ಲಭ್ಯವಿರುವ ಭೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ವರ್ಗೀಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಭೂ ಕಬಳಿಕೆ ತಡೆಯುವುದು, ಭೂ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಹಾಗೂ ಕಚೇರಿಗಳಿಗೆ ರೈತರು, ಸಾರ್ವಜನಿಕರ ಅಲೆದಾಟ ತಪ್ಪಿಸುವುದು ಈ ಯೋಜನೆಯ ಉದ್ದೇಶ ಹೊಂದಿದೆ. ಸದ್ಯ ಸರ್ಕಾರದ ಬಳಿ ಲಭ್ಯವಿರುವ 1800 ರಿಂದ 2025 ರವರೆಗಿನ ದಾಖಲೆಗಳನ್ನು ಆನ್‌ಲೈನ್ನಲ್ಲಿ ಸಿಗುವಂತೆ ಮಾಡುವುದು ಸ ರ್ಕಾರದ ಮುಂದಿನ ಗುರಿಯಾಗಿದೆ.

ಅನುಕೂಲ ಏನು?

ವರ್ಷ ಕಳೆದಂತೆ ಆಸ್ತಿಯ ಮೂಲ ದಾಖಲೆಗಳು ಶಿಥಿಲವಾಗುವುದು ಸಹಜ. ಅಂತಹ ದಾಖಲೆಗಳನ್ನು ಸಂರಕ್ಷಿಸುವ ಜತೆಗೆ ನಕಲು, ಫೋರ್ಜರಿ ಅಥವಾ ಕಳೆದು ಹೋಗುವುದನ್ನು ತಪ್ಪಿಸುವ ಸಲುವಾಗಿ ಭೂ ಸುರಕ್ಷಾ ಯೋಜನೆ ಅನುಕೂಲಕರವಾಗಿದೆ.

ಈ ಯೋಜನೆಯಡಿ ತಾಲ್ಲೂಕು ಕಚೇರಿ, ಡಿ.ಸಿ ಕಚೇರಿಗಳಲ್ಲಿನ ಎಲ್ಲ ಮೂಲ ಕಡತಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸುವುದರಿಂದ ತಲೆಮಾರುಗಳವರೆಗೆ ಸಂರಕ್ಷಿಸಿಡಬಹುದು. ಈಗಾಗಲೇ ರಾಜ್ಯದ 100 ತಾಲ್ಲೂಕುಗಳಲ್ಲಿ ಏ.30ರವರೆಗೆ ಅಂದಾಜು 67 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ವರ್ಷದೊಳಗೆ ಉಳಿದ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಸರ್ವೇ ದಾಖಲೆಗಳಿಗೂ ಡಿಜಿಟಲ್‌ ಟಚ್

ಮುಂದಿನ ವರ್ಷದಿಂದ ಸರ್ವೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರಿಂದ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಬೆರಳ ತುದಿಯಲ್ಲೇ ಜನರಿಗೆ ಸಿಗಲಿವೆ.

ಹಳೆಯ ಕಡತಗಳು, ಪಹಣಿಗಳು ಮತ್ತು ಮ್ಯುಟೇಷನ್ ದಾಖಲೆಗಳನ್ನು ಸ್ಕ್ಯಾನ್ ಮಾಡಿ recordroom.karnataka.gov.in ಪೋರ್ಟಲ್ನಲ್ಲಿ ಸಂಗ್ರಹಿಸಲಾಗುತ್ತಿದೆ.

ಭೂ ದಾಖಲೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮೂಲಕ ಅಕ್ರಮ ಭೂ ವ್ಯವಹಾರಗಳಿಗೂ ಸರ್ಕಾರ ಬ್ರೇಕ್‌ ಹಾಕಿದೆ. ಭೂ ಸುರಕ್ಷಾ ಯೋಜನೆಯಡಿ 100 ಕೋಟಿಗೂ ಹೆಚ್ಚು ಪುಟಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶವಿದೆ.

“ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡುವುದರಿಂದ ಹಾಳಾಗುವ ಸ್ಥಿತಿಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿದಂತಾಗುತ್ತದೆ. ದಾಖಲೆ ತಿದ್ದುವ, ಫೋರ್ಜರಿ, ನಕಲು ಮಾಡುವ ಅವಕಾಶವೂ ತಪ್ಪಲಿದೆ. ದಾಖಲೆಯ ಕಡತ ವನ್ನು ಉದ್ದೇಶಪೂರ್ವಕವಾಗಿ ಎತ್ತಿಡಲು, ಬಚ್ಚಿಡಲು ಆಗುವುದಿಲ್ಲ. ಕಳೆದು ಹೋಗಲು ಸಾಧ್ಯವಿಲ್ಲ. ವರ್ಷಾಂತ್ಯದಲ್ಲಿ 100 ಕೋಟಿ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗುವುದು” ಎಂದು ಶನಿವಾರ (ಮೇ 2) ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶಿವಮೊಗ್ಗದಲ್ಲಿ ತಿಳಿಸಿದರು.

Read More
Next Story