
ಕೇಂದ್ರದ ಅಂಕಿ-ಅಂಶಗಳ ಅಬ್ಬರದಲ್ಲಿ ರಾಜ್ಯಗಳ ಖಜಾನೆ ಖಾಲಿ: ಈ ಅಸಮಾನತೆಗೆ ಎಲ್ಲಿದೆ ಉತ್ತರ?
ವಿತ್ತೀಯ ಶಿಸ್ತು ಮತ್ತು ಸ್ಥಿರತೆ ಈ ಮುಂಗಡ ಪತ್ರದ ಬುನಾದಿ. ಆದರೆ ಈಗ ಎದುರಾಗುತ್ತಿರುವ ಜಾಗತಿಕ ಸವಾಲುಗಳು ಅಸಾಮಾನ್ಯ. ಇದು ದೀರ್ಘಾವಧಿಯ ಉತ್ಫಾದನಾ ಸಾಮರ್ಥ್ಯವನ್ನು ವೃದ್ಧಿಸೀತೆ? ಎಂಬುದು ಪ್ರಶ್ನೆ.
ಫೆಬ್ರುವರಿ ಒಂದರಂದು ಮಂಡಿಸಲಾಗಿರುವ ಭಾರತದ 2026ರ ಬಜೆಟ್ ಕೇವಲ ಆಕರ್ಷಕ ಘೋಷಣೆಗಳಿಗೆ ಸೀಮಿತವಾಗಿಲ್ಲ. ಅದು ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿರುವ ಜಗತ್ತಿನ ಅರ್ಥ ವ್ಯವಸ್ಥೆಯನ್ನು ಭದ್ರಪಡಿಸಲು ನಡೆಸಿದ ಪ್ರಯತ್ನದಂತೆ ಕಾಣುತ್ತಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸುದೀರ್ಘ ಸುಧಾರಣಾ ಪ್ರಯಾಣದ ಮತ್ತೊಂದು ಹಂತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್ ಮಂಡಿಸಿದ್ದಾರೆ. ಆದರೂ, ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಎದುರಿಸಲು ಈ ಬಜೆಟ್ ಸಮರ್ಥ ಮಾರ್ಗಸೂಚಿಯನ್ನು ನೀಡುವಲ್ಲಿ ವಿಫಲವಾಗಿದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.
ʼದ ಫೆಡರಲ್' ಪ್ರಧಾನ ಸಂಪಾದಕ ಎಸ್. ಶ್ರೀನಿವಾಸನ್ ಅವರು 'ಟಾಕಿಂಗ್ ಸೆನ್ಸ್ ವಿತ್ ಶ್ರೀನಿ' ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಇದು ಹೊಸ ಹಾದಿಗಳನ್ನು ಹುಡುಕುವ ಬದಲು, ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವ ಕಡೆಗೆ ಗಮನ ಹರಿಸಿರುವ ಬಜೆಟ್,” ಎಂದು ವಿಶ್ಲೇಷಿಸಿದ್ದಾರೆ. ಸರ್ಕಾರವು ದೊಡ್ಡ ಮಟ್ಟದ ಉತ್ತೇಜಕ ಕ್ರಮಗಳನ್ನು ಘೋಷಿಸುವ ಬದಲು, ವಿತ್ತೀಯ ಶಿಸ್ತು ಮತ್ತು ಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂಬುದನ್ನು ಅವರು ಗಮನಿಸಿದ್ದಾರೆ.
ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 4.4 ರಿಂದ ಶೇ. 4.3 ಕ್ಕೆ ತಗ್ಗಿಸುವ ಗುರಿ ಬಜೆಟ್ನಲ್ಲಿದೆ. ಅದರೊಂದಿಗೆ ಆರ್ಥಿಕತೆಯು ಶೇ. 7ರ ದರದಲ್ಲಿ ಬೆಳೆಯುವ ನಿರೀಕ್ಷೆಯನ್ನು ಹೊಂದಿದೆ. ಮೂಲಸೌಕರ್ಯ ವೆಚ್ಚವನ್ನು ಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಒಟ್ಟು ಬಂಡವಾಳ ವೆಚ್ಚವನ್ನು 12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮಾಡಲಾಗಿದೆ. ರಕ್ಷಣಾ ವೆಚ್ಚದಲ್ಲಿ ಶೇ. 15 ರಷ್ಟು ಏರಿಕೆಯಾಗಿದ್ದು, ಬಂಡವಾಳ ಸಂಗ್ರಹಣಾ ವೆಚ್ಚವು ಸುಮಾರು ಶೇ. 22 ರಷ್ಟು ಜಿಗಿದಿದೆ.
ಜಾಗತಿಕ ಸವಾಲುಗಳಿಗೆ ಸಾಕೇ ಸಿದ್ಧತೆ ?
"ಈ ಅಂಕಿ ಅಂಶಗಳು ಸರ್ಕಾರದ ಸ್ಥೂಲ ಆರ್ಥಿಕ ಬಲದ ಪ್ರತಿಪಾದನೆಯನ್ನು ಪುಷ್ಟೀಕರಿಸುತ್ತವೆ, ಆದರೆ ಜಾಗತಿಕ ಸವಾಲುಗಳು ತೀವ್ರಗೊಳ್ಳುತ್ತಿರುವ ಇಂತಹ ಕಾಲಘಟ್ಟದಲ್ಲಿ ಈ ಕ್ರಮಗಳು ಸಾಕೇ?" ಎಂದು ಶ್ರೀನಿವಾಸನ್ ಅವರು ಪ್ರಶ್ನಿಸುತ್ತಾರೆ.
ನಮ್ಮ ಮುಂದಿರುವ ಈ ಸವಾಲುಗಳಲ್ಲಿ ಪಶ್ಚಿಮ ದೇಶಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ರಕ್ಷಣಾ ನೀತಿ ಉಲ್ಬಣಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಕೃತಕ ಬುದ್ಧಿಮತ್ತೆಯಿಂದಾಗಿ ಆಗುತ್ತಿರುವ ತಾಂತ್ರಿಕ ಪಲ್ಲಟಗಳು ಸೇರಿವೆ. ಭಾರತದ ಹಣದುಬ್ಬರವೇನೋ ಸದ್ಯ ನಿಯಂತ್ರಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನು 'ಗೋಲ್ಡಿಲಾಕ್ಸ್' (ಸುವರ್ಣ ಮಾದರಿ) ಸ್ಥಿತಿ ಎಂದು ಕರೆದಿದ್ದರೂ, ಕೇವಲ ಸ್ಥಿರತೆ ಸುಸ್ಥಿರ ಬೆಳವಣಿಗೆಗೆ ಕಾರಣವಾಗಲಾರದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಾದ ಮಂಡಿಸಿದ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ನ ಪ್ರಾಧ್ಯಾಪಕ ಹಾಗೂ ಅರ್ಥಶಾಸ್ತ್ರಜ್ಞ ಕಲೈಯರಸನ್, “ಆರ್ಥಿಕತೆ ಇಂದು ಆರೋಗ್ಯಕರವಾಗಿ, ಸದೃಢವಾಗಿ ಕಾಣುತ್ತಿದೆ, ಆದರೆ ಅದು ನಮ್ಮನ್ನು ನಾಳಿನ ಸವಾಲುಗಳಿಗೆ ತಾನೇ ತಾನಾಗಿ ಸಿದ್ಧಪಡಿಸುವುದಿಲ್ಲ. ಬಜೆಟ್ ಅಲ್ಪಾವಧಿಯ ಆರ್ಥಿಕ ಸ್ಥಿರತೆಯನ್ನು ಗಮನಿಸಿದೆ, ಆದರೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ದೀರ್ಘಾವಧಿಯ ಕಾರ್ಯತಂತ್ರದ ಬಗ್ಗೆ ಅಷ್ಟು ಸ್ಪಷ್ಟತೆ ಹೊಂದಿಲ್ಲ," ಎಂಬುದು ಅವರ ಅಭಿಪ್ರಾಯವಾಗಿತ್ತು.
ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ನಡುವಿನ ಅಂತರ
ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ನಡುವೆ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಕಲೈಯರಸನ್ ಎತ್ತಿ ತೋರಿಸುವ ಪ್ರಯತ್ನ ಮಾಡಿದರು. ಸಮೀಕ್ಷೆಯು ತಾಂತ್ರಿಕ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ, ಉತ್ಪಾದನಾ ವಲಯದ ವಿಸ್ತರಣೆ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯ ಅಗತ್ಯವನ್ನು ಒತ್ತಿಹೇಳಿದೆ. ಆದರೆ ಬಜೆಟ್ನಲ್ಲಿ ಈ ಗುರಿಗಳನ್ನು ಹೇಗೆ ಸಾಧಿಸುವುದು ಎಂಬ ಬಗ್ಗೆ ನಿರ್ದಿಷ್ಟ ಯೋಜನೆಗಳಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
"ಭಾರತದ ರಚನಾತ್ಮಕ ದೌರ್ಬಲ್ಯವೆಂದರೆ ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿಯು ರಫ್ತು ಹೆಚ್ಚುವರಿಯಿಂದ ಬಂದಿಲ್ಲ, ಬದಲಾಗಿ ಬಂಡವಾಳದ ಒಳಹರಿವಿನಿಂದ ರೂಪಿತವಾಗಿದೆ. ಇದು ಚೀನಾದಂತಹ ದೇಶಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದೆ. ಚೀನಾ ಸತತ ಉತ್ಪಾದನಾ ರಫ್ತಿನ ಮೂಲಕ ಮೀಸಲು ಸಂಗ್ರಹಿಸುತ್ತದೆ. ಆದರೆ ನಮ್ಮ ಆರ್ಥಿಕತೆಯು ಹಠಾತ್ ಬಂಡವಾಳದ ಹೊರಹರಿವಿನ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ," ಎಂದು ಅವರು ವಿವರಿಸಿದರು.
MSME ವಲಯಕ್ಕೆ ಬೆಂಬಲ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಮೇಲಿನ ಹೊಸ ಒತ್ತು ಈ ಬಜೆಟ್ನ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಸರ್ಕಾರವು 10,000 ಕೋಟಿ ರೂ.ಗಳ ಈಕ್ವಿಟಿ ಫಂಡ್-ನ್ನು ಅದಕ್ಕಾಗಿ ಘೋಷಿಸಿತು, ಸಾಲದ ಗ್ಯಾರಂಟಿಗಳನ್ನು ವಿಸ್ತರಿಸಿತು ಮತ್ತು ಆಯ್ದ "MSME ಚಾಂಪಿಯನ್ಸ್"ಗಳಿಗೆ ವೃತ್ತಿಪರ ಮತ್ತು ತಾಂತ್ರಿಕ ಬೆಂಬಲದ ಭರವಸೆ ನೀಡಿತು.
“MSME ವಲಯಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಎರಡು ವಿಷಯಗಳ ಅಗತ್ಯವಿದೆ: ಹಣಕಾಸಿನ ನೆರವು ಮತ್ತು ತಂತ್ರಜ್ಞಾನದ ಲಭ್ಯತೆ, ಬಜೆಟ್ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದೆಯಾದರೂ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇನ್ನೂ ಬಗೆಹರಿಯದೆ ಹಾಗೇ ಉಳಿದಿವೆ,” ಎಂದು ಎಂದು ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ಕಲೈಯರಸನ್ ಅವರು ಇನ್ನೂ ನೇರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಅತಿಸಣ್ಣ ಉದ್ಯಮಗಳು ಸಣ್ಣ ಉದ್ಯಮಗಳಾಗಿ, ಆ ಬಳಿಕ ಮಧ್ಯಮ ಮತ್ತು ಅಂತಿಮವಾಗಿ ಬೃಹತ್ ಉದ್ಯಮಗಳಾಗಿ ಬೆಳೆಯುವ ಹಾದಿಯನ್ನು ಸುಗಮಗೊಳಿಸಲು ಭಾರತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಎಂ.ಎಸ್.ಎಂ.ಇ.ಗಳು, ಬೃಹತ್ ಕಂಪನಿಗಳು ಮತ್ತು ವಿದೇಶಿ ಹೂಡಿಕೆದಾರರ ನಡುವೆ ಗಟ್ಟಿಯಾದ ಸಂಬಂಧ ಬೆಳೆಯದೇ ಹೋದರೆ ಉತ್ಪಾದಕತೆಯೇನೂ ಬೆಳೆಯುವುದಿಲ್ಲ. ಅದು ಕಡಿಮೆ ಮಟ್ಟದಲ್ಲೇ ಇರುತ್ತದೆ,” ಎಂದು ಅವರು ಹೇಳಿದರು.
ಸೆಮಿಕಂಡಕ್ಟರ್ ಅಥವಾ ರಕ್ಷಣಾ ವಲಯದಂತಹ ಅತ್ಯಾಧುನಿಕ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಚೀನಾ ಪ್ರಾಬಲ್ಯ ಹೊಂದಿರುವ ಕಡಿಮೆ ವೆಚ್ಚದ ಗ್ರಾಹಕ ವಸ್ತುಗಳ ಬೃಹತ್ ಪ್ರಮಾಣದ ಉತ್ಪಾದನೆಯಲ್ಲೂ ಭಾರತವು ಸ್ವಾವಲಂಬನೆ ಸಾಧಿಸುವುದು ಇಂದಿನ ಸವಾಲಾಗಿದೆ ಎಂಬುದು ಶ್ರೀನಿವಾಸನ್ ಮತ್ತು ಕಲೈಯರಸನ್ ಇಬ್ಬರೂ ಮಂಡಿಸಿದ ವಾದವಾಗಿತ್ತು.
“ಬಜೆಟ್ ಒಂದು ಆಶಯವನ್ನು ವ್ಯಕ್ತಪಡಿಸಿದೆ. ಆದರೆ ಇದಕ್ಕೆ ಸ್ಪಷ್ಟವಾದ ದೀರ್ಘಾವಧಿಯ ಮಾರ್ಗಸೂಚಿಯಿಲ್ಲ. ಇಂತಹ ಆಶಯಗಳು ಭಾರತಕ್ಕೆ ಅಗತ್ಯವಿರುವ ಕಾರ್ಯತಂತ್ರದ ಸ್ಥಿತಿಸ್ಥಾಪಕತ್ವವನ್ನು ನೀಡುವ ಸಾಧ್ಯತೆ ಕಡಿಮೆ,” ಎಂದು ಕಲೈಯರಸನ್ ಪ್ರತಿಪಾದಿಸಿದರು.

