ತಮಿಳುನಾಡು ಚುನಾವಣೆ: ಮುನ್ನೆಲೆಗೆ ಬಂದ ʼದ್ರಾವಿಡ ಮಾದರಿʼಯ ಸಾಮಾಜಿಕ ಪಲ್ಲಟಗಳು
x
ದ್ರಾವಿಡ ಮಾದರಿಯ ನಿಜವಾದ ಮಾಲೀಕರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ʼದಿ ಫೆಡರಲ್ʼನ ಪ್ರಧಾನ ಸಂಪಾದಕರಾದ ಎಸ್. ಶ್ರೀನಿವಾಸನ್ ಮತ್ತು ಆರ್ಥಿಕ ತಜ್ಞರಾದ ಕಲೈಯರಸನ್. ಎ ಅವರು ಚರ್ಚೆ ನಡೆಸಿದರು.

ತಮಿಳುನಾಡು ಚುನಾವಣೆ: ಮುನ್ನೆಲೆಗೆ ಬಂದ ʼದ್ರಾವಿಡ ಮಾದರಿʼಯ ಸಾಮಾಜಿಕ ಪಲ್ಲಟಗಳು

ಸಾಮಾಜಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ಮೂಸೆಯಲ್ಲಿ ಹೊರಹೊಮ್ಮಿದ ನೀತಿಯನ್ನು ದಶಕಗಳ ಕಾಲ ಮುನ್ನಡೆಸಿದ ಫಲವೇ ಈ ದ್ರಾವಿಡ ಮಾದರಿಯ ಯಶಸ್ಸು ಎಂದಿದ್ದಾರೆ ಎಸ್.ಶ್ರೀನಿವಾಸನ್ ಮತ್ತು ಕಲೈಯರಸನ್.


Click the Play button to hear this message in audio format

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ʼದ್ರಾವಿಡ ಮಾದರಿʼಯನ್ನು ತನ್ನ ಆಡಳಿತದ ಹೆಗ್ಗುರುತಾಗಿ ಅತ್ಯಂತ ಆಕ್ರಮಣಕಾರಿಯಾಗಿ ಮುನ್ನಲೆಗೆ ತರಲು ಆಡಳಿತಾರೂಢ ಡಿಎಂಕೆ ಪ್ರಯತ್ನ ನಡೆಸಿದೆ. ಆ ಮೂಲಕ ಈ ಪದಗುಚ್ಛವು ತಮಿಳುನಾಡಿನ ರಾಜಕೀಯ ಸಂದೇಶದ ಕೇಂದ್ರಬಿಂದುವಾಗಿ ಪರಿಣಮಿಸಿದೆ.

ಈ ದ್ರಾವಿಡ ಮಾದರಿಯನ್ನು ಕಲ್ಯಾಣ ಯೋಜನೆಗಳು, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಸಂಯೋಜಿಸುವ ಒಂದು ಚೌಕಟ್ಟು ಎಂದು ಬಣ್ಣಿಸಲಾಗುತ್ತಿದೆ. ಆದರೆ ಇದೇ ವೇಳೆ ಈ ಮಾದರಿಯು ಹಣಕಾಸಿನ ಮುಗ್ಗಟ್ಟು ಮತ್ತು ಬದಲಾಗುತ್ತಿರುವ ಆರ್ಥಿಕ ಸವಾಲುಗಳನ್ನು ನಿಕಶಕ್ಕೆ ಒಡ್ಡಿದೆ ಎಂಬುದು ದಿಟ.

ಇಂತಹ ನಿರ್ಣಾಯಕ ಸಂಗತಿಯನ್ನು ಪ್ರಮುಖ ವಿಷಯವಾಗಿ ಏ.14ರಂದು ಪ್ರಸಾರವಾದ ʼದಿ ಫೆಡರಲ್ʼನ ಪ್ರಮುಖ ಯೂಟ್ಯೂಬ್ ಕಾರ್ಯಕ್ರಮ ʼಟಾಕಿಂಗ್ ಸೆನ್ಸ್ ವಿದ್ ಶ್ರೀನಿʼ ಸಂಚಿಕೆಯಲ್ಲಿ ಸೋದಾಹರಣವಾಗಿ ಚರ್ಷಚಿಸಲಾಯಿತು. ಈ ಚರ್ಚೆಯಲ್ಲಿ ʼದ ಫೆಡರಲ್ʼನ ಮುಖ್ಯ ಸಂಪಾದಕರಾದ ಎಸ್.ಶ್ರೀನಿವಾಸನ್ ಹಾಗೂ ಅರ್ಥಶಾಸ್ತ್ರಜ್ಞ ಕಲೈಯರಸನ್.ಎ. ಅವರು ಭಾಗವಹಿಸಿದ್ದರು.

ಇದೊಂದು ಸಮಗ್ರ ಮಾದರಿ

ʼದ್ರಾವಿಡ ಮಾದರಿ ಎಂಬುದು ಏಕಕಾಲಕ್ಕೆ ರಾಜಕೀಯವೂ ಹೌದು, ಸಾಮಾಜಿಕವೂ ಹೌದು ಹಾಗೂ ಆರ್ಥಿಕವೂ ಹೌದು. ಇದು ಕೇವಲ ಒಂದಲ್ಲ. ಅದೊಂದು ಸಮಗ್ರ ಚಿಂತನೆ, ಚೌಕಟ್ಟು” ಎಂದು ಶ್ರೀನಿವಾಸನ್ ಅವರು ಬಣ್ಣಿಸಿದರು. ಇದು ಜಸ್ಟೀಸ್ ಪಾರ್ಟಿಯಿಂದ ಮೊದಲ್ಗೊಂಡು ʼಸಾಮಾಜಿಕ ಸಮಾನತೆʼಯಲ್ಲಿ ಆಳವಾಗಿ ಬೇರೂರಿರುವ ಪರಂಪರೆಯಿಂದ ಬಂದಿದ್ದಾಗಿದೆ ಎಂದು ಸೇರಿಸುವುದನ್ನು ಅವರು ಮರೆಯಲಿಲ್ಲ.

ಮೀಸಲಾತಿ, ಮಧ್ಯಾಹ್ನದ ಬಿಸಿಯೂಟದಂತಹ ಆರಂಭಿಕ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಗಳನ್ನು ಅವರು ಈ ಮಾದರಿಯ ಪ್ರಮುಖ ಸ್ತಂಭಗಳೆಂದು ಗುರುತಿಸಿದರು. “ಇವೆಲ್ಲವುಗಳ ಸಮಷ್ಟಿ ರೂಪವೇ ದ್ರಾವಿಡ ಮಾದರಿ ಎಂದು ಅವರು ಕರೆಯುತ್ತಿದ್ದಾರೆ,” ಎಂದು ಶ್ರೀನಿವಾಸನ್ ಅವರು ಬೊಟ್ಟು ಮಾಡಿದರು.

ಪ್ರಾದೇಶಿಕತೆಯಲ್ಲಿ ತಕ್ಕಡಿಯಲ್ಲಿ…

ಕಲೈಯರಸನ್ ಅವರು ಈ ಮಾದರಿಯನ್ನು ವಿಶಾಲವಾದ ಆರ್ಥಿಕ ಚರ್ಚೆಯ ಚೌಕಟ್ಟಿನಲ್ಲಿಟ್ಟು ನೋಡುವ ಪ್ರಯತ್ನ ಮಾಡಿದರು. “ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕೇವಲ ಒಂದೇ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಅದನ್ನು ಆಯಾ ಪ್ರದೇಶಗಳ ಮೂಲಕವೇ ಗ್ರಹಿಸಬೇಕಾಗುತ್ತದೆ," ಎಂದು ಅವರು ವಿಶ್ಲೇಷಿಸಿದರು.

ಏಕಮುಖಿ ಧೋರಣೆಯನ್ನು ವಿರೋಧಿಸಿದ ಕಲೈಯರಸನ್ ಅವರು, "ಮೊದಲು ಬೆಳವಣಿಗೆ, ಆಮೇಲೆ ಅಭಿವೃದ್ಧಿ ಎಂಬ ಕ್ರಮಾನುಗತ ಹಂತಗಳನ್ನು ಅನುಸರಿಸುವ ಅಗತ್ಯವಿಲ್ಲ; ಎರಡನ್ನೂ ಏಕಕಾಲದಲ್ಲಿ ಸಾಧಿಸಲು ಸಾಧ್ಯವಿದೆ," ಎಂಬುದು ಅವರ ಅಭಿಪ್ರಾಯವಾಗಿತ್ತು. ತಮಿಳು ನಾಡನ್ನೇ ಉದಾಹರಣೆ ರೂಪದಲ್ಲಿ ವಿಷಯ ಮಂಡನೆ ಮಾಡಿದ ಅವರು, "ಇಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿ ಎರಡರಲ್ಲೂ ಏಕಕಾಲಕ್ಕೆ ಹಸ್ತಕ್ಷೇಪ ಮಾಡುವ ಮಾದರಿ ನಮಗೆ ಸಿಗುತ್ತದೆ," ಎಂದರು.

ಈ ಮಾದರಿಯ ಎರಡು ವಿಶಿಷ್ಟ ಲಕ್ಷಣಗಳನ್ನು ಅವರು ಒತ್ತಿಹೇಳಿದರು. "ಇದು ಅಭಿವೃದ್ಧಿಯ ಜೊತೆಗಿನ ಬೆಳವಣಿಗೆ; ಇಲ್ಲಿ ತುಲನಾತ್ಮಕವಾಗಿ ಉತ್ತಮವಾದ ಉತ್ಪಾದನಾ ನೆಲೆಯಿದೆ, ರಾಜ್ಯವು ಶಿಕ್ಷಣ, ಆರೋಗ್ಯ ಮತ್ತು ಬಡತನ ನಿರ್ಮೂಲನೆಯಂತಹ ಸಾಮಾಜಿಕ ಸೂಚಕಗಳಲ್ಲಿಯೂ ಬಲಿಷ್ಠವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಾದ್ಯಂತ ಹರಡಿರುವ 'ಆರ್ಥಿಕ ಕ್ಲಸ್ಟರ್ಗಳ' ಮೂಲಕ ಈ ಅಂತರ್ಗತ ಬೆಳವಣಿಗೆ ಸಾಧ್ಯವಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಎಲ್ಲ ಫ್ರೀಬಿಗಳು ಕೆಟ್ಟದಲ್ಲ

ಕಲ್ಯಾಣ ಯೋಜನೆಗಳು ಮತ್ತು ಉಚಿತ ಕೊಡುಗೆಗಳ ಕುರಿತಾದ ಚರ್ಚೆಯಲ್ಲಿ ಶ್ರೀನಿವಾಸನ್ ಅವರು ಸೂಕ್ಷ್ಮ ನೋಟವನ್ನು ಪ್ರತಿಪಾದಿಸಿದರು. "ಎಲ್ಲಾ ಉಚಿತ ಕೊಡುಗೆಗಳೂ ಕೆಟ್ಟದ್ದಲ್ಲ," ಎಂದ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಯೋಜನೆಗಳು ಕಾರ್ಮಿಕ ಬಲದ ಒಳಗೊಳ್ಳುವಿಕೆಯನ್ನು ಹೇಗೆ ಹೆಚ್ಚಿಸುತ್ತವೆ ಎಂಬುದರ ಕಡೆಗೆ ಬೊಟ್ಟು ಮಾಡಿದರು. "ನೀವು ಅವರಿಗೆ ಉಚಿತ ಸಾರಿಗೆ ನೀಡಿದರೆ, ಅವರು ಹತ್ತಿರದ ಪ್ರದೇಶಗಳಿಗೆ ಕೆಲಸಕ್ಕೆ ಹೋಗಿ ಬರಲು ಉತ್ತೇಜನ ನೀಡಿದಂತಾಗುತ್ತದೆ," ಎಂದು ಹೇಳಿದ ಅವರು, ಇದನ್ನು 'ಎಕನಾಮಿಕ್ ಮಲ್ಟಿಪ್ಲೈಯರ್' (ಆರ್ಥಿಕ ಗುಣಕ) ಎಂದು ವಿಶ್ಲೇಷಿಸಿದರು.

ಕಲ್ಯಾಣ ವೆಚ್ಚಗಳ ಮೇಲಿನ ಸಾರಾಸಗಟು ಟೀಕೆಗಳನ್ನು ಕಲೈಯರಸನ್ ಅವರು ತಳ್ಳಿಹಾಕಿದರು. "ಈ ಅನೇಕ ನೀತಿಗಳನ್ನು ಆರಂಭದಲ್ಲಿ ಜನಪ್ರಿಯ ಅಥವಾ ಓಲೈಕೆಯ ರಾಜಕಾರಣ ಎಂದು ಟೀಕಿಸುತ್ತಿದ್ದರು, ಆದರೆ ಕಾಲಾನಂತರದಲ್ಲಿ ಇವೇ ನೀತಿಗಳು ರಾಷ್ಟ್ರೀಯ ಮಟ್ಟದ ನೀತಿಗಳಾದವು," ಎಂದರು. ಇಂತಹ ಹಸ್ತಕ್ಷೇಪಗಳು ಬಹುಸಂಖ್ಯಾತರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ, ವಾಸ್ತವವಾಗಿ ಆರ್ಥಿಕ ಬೆಳವಣಿಗೆಗೆ ಪೂರಕವಾಗಿಯೂ ಕೆಲಸ ಮಾಡಿವೆ ಎಂದು ಅವರು ಅಭಿಪ್ರಾಯಪಟ್ಟರು.

ಹಣಕಾಸಿನ ಸುಸ್ಥಿರತೆಯ ಬಗ್ಗೆ ಮಾತನಾಡಿದ ಅವರು ಆತಂಕಕಾರಿ ವರದಿಗಳನ್ನು “ಸಂಪೂರ್ಣ ತಪ್ಪು," ಎಂದು ತಿರಸ್ಕರಿಸಿದ ಅವರು ವಿತ್ತೀಯ ಕೊರತೆಯನ್ನು ಸರಿಯಾದ ಹಿನ್ನೆಲೆಯಲ್ಲಿ ನೋಡಬೇಕು ಕೆಲವು ಮಿತಿಗಳನ್ನು ಗೌರವಿಸುವವರೆಗೆ, ಆರ್ಥಿಕತೆಗೆ ಸ್ವಲ್ಪ ಮಟ್ಟಿನ ವಿತ್ತೀಯ ಕೊರತೆ ಒಳ್ಳೆಯದೇ," ಎಂಬ ವಾದವನ್ನು ಅವರು ಮುಂದಿಟ್ಟರು.

ನಿರಂತರ ಅನುಸರಣೆಯ ಫಲ

ಈ ಮಾದರಿಯು ಕೇವಲ ಯಾವುದೋ ಒಂದು ಸರ್ಕಾರದ ಫಲಿತಾಂಶವಲ್ಲ, ಬದಲಿಗೆ ದಶಕಗಳ ಕಾಲದ ನೀತಿಗಳನ್ನು ನಿರಂತರವಾಗಿ ಅನುಸರಿಸಿದ್ದರ ಫಲವಾಗಿದೆ ಎಂಬ ಅಭಿಪ್ರಾಯ ಇಬ್ಬರದ್ದೂ ಆಗಿತ್ತು. ಹಿಂದಿನ ಸರ್ಕಾರಗಳು ರೂಪಿಸಿದ ಯೋಜನೆಗಳನ್ನು ನಂತರ ಬಂದ ಆಡಳಿತಗಳು ಹೇಗೆ ವಿಸ್ತರಿಸಿದವು ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುತ್ತಲೇ ಕಲ್ಯಾಣ ಕಾರ್ಯಕ್ರಮಗಳನ್ನು ಹೇಗೆ ಮುಂದುವರಿಸಿದವು ಎಂಬುದನ್ನು ಶ್ರೀನಿವಾಸನ್ ಅವರು ವಿವರಿಸಿದರು.

ಭವಿಷ್ಯದ ದೃಷ್ಟಿಯಿಂದ ಎದುರಾಗಬಹುದಾದ ಸವಾಲುಗಳನ್ನು ಗುರುತಿಸುವ ಪ್ರಯತ್ನವನ್ನು ಕಲೈಯರಸನ್ ಅವರು ಮಾಡಿದರು. “ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ಸಾಲದು; ಅವರು ಯಾವ ರೀತಿಯ ಕೌಶಲಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂಬುದು ಅಷ್ಟೇ ಮುಖ್ಯ," ಎಂದ ಅವರು, ಉದ್ಯೋಗಾವಕಾಶ ಮತ್ತು ತಾಂತ್ರಿಕ ಬದಲಾವಣೆಗಳನ್ನು ಈ ಮಾದರಿಯ ಮುಂದಿನ ಪ್ರಮುಖ ಸವಾಲುಗಳೆಂದು ಪಟ್ಟಿ ಮಾಡಿದರು.

ತಮಿಳುನಾಡು ಚುನಾವಣೆಯತ್ತ ಮುಖ ಮಾಡಿರುವ ಈ ಸಮಯದಲ್ಲಿ, 'ದ್ರಾವಿಡ ಮಾದರಿ'ಯು ಕೇವಲ ಒಂದು ರಾಜಕೀಯ ಹಕ್ಕೊತ್ತಾಯವಾಗಿ ಉಳಿಯದೆ, ನಿರಂತರವಾಗಿ ವಿಕಸನಗೊಳ್ಳುತ್ತಿರುವ ಒಂದು ನೀತಿ ಚೌಕಟ್ಟಾಗಿಯೂ ಗುರುತಿಸಿಕೊಂಡಿದೆ. ಈ ಮಾದರಿಯ ಭವಿಷ್ಯವು ಹೊಸ ಆರ್ಥಿಕ ವಾಸ್ತವಗಳಿಗೆ ಎಷ್ಟು ಪರಿಣಾಮಕಾರಿಯಾಗಿ ಹೊಂದಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

Read More
Next Story