
ಮಣಿಪುರ: ಅರಾಜಕತೆ ಅನವರತ- ವರುಷ ಮೂರು ಕಳೆದರೂ ಶಾಂತಿಗಾಗಿ ಕನವರಿಕೆ ನಿರಂತರ
ಶಾಂತಿ ಎನ್ನುವುದು ಒಂದು ಸ್ಥಾನಕ್ಕಾಗಿ ನಡೆಸುವ ಯುದ್ಧ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಲೇ ಶಾಂತಿಯ ಮುಂದುವರಿಯಬೇಕು. ಕೆಲವೇ ದಿನಗಳ ಹಿಂದೆ ನಡೆದ ರಾಕೆಟ್ ದಾಳಿ ಎರಡು ಎಳೆಯ ಜೀವಗಳನ್ನು ಕಸಿದಿರುವುದಕ್ಕೆ ಪ್ರತಿಭಟನೆಯೊಂದೇ ಉತ್ತರವಲ್ಲ.
ಮಣಿಪುರವನ್ನು ಛಿದ್ರ ಛಿದ್ರಗೊಳಿಸಿದ ಜನಾಂಗೀಯ ಕಲಹಕ್ಕೆ ಮೂರು ವರ್ಷ ತುಂಬುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ಅಂದರೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಯುಮ್ನಮ್ ಖೇಮ್‌ಚಂದ್ ಸಿಂಗ್ ಅವರು ಲುಂಗ್ತಾಬಲ್ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತ ಒಂದು ಆಘಾತಕಾರಿ ಆರೋಪ ಮಾಡಿದರು.
ಏಪ್ರಿಲ್ ಏಳರಂದು ಮಣಿಪುರದ ಟ್ರೊಂಗ್ಲಾವೊಬಿ ಗ್ರಾಮದಲ್ಲಿ ಐದು ವರ್ಷದ ಪುಟ್ಟ ಹುಡುಗ ಹಾಗೂ ಐದು ತಿಂಗಳ ಎಳೆಯ ಹೆಣ್ಣುಮಗುವನ್ನು ಬಲಿಪಡೆದ ಭೀಕರ ರಾಕೆಟ್ ದಾಳಿಯ ಹಿಂದೆ ರಾಜ್ಯವನ್ನು ಅಸ್ಥಿರಗೊಳಿಸಲು ಹಾಗೂ ಈಗ ಚಾಲ್ತಿಯಲ್ಲಿರುವ ಶಾಂತಿ ಪ್ರಯತ್ನಗಳಿಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿರುವ ಗುಂಪುಗಳ ಕೈವಾಡವಾಗಿದೆ, ಇದನ್ನು ಕೇವಲ ಅನಿರೀಕ್ಷಿತ ಹಿಂಸಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಅವರ ಆರೋಪವಾಗಿತ್ತು.
“ಒಂದು ಜನಪ್ರಿಯ ಸರ್ಕಾರ ರಚನೆಯಾಗುವುದನ್ನು ಇಷ್ಟಪಡದವರು ಅಥವಾ ರಾಜ್ಯದಲ್ಲಿ ಸದಾ ಅರಾಜಕತೆ ಸೃಷ್ಟಿಸಲು ಬಯಸುವವರ ಕುಮ್ಮುಕ್ಕು ಈ ಘಟನೆಯ ಹಿಂದೆ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂಬುದು ನಮ್ಮ ನಂಬಿಕೆ,” ಎಂದು ಮುಖ್ಯಮಂತ್ರಿ ಹೇಳಿದ್ದರು.
ಸುಮಾರು ಒಂದು ವರ್ಷದ ರಾಷ್ಟ್ರಪತಿ ಆಡಳಿತದ ಬಳಿಕ 2026ರ ಫೆಬ್ರುವರಿ 4ರಂದು ಅಧಿಕಾರ ವಹಿಸಿಕೊಂಡ ನಾಯಕನ ಈ ಸಾರ್ವಜನಿಕ ಹೇಳಿಕೆಯು ಮಣಿಪುರದ ಇಂದಿನ ದುರಂತಮಯ ಸ್ಥಿತಿಗೆ ಕನ್ನಡಿ ಹಿಡಿದಂತಿತ್ತು. ರಾಜ್ಯದಲ್ಲಿ ರಾಜಕೀಯ ಸ್ಥಿರತೆ ಮರಳುತ್ತಿರುವ ಹೊತ್ತಿನಲ್ಲಿ ಮತ್ತು ಇನ್ನೇನು ಶಾಂತಿಯ ಪಯಣ ಆರಂಭವಾಯಿತು ಎಂದುಕೊಳ್ಳುವ ಹೊತ್ತಿನಲ್ಲಿಯೇ ಸಶಸ್ತ್ರ ಗುಂಪುಗಳು ಅದನ್ನು ನಾಶಮಾಡುವ ಉದ್ದೇಶವನ್ನು ಹೊಂದಿದಂತೆ ಕಾಣುತ್ತಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಹಿಂಸಾಚಾರ ಮತ್ತು ಉದ್ವಿಗ್ನತೆಯ ಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೂ ಒಡಹುಟ್ಟಿದ ಇಬ್ಬರು ಅಪ್ರಾಪ್ತರನ್ನು ಆಪೋಶನ ತೆಗೆದುಕೊಂಡ ಟ್ರೊಂಗ್ಲಾವೊಬಿ ದಾಳಿ ಮಣಿಪುರ ಬಿಕ್ಕಟ್ಟು ಅತ್ಯಂತ ಅಪಾಯಕಾರಿ ಘಟ್ಟವನ್ನು ತಲುಪಿದಂತೆ ಕಾಣುತ್ತಿದೆ. ʼಸೇನಾ ಭಯೋತ್ಪಾದನೆಯ ಮೂಲಕ ಶಾಂತಿ ಪ್ರಯತ್ನಗಳಿಗೆ ಅಡ್ಡಿ ಉಂಟು ಮಾಡುವ ಉದ್ದೇಶಪೂರ್ವಕ ಅಭಿಯಾನ,ʼ ಎಂಬುದು ಮುಖ್ಯಮಂತ್ರಿ ಖೇಮ್‌ಚಂದ್ ಸಿಂಗ್ ಅವರ ಆರೋಪವಾಗಿತ್ತು.
ಮುಖ್ಯಮಂತ್ರಿಯವರ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಯಾಕೆಂದರೆ ಇದು ಹಿಂಸಾಚಾರಕ್ಕಿರುವ ಅರ್ಥವನ್ನೇ ಬದಲಿಸಿಬಿಡುತ್ತದೆ. ಇದು ಕೇವಲ ಆಕಸ್ಮಿಕ ಜನಾಂಗೀಯ ಆಕ್ರೋಶ ಎಂಬುದಕ್ಕಿಂತ ಹೆಚ್ಚಾಗಿ ವ್ಯವಸ್ಥಿತ ರಾಜಕೀಯ ವಿದ್ವಂಸಕ ಕೃತ್ಯ ಎಂಬಂತೆ ಬದಲಿಸುತ್ತದೆ. ಅವರು ಟ್ರೊಂಗ್ಲಾವೊಬಿ ಹತ್ಯೆಗಳನ್ನು ಒಂದು ನಿರ್ದಿಷ್ಟ ರಾಜಕೀಯ ಕಾಲಘಟ್ಟದ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ರಾಜೀನಾಮೆಯ ಬಳಿಕ 2025ರ ಫೆಬ್ರುವರಿ 13ರಿಂದ ಮಣಿಪುರ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತ್ತು. ಕೇಂದ್ರಾಡಳಿತವನ್ನು ಹಿಂದಕ್ಕೆ ಪಡೆದು ಸಾರ್ವಜನಿಕರ ಧ್ವನಿಗೆ ತಕ್ಕಂತೆ ಜನಪ್ರಿಯ ಸರ್ಕಾರವನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿತ್ತು ಎಂಬುದನ್ನು ಅವರು ಪ್ರತಿಪಾದಿಸಿದರು.
ರಾಜ್ಯದ ನೇತೃತ್ವ ವಹಿಸುವ ಈ ಹುದ್ದೆಯ ಆಕಾಂಕ್ಷಿಯೇ ತಾವಾಗಿರಲಿಲ್ಲ ಎಂದು ಹೇಳಿರುವ ಯುಮ್ನಮ್ ಖೇಮ್‌ಚಂದ್ ಅವರು, ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆಯೇ ತಮಗಿರಲಿಲ್ಲ ಎಂದು ತಿಳಿಸಿದ್ದಾರೆ. ಶಾಸಕರು ಹಾಗೂ ನಾಗರಿಕ ಸಮಾಜದೊಂದಿಗೆ ವ್ಯಾಪಕವಾಗಿ ತೊಡಗಿಸಿಕೊಳ್ಳುವುದು ಮತ್ತು ಜಿರಿಬಾಮ್, ಸೇನಾಪತಿ, ಕಾಂಗ್‌ಪೋಕ್ಪಿ ಮತ್ತು ಉಖ್ರುಲ್ ಸೇರಿದಂತೆ ಗುಡ್ಡಗಾಡು ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಶಾಂತಿಯ ಪಯಣದತ್ತ ಹೆಜ್ಜೆ ಹಾಕುವುದು ತಮ್ಮ ಸರ್ಕಾರದ ಇರಾದೆ ಎಂದು ಅವರು ತಿಳಿಸಿದ್ದಾರೆ. ಅವರು ಜಿರಿಬಾಮ್ ಭೇಟಿಯ ಕೆಲ ಕಾಲದ ಬಳಿಕ ಟ್ರೊಂಗ್ಲಾವೊಬಿ ಸ್ಫೋಟ ಸಂಭವಿಸಿತ್ತು. ಇದನ್ನವರು ʼಅಸ್ಥಿರವಾಗಿರುವ ಶಾಂತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ದುರದೃಷ್ಟಕರ ಪ್ರಯತ್ನʼ ಎಂದು ಕರೆದಿದ್ದಾರೆ.
ಮುನ್ಸೂಚನೆ ನೀಡಿದ ಪತ್ರ
ಇದನ್ನು ಕೇವಲ ರಾಜಕೀಯ ವಾಕ್ಚಾತುರ್ಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಕೆಲವು ತಿಂಗಳುಗಳ ಹಿಂದೆ ನಾಗರಿಕ ಸಮಾಜಗಳ ಒಕ್ಕೂಟ (FOCS) ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ ನೀಡಿದ ಗಹನ ವಿಶ್ಲೇಷಣೆಯೊಂದಿಗೆ ತಾಳೆಯಾಗುತ್ತದೆ. ಮೇ 27, 2025 ರಂದು ಬರೆದ ಪತ್ರದಲ್ಲಿ, FOCS ಈ ಸಂಘರ್ಷವು ಇನ್ನು ಮುಂದೆ ಕೇವಲ ನಾಗರಿಕ ಅಶಾಂತಿಯಾಗಿ ಉಳಿದಿಲ್ಲ, ಬದಲಿಗೆ "ಗ್ರೇ-ಜೋನ್ ವಾರ್‌ಫೇರ್" ತಂತ್ರಗಳನ್ನು ಬಳಸುವ ಸಂಘಟಿತ ಮಿಲಿಟರಿ ಅಭಿಯಾನವಾಗಿದೆ ಎಂದು ಎಚ್ಚರಿಸಿತ್ತು. ಈ ಸಂಘಟಿತ ಹಿಂಸಾಚಾರವು ಈಗ ಒಂದು ಕಾರ್ಯತಂತ್ರದ ಉದ್ದೇಶವನ್ನು ಹೊಂದಿದೆ ಎಂದು ಮುಖ್ಯಮಂತ್ರಿಯವರ ಹೇಳಿಕೆ ಸೂಚಿಸುತ್ತದೆ: ಅಂದರೆ, ಸಮುದಾಯಗಳ ನಡುವೆ ಸಮನ್ವಯವನ್ನು ತರಲು ಯಶಸ್ವಿಯಾಗಬಹುದಾದ, ಪ್ರಜಾಸತ್ತಾತ್ಮಕವಾಗಿ ಜವಾಬ್ದಾರಿಯುತವಾದ ಸರ್ಕಾರವು ಬಲಗೊಳ್ಳುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.
ಹಿಂಸಾಚಾರದ ವಿಕಸನ
ಕಳೆದ ಮೂರು ವರ್ಷಗಳಿಂದ ಏನಾಗುತ್ತಿದೆ ಮತ್ತು ಸದುದ್ದೇಶವುಳ್ಳ ಅಧಿಕಾರಿಗಳು ಎಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, FOCS ದಾಖಲಿಸಿರುವ ಈ ಪಥವನ್ನು ಪುನರ್ವಿಮರ್ಶಿಸಬೇಕು. ಒಕ್ಕೂಟವು ಹಿಂಸಾಚಾರದ ಭಯಾನಕ ವಿಕಸನವನ್ನು ಈ ಕೆಳಗಿನಂತೆ ವಿವರಿಸಿದೆ:
ಮೇ 2023: ಗಲಭೆ ಮತ್ತು ಅಗ್ನಿಸ್ಪರ್ಶ ಸ್ವರೂಪದಲ್ಲಿ ನಾಗರಿಕ ಅಶಾಂತಿಯ ಆಸ್ಫೋಟ.
ಮೇ 22, 2023 ರ ನಂತರ: ಸಂಘರ್ಷವು “ಗುಂಪು ಹಿಂಸಾಚಾರದಿಂದ ಹೆಚ್ಚು ಸಂಘಟಿತ ಮತ್ತು ಮಿಲಿಟರಿ ಸ್ವರೂಪದ ಮುಖಾಮುಖಿಯಾಗಿ ರೂಪಾಂತರಗೊಂಡಿತು." ಇದು ಭೂಪ್ರದೇಶವನ್ನು ಗುರುತಿಸುವುದು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ತಾತ್ಕಾಲಿಕ ಬಂಕರ್‌ಗಳು ಮತ್ತು ಕೋಟೆಗಳ ನಿರ್ಮಾಣದಂತಹ ಸಾಂಪ್ರದಾಯಿಕ ಯುದ್ಧ ತಂತ್ರಗಳಿಂದ ಕೂಡಿದೆ.
ಸೆಪ್ಟೆಂಬರ್ 2024: ಕೌತ್ರುಕ್ ಮತ್ತು ಕಡಂಗ್‌ಬಾಂಡ್‌ನಲ್ಲಿ ನಡೆದ ಡ್ರೋನ್ ಬಾಂಬ್ ದಾಳಿಗಳು—ನಂತರ ಇದನ್ನು ಎನ್‌ಐಎ ದೃಢಪಡಿಸಿತು—ಇದನ್ನು ಸಂಘರ್ಷದ ಒಂದು "ತಿರುವು" ಎಂದು ಗುರುತಿಸಲ್ಪಟ್ಟವು.
ನೈತಿಕ ದೃಷ್ಟಿಕೋನ ಎಷ್ಟರ ಮಟ್ಟಿಗೆ ವಿರೂಪಗೊಂಡಿದೆ ಎಂಬುದನ್ನು ಈ ಅಧ್ಯಯನದಿಂದ ಹೊರಹೊಮ್ಮಿದ ಸಂಶೋಧನೆಗಳಿಂದ ವ್ಯಕ್ತವಾಗಿದೆ. ಇಲ್ಲಿ 'ದಮನಕಾರಿ ಮತ್ತು ದಮನಿತ' ಎಂಬ ಸವಕಲು ಮಾದರಿಯ ಹೆಸರಿನಲ್ಲಿ, ಒಂದು ಸಮುದಾಯದ ಹಿಂಸಾಚಾರವನ್ನು ವ್ಯವಸ್ಥಿತವಾಗಿ ಅಷ್ಟೇನೂ ಮಹತ್ವದ್ದಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ, ರಾಷ್ಟ್ರೀಯ ಮಾಧ್ಯಮಗಳು ಕೂಡ ಪರಸ್ಪರ ನಡೆದ ಹಿಂಸಾಚಾರವನ್ನು ನಿರ್ಲಕ್ಷಿಸಿ, ಅಸಮಾನವಾಗಿ ಒಂದು ಸಮುದಾಯವನ್ನು ಸಂತ್ರಸ್ತರೆಂದೂ ಮತ್ತು ಇನ್ನೊಂದನ್ನು ಅಪರಾಧಿಗಳೆಂದೂ ಬಿಂಬಿಸಿವೆ. ಈ ಅಧ್ಯಯನವು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (EGI) ವರದಿಯನ್ನು ಕೂಡ ಟೀಕಿಸಿರುವುದು ವಿಶೇಷ. ಗಿಲ್ಡ್ "ತಪ್ಪು ಮಾಹಿತಿ ನೀಡುವುದರಲ್ಲಿ ಶಾಮೀಲಾಗಿದೆ" ಮತ್ತು "ನವದೆಹಲಿಯ ಅಸ್ಪಷ್ಟ ನಿಲುವಿಗೆ ಪೂರಕವಾಗಿದೆ" ಎಂದು ಕರೆದಿದೆ.
ಇದೇನೂ ಚಿಕ್ಕ ವಿಷಯವೆಂದು ತಳ್ಳಿ ಹಾಕುವಂತಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಒಂದು ಸಮುದಾಯವನ್ನು ಶಾಶ್ವತ ಸಂತ್ರಸ್ತರೆಂದೂ ಮತ್ತು ಇನ್ನೊಂದನ್ನು ಶಾಶ್ವತ ಆಕ್ರಮಣಕಾರರೆಂದೂ ಬಿಂಬಿಸಿದಾಗ, ಖಂಡಿಸಬೇಕಾದ ಸರ್ಕಾರವು ಕೂಡ ಅಂತಹದೇ "ಹಳೆಯ ನೈತಿಕ ದೃಷ್ಟಿಕೋನವನ್ನು" ಅಳವಡಿಸಿಕೊಳ್ಳುವಂತೆ ರಾಜಕೀಯ ಒತ್ತಡವನ್ನು ಸೃಷ್ಟಿಸುತ್ತದೆ. ದೇಶದ ಪ್ರಭಾವಿ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳಿಂದ "ಸಂತ್ರಸ್ತರು" ಎಂಬ ಪಾವಿತ್ರ್ಯದ ಲೇಪನವನ್ನು ಹೊತ್ತ ಸಮುದಾಯದ ಒಳಗೇ ಇರುವ ಸಶಸ್ತ್ರ ಗುಂಪುಗಳ ವಿರುದ್ಧ ಆಕ್ರಮಣಕಾರಿ ಬಂಡಾಯ ವಿರೋಧಿ ಕಾರ್ಯಾಚರಣೆ ನಡೆಸುವುದು ಅಸಾಧ್ಯವಾಗುತ್ತದೆ.
ಕಾರ್ಯಾಚರಣೆ ತಂತ್ರದ ವೈಫಲ್ಯ
ಒಗ್ಗಟ್ಟು ಕಾಯ್ದುಕೊಳ್ಳಬೇಕು ಎಂಬ ಮುಖ್ಯಮಂತ್ರಿ ಖೇಮ್‌ಚಂದ್ ಅವರ ಕರೆ ಮತ್ತು "ನಾವು ಯಾರು ಹೊಣೆಗಾರರೋ ಅವರನ್ನು ಬಂಧಿಸುತ್ತೇವೆ, ಅವರಿಗೆ ಪಲಾಯನ ಮಾಡಲು ಜಾಗವಿಲ್ಲ" ಎಂಬ ಭರವಸೆಯೇನೋ ಉದಾತ್ತವಾಗಿದೆ. ಆದರೆ, ಕಾರ್ಯತಂತ್ರದಲ್ಲಿ ಸಮಗ್ರ ಬದಲಾವಣೆ ಮಾಡಿಕೊಳ್ಳದೇ ಹೋದರೆ ಇವು ಅಪೂರ್ಣವಾಗಬಹುದು ಎಂಬ ಆತಂಕವಿದೆ. ಈ ಬಗ್ಗೆ ವ್ಯಕ್ತವಾಗಿರುವ ಟೀಕೆಗಳು ಕೂಡ ಅದನ್ನೇ ಸೂಚಿಸುತ್ತಿವೆ. "ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆ" ಮತ್ತು "ಪೂರ್ವಭಾವಿ ಕಾರ್ಯತಂತ್ರಗಳ ಬದಲಿಗೆ ಕೇವಲ ಪ್ರತಿಕ್ರಿಯಾತ್ಮಕ ಕ್ರಮಗಳು" ದೊಡ್ಡ ನ್ಯೂನತೆಗಳಾಗಿವೆ ಎಂದು ಈಗಾಗಲೇ ಎಚ್ಚರಿಸಲಾಗಿದೆ.
ಟ್ರೊಂಗ್ಲಾವೊಬಿ ದಾಳಿಯ ತಕ್ಷಣದ ಪರಿಣಾಮಗಳು ಇದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಕಣಿವೆಯ ಉದ್ದಗಲಕ್ಕೂ ಭದ್ರತೆಯನ್ನು ಗಣನೀಯವಾಗಿ ಬಲಪಡಿಸಲಾಗಿದೆ ಎಂಬ ವರದಿಗಳ ನಂತರವೂ ಅನೇಕರು ಇಂತಹ ಕ್ರಮ ಕೈಗೊಳ್ಳಲು ಇಷ್ಟು ಕಾಲ ಬೇಕಾಯಿತೇ ಎಂಬ ಆಕ್ರೋಶ ವ್ಯಕ್ತವಾಗಿದೆ. ಕ್ರುದ್ಧ ಗುಂಪುಗಳು ನಡೆಸಿದ ಮೆರವಣಿಗೆಗಳು ಹಿಂಸಾಚಾರಕ್ಕೆ ತಿರುಗಿದವು. ಅನೇಕ ಕಡೆ ಉದ್ವಿಗ್ನತೆಯನ್ನು ಸೃಷ್ಟಿಸಿದವು. ನಾಗರಿಕರು ಮತ್ತು ಕೇಂದ್ರ-ರಾಜ್ಯ ಜಂಟಿ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಒಂದು ವಾರಕ್ಕೂ ಹೆಚ್ಚು ಕಾಲ ಕಣಿವೆಯು ರಣರಂಗವಾಗಿ ಮಾರ್ಪಟ್ಟಿತು. ಆದಾಗ್ಯೂ, ಸಾರ್ವಜನಿಕರ ಈ ಆಕ್ರೋಶವು ಮಣಿಪುರದ ಆದ್ಯತೆಗಳ ಬಗ್ಗೆ ಸ್ಪಷ್ಟವಾದ ದಿಕ್ಸೂಚಿಯನ್ನು ನೀಡುವಲ್ಲಿ ವಿಫಲವಾಯಿತು. ಈ ಮಾದರಿ ಪುನರಾವರ್ತನೆಯಾಗುತ್ತಲೇ ಇದೆ: ಸಶಸ್ತ್ರ ವ್ಯಕ್ತಿಗಳು ದಾಳಿ ಮಾಡುತ್ತಾರೆ, ನಾಗರಿಕರು ಸಾಯುತ್ತಾರೆ, ನಂತರ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತದೆ ಮತ್ತು ಭದ್ರತಾ ಪಡೆಗಳ ಪ್ರತಿಕ್ರಿಯೆಯು ಕೇವಲ ಘಟನೆ ನಡೆದ ನಂತರದ ಕ್ರಮವಾಗಿ ಮಾತ್ರ ಉಳಿಯುತ್ತದೆ.
"ರಾಜ್ಯದ ಎಲ್ಲಾ ಸಮುದಾಯಗಳ ಜನರು ಶಾಂತಿ ಮತ್ತು ಸ್ಥಿರತೆ ಸ್ಥಾಪಿಸಬೇಕು ಎಂಬ ಬಲವಾದ ಬಯಕೆ ವ್ಯಕ್ತಪಡಿಸಿದ್ದಾರೆ" ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿಂಗ್ ಈ ಸವಾಲನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. "ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ನಾಗರಿಕರು ಒಗ್ಗಟ್ಟಿನಿಂದ ಮತ್ತು ಎಚ್ಚರಿಕೆಯಿಂದ ಇರಬೇಕು" ಎಂದು ಅವರು ಒತ್ತಾಯಿಸಿದರು. ಆದರೆ ಸರ್ಕಾರವು "ಅಪಾಯಕ್ಕೆ ಭಯಪಡುವ ಧೋರಣೆ"ಯನ್ನು ಬಿಟ್ಟು, ಉಗ್ರಗಾಮಿ ಜಾಲಗಳನ್ನು ಧ್ವಂಸಗೊಳಿಸಲು ಮತ್ತು ಗಡಿ ವಲಯಗಳನ್ನು ಸುರಕ್ಷಿತಗೊಳಿಸಲು "ಏಕೀಕೃತ, ಗುಪ್ತಚರ ಆಧಾರಿತ ಕಾರ್ಯಾಚರಣೆಗಳ" ಕಡೆಗೆ ಸಾಗಬೇಕು. ಶಾಂತಿಯನ್ನು ಕೇವಲ ಜಾಗರೂಕತೆಯಿಂದ ರಕ್ಷಿಸಲು ಸಾಧ್ಯವಿಲ್ಲ; ಐದು ತಿಂಗಳ ಶಿಶುಗಳ ವಿರುದ್ಧ ರಾಕೆಟ್ ಮತ್ತು ಕ್ಷಿಪಣಿಗಳನ್ನು ಬಳಸುವವರನ್ನು ಆಕ್ರಮಣಕಾರಿಯಾಗಿ ಮತ್ತು ಪೂರ್ವಭಾವಿಯಾಗಿ ನಿರ್ಮೂಲನೆ ಮಾಡುವ ಅಗತ್ಯವಿದೆ.
ಶಾಂತಿಯ ಹಾದಿ ಸಂಕೀರ್ಣ
2023ರ ಮೇ 3ರ ಘಟನೆಯ ಬಳಿಕ ಮೂರು ವರ್ಷಗಳ ನಂತರ, ಮಣಿಪುರವು ಪ್ರಪಾತದ ಅಂಚಿನಲ್ಲಿ ನಿಂತಿದೆ. ತನ್ನ ಕ್ರಮಗಳನ್ನು ಹಾಳುಗೆಡುವ ಜನರ ಬಗ್ಗೆ ಮುಖ್ಯಮಂತ್ರಿಗಳಿಗೆ ತಕ್ಕಮಟ್ಟಿನ ತಿಳುವಳಿಕೆ ಇದ್ದಂತೆ ತೋರುತ್ತಿದೆ. ಅರಾಜಕತೆಯಿಂದ ಪ್ರಯೋಜನ ಪಡೆಯುವ ಮತ್ತು ಜನಪ್ರಿಯ ಸರ್ಕಾರದ ಶಾಂತಿ ಉಪಕ್ರಮವನ್ನು ಬೆದರಿಕೆ ಎಂದು ಪರಿಗಣಿಸುವ "ಶಕ್ತಿಗಳನ್ನು" ಅವರು ಗುರುತಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ನೆನಪಿರಲಿ, ಯಾರನ್ನಾದರೂ ಕೇವಲ "ಗುರುತಿಸುವುದು" ಅಥವಾ "ಹೆಸರಿಸುವ" ಕೆಲಸದಿಂದ ಅವರನ್ನು ಹತ್ತಿಕ್ಕಿದಂತೆ ಆಗುವುದಿಲ್ಲ. ಇದು ಅವರ ಮುಂದಿನ ಹಾದಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದರೆ ಅಚ್ಚರಿಯಿಲ್ಲ.
ಮುಂದಿನ ಹಾದಿ ಸ್ಪಷ್ಟವಾಗಬೇಕಾದರೆ ಕಾರ್ಯತಂತ್ರದಲ್ಲಿ ಸಮಗ್ರ ಬದಲಾವಣೆ ಕಾಣುವ ಅಗತ್ಯವಿದೆ; ಘಟನೆ ನಡೆದ ನಂತರ ಪ್ರತಿಕ್ರಿಯಿಸುವ ಬದಲು, ಸಶಸ್ತ್ರ ಸಾಮರ್ಥ್ಯಗಳನ್ನು ಧ್ವಂಸಗೊಳಿಸಲು ಪೂರ್ವಭಾವಿ ಮತ್ತು ಏಕೀಕೃತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವಾಸ್ತವಿಕ ವಿಧಾನಗಳನ್ನು ಅಳವಡಿಸಿಕೊಳ್ಳದಂತೆ ತಡೆದಿರುವ "ಹಳೆಯ ಸಂತ್ರಸ್ತ ಭಾವದ ಚೌಕಟ್ಟನ್ನು" ಕೇಂದ್ರ ಸರ್ಕಾರವು ತಿರಸ್ಕರಿಸಬೇಕು. ಸಾಮೂಹಿಕ ಸಿದ್ಧಾಂತಗಳ ಮುಖವಾಡ ಧರಿಸಿ ಹರಡಲಾಗುತ್ತಿರುವ ತಪ್ಪು ಮಾಹಿತಿ ಅಥವಾ ಅಂತ್ಯವಿಲ್ಲದ ಆರೋಪ-ಪ್ರತ್ಯಾರೋಪಗಳ ಮೂಲಕ ನಡೆಯುತ್ತಿರುವ "ಜ್ಞಾನಾತ್ಮಕ ಅನ್ಯಾಯವನ್ನು" ರಾಜ್ಯ ಸರ್ಕಾರ ಮತ್ತು ನಾಗರಿಕ ಸಮಾಜವು ಸಕ್ರಿಯವಾಗಿ ಎದುರಿಸಬೇಕು.
"ಶಾಂತಿಯ ಪಯಣ" ಮುಂದುವರಿಯಬೇಕು, ಆದರೆ ಶಾಂತಿ ಎಂಬುದು ಒಂದು ನಿರ್ಣಾಯಕ ಹೋರಾಟ ಎಂಬ ಅರಿವಿನೊಂದಿಗೆ ಅದು ಸಾಗಬೇಕು. ಟ್ರೋಂಗ್ಲಾಬಿಯ ಇಬ್ಬರು ಮಕ್ಕಳ ರಕ್ತವು ಕೇವಲ ದುಃಖ ಮತ್ತು ಪ್ರತಿಭಟನೆಯನ್ನು ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದನ್ನು ಬಯಸುತ್ತಿದೆ. ಇದು ಇನ್ನು ಮುಂದೆ ಕೇವಲ ಜನಾಂಗೀಯ ದಂಗೆ ಅಥವಾ ನಾಗರಿಕ ಅಶಾಂತಿಯಲ್ಲ ಎಂಬುವುದನ್ನು ಮಣಿಪುರ ಸರ್ಕಾರ ಮತ್ತು ಭಾರತದ ಕೇಂದ್ರ ನಾಯಕತ್ವವು ಅಂತಿಮವಾಗಿ ಗುರುತಿಸಬೇಕೆಂದು ಅದು ಒತ್ತಾಯಿಸುತ್ತಿದೆ. ಇದು ಶಾಂತಿಯನ್ನು ತಡೆಯಲು ನಡೆಯುತ್ತಿರುವ ಒಂದು ಸಶಸ್ತ್ರ ಅಭಿಯಾನ. ರಾಜ್ಯದ ಪ್ರತಿಯೊಬ್ಬ ನಾಗರಿಕನ ಹಕ್ಕಿಗಾಗಿ ತಾನು ಯಾವುದರ ವಿರುದ್ಧ ಹೋರಾಡುತ್ತಿದ್ದೇನೆ ಎಂಬುದನ್ನು ಅರಿತುಕೊಂಡಿರುವ ಒಂದು ಸರ್ಕಾರವು, ಇದನ್ನು ಪೂರ್ವಭಾವಿ ಶಕ್ತಿಯೊಂದಿಗೆ ಎದುರಿಸಬೇಕಾಗಿದೆ.

