
ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಎಂಬ ಡಬಲ್ ಸ್ಟ್ರೋಕ್: ಬಿಜೆಪಿ ವಿಜಯಯಾತ್ರೆಗೆ ಸಿದ್ಧತೆಯೇ?
ಸಂಸತ್ತು ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಎರಡನ್ನೂ ಜೊತೆಯಲ್ಲಿ ಚರ್ಚೆಗೆ ಕೈಗೆತ್ತಿಕೊಂಡಿರುವುದು ವಿರೋಧ ಪಕ್ಷಗಳ ಕಳವಳಕ್ಕೆ ಕಾರಣವಾಗಿದೆ.
ಮಹಿಳಾ ಮೀಸಲಾತಿಯ ವಿಚಾರದಲ್ಲಿ ಕೇಂದ್ರ ಸರ್ಕಾರವು ಒಂದು ಉತ್ತೇಜನಕಾರಿಯಾದ ಹೇಳಿಕೆಯನ್ನು ನೀಡಿದೆ. ಇದು ಉತ್ತರ ಭಾರತದ ರಾಜ್ಯಗಳ ರಾಜಕೀಯ ಸಮತೋಲನವನ್ನೇ ಅಡಿಮೇಲು ಮಾಡಬಲ್ಲ ʼಕ್ಷೇತ್ರ ಮರುವಿಂಗಡಣೆʼ ಪ್ರಕ್ರಿಯೆಗೆ ವೇಗವನ್ನು ತುಂಬಲು ಮಾಡುತ್ತಿರುವ ಒಂದು ತಂತ್ರವೇ?
ತೀರಾ ತರಾತುರಿಯಲ್ಲಿ ಕರೆದ ವಿಶೇಷ ಅಧಿವೇಶನದಲ್ಲಿ ಮೂರು ಕರಡು ಮಸೂದೆಗಳನ್ನು ಮಂಡಿಸುವ ಕೇಂದ್ರ ಸರ್ಕಾರದ ಇರಾದೆಯು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಹಾಗೆ ವಿರೋಧಿಸುವವರು ಅವುಗಳನ್ನು ಮಂಡಿಸುತ್ತಿರುವ ಸಮಯ ಮತ್ತು ಉದ್ದೇಶದ ಬಗ್ಗೆ ತಕರಾರು ತೆಗೆದಿದ್ದಾರೆ.
ಈ ಪ್ರಸ್ತಾವಿತ ಬದಲಾವಣೆಗಳ ಸುತ್ತ ಹರಡಿಕೊಂಡಿರುವ ರಾಜಕೀಯ, ಪರಿಣಾಮಗಳು ಹಾಗೂ ಕಳವಳಗಳ ಬಗ್ಗೆ ವಿಶ್ಲೇಷಣೆ ನಡೆಸಲು ʼದಿ ಫೆಡರಲ್ʼ ತನ್ನ ರಾಜಕೀಯ ಸಂಪಾದಕರಾದ ಪುನೀತ್ ನಿಕೋಲಸ್ ಯಾದವ್ ಅವರೊಂದಿಗೆ ಸಂವಾದ ನಡೆಸಿದೆ.
ಕೇಂದ್ರ ಸರ್ಕಾರವು ಈಗ ಇಷ್ಟೊಂದು ಆತುರವಾಗಿ ಈ ಮಸೂದೆಗಳನ್ನು ಮಂಡಿಸುತ್ತಿರುವುದಾದರೂ ಯಾಕೆ?
ಸರ್ಕಾರದ ಈ ಕ್ರಮವು ವಿರೋಧ ಪಕ್ಷಗಳ ನಡುವೆ ಸಂಪೂರ್ಣ ಗೊಂದಲವನ್ನು ಸೃಷ್ಟಿಸುವಂತೆ ಮಾಡಿದೆ. 2023ರ ಸೆಪ್ಟೆಂಬರ್ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಘೋಷಣೆ ಮಾಡಲಾದ ಕಾಲಮಿತಿಗೆ ತಾವು ಬದ್ಧರಾಗಿದ್ದೇವೆ ಮತ್ತು ಅದರಲ್ಲಿ ಯಾವುದೇ ವಿಳಂಬವು ಇದರ ಅನುಷ್ಠಾನವನ್ನು ಇನ್ನಷ್ಟು ವಿಳಂಬಗೊಳಿಸುತ್ತದೆ ಮತ್ತು ಅದು 2029ರ ಲೋಕಸಭಾ ಚುನಾವಣೆಯ ಅವಧಿಗಿಂತ ಆಚೆಗೆ ತಳ್ಳುತ್ತದೆ ಎಂಬುದು ಕೇಂದ್ರ ಸರ್ಕಾರ ನೀಡುವ ಸಮರ್ಥನೆಯಾಗಿದೆ.
ಆದರೆ ಹಾಗೆ ಮಂಡಿಸುವ ಆ ವಾದವು ಸಾಕಷ್ಟು ಅಸಂಬದ್ಧವಾಗಿ ಕಾಣುತ್ತದೆ. 2023ರಿಂದಲೂ ಇರುವ ವಿವಾದವೇನೆಂದರೆ ಮಹಿಳಾ ಮೀಸಲಾತಿ ಕಾನೂನಿಗೆ ಯಾವುದೇ ಸ್ಪಷ್ಟ ಕಾಲಮಿತಿ ಇರಲಿಲ್ಲ ಎಂಬುದು. ಒಂದು ವೇಳೆ ಸರ್ಕಾರವು ಈ ಕಾನೂನನ್ನು 30 ತಿಂಗಳುಗಳ ಕಾಲ ಅನಿಶ್ಚಿತತೆಯಲ್ಲಿ ಇರಲು ಬಿಟ್ಟಿದ್ದರೆ ಈಗ ಕೇವಲ ಹದಿನೈದು ದಿನಗಳ ವ್ಯತ್ಯಾಸದಿಂದ ಏನಾಗುತ್ತಿತ್ತು?
ಪಶ್ಚಿಮ ಬಂಗಾಲದ ಮತನಾದ ಮುಗಿದ ಬಳಿಕ, ಅಂದರೆ ಏಪ್ರಿಲ್ 29ರ ನಂತರ ಸರ್ವಪಕ್ಷ ಸಭೆ ನಡೆಸುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತ ಬಂದಿವೆ. ಫಲಿತಾಂಶಕ್ಕಾಗಿ ಕಾಯದೇ ತಕ್ಷಣ ಚರ್ಚೆ ನಡೆಸಬಹುದು ಎಂಬುದು ಅವುಗಳ ಇರಾದೆಯಾಗಿತ್ತು. ಇಲ್ಲಿ ಮಹಿಳಾ ಮೀಸಲಾತಿಯ ವಿಚಾರದಲ್ಲಿ ಯಾರಿಗೂ ವಿರೋಧವಿಲ್ಲ. ಪ್ರತಿಯೊಬ್ಬರಿಗೂ ಆ ವಿಚಾರದಲ್ಲಿ ಸಹಮತವಿದೆ. ಆದರೆ ಅದರ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆಯನ್ನು ತರಲು ಪ್ರಯತ್ನಿಸುತ್ತಿರುವುದೇ ಇಲ್ಲಿರುವ ಅಸಲಿ ಸಮಸ್ಯೆಯಾಗಿದೆ.
ತಮಿಳು ನಾಡು ಮತ್ತು ಪಶ್ಚಿಮ ಬಂಗಾಲದಂತಹ ರಾಜ್ಯಗಳ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಸಂಪೂರ್ಣವಾಗಿ ವ್ಯಸ್ತವಾಗಿವೆ ಎಂಬುದು ಸರ್ಕಾರದ ನಂಬಿಕೆಯಾಗಿದೆ. ಜನವರಿಯಿಂದಲೇ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದರೂ ಈ ಮಸೂದೆಯ ವಿಚಾರಗಳನ್ನು ಹಂಚಿಕೊಂಡಿದ್ದು ತೀರಾ ಇತ್ತೀಚಿನ ವಿದ್ಯಮಾನ. ವ್ಯಾಪಕ ಸಮಾಲೋಚನೆ ಮಾಡುವ ಉದ್ದೇಶ ಇದ್ದಿದ್ದೇ ಹೌದಾದರೆ ಇವುಗಳನ್ನು ಮೊದಲೇ ಮಂಡಿಸಬಹುದಾಗಿತ್ತು. ಆದರೆ ಅಂತಹ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ.
ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯಿಂದ ಪ್ರತ್ಯೇಕಿಸಲು ವಿರೋಧ ಪಕ್ಷಗಳು ಹೇಗೆ ಪ್ರಯತ್ನಿಸುತ್ತಿವೆ?
ಇದುವೇ ವಿರೋಧ ಪಕ್ಷಗಳ ಮುಂದೆ ಇರುವ ಬಹುದೊಡ್ಡ ಸವಾಲು. ಇದು ಸುಮಾರು ಅರ್ಧದಷ್ಟು ಮತದಾರರಿಗೆ ಸಂಬಂಧಿಸಿದ ಸಂಗತಿಯಾದ ಕಾರಣ ಇದನ್ನು ಯಾವ ರಾಜಕೀಯ ಪಕ್ಷವೂ ವಿರೋಧಿಸುವ ಸಾಹಸ ಮಾಡಲಾರರು. ಬಹುಶಃ ಇದೇ ಕಾರಣಕ್ಕಾಗಿಯೇ ಸರ್ಕಾರ ಈಗ ಈ ಹೆಜ್ಜೆಯನ್ನು ಮುಂದಿಟ್ಟಿದೆ; ಈಗ ನಡೆಯುತ್ತಿರುವ ಚುನಾವಣೆಗಳಲ್ಲಿಯೇ ಇದರ ರಾಜಕೀಯ ಲಾಭವನ್ನು ಪಡೆದುಕೊಳ್ಳುವುದು ಅದರ ಉದ್ದೇಶವಾಗಿರಬಹುದು.
ಇದೇ ಹೊತ್ತಿನಲ್ಲಿ ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಯನ್ನು ಅದರ ಈಗಿನ ಸ್ವರೂಪದಲ್ಲಿ ಬಲವಾಗಿ ವಿರೋಧಿಸುತ್ತಿವೆ. ಸರ್ಕಾರವು ಅತ್ಯಂತ ಜಾಣ್ಮೆಯಿಂದ ಈ ಎರಡೂ ವಿಷಯಗಳನ್ನು ಒಂದಕ್ಕೊಂದು ಬೆಸೆದುಕೊಳ್ಳುವಂತೆ ಮಾಡಿದೆ. ಹಾಗೆ ಮಾಡಿರುವುದರಿಂದ ಒಂದನ್ನು ವಿರೋಧಿಸಿದರೆ ಇನ್ನೊಂದರ ಮೇಲೆ ಪರಿಣಾಮ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಹಿಂದಿನ ಶಾಸಕಾಂಗ ಪ್ರಯತ್ನಗಳಿಂದ ಮೊದಲ್ಗೊಂಡು ಈ ಕಾನೂನನ್ನು ಅಂಗೀಕರಿಸುವ ತನಕ ತಾವು ಐತಿಹಾಸಿಕವಾಗಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತಲೇ ಬಂದಿದ್ದೇವೆ ಎಂದು ವಿರೋಧ ಪಕ್ಷಗಳು ವಾದಿಸುತ್ತವೆ. ಆದರೆ ಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಮತ್ತು ಸಣ್ಣ ಪುಟ್ಟ ರಾಜ್ಯಗಳ ಪ್ರಾತಿನಿಧ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀಡಬಹುದು ಎಂಬುದು ಅವುಗಳ ಆತಂಕವಾಗಿದೆ.
ಸೈದ್ಧಾಂತಿಕವಾಗಿ ಈ ಎರಡು ಪ್ರಮುಖ ವಿಷಯಗಳನ್ನು ಪ್ರತ್ಯೇಕಿಸುವುದು ಸುಲಭ. ಆದರೆ ಸಂಸತ್ತಿನಲ್ಲಿ ಇವೆರಡೂ ಒಂದೇ ಸಾಂವಿಧಾನಿಕ ತಿದ್ದುಪಡಿಯ ಭಾಗವಾಗಿರುವಾಗ ಅವುಗಳನ್ನು ಬೇರ್ಪಡಿಸುವುದು ಅತ್ಯಂತ ಕಷ್ಟದ ಕೆಲಸ.
ವಿರೋಧ ಪಕ್ಷಗಳು ಒಂದಾದರೆ ಈ ಮಸೂದೆಗೆ ತಡೆಯೊಡ್ಡಲು ಸಾಧ್ಯವಿದೆಯೇ?
ಇದರ ಬಗ್ಗೆ ಚರ್ಚೆ ನಡೆಸಲು ಮತ್ತು ಒಂದು ಒಮ್ಮತದ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷದ ನಾಯಕರ ಸಭೆ ನಡೆಯುತ್ತಿದೆ. ಒಂದೇ ಶಾಸನದಲ್ಲಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತಲೇ, ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ವಿರೋಧಿಸಲು ಸಾಧ್ಯವೇ ಎಂಬುದು ಅವರ ಮುಂದಿರುವ ಪ್ರಶ್ನೆಯಾಗಿದೆ.
ಹಾಗೊಂದು ವೇಳೆ ಅವರು ಮಸೂದೆಯನ್ನು ವಿರೋಧಿಸಿದರೆ, ಮೀಸಲಾತಿಯ ಅಂಶವೂ ವಿಫಲಗೊಳ್ಳುತ್ತದೆ. ಆಗ ಅವರು ಅದನ್ನು ರಾಜಕೀಯವಾಗಿ ಜನರಿಗೆ ವಿವರಣೆ ನೀಡಬೇಕಾಗುತ್ತದೆ. ಇದು ಅವರಿಗೆ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ.
ಬಿಜೆಪಿಗೂ ರಾಜಕೀಯ ಅಪಾಯವಿದೆಯೇ, ವಿಶೇಷವಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ?
ಅಂತಹ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿಯ ಲಾಭಗಳು ಹೆಚ್ಚು ತಕ್ಷಣದ್ದಾಗಿವೆ. ಆದರೆ, ವಿರೋಧ ಪಕ್ಷಗಳು ಈ ಎರಡು ರಾಜ್ಯಗಳನ್ನು ಮೀರಿ ಯೋಚಿಸಬೇಕಾದ ಅಗತ್ಯವಿದೆ. 2029 ರವರೆಗೆ ನಡೆಯಲಿರುವ ಹಲವಾರು ರಾಜ್ಯಗಳ ಚುನಾವಣೆಗಳನ್ನು ಅವರು ಗಮನದಲ್ಲಿಟ್ಟುಕೊಳ್ಳದೇ ಬೇರೆ ದಾರಿ ಇಲ್ಲ.
ಒಂದು ವೇಳೆ ಅವರು ಮಹಿಳಾ ಮೀಸಲಾತಿಯನ್ನು ತಡೆಯುತ್ತಿದ್ದಾರೆ ಎಂದು ಬಿಂಬಿತವಾದರೆ, ಉತ್ತರ ಪ್ರದೇಶ, ಗುಜರಾತ್ ಅಥವಾ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅದು ಅವರಿಗೆ ಹಿನ್ನಡೆ ತರಬಹುದು. ಹಾಗಾಗಿ, ಡಿಎಂಕೆ ಅಥವಾ ತೃಣಮೂಲ ಕಾಂಗ್ರೆಸ್ನಂತಹ ಪ್ರಾದೇಶಿಕ ಪಕ್ಷಗಳು ಸ್ಥಳೀಯವಾಗಿ ಬಲವಾದ ನಿಲುವು ತಳೆದರೂ, ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಿನ ಕಾರ್ಯತಂತ್ರ ರೂಪಿಸುವುದು ಬಹಳ ಸಂಕೀರ್ಣವಾಗುತ್ತದೆ.
ಕ್ಷೇತ್ರ ಮರುವಿಂಗಡಣೆಯ ಸೂತ್ರದ ಬಗ್ಗೆ ಇರುವ ಪ್ರಮುಖ ಕಳವಳಗಳೇನು?
ಮಸೂದೆಯ ಮುಖ್ಯ ಪಠ್ಯದಲ್ಲಿ 2011ರ ಜನಗಣತಿಯನ್ನು ಉಲ್ಲೇಖವಾಗಿ ಎಲ್ಲಿಯೂ ಸ್ಪಷ್ಟವಾಗಿ ಹೆಸರಿಸಿಲ್ಲ; ಇದು ಕೇವಲ 'ಉದ್ದೇಶಗಳ ಹೇಳಿಕೆ'ಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಇದರರ್ಥ ಭವಿಷ್ಯದಲ್ಲಿ ಯಾವುದೇ ಸರ್ಕಾರವು ಯಾವುದೇ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತದೆ.
ರಾಜ್ಯಗಳ ಪ್ರಸ್ತುತ ಅನುಪಾತದ ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳುವುದು ಅಥವಾ ಸ್ಥಾನಗಳಲ್ಲಿ ಏಕರೂಪದ ಶೇಕಡಾ 50 ರಷ್ಟು ಹೆಚ್ಚಳವನ್ನು ಖಾತರಿಪಡಿಸುವಂತಹ ಹಿಂದಿನ ಭರವಸೆಗಳು ಈ ಮಸೂದೆಯಲ್ಲಿ ಕಾಣೆಯಾಗಿವೆ.
ಒಂದು ವೇಳೆ ಕ್ಷೇತ್ರ ಮರುವಿಂಗಡಣೆಯು ಸಂಪೂರ್ಣವಾಗಿ ಜನಸಂಖ್ಯೆಯ ಆಧಾರದ ಮೇಲೆ ನಡೆದರೆ, ದಕ್ಷಿಣದ ರಾಜ್ಯಗಳು ಮತ್ತು ಸಣ್ಣ ರಾಜ್ಯಗಳು ನಷ್ಟ ಅನುಭವಿಸಲಿವೆ ಮತ್ತು ಉತ್ತರದ ರಾಜ್ಯಗಳು ಗಮನಾರ್ಹ ಲಾಭ ಪಡೆಯಲಿವೆ. ಇದು ನ್ಯಾಯಸಮ್ಮತತೆ ಮತ್ತು ಒಕ್ಕೂಟ ವ್ಯವಸ್ಥೆಯ ಸಮತೋಲನದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.
ಹೊಸ ಕ್ಷೇತ್ರ ಮರುವಿಂಗಡಣೆಯ ಚೌಕಟ್ಟು ಹಿಂದಿನ ಪ್ರಕ್ರಿಯೆಗಳಿಗಿಂತ ಹೇಗೆ ಭಿನ್ನವಾಗಿದೆ?
ಮಸೂದೆಗಳಲ್ಲಿ ಬಳಸಲಾದ ಪದಗಳ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಕಾರ್ಯಾಂಗದ ಪರವಾಗಿ ವಾಲಿದಂತಿದೆ.
ಯಾವ ಜನಗಣತಿಯನ್ನು ಬಳಸಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಮತ್ತು ಚುನಾವಣಾ ಆಯುಕ್ತರನ್ನು ಒಳಗೊಂಡ 'ಕ್ಷೇತ್ರ ಮರುವಿಂಗಡಣಾ ಆಯೋಗ'ವು ತನ್ನ ವರದಿಯನ್ನು ಸಿದ್ಧಪಡಿಸುತ್ತದೆ. ಆದರೆ ಈ ಸಾಂಸ್ಥಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಒಮ್ಮೆ ಆಯೋಗವು ತನ್ನ ವರದಿಯನ್ನು ಸಲ್ಲಿಸಿ ಅದು ಗೆಜೆಟ್ನಲ್ಲಿ ಪ್ರಕಟವಾದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ವರದಿಗಳಿಗೆ ಸಂಸತ್ತಿನ ಅನುಮೋದನೆ ಅಗತ್ಯವಿತ್ತು. ಈಗ ಆ ಸುರಕ್ಷತಾ ನಿಯಮವನ್ನು ತೆಗೆದುಹಾಕಿದಂತೆ ತೋರುತ್ತಿದೆ.
ಅಲ್ಲದೆ, ಕ್ಷೇತ್ರ ಮರುವಿಂಗಡಣೆಯು ಇನ್ನು ಮುಂದೆ ಕೇವಲ ನಿಯತಕಾಲಿಕ ಜನಗಣತಿ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಯಾವುದೇ ಸಮಯದಲ್ಲಿ ನಡೆಸಲು ಆದೇಶಿಸಬಹುದು, ಇದು ದುರುಪಯೋಗದ ಸಾಧ್ಯತೆಯ ಬಗ್ಗೆ ಕಳವಳ ಮೂಡಿಸಿದೆ.
ಮಹಿಳಾ ಮೀಸಲಾತಿಯ ಆವರ್ತನ ಮತ್ತು 'ಕೋಟಾದೊಳಗೆ ಕೋಟಾ' ಅಂತಹ ನಿರ್ದಿಷ್ಟ ಅಂಶಗಳ ಬಗ್ಗೆ ಏನು ಹೇಳಲಾಗಿದೆ?
ಮೀಸಲಾತಿಯನ್ನು ಆವರ್ತನದ ಆಧಾರದ ಮೇಲೆ ಜಾರಿಗೆ ತರಲಾಗುವುದು ಮತ್ತು ಇದು 15 ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಅಗತ್ಯವಿದ್ದರೆ ಸಂಸತ್ತು ಇದರ ಅವಧಿಯನ್ನು ವಿಸ್ತರಿಸಬಹುದು.
ಮೀಸಲಿಡಲಾಗುವ ಸ್ಥಾನಗಳ ನಿಖರ ಸಂಖ್ಯೆಯು ಕ್ಷೇತ್ರ ಮರುವಿಂಗಡಣಾ ಆಯೋಗವು ಅಂತಿಮವಾಗಿ ಶಿಫಾರಸು ಮಾಡುವ ಒಟ್ಟು ಸ್ಥಾನಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ — ಅಂದರೆ ಸ್ಥಾನಗಳ ಸಂಖ್ಯೆ 650, 750 ಅಥವಾ ಗರಿಷ್ಠ ಮಿತಿಯಾದ 850ಕ್ಕೆ ಹತ್ತಿರವಿರುತ್ತದೆಯೇ ಎಂಬ ಅಂಶವನ್ನು ಇದು ಆಧರಿಸಿದೆ.
ಇನ್ನು 'ಕೋಟಾದೊಳಗೆ ಕೋಟಾ', ವಿಶೇಷವಾಗಿ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ, ಅದು ಸದ್ಯಕ್ಕೆ ಅಸಂಭವವೆಂದು ತೋರುತ್ತಿದೆ. ಅದಕ್ಕೆ ಅಗತ್ಯವಿರುವ ಜಾತಿ ಗಣತಿಯ ದತ್ತಾಂಶವು ಮುಂದಿನ ಜನಗಣತಿ ಚಕ್ರದ ನಂತರವಷ್ಟೇ ಲಭ್ಯವಾಗಲಿದ್ದು, ಈಗಿರುವ ಪ್ರಕ್ರಿಯೆಯಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಇದು ಬಿಜೆಪಿಯ ದೊಡ್ಡ ಮಟ್ಟದ ರಾಜಕೀಯ ಕಾರ್ಯತಂತ್ರದ ಭಾಗವೇ?
ಇದನ್ನು ಒಂದು ವಿಶಾಲವಾದ ಮಾದರಿಯಲ್ಲಿ ನೋಡುವ ಅಗತ್ಯವಿದೆ. ಕಳೆದ ಒಂದೂವರೆ ವರ್ಷದಲ್ಲಿ, ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿನ ಬದಲಾವಣೆಗಳು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಈಗ ಮಹಿಳಾ ಮೀಸಲಾತಿಯೊಂದಿಗೆ ಬೆಸೆದಿರುವ ಕ್ಷೇತ್ರ ಮರುವಿಂಗಡಣೆಯನ್ನು ನಾವು ನೋಡಿದ್ದೇವೆ.
ಕ್ಷೇತ್ರ ಮರುವಿಂಗಡಣೆಯು ಕೇವಲ ಸ್ಥಾನಗಳ ಸಂಖ್ಯೆಯನ್ನು ಬದಲಿಸುವುದಷ್ಟೇ ಅಲ್ಲ, ಅದು ಕ್ಷೇತ್ರದ ಗಡಿಗಳನ್ನು ಮತ್ತು ಜನಸಂಖ್ಯಾ ಚಿತ್ರಣವನ್ನೂ ಬದಲಾಯಿಸುತ್ತದೆ. ಇದು ಚುನಾವಣಾ ಫಲಿತಾಂಶಗಳನ್ನು ಗಮನಾರ್ಹವಾಗಿ ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕ್ರಮಗಳು, ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ 2024ರ ಚುನಾವಣೆಯಲ್ಲಿ ಕಂಡುಬಂದ ಹಿನ್ನಡೆಗಳು ಮತ್ತೆ ಮರುಕಳಿಸದಂತೆ ತಡೆಯುವ ಗುರಿಯನ್ನು ಹೊಂದಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಸಾಕಷ್ಟು ಹಿಂದೆಯೇ ಈ ಬಗ್ಗೆ ಸುಳಿವುಗಳು ಸಿಕ್ಕಿದ್ದರೂ ವಿರೋಧ ಪಕ್ಷಗಳು ಈಗ ಯಾಕೆ ಇಷ್ಟು ಪ್ರಬಲವಾಗಿ ಪ್ರತಿಕ್ರಿಯೆ ನೀಡುತ್ತಿವೆ?
ಹೆಚ್ಚುವರಿ ಆಸನ ಸಾಮರ್ಥ್ಯದೊಂದಿಗೆ ಹೊಸ ಸಂಸತ್ ಭವನದ ನಿರ್ಮಾಣ ಸೇರಿದಂತೆ, ಕ್ಷೇತ್ರ ಮರುವಿಂಗಡಣೆ ಬರಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳಿದ್ದವು. ವಿರೋಧ ಪಕ್ಷಗಳು ಈ ಹಿಂದೆಯೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.
ಆದರೆ, ವಿರೋಧ ಪಕ್ಷಗಳ ಬಳಿ ನಿಖರವಾದ ವಿವರಗಳಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚಿನವರೆಗೆ ಸರ್ಕಾರವು ಯಾವ ನಿರ್ದಿಷ್ಟ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಲ್ಲ. ಸ್ಪಷ್ಟತೆ ಇಲ್ಲದೆ ಸಾರ್ವಜನಿಕ ಅಭಿಪ್ರಾಯವನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸುವುದು ಕಷ್ಟವಾಗುತ್ತದೆ.
ವಿರೋಧ ಪಕ್ಷಗಳ ಮುಂದಿರುವ ಸವಾಲು ಕೇವಲ ಪ್ರತಿಭಟಿಸುವುದಷ್ಟೇ ಅಲ್ಲ, ಹಲವಾರು ರಾಜಕೀಯ ವಿಷಯಗಳ ನಡುವೆ ನಿರಂತರವಾಗಿ ಒಂದು ಸ್ಪಷ್ಟವಾದ ಪರ್ಯಾಯ ನಿಲುವನ್ನು ಜನರ ಮುಂದಿಡುವುದೂ ಆಗಿದೆ.

