ವಿನೇಶ್ ಫೋಗಟ್ ಅವರಿಗೆ ಭವ್ಯ ಸ್ವಾಗತ
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಫೈನಲ್‌ಗೆ ತಲುಪಿ, ಹೆಚ್ಚು ತೂಕದಿಂದ ಅನರ್ಹಗೊಂಡ ಚಾಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತೆ ಇದ್ದಿತ್ತು.
ಪೋಗಟ್ ಅವರು ಜಂಟಿ ಬೆಳ್ಳಿಗಾಗಿ ಮಧ್ಯಸ್ತಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರಿಂದ, ಪ್ಯಾರಿಸ್‌ನಲ್ಲಿ ಉಳಿಯಬೇಕಾಯಿತು.ಮನವಿ ಅಂತಿಮವಾಗಿ ಬುಧವಾರ ವಜಾಗೊಂಡಿತು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಶೂಟರ್ ಹಾಗೂ ಪ್ಯಾರಿಸ್‌ನಲ್ಲಿ ಭಾರತೀಯ ತುಕಡಿಯ ಮುಖ್ಯಸ್ಥರಾಗಿದ್ದ ಗಗನ್ ನಾರಂಗ್ ಅವರು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಫೋಗಟ್ ಜೊತೆಗಿನ ಫೋಟೋ ಪೋಸ್ಟ್ ಮಾಡಿ, ಅವರನ್ನು ಚಾಂಪಿಯನ್ ಎಂದು ಕರೆದಿದ್ದರು. ಇಬ್ಬರೂ ದೆಹಲಿಗೆ ಒಂದೇ ವಿಮಾನದಲ್ಲಿ ಆಗಮಿಸಿದರು.
ʻಗೇಮ್ಸ್ ಗ್ರಾಮಕ್ಕೆ ಚಾಂಪಿಯನ್ ಆಗಿ ಬಂದ ಪೋಗಟ್, ಎಂದೆಂದಿಗೂ ನಮ್ಮ ಚಾಂಪಿಯನ್ ಆಗಿ ಉಳಿಯುತ್ತಾರೆ. ಕೆಲವೊಮ್ಮೆ ಶತ ಕೋಟಿ ಕನಸುಗಳನ್ನು ಪ್ರೇರೇಪಿಸಲು ಒಲಿಂಪಿಕ್ ಪದಕವೊಂದು ಅಗತ್ಯವಿಲ್ಲ,ʼ. ನಾರಂಗ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ʻವಿನೇಶ್ ದೇಶಕ್ಕೆ ಮರಳುತ್ತಿದ್ದಾರೆ. ಸ್ವಾಗತಿಸಲು ಜನರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ನಮ್ಮ ಹಳ್ಳಿಯಲ್ಲಿಯೂ ಅವಳನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಜನರು ವಿನೇಶ್ ಅವರನ್ನು ಭೇಟಿ ಮಾಡಲು ಮತ್ತು ಅವಳನ್ನು ಪ್ರೋತ್ಸಾಹಿಸಲು ಉತ್ಸುಕರಾಗಿದ್ದಾರೆ,ʼ ಎಂದು ಆಕೆಯ ಸಹೋದರ ಹರ್ವಿಂದರ್ ಫೋಗಟ್ ಹೇಳಿದ್ದಾರೆ.
ಅವರ ಸ್ವಗ್ರಾಮ ಹರಿಯಾಣದ ಬಲಾಲಿಯಲ್ಲಿಯೂ ಅವರಿಗೆ ಭವ್ಯ ಸ್ವಾಗತ ಆಯೋಜಿಸಲಾಗಿದೆ.