
ಚೆಂಡಿನ ಮೇಲೆ ಹಿಡಿತ ಸಾಧಿಸಲು ಕ್ರೊಯೇಷಿಯಾ ಹಾಗೂ ಪೋರ್ಚುಗಲ್ ಆಟಗಾರರು ಪೈಪೋಟಿ ನಡೆಸಿದರು.
ಫಿಫಾ ವಿಶ್ವಕಪ್ ಹೈಡ್ರಾಮಾ: ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್‌ಗೆ ರೋಚಕ ಜಯ
40 ವರ್ಷದ ಕ್ರೊಯೇಷಿಯಾದ ದಂತಕಥೆ ಲುಕಾ ಮಾಡ್ರಿಕ್ ಅವರಿಗೆ ಇದು ಬಹುಶಃ ಕೊನೆಯ ವಿಶ್ವಕಪ್ ಪಂದ್ಯವಾಗಿದ್ದು, ಸೋಲಿನ ಬೆನ್ನಲ್ಲೇ ಅವರು ತೀವ್ರ ನಿರಾಶೆಯಿಂದ ಮೈದಾನದಲ್ಲೇ ಕುಸಿದುಬಿದ್ದರು.
ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯವೊಂದರಲ್ಲಿ ಕ್ರೊಯೇಷಿಯಾ ವಿರುದ್ಧ 2-1 ಗೋಲುಗಳ ರೋಮಾಂಚಕ ಜಯ ಸಾಧಿಸಿದ ಪೋರ್ಚುಗಲ್, ಪ್ರೀ-ಕ್ವಾರ್ಟರ್‌ಫೈನಲ್ (16ರ ಘಟ್ಟ) ಹಂತಕ್ಕೆ ಮುನ್ನಡೆದಿದೆ. ಗುರುವಾರ(ಜು.2) ಟೊರೊಂಟೊ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯವು ಕೊನೆಯ ಸೆಕೆಂಡ್‌ವರೆಗೂ ಕ್ರೀಡಾಭಿಮಾನಿಗಳನ್ನು ಸೀಟಿನ ತುದಿಗೆ ತಂದು ನಿಲ್ಲಿಸಿತ್ತು.
ಕೊನೆಯ ಕ್ಷಣದ ಹೈಡ್ರಾಮಾ!
ಪಂದ್ಯದ ಇಂಜುರಿ ಟೈಮ್ (94ನೇ ನಿಮಿಷ) ನಲ್ಲಿ ಬದಲಿ ಆಟಗಾರ ಗೊನ್ಕಾಲೊ ರಾಮೋಸ್ ಹೆಡರ್ ಮೂಲಕ ಭರ್ಜರಿ ಗೋಲು ಗಳಿಸಿ ಪೋರ್ಚುಗಲ್‌ಗೆ 2-1 ಮುನ್ನಡೆ ತಂದುಕೊಟ್ಟಾಗ ತಂಡದ ಸಂಭ್ರಮ ಮುಗಿಲುಮುಟ್ಟಿತ್ತು. ಆದರೆ, ಕಥೆ ಅಲ್ಲಿಗೇ ಮುಗಿಯಲಿಲ್ಲ. 103ನೇ ನಿಮಿಷದಲ್ಲಿ ಕ್ರೊಯೇಷಿಯಾದ ಜೊಸ್ಕೊ ಗ್ವಾರ್ಡಿಯೊಲ್ ಚೆಂಡನ್ನು ಪೋರ್ಚುಗಲ್ ನೆಟ್‌ನೊಳಗೆ ತಳ್ಳಿ ಅದ್ಭುತ ಸಮಬಲ ಸಾಧಿಸಿದರು! ಕ್ರೊಯೇಷಿಯಾ ಆಟಗಾರರು ಮತ್ತು ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದರು.
ಆದರೆ, ಈ ಗೋಲು ಪಲಾಸಿಕ್ ಅವರು ಆಫ್‌ಸೈಡ್ ಸ್ಥಾನದಲ್ಲಿದ್ದಾಗ ಬಂದಿದ್ದೇ ಎಂಬ ಸಂಶಯ ಮೂಡಿಸಿತು. ಚೆಂಡು ಪೋರ್ಚುಗಲ್ ಡಿಫೆಂಡರ್ ರೆನಾಟೊ ವೀಗಾಗೆ ತಗುಲಿ ಬಂದಿತ್ತಾದರೂ, ಅದಕ್ಕೂ ಮುನ್ನ ಕ್ರೊಯೇಷಿಯಾದ ಇಗೊರ್ ಮಂಟನೋವಿಕ್ ಚೆಂಡಿಗೆ ಸಣ್ಣ ಸ್ಪರ್ಶ ನೀಡಿದ್ದರೇ ಎಂಬುದು ಮುಖ್ಯವಾಗಿತ್ತು. ವಿಶ್ವಕಪ್ ಚೆಂಡಿನೊಳಗಿನ ಅತ್ಯಾಧುನಿಕ ಸಂವೇದಕಗಳು ಆ ಸಣ್ಣ ಸ್ಪರ್ಶವನ್ನು ಪತ್ತೆಹಚ್ಚಿದವು. ಸೈಡ್‌ಲೈನ್ ಮಾನಿಟರ್ ಪರಿಶೀಲಿಸಿದ ರೆಫರಿ, ಅಂತಿಮವಾಗಿ ಅದು 'ಆಫ್‌ಸೈಡ್' ಎಂದು ಘೋಷಿಸಿ ಗೋಲನ್ನು ರದ್ದುಗೊಳಿಸಿದರು. ಈ ನಿರ್ಧಾರ ಕ್ರೊಯೇಷಿಯಾ ಆಟಗಾರರ ಕಣ್ಣಲ್ಲಿ ನೀರು ತರಿಸಿದರೆ, ಅಭಿಮಾನಿಗಳು ಕೋಪದಿಂದ ಮೈದಾನಕ್ಕೆ ಬಾಟಲಿಗಳನ್ನು ಎಸೆದು ಆಕ್ರೋಶ ಹೊರಹಾಕಿದರು.
ರೊನಾಲ್ಡೊಗೆ ಹರ್ಷ, ಮಾಡ್ರಿಕ್‌ಗೆ ನಿರಾಸೆ
40 ವರ್ಷದ ಕ್ರೊಯೇಷಿಯಾದ ದಂತಕಥೆ ಲುಕಾ ಮಾಡ್ರಿಕ್ ಅವರಿಗೆ ಇದು ಬಹುಶಃ ಕೊನೆಯ ವಿಶ್ವಕಪ್ ಪಂದ್ಯವಾಗಿದ್ದು, ಸೋಲಿನ ಬೆನ್ನಲ್ಲೇ ಅವರು ತೀವ್ರ ನಿರಾಶೆಯಿಂದ ಮೈದಾನದಲ್ಲೇ ಕುಸಿದುಬಿದ್ದರು. ಇನ್ನೊಂದೆಡೆ, 41 ವರ್ಷದ ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಇಂಜುರಿ ಟೈಮ್‌ನಲ್ಲಿ ಬದಿಯಲ್ಲಿ ನಿಂತು ತೀವ್ರ ಆತಂಕದಿಂದ ಪಂದ್ಯ ವೀಕ್ಷಿಸುತ್ತಿದ್ದರು. ಗೋಲು ರದ್ದಾಗುತ್ತಿದ್ದಂತೆ ಅವರು ನಿಟ್ಟುಸಿರು ಬಿಟ್ಟರು.
ಪಂದ್ಯದ ಗತಿ ಬದಲಿಸಿದ ಪೆನಾಲ್ಟಿ ಕಿಕ್
ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗದೆ ನೀರಸವಾಗಿದ್ದ ಪಂದ್ಯಕ್ಕೆ ದ್ವಿತೀಯಾರ್ಧದಲ್ಲಿ ಜೀವ ಬಂದಿತು. 53ನೇ ನಿಮಿಷದಲ್ಲಿ ಇವಾನ್ ಪೆರಿಸಿಕ್ ಅದ್ಭುತ ಗೋಲು ಬಾರಿಸಿ ಕ್ರೊಯೇಷಿಯಾಗೆ 1-0 ಮುನ್ನಡೆ ತಂದುಕೊಟ್ಟರು. ಒತ್ತಡಕ್ಕೆ ಸಿಲುಕಿದ ಪೋರ್ಚುಗಲ್ ಕೋಚ್ ರಾಬರ್ಟೊ ಮಾರ್ಟಿನೆಜ್ ಏಕಕಾಲದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದರು.
ಅದರಂತೆ, ಪೋರ್ಚುಗಲ್‌ನ ವೀಗಾ ಅವರನ್ನು ಪೆನಾಲ್ಟಿ ಬಾಕ್ಸ್‌ನಲ್ಲಿ ವ್ಲಾಸಿಕ್ ಕೆಳಗೆ ಉರುಳಿಸಿದಾಗ ರೆಫರಿ ಪೆನಾಲ್ಟಿ ನೀಡಿದರು.ಈ ವೇಳೆ ಕ್ರಿಸ್ಟಿಯಾನೊ ರೊನಾಲ್ಡೊ ಗೋಲನ್ನುಗಳಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಇದು ವಿಶ್ವಕಪ್ ನಾಕೌಟ್ ಪಂದ್ಯವೊಂದರಲ್ಲಿ ರೊನಾಲ್ಡೊ ಬಾರಿಸಿದ ಮೊದಲ ಗೋಲು ಎಂಬುದು ವಿಶೇಷ.
ಕೋಸ್ಟಾ ವೀರಾವೇಶದ ಗೋಲ್‌ಕೀಪಿಂಗ್
ಪಂದ್ಯದುದ್ದಕ್ಕೂ ಕ್ರೊಯೇಷಿಯಾಗೆ ಹಲವು ಸುವರ್ಣ ಅವಕಾಶಗಳಿದ್ದವು. ಆದರೆ ಪೋರ್ಚುಗಲ್ ಗೋಲ್‌ಕೀಪರ್ ಡಿಯೋಗೊ ಕೋಸ್ಟಾ ಗೋಡೆಯಂತೆ ನಿಂತು ಮ್ಯಾಟಿಯೊ ಕೊವಾಸಿಕ್ ಅವರ ಎರಡು ಅಪಾಯಕಾರಿ ಶಾಟ್‌ಗಳನ್ನು ಹಾಗೂ ಮಟನೋವಿಕ್ ಅವರ ಶಾಟ್‌ಗಳನ್ನು ಅದ್ಭುತವಾಗಿ ತಡೆದು ತಂಡದ ರಕ್ಷಣೆಗೆ ನಿಂತರು.
ಭಾವನಾತ್ಮಕ ಕ್ಷಣ
ಪಂದ್ಯ ಮುಗಿದ ಬಳಿಕ ರೊನಾಲ್ಡೊ, ನಿಖರವಾಗಿ ಒಂದು ವರ್ಷದ ಹಿಂದೆ ಕಾರು ಅಪಘಾತದಲ್ಲಿ ನಿಧನರಾಗಿದ್ದ ತಮ್ಮ ಮಾಜಿ ಸಹ ಆಟಗಾರ ಡಿಯೊಗೊ ಜೋಟಾ ಅವರ ಜೆರ್ಸಿಯನ್ನು ಧರಿಸಿ ಗೆಲುವನ್ನು ಅವರಿಗೆ ಅರ್ಪಿಸಿದ್ದು ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿಸಿತು.
ಫುಟ್‌ಬಾಲ್‌ನ ಭಾವನೆಗಳನ್ನೇ ಕೊಲ್ಲುತ್ತಿದೆ ತಂತ್ರಜ್ಞಾನ
ಪಂದ್ಯದ ನಂತರ ತೀವ್ರ ಬೇಸರ ವ್ಯಕ್ತಪಡಿಸಿದ ಕ್ರೊಯೇಷಿಯಾ ತರಬೇತುದಾರ ಝ್ಲಾಟ್ಕೊ ಡಾಲಿಕ್, "ಈ ರೀತಿಯ ನಿರ್ಧಾರಗಳು ಫುಟ್‌ಬಾಲ್‌ನ ನಿಜವಾದ ಸಂತೋಷವನ್ನು ಕಸಿದುಕೊಳ್ಳುತ್ತವೆ. ವಿಎಆರ್ ತಂತ್ರಜ್ಞಾನ ಕೆಲವೊಮ್ಮೆ ಸಹಕಾರಿಯಾಗಬಹುದು, ಆದರೆ ಇದು ಆಟದ ಭಾವನೆಯನ್ನು, ನಿಮ್ಮೊಳಗಿನ ಉತ್ಸಾಹವನ್ನು ಕೊಲ್ಲುತ್ತದೆ. ಫುಟ್‌ಬಾಲ್ ಮುಕ್ತವಾಗಿರಬೇಕು, ತಂತ್ರಜ್ಞಾನದ ವಿಷಯದಲ್ಲಿ ನಾವು ತುಂಬಾ ದೂರ ಹೋಗುತ್ತಿದ್ದೇವೆ," ಎಂದು ಬೇಸರ ಹೊರಹಾಕಿದ್ದಾರೆ.

