Paris Paralympics | ಬಿಲ್ಲುಗಾರ ಹರ್ವಿಂದರ್, ಎಸೆತಗಾರ ಧರಂಬೀರ್ ಗೆ ಚಿನ್ನ
x
ಪ್ಯಾರಾಲಿಂಪಿಕ್ಸ್‌ ನಲ್ಲಿ ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹರ್ವಿಂದರ್

Paris Paralympics | ಬಿಲ್ಲುಗಾರ ಹರ್ವಿಂದರ್, ಎಸೆತಗಾರ ಧರಂಬೀರ್ ಗೆ ಚಿನ್ನ


ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ನಲ್ಲಿ ಧರಂಬೀರ್ ಅವರ ದಾಖಲೆಯ ಎಸೆತ ಹಾಗೂ ಬಿಲ್ಲುಗಾರ ಹರ್ವಿಂದರ್ ಸಿಂಗ್ ಅವರಿಗೆ ಚಿನ್ನ ಪ್ರಾಪ್ತವಾಗಿದೆ.

ವಿಶ್ವ ಚಾಂಪಿಯನ್ ಶಾಟ್‌ಪುಟ್ ಪಟು ಸಚಿನ್ ಸರ್ಜೆರಾವ್ ಖಿಲಾರಿ ಮತ್ತು ಮತ್ತೊಬ್ಬ ಎಸೆತಗಾರ ಪ್ರಣವ್ ಸೂರ್ಮಾ ಅವರ ಬೆಳ್ಳಿ ಪದಕ ಪ್ರದರ್ಶನಗಳು ಭಾರತದ ಮಂಗಳವಾರದ ಹೈಲೈಟ್ ಆಗಿತ್ತು.

ಬಿಲ್ಲುಗಾರಿಕೆಯಲ್ಲಿ ಪದಕ: ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಹರ್ವಿಂದರ್(33), ಸತತ ಐದು ಗೆಲುವುಗಳ ಅತ್ಯುನ್ನತ ಪ್ರದರ್ಶನದಲ್ಲಿ ಪೋಲೆಂಡ್‌ನ ಲುಕಾಸ್ಜ್ ಸಿಸ್ಜೆಕ್ ಅವರನ್ನು 6-0 ಅಂತರದಿಂದ ಸೋಲಿಸಿದರು.ಹರ್ಯಾಣದ ಬಿಲ್ಲುಗಾರ ಅಂಬೆಗಾಲಿಡುವ ವಯಸ್ಸಿನಿಂದಲೇ ಡೆಂಗೆಯಿಂದ ಕಾಲುಗಳ ದೌರ್ಬಲ್ಯ ಹೊಂದಿದ್ದಾರೆ.

ಧರಂಬೀರ್ ಏಷ್ಯನ್ ದಾಖಲೆ: ಧರಂಭೀರ್ ಅವರ ಏಷ್ಯನ್ ದಾಖಲೆಯ 34.92 ಮೀ ಎಸೆತದಿಂದ ಅವರು ಪ್ರಾರಂಭದಿಂದ ಕೊನೆಯವರೆಗೂ ಅಗ್ರಸ್ಥಾನದಲ್ಲಿ ಉಳಿದರು. ಎಫ್ 51 ಫೈನಲ್‌ನಲ್ಲಿ ಸೂರ್ಮಾ (34.59 ಮೀ) ನಂತರದ ಸ್ಥಾನ ಗಳಿಸಿದರು.

ಖಿಲಾರಿ ಅವರಿಂದ 11ನೇ ಬೆಳ್ಳಿ: ಇದಕ್ಕೂ ಮೊದಲು ಖಿಲಾರಿ(34) ಅವರು ಎಫ್ 46 ವಿಭಾಗದ ಫೈನಲ್‌ನ ಎರಡನೇ ಪ್ರಯತ್ನದಲ್ಲಿ 16.32 ಮೀ ಎಸೆದು ತಮ್ಮದೇ ಏಷ್ಯನ್ ದಾಖಲೆ (16.30 ಮೀಟರ್‌) ಉತ್ತಮಗೊಳಿಸಿದರು. ಅವರು ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಕೆನಡಾದ ಗ್ರೆಗ್ ಸ್ಟೀವರ್ಟ್ 16.38 ಮೀಟರ್ ಎಸೆದು ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಚಿನ್ನವನ್ನು ಉಳಿಸಿಕೊಂಡರೆ, ಕ್ರೊಯೇಷಿಯಾದ ಲುಕಾ ಬಾಕೊವಿಕ್ 16.27 ಮೀಟರ್‌ಗಳೊಂದಿಗೆ ಕಂಚಿನ ಪದಕ ಪಡೆದರು.

ಖಿಲಾರಿಯವರ ಬೆಳ್ಳಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ದೇಶದ 11 ನೇ ಪದಕ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾರಗಣಿ ಗ್ರಾಮದ ಕೃಷಿ ಕುಟುಂಬದ ಖಿಲಾರಿ, ಬಾಲ್ಯದಲ್ಲಿ ಅಪಘಾತಕ್ಕೀಡಾಗಿದ್ದರು. ಗಾಯದಿಂದ ಮೊಣಕೈಯಲ್ಲಿ ಗ್ಯಾಂಗ್ರೀನ್ ಮತ್ತು ಸ್ನಾಯುವಿನ ಕ್ಷೀಣತೆ ಉಂಟಾಯಿತು. ಹಲವು ಶಸ್ತ್ರಚಿಕಿತ್ಸೆಗಳ ನಂತರವೂ ಅವರ ಕೈ ಚೇತರಿಸಿಕೊಳ್ಳಲಿಲ್ಲ. ಚಿಕ್ಕವನಿದ್ದಾಗ ತಾಯಿಯನ್ನೂ ಕಳೆದುಕೊಂಡರು. ʻನಾನು ಚಿನ್ನದ ಪದಕ ಗೆಲ್ಲಲು ಬಯಸಿದ್ದೆ; ಆದರೆ, ಆಗಲಿಲ್ಲ. ನನಗೆ ತೃಪ್ತಿ ಆಗಿಲ್ಲ. ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು. ಇದು ನನ್ನ ದಿನವಲ್ಲ,ʼ ಎಂದು ಖಿಲಾರಿ ಬುಧವಾರ ತಮ್ಮ ಪ್ರದರ್ಶನದ ಬಗ್ಗೆ ಹೇಳಿದರು.

ಸಿಮ್ರಾನ್ 100 ಮೀ ಸೆಮಿಫೈನಲ್‌ ಗೆ : ವಿಶ್ವ ಚಾಂಪಿಯನ್ ಓಟಗಾರ ಸಿಮ್ರಾನ್ ಅವರು 100 ಮೀ (ಟಿ12) ಸ್ಪರ್ಧೆಯ ಸೆಮಿಫೈನಲ್‌ ಪ್ರವೇಶಿದಿರು(12.17 ಸೆಕೆಂಡ್‌). ಸಿಮ್ರಾನ್‌ ಅವಧಿಗೆ ಮುನ್ನವೇ ಜನಿಸಿದ, ದೃಷ್ಟಿ ವಿಶೇಷಚೇತನ.

ಪ್ಯಾರಾಲಿಂಪಿಕ್ ಚಾಂಪಿಯನ್ ಮತ್ತು ಕ್ಯೂಬಾದ ವಿಶ್ವ ದಾಖಲೆ ಹೊಂದಿರುವ ಓಮಾರಾ ಡ್ಯುರಾಂಡ್ ಅವರ ನಂತರದ ಸ್ಥಾನ ಪಡೆದಿದ್ದಾರೆ. ಗುರುವಾರ ಸೆಮಿಫೈನಲ್ ನಡೆಯಲಿದೆ.

ಭಾವಿನಾ ಅಪಜಯ: ಟೋಕಿಯೊ ಆವೃತ್ತಿಯ ಬೆಳ್ಳಿ ಪದಕ ವಿಜೇತೆ ಭಾವಿನಾಬೆನ್ ಪಟೇಲ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಯಿಂಗ್ ಝೌ ವಿರುದ್ಧ 3-1 ಅಂತರದಲ್ಲಿ ಸೋತ ನಂತರ, ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.ಟಿಟಿಯಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗಳಿಸಿದ ಭಾರತದ ಮೊದಲ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾವಿನಾಬೆನ್, ಮೊದಲ ಎರಡು ಗೇಮ್‌ಗಳಲ್ಲಿ ತೀವ್ರ ಹೋರಾಟ ನಡೆಸಿದರು ಮತ್ತು ಮೂರನೇ ಪಂದ್ಯವನ್ನು ಗೆದ್ದರು. ಅಂತಿಮವಾಗಿ 12-14, 9-11, 11- 8, 6-11 ರಿಂದ ಸೋತರು.

ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್‌ನ ಇತರ ಆಟಗಾರ್ತಿ ಸೋನಾಲ್‌ಬೆನ್ ಪಟೇಲ್, ಕ್ರೊಯೇಷಿಯಾದ ಆಂಡೆಲಾ ಮುಜಿನಿಕ್ ವಿನ್ಸೆಟಿಕ್ ವಿರುದ್ಧ ಸೋತಿದ್ದರು.

ಶೂಟಿಂಗ್‌ನಲ್ಲಿ ಯಾವುದೇ ಪದಕಗಳಿಲ್ಲ: ಭಾರತೀಯ ಶೂಟರ್‌ಗಳಾದ ನಿಹಾಲ್ ಸಿಂಗ್ ಮತ್ತು ರುದ್ರಾಂಶ್ ಖಂಡೇಲ್ವಾಲ್ ಅವರು ಮಿಶ್ರ 50 ಮೀ ಪಿಸ್ತೂಲ್ (ಎಸ್‌ ಎಚ್1) ಸ್ಪರ್ಧೆಯ ಫೈನಲ್‌‌ ಪ್ರವೇಶಿಸಲು ವಿಫಲರಾದರು. 2023ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ನಿಹಾಲ್ 19ನೇ ಸ್ಥಾನ ಪಡೆದರು.

ಎಂಟು ವರ್ಷ ವಯಸ್ಸಿನವನಾಗಿದ್ದಾಗ ಅಪಘಾತದಲ್ಲಿ ಎಡಗಾಲು ಕಳೆದುಕೊಂಡ ರುದ್ರಾಂಶ್(17), ಅರ್ಹತಾ ಸುತ್ತಿನಲ್ಲಿ 22 ನೇ ಸ್ಥಾನ ಗಳಿಸಿದರು.

ಭಾರತ ಪ್ರಸ್ತುತ ಐದು ಚಿನ್ನ, ಒಂಬತ್ತು ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 13 ನೇ ಸ್ಥಾನದಲ್ಲಿದೆ. ಪ್ಯಾರಾಲಿಂಪಿಕ್ಸ್‌ ನಲ್ಲಿ ಇದು ದೇಶದ ಅತ್ಯುತ್ತಮ ಪ್ರದರ್ಶನವಾಗಿದೆ.

Read More
Next Story