Paris Paralympics 2024: ಸುಮಿತ್, ಭಾಗ್ಯಶ್ರೀ ನೇತೃತ್ವದಲ್ಲಿ ಭಾರತೀಯ ತಂಡ
x

Paris Paralympics 2024: ಸುಮಿತ್, ಭಾಗ್ಯಶ್ರೀ ನೇತೃತ್ವದಲ್ಲಿ ಭಾರತೀಯ ತಂಡ


ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದ ಅಥ್ಲೀಟ್‌ಗಳ ಪರೇಡ್‌ನಲ್ಲಿ ಜಾವೆಲಿನ್ ಥ್ರೋ ತಾರೆ ಸುಮಿತ್ ಆಂಟಿಲ್ ಮತ್ತು ಶಾಟ್‌ಪುಟ್ ಪಟು ಭಾಗ್ಯಶ್ರೀ ಜಾಧವ್ ಅವರು ಭಾರತೀಯ ತಂಡವನ್ನು ಮುನ್ನಡೆಸಿದರು.

ಚಾಂಪ್ಸ್ ಎಲಿಸೀಸ್ ಅವೆನ್ಯೂದಲ್ಲಿ ಆರಂಭಗೊಂಡ ಪರೇಡ್‌ ನಾಲ್ಕು ಗಂಟೆಗಳ ನಂತರ ಪ್ಲೇಸ್ ಡೆ ಲಾ ಕಾಂಕಾರ್ಡ್‌ನಲ್ಲಿ ಮುಕ್ತಾಯವಾಯಿತು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಕ್ರೀಡಾಕೂಟ ಆರಂಭಗೊಂಡಿದೆ ಎಂದು ಘೋಷಿಸಿದರು. 12 ವಿವಿಧ ಕ್ರೀಡೆಗಳಲ್ಲಿ 84 ಕ್ರೀಡಾಪಟುಗಳನ್ನುಭಾರತ ತಂಡ ಒಳಗೊಂಡಿದೆ. ಒಟ್ಟು 179 ಮಂದಿ ತಂಡದಲ್ಲಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ಚಿನ್ನ ಗೆದ್ದಿದ್ದ ಸುಮಿತ್ ಆಂಟಿಲ್, ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ವಿಜೇತ ‌ ಭಾಗ್ಯಶ್ರೀ ಜಾಧವ್ ಅವರೊಂದಿಗೆ ತಂಡವನ್ನು ಮುನ್ನಡೆಸಿದರು.

ಉದ್ಘಾಟನಾ ಸಮಾರಂಭವು ವೈವಿಧ್ಯತೆ, ‌ಚೈತನ್ಯಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವದ ಸಂಕೇತವಾಗಿತ್ತು. ಫ್ರೆಂಚ್ ಸಂಸ್ಕೃತಿ ಮತ್ತು ಪ್ಯಾರಾಲಿಂಪಿಕ್ ಕ್ರೀಡೆಗಳ ಮೌಲ್ಯಗಳು ಮತ್ತು ಸಮಾನತೆಯನ್ನು ಎತ್ತಿ ತೋರಿಸುವ ಪ್ರದರ್ಶನಗಳನ್ನು ಒಳಗೊಂಡಿತ್ತು.

ಹಿಂದಿನ ಆವೃತ್ತಿಯಲ್ಲಿ ಭಾರತ ಐದು ಚಿನ್ನ ಸೇರಿದಂತೆ 19 ಪದಕ ಗೆದ್ದಿತ್ತು. ಈ ಬಾರಿ ಕನಿಷ್ಠ 25 ಕ್ಕೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದೆ.

ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೈಫಲ್ ಶೂಟರ್ ಅವನಿ ಲೆಖರಾ (10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌ 1), ಆರ್ಚರ್‌ ಶೀತಲ್ ದೇವಿ(ತೋಳು ಇಲ್ಲದ ಕಾರಣ ಕಾಲುಗಳಿಂದ ಬಾಣ ಹಾರಿಸುತ್ತಾರೆ), ನೆಲಬಾಂಬ್ ಸ್ಫೋಟದಿಂದ ಬದುಕುಳಿದ ಹೊಕಾಟೊ ಸೆಮಾ (ಶಾಟ್ ಪುಟರ್) ಮತ್ತು ನಾರಾಯಣ ಕೊಂಗನಪಲ್ಲೆ (ರೋವರ್) ಸೇರಿದ್ದಾರೆ.

ಭಾರತ ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 29 ಚಿನ್ನ ಸೇರಿದಂತೆ ದಾಖಲೆಯ 111 ಪದಕಗಳನ್ನು ಗೆದ್ದುಕೊಂಡಿತ್ತು.

4000ಕ್ಕೂ ಅಧಿಕ ವಿವಿಧ ದೈಹಿಕ ಮತ್ತು ಬೌದ್ಧಿಕ ವಿಶೇಷಚೇತನರು ಸೆಪ್ಟೆಂಬರ್ 8 ರಂದು ಮುಕ್ತಾಯಗೊಳ್ಳುವ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ʻಅಡೆತಡೆಗಳನ್ನು ತೆಗೆದಾಗ ವಿಶೇಷಚೇತನರು ಏನನ್ನು ಸಾಧಿಸಬಹುದು ಎಂಬುದನ್ನು ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ 2024 ತೋರಿಸುತ್ತದೆ,ʼ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಹೇಳಿದರು.

Read More
Next Story