
FIFA ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಲಿಯೋನೆಲ್ ಮೆಸ್ಸಿ: ಅತಿಹೆಚ್ಚು ಗೋಲುಗಳ ಹೊಸ ದಾಖಲೆ
ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಮಿರೊಸ್ಲಾವ್ ಕ್ಲೋಸ್ ಅವರ ದಾಖಲೆಯನ್ನು ಹಿಂದಿಕ್ಕಿದ ಮೆಸ್ಸಿ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ.
ವಿಶ್ವ ಫುಟ್ಬಾಲ್ ದಂತಕಥೆ, ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಇತಿಹಾಸ ಪುಟ ಸೇರಿದ್ದಾರೆ. ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಸಾರ್ವಕಾಲಿಕ ಮಹಾ ದಾಖಲೆಯನ್ನು ಮೆಸ್ಸಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಿಶ್ವಕಪ್‌ನ 'ಜೆ' ಗುಂಪಿನ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ ಅಮೋಘ ಗೋಲು ಗಳಿಸುವ ಮೂಲಕ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ನಾಯಕ ಈ ಐತಿಹಾಸಿಕ ಸಾಧನೆಗೆ ಪಾತ್ರರಾದರು. ಇದರೊಂದಿಗೆ ಸತತ ಎರಡು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಕ್ಲೋಸ್ ದಾಖಲೆ ಧೂಳೀಪಟ ಮಾಡಿದ ಮೆಸ್ಸಿ!
ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಗಳಿಸಿದ ಈ ಗೋಲಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಲಿಯೊನೆಲ್ ಮೆಸ್ಸಿ ಅವರ ಒಟ್ಟು ಗೋಲುಗಳ ಸಂಖ್ಯೆ 17ಕ್ಕೇರಿದೆ. ಈ ಮೂಲಕ ಜರ್ಮನಿಯ ದಿಗ್ಗಜ ಆಟಗಾರ ಮಿರೊಸ್ಲಾವ್ ಕ್ಲೋಸ್ ಅವರ ಹೆಸರಲ್ಲಿದ್ದ 16 ಗೋಲುಗಳು ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಪ್ರಸ್ತುತ 38 ವರ್ಷ ವಯಸ್ಸಿನ ಮೆಸ್ಸಿ, ಸತತ ಆರು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿರುವ ಫ್ರಾನ್ಸ್‌ನ ಜಸ್ಟ್ ಫಾಂಟೈನ್ ಹಾಗೂ ಬ್ರೆಜಿಲ್‌ನ ಜೈರ್ಜಿಝಿನೊ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ತಮ್ಮ 200ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ಮೆಸ್ಸಿ, ತಮ್ಮ ಮೊದಲ ವಿಶ್ವಕಪ್ ಹ್ಯಾಟ್ರಿಕ್ ನೆರವಿನೊಂದಿಗೆ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದಾರೆ.
ಮೆಸ್ಸಿ-ರೊನಾಲ್ಡೊ ಇಬ್ಬರೂ ಶ್ರೇಷ್ಠ ಆಟಗಾರರು: ಎಂಬಾಪ್ಪೆ
ಇತ್ತೀಚೆಗಷ್ಟೇ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ನಡುವೆ ತಮ್ಮನ್ನು ಹೋಲಿಕೆ ಮಾಡುವುದನ್ನು ಫ್ರಾನ್ಸ್‌ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪ್ಪೆ ತಳ್ಳಿಹಾಕಿದ್ದರು. "ಕ್ರಿಸ್ಟಿಯಾನೊ ರೊನಾಲ್ಡೊ ಜತೆಗೆ ಮೆಸ್ಸಿ ಕೂಡ ಶ್ರೇಷ್ಠ ಆಟಗಾರ ಎಂಬುದು ಸ್ಪಷ್ಟ. ನಾನು ಕೇವಲ ನನ್ನ ತಂಡ ಮತ್ತೊಂದು ವಿಶ್ವಕಪ್ ಗೆಲ್ಲಲು ನೆರವಾಗಲು ಶ್ರಮಿಸುತ್ತೇನೆ. ಉಳಿದ ಹೋಲಿಕೆಯ ಚರ್ಚೆಗಳನ್ನು ಕೇವಲ ಪತ್ರಕರ್ತರಿಗೆ ಬಿಡುತ್ತೇನೆ" ಎಂದು ಎಂಬಾಪ್ಪೆ ಹೇಳಿದ್ದರು. ಅಲ್ಲದೆ, ವೈಯಕ್ತಿಕ ದಾಖಲೆಗಳಿಗಿಂತ ತಂಡಕ್ಕೆ ಟ್ರೋಫಿ ಗೆದ್ದುಕೊಡುವುದು ಹೆಚ್ಚು ಮುಖ್ಯ ಎಂದು ಫ್ರಾನ್ಸ್ ನಾಯಕ ಸ್ಪಷ್ಟಪಡಿಸಿದ್ದರು.

