
ಏಷ್ಯನ್ ಗೇಮ್ಸ್ : ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ
ಏಷನ್ ಗೇಮ್ಸ್‌ನಲ್ಲಿ ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳು ನೀಡಿದ್ದಾರೆ.
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ದೀರ್ಘಕಾಲದ ನಿರೀಕ್ಷೆಯಾಗಿದ್ದ ಎರಡನೇ ಚಿನ್ನದ ಪದಕ ಅಂತಿಮವಾಗಿ ಶೂಟಿಂಗ್ ರೇಂಜ್‌ನಲ್ಲಿ ಲಭಿಸಿದೆ. ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳು ನೀಡಿದ್ದಾರೆ.
ಭಾರತವು ಮಹಿಳಾ ಕ್ರಿಕೆಟ್‌ನಲ್ಲಿ ಮೊದಲ ಚಿನ್ನದ ಪದಕವನ್ನು ಗೆದ್ದು ಸಂಭ್ರಮಿಸಿತ್ತು. ಇದೀಗ ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡನೇ ಚಿನ್ನದ ಪದಕದ ಮೂಲಕ ಭಾರತ ಪದಕ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಮಲ್‌ಜೀತ್ ಮತ್ತು ಸುರುಚಿ ಅವರ ಯುವ ಜೋಡಿ, ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಅರ್ಹತಾ ಸುತ್ತಿನಲ್ಲಿ 587 ಅಂಕಗಳನ್ನು ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಈ ಜೋಡಿ, ಫೈನಲ್‌ನಲ್ಲಿಯೂ ಅದೇ ಲಯವನ್ನು ಕಾಯ್ದುಕೊಂಡಿತು. ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಈ ಜೋಡಿ, ದಕ್ಷಿಣ ಕೊರಿಯಾದ ಪ್ರಬಲ ಪೈಪೋಟಿಯ ನಡುವೆಯೂ 484.6 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿತು. ಈ ಅಂಕಗಳು ಈ ಸ್ಪರ್ಧೆಯ ಹೊಸ ಏಷ್ಯನ್ ದಾಖಲೆಯಾಗಿದ್ದು, ಭಾರತೀಯ ಶೂಟಿಂಗ್ ಕ್ಷೇತ್ರದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಬೆಳ್ಳಿ ಪದಕ ಪಡೆದರೆ, ಇರಾನಿನ ಜೋಡಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿಯ ಸಿಂಚನ
ಏಷ್ಯನ್ ಕ್ರೀಡಾಕೂಟದ ಆರನೇ ದಿನವು ಭಾರತಕ್ಕೆ ಮಿಶ್ರ ಫಲಿತಾಂಶವನ್ನು ನೀಡಿದೆ. ರೈಫಲ್ ಶೂಟಿಂಗ್ ಸ್ಪರ್ಧೆಯ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಕ್ಷ ಪಾಟೀಲ್ ಅವರನ್ನೊಳಗೊಂಡ ತಂಡವು ಒಟ್ಟು 1762 ಅಂಕಗಳನ್ನು ಗಳಿಸಿತು. ಶಕ್ತಿಯುತ ಚೀನಾ ತಂಡದ ವಿರುದ್ಧದ ಪೈಪೋಟಿಯಲ್ಲಿ ಭಾರತ ಅಲ್ಪ ಅಂತರದಿಂದ ಚಿನ್ನ ಕೈತಪ್ಪಿಸಿಕೊಂಡರೂ, ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯಾ ಮತ್ತು ನೀರಜ್ ಉತ್ತಮ ಫಾರ್ಮ್ ಪ್ರದರ್ಶಿಸಿದ್ದು, ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇವರಿಂದ ಮತ್ತೊಂದು ಚಿನ್ನದ ನಿರೀಕ್ಷೆ ಭಾರತೀಯ ಅಭಿಮಾನಿಗಳಲ್ಲಿದೆ. ಈವರೆಗೆ ಭಾರತ ರೈಫಲ್ ಶೂಟಿಂಗ್‌ನಲ್ಲಿ ಹಲವು ಪದಕಗಳನ್ನು ಗೆದ್ದಿದ್ದರೂ, ಚಿನ್ನದ ಪದಕದ ಬರ ಇನ್ನೂ ಮುಂದುವರೆದಿದೆ. ಹೀಗಾಗಿ, ವೈಯಕ್ತಿಕ ಸ್ಪರ್ಧೆಯ ಫೈನಲ್ ಈಗ ಎಲ್ಲರ ಗಮನ ಸೆಳೆದಿದೆ.
ಟೇಬಲ್ ಟೆನಿಸ್ , ಸ್ಕ್ವಾಷ್‌ನಲ್ಲಿ ಪದಕ ಖಚಿತ
ಶೂಟಿಂಗ್ ಮಾತ್ರವಲ್ಲದೆ, ಇತರೆ ಕ್ರೀಡೆಗಳಲ್ಲೂ ಭಾರತದ ಪಾರಮ್ಯ ಮುಂದುವರೆದಿದೆ. ಆರನೇ ದಿನದ ಬೆಳಗ್ಗೆಯೇ ಭಾರತಕ್ಕೆ ಎರಡು ಪದಕಗಳು ಖಚಿತವಾಗಿವೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿದೆ. ಸ್ಕ್ವಾಷ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಜೋಡಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕನಿಷ್ಠ ಕಂಚಿನ ಪದಕವನ್ನು ಖಾತರಿಪಡಿಸಿದೆ. ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಅವರ ವೈಯಕ್ತಿಕ ಸಾಧನೆಗೆ ಈ ಚಿನ್ನದ ಪದಕ ಅತಿದೊಡ್ಡ ಗೌರವವಾಗಿದೆ. ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ ತಲುಪಲು ವಿಫಲರಾಗಿದ್ದರೂ, ತಂಡವಾಗಿ ಗೆಲ್ಲುವ ಛಲದಿಂದ ಈ ಮಹತ್ತರ ಸಾಧನೆ ಮಾಡಿದ್ದಾರೆ.

