ನನ್ನ ಹೋರಾಟ ಈಗಷ್ಟೇ ಶುರುವಾಗಿದೆ: ವಿನೇಶ್ ಫೋಗಟ್
ರೋಹ್ಟಕ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಇಲ್ಲಿನ ಸರ್ವಖಾಪ್ ಪಂಚಾಯತಿ ಚಿನ್ನದ ಪದಕ ನೀಡಿ ಗೌರವಿಸಿತು.
ʻನನ್ನ ಹೋರಾಟ ಕೊನೆಗೊಂಡಿಲ್ಲ; ಈಗಷ್ಟೇ ಶುರುವಾಗಿದೆ. ನಮ್ಮ ಹೆಣ್ಣುಮಕ್ಕಳ ಗೌರವಕ್ಕಾಗಿ ಹೋರಾಟ ಈಗಷ್ಟೇ ಪ್ರಾರಂಭವಾಗಿದೆ. ಇದನ್ನೇ ನಾನು ನಮ್ಮ ಧರಣಿ ಸತ್ಯಾಗ್ರಹದಲ್ಲಿ ಹೇಳಿದ್ದೇನೆ,ʼ ಎಂದು ಫೋಗಟ್ ಕಾರ್ಯಕ್ರಮದಲ್ಲಿ ಹೇಳಿದರು.
ಫೋಗಟ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕಳೆದ ವರ್ಷ ನಡೆದ ಲೈಂಗಿಕ ಕಿರುಕುಳ ಆಂದೋಲನದ ಭಾಗವಾಗಿದ್ದರು.
ʻಪ್ಯಾರಿಸ್‌ನಲ್ಲಿ ಆಡಲು ಸಾಧ್ಯವಾಗದೆ ಇದ್ದಾಗ, ನಾನು ಬಹಳ ದುರದೃಷ್ಟವಂತೆ ಎಂದು ಭಾವಿಸಿದ್ದೆ. ಆದರೆ, ಭಾರತಕ್ಕೆ ವಾಪಸಾದ ಬಳಿಕ ಜನರ ಪ್ರೀತಿ ಹಾಗೂ ಬೆಂಬಲವನ್ನು ನೋಡಿದ ನಂತರ ನಾನು ಬಹಳ ಅದೃಷ್ಟಶಾಲಿ ಎಂದು ಭಾಸವಾಗುತ್ತಿದೆ,ʼ ಎಂದು ಹೇಳಿದರು.
ʻಸಮುದಾಯದ ಇಂತಹ ಸನ್ಮಾನಗಳು ಇತರ ಮಹಿಳಾ ಕ್ರೀಡಾಪಟುಗಳಿಗೂ ಬೆಂಬಲ ನೀಡುತ್ತವೆ. ಯಾವುದೇ ಪದಕಕ್ಕಿಂತ ಹೆಚ್ಚು ಎನ್ನಬಹುದಾದ ಈ ಗೌರವಕ್ಕೆ ನಾನು ನಿಮಗೆ ಎಂದೆಂದಿಗೂ ಋಣಿಯಾಗಿರುತ್ತೇನೆ,ʼ ಎಂದು ಹೇಳಿದರು.
ಹರಿಯಾಣದ ಬಲಾಲಿ ಮೂಲದ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಫೈನಲ್ ಪಂದ್ಯದ ದಿನ ಅನರ್ಹಗೊಂಡಿದ್ದರು.