ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ಷಣಗಣನೆ: 126 ಅಥ್ಲೀಟ್‌ಗಳೊಂದಿಗೆ ಪದಕ ಬೇಟೆಗೆ ಭಾರತ ರೆಡಿ
x

ಕಾಮನ್‌ವೆಲ್ತ್ ಗೇಮ್ಸ್ 2026

ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ಷಣಗಣನೆ: 126 ಅಥ್ಲೀಟ್‌ಗಳೊಂದಿಗೆ ಪದಕ ಬೇಟೆಗೆ ಭಾರತ ರೆಡಿ

ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜುಲೈ 23ರಿಂದ ಭಾರತದ ಅಭಿಯಾನ ಆರಂಭವಾಗಲಿದೆ. ನೀರಜ್ ಚೋಪ್ರಾ, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್ ಪ್ರಮುಖ ಪದಕ ಭರವಸೆ.


Click the Play button to hear this message in audio format

ಸ್ಕಾಟ್‌ಲ್ಯಾಂಡ್‌ನ ಬಂದರು ನಗರಿ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಈ ಬಹು ನಿರೀಕ್ಷಿತ ಕ್ರೀಡಾಕೂಟದಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಸುಮಾರು 3,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದು, 10 ಕ್ರೀಡೆಗಳ 215 ವಿಭಾಗಗಳಲ್ಲಿ ಪದಕಕ್ಕಾಗಿ ಸೆಣಸಲಿದ್ದಾರೆ.

ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೆಚ್ಚ ನಿಯಂತ್ರಣದ ಉದ್ದೇಶದಿಂದ ಆಯೋಜಕರು ಕ್ರೀಡೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ಪರಿಣಾಮವಾಗಿ, ಭಾರತದ ಪದಕ ನಿರೀಕ್ಷೆ ಹೆಚ್ಚಿದ್ದ ಕೆಲವು ಕ್ರೀಡೆಗಳು ಈ ಬಾರಿ ಸ್ಪರ್ಧಾ ಪಟ್ಟಿಯಿಂದ ಹೊರಗುಳಿದಿವೆ. ಕೇವಲ 10 ಪ್ರಮುಖ ಕ್ರೀಡೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಭಾರತೀಯ ತಂಡದ ಪದಕ ಬೇಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದಾಗ್ಯೂ, 126 ಅಥ್ಲೀಟ್‌ಗಳನ್ನು ಒಳಗೊಂಡಿರುವ ಭಾರತ ತಂಡ ಗ್ಲಾಸ್ಗೋದಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಚ್ಚಿನ ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.

ಮೂರು ಕ್ರೀಡೆಗಳ ಮೇಲೆ ಭಾರತದ ಪದಕದ ಭರವಸೆ

ಈ ಬಾರಿಯ ಭಾರತದ ಪ್ರಮುಖ ಪದಕ ಭರವಸೆ ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್ ಮತ್ತು ಬಾಕ್ಸಿಂಗ್ ವಿಭಾಗಗಳಲ್ಲಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪ್ರಮುಖ ಸ್ಪರ್ಧಿಯಾಗಿದ್ದು, ಪಾಕಿಸ್ತಾನದ ಅರ್ಷದ್ ನದೀಮ್ ಅವರಿಂದ ಕಠಿಣ ಪೈಪೋಟಿ ಎದುರಾಗಲಿದೆ. ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್, ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಹಾಗೂ ದೂರದ ಓಟದಲ್ಲಿ ಗುಲ್ವೀರ್ ಸಿಂಗ್ ಅವರ ಮೇಲೂ ನಿರೀಕ್ಷೆಯಿದೆ.

ವೇಟ್‌ಲಿಫ್ಟಿಂಗ್ ಮತ್ತು ಬಾಕ್ಸಿಂಗ್‌ನಲ್ಲಿ ಚಿನ್ನದ ನಿರೀಕ್ಷೆ

ವೇಟ್‌ಲಿಫ್ಟಿಂಗ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಬಿಂದ್ಯಾರಾಣಿ ದೇವಿ ಹಾಗೂ ಜ್ಞಾನೇಶ್ವರಿ ಯಾದವ್ ಕೂಡ ಪದಕದ ಸ್ಪರ್ಧೆಯಲ್ಲಿದ್ದಾರೆ. ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ವಿಶ್ವ ಚಾಂಪಿಯನ್ ಜೈಸ್ಮಿನ್ ಲಂಬೋರಿಯಾ, ಸಾಕ್ಷಿ ಚೌಧರಿ ಮತ್ತು ಪ್ರೀತಿ ಪವಾರ್ ಭಾರತದ ಪ್ರಮುಖ ಭರವಸೆಗಳಾಗಿದ್ದಾರೆ.

ಇತರೆ ವಿಭಾಗಗಳಲ್ಲೂ ಪದಕದ ನಿರೀಕ್ಷೆ

ಜುಡೋದಲ್ಲಿ ತುಲಿಕಾ ಮಾನ್, ಲಾನ್ ಬೌಲ್ಸ್ ತಂಡ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ನ ಸೋಮನ್ ರಾಣಾ ಅವರಿಂದಲೂ ಭಾರತಕ್ಕೆ ಪದಕದ ನಿರೀಕ್ಷೆ ಇದೆ.

ಭಾರತದ ಪ್ರಮುಖ ವೇಳಾಪಟ್ಟಿ

ಜುಲೈ 23ರಂದು ಮಧ್ಯಾಹ್ನ 2 ಗಂಟೆಗೆ ಪುರುಷರ ಸಿಂಗಲ್ಸ್ ಹಾಗೂ ಮಹಿಳೆಯರ ಪೇರ್ಸ್ ಲಾನ್ ಬೌಲ್ಸ್ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಅದೇ ದಿನ ರಾತ್ರಿ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಜುಲೈ 24ರಿಂದ ಬಾಕ್ಸಿಂಗ್, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಪ್ಯಾರಾ ಪವರ್‌ಲಿಫ್ಟಿಂಗ್ ಹಾಗೂ ಈಜು ಸ್ಪರ್ಧೆಗಳು ಆರಂಭವಾಗಲಿವೆ. ಜುಲೈ 26ರಂದು ವೇಟ್‌ಲಿಫ್ಟಿಂಗ್ ಸ್ಪರ್ಧೆಗಳು ಆರಂಭವಾಗಲಿದ್ದು, ಮೀರಾಬಾಯಿ ಚಾನು ಸೇರಿದಂತೆ ಭಾರತದ ಪ್ರಮುಖ ಆಟಗಾರರು ಕಣಕ್ಕಿಳಿಯಲಿದ್ದಾರೆ.

ಜುಲೈ 27ರಿಂದ ಅಥ್ಲೆಟಿಕ್ಸ್ ಸ್ಪರ್ಧೆಗಳು ಆರಂಭವಾಗಲಿದ್ದು, ಜುಲೈ 31ರಂದು ನೀರಜ್ ಚೋಪ್ರಾ ಸ್ಪರ್ಧಿಸಲಿರುವ ಪುರುಷರ ಜಾವೆಲಿನ್ ಫೈನಲ್ ಸೇರಿದಂತೆ ಹಲವು ಪದಕ ಸ್ಪರ್ಧೆಗಳು ನಡೆಯಲಿವೆ. ಆಗಸ್ಟ್ 1ರಂದು ಬಾಕ್ಸಿಂಗ್ ಚಿನ್ನದ ಪದಕದ ಪಂದ್ಯಗಳು ನಡೆಯಲಿದ್ದು, ಆಗಸ್ಟ್ 2ರಂದು ಕಾಮನ್‌ವೆಲ್ತ್ ಗೇಮ್ಸ್ 2026ರ ಸಮಾರೋಪ ಸಮಾರಂಭ ನಡೆಯಲಿದೆ.

ಎಲ್ಲಿ ವೀಕ್ಷಿಸಬಹುದು?

ಕಾಮನ್‌ವೆಲ್ತ್ ಗೇಮ್ಸ್ 2026ರ ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ದೂರದರ್ಶನ ಸ್ಪೋರ್ಟ್ಸ್ ವಾಹಿನಿಗಳು ಪ್ರಸಾರ ಮಾಡಲಿವೆ. ಡಿಡಿ ಫ್ರೀ ಡಿಶ್‌ನಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಸೋನಿ ಲೈವ್ ಮೂಲಕ ನೇರಪ್ರಸಾರ ಲಭ್ಯವಿರಲಿದೆ.

Read More
Next Story