ಗ್ಲ್ಯಾಸ್ಗೋ ಕ್ರೀಡಾಕೂಟ: ಶಾಟ್‌ಪುಟ್‌ನಲ್ಲಿ ಕಂಚು ಗೆದ್ದ ಕನ್ನಡಿತಿ ಕೆ.ಎಸ್. ಶಿಲ್ಪಾ
x

ಗ್ಲ್ಯಾಸ್ಗೋ ಕ್ರೀಡಾಕೂಟ: ಶಾಟ್‌ಪುಟ್‌ನಲ್ಲಿ ಕಂಚು ಗೆದ್ದ ಕನ್ನಡಿತಿ ಕೆ.ಎಸ್. ಶಿಲ್ಪಾ

ನೈಜೀರಿಯಾದ ಕ್ರೀಡಾಪಟು ಯೂಚೇರಿಯಾ ಇಯಾಜಿ ಅವರು ಎಸೆತದಲ್ಲಿ ನಿಯಮ ಉಲ್ಲಂಘನೆ ಪರಿಣಾಮ ಅನರ್ಹಗೊಂಡರು. ಇದು ಶಿಲ್ಪಾ ಅವರನ್ನುನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಲು ಸಹಾಯವಾಯಿತು.


Click the Play button to hear this message in audio format

ಸ್ಕಾಟ್‌ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಹೊಸ ಇತಿಹಾಸವನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಕರ್ನಾಟಕದ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚುಗಾರಕೊಪ್ಪಲಿನ ಹೆಮ್ಮೆಯ ಪುತ್ರಿ ಕೆ.ಎಸ್. ಶಿಲ್ಪಾ ಅವರು ಪ್ಯಾರಾ ಅಥ್ಲೆಟಿಕ್ಸ್ ಶಾಟ್‌ಪುಟ್‌ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮಹಿಳೆಯರ ಎಫ್-57 ವಿಭಾಗದ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಶಿಲ್ಪಾ ಅವರು 7.26 ಮೀಟರ್‌ ದೂರಕ್ಕೆ ಶಾಟ್ ಪುಟ್‌ ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭದಲ್ಲಿ ಈ ಪ್ರಯತ್ನ ಅವರಿಗೆ ನಾಲ್ಕನೇ ಸ್ಥಾನವನ್ನು ತಂದುಕೊಟ್ಟಿತ್ತು. ಪದಕದ ಆಸೆಯಲ್ಲಿದ್ದ ಶಿಲ್ಪಾ ಅವರಿಗೆ ಆರಂಭದಲ್ಲಿ ಕೊಂಚ ನಿರಾಸೆಯಾದರೂ, ಅದೃಷ್ಟ ಅವರ ಬೆನ್ನಿಗಿತ್ತು. ಸ್ಪರ್ಧೆಯ ನಂತರ ನಡೆದ ಅಧಿಕೃತ ಪರಿಶೀಲನೆಯಲ್ಲಿ ನೈಜೀರಿಯಾದ ಕ್ರೀಡಾಪಟು ಯೂಚೇರಿಯಾ ಇಯಾಜಿ ಅವರ ಎಸೆತದಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂತು. ಪರಿಣಾಮವಾಗಿ, ನೈಜೀರಿಯಾದ ಆಟಗಾರ್ತಿಯನ್ನು ಅನರ್ಹಗೊಳಿಸಲಾಯಿತು. ಈ ಅಧಿಕೃತ ಬದಲಾವಣೆಯ ನಂತರ ಶಿಲ್ಪಾ ಅವರು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದರು, ಹೀಗೆ ಅವರಿಗೆ ಕಂಚಿನ ಪದಕ ಖಚಿತವಾಯಿತು.

ಈ ಸ್ಪರ್ಧೆಯು ಭಾರತಕ್ಕೆ ದ್ವಿಗುಣ ಸಂತೋಷವನ್ನು ನೀಡಿದೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಭಾರತೀಯ ಆಟಗಾರ್ತಿ ಶರ್ಮಿಳಾ ಅವರು 9.81 ಮೀಟರ್ಸ್ ದೂರಕ್ಕೆ ಶಾಟ್ ಪಟ್ ಎಸೆಯುವ ಮೂಲಕ ಬಂಗಾರದ ಪದಕವನ್ನು ಗೆದ್ದುಕೊಂಡರು. ಒಟ್ಟಾರೆಯಾಗಿ, ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡು ಪದಕಗಳು ಲಭಿಸಿದ್ದು, ಭಾರತದ ಪದಕ ಪಟ್ಟಿಯು ಈಗ 10ಕ್ಕೆ ಏರಿಕೆಯಾಗಿದೆ.

ಬಾಲ್ಯದ ನೋವು ಮತ್ತು ಕಠಿಣ ಪಯಣ

36 ವರ್ಷದ ಶಿಲ್ಪಾ ಅವರ ಬದುಕು ಹೋರಾಟದ ಕಥೆಯಾಗಿದೆ. ಕೇವಲ 4ನೇ ವಯಸ್ಸಿನಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತವೊಂದರಲ್ಲಿ ಅವರು ತಮ್ಮ ಕಾಲು ಕಳೆದುಕೊಂಡಿದ್ದರು. ದೈಹಿಕ ಅಂಗವೈಕಲ್ಯವು ಅವರ ಕನಸುಗಳಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ರೈತ ದಂಪತಿಗಳ ಮಗಳಾದ ಶಿಲ್ಪಾ, ಮಧ್ಯಮ ವರ್ಗದ ಸಂಕಷ್ಟಗಳನ್ನು ದಾಟಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಆರಂಭದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ತಮಗಿದ್ದ ಕ್ರೀಡಾ ಆಸಕ್ತಿಯನ್ನು ಕೈಬಿಡಲಿಲ್ಲ. ಶಿಕ್ಷಕಿಯಾಗಿ ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ, ಮೈದಾನದಲ್ಲಿ ತಮ್ಮ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದರು.

ಶಿಕ್ಷಕಿಯಿಂದ ಕ್ರೀಡಾಳುಯಾಗಿ

ಅಧ್ಯಾಪನ ವೃತ್ತಿಯ ಬದ್ಧತೆಯ ನಡುವೆಯೂ ಕ್ರೀಡಾಭ್ಯಾಸಕ್ಕೆ ಸಮಯ ಮೀಸಲಿಟ್ಟಿದ್ದು ಅವರ ಸಾಧನೆಯ ಹಿಂದಿನ ದೊಡ್ಡ ರಹಸ್ಯ. ಸತತ ಅಭ್ಯಾಸ ಮತ್ತು ತರಬೇತಿಯ ಮೂಲಕ ಶಾಟ್‌ಪಟ್ ಸ್ಪರ್ಧೆಯಲ್ಲಿ ನಿಪುಣತೆ ಪಡೆದರು. ಅಂಗವೈಕಲ್ಯವನ್ನು ಮೆಟ್ಟಿ ನಿಂತು, ದೈಹಿಕ ಸವಾಲುಗಳನ್ನು ಮೀರಿ ನಿಂತ ಅವರ ಪರಿಶ್ರಮಕ್ಕೆ ಇಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಸಿಕ್ಕಿದೆ. ರಾಜ್ಯದ ಸಣ್ಣ ಹಳ್ಳಿಯೊಂದರಿಂದ ಬಂದ ಮಹಿಳೆಯೊಬ್ಬಳು ಗ್ಲ್ಯಾಸ್ಗೋದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನಿಂತಿರುವುದು ಇಂದಿನ ಯುವ ಪೀಳಿಗೆಗೆ ಮತ್ತು ದೈಹಿಕ ಸವಾಲುಗಳನ್ನು ಹೊಂದಿರುವವರಿಗೆ ದೊಡ್ಡ ಪಾಠವಾಗಿದೆ.

ಪದಕಗಳ ಪಟ್ಟಿಯಲ್ಲಿ ಭಾರತದ ಮೇಲುಗೈ

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಶಿಲ್ಪಾ ಅವರ ಈ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿದೆ. ಇದರಲ್ಲಿ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳು ಸೇರಿವೆ. ಶಿಲ್ಪಾ ಅವರ ಸಾಧನೆಯು ಭಾರತದ ಪದಕದ ಭೇಟೆಗೆ ಹೊಸ ಚಾಲನೆ ನೀಡಿದ್ದು, ಅವರ ಈ ಗೆಲುವು ಕ್ರೀಡಾಭಿಮಾನಿಗಳ ಪಾಲಿಗೆ ಮರೆಯಲಾಗದ ಕ್ಷಣವಾಗಿದೆ.

ಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದನೆ

2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ಎಫ್-57 ಶಾಟ್‌ಪುಟ್‌ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದ ಕರ್ನಾಟಕದ ಹೆಮ್ಮೆಯ ಪುತ್ರಿ ಕೆ.ಎಸ್. ಶಿಲ್ಪಾ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಈ ಅದ್ಭುತ ಸಾಧನೆಯು ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅವರ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಮತ್ತು ಅಚಲವಾದ ಮನೋಬಲವು ಮುಂದಿನ ದಿನಗಳಲ್ಲಿ ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ದೊಡ್ಡ ಕನಸುಗಳನ್ನು ಕಾಣಲು ಮತ್ತು ಶ್ರೇಷ್ಠತೆಯತ್ತ ಶ್ರಮಿಸಲು ಸ್ಫೂರ್ತಿಯಾಗಲಿದೆ. ಇದೇ ರೀತಿ ನಿರಂತರ ಯಶಸ್ಸನ್ನು ಕಾಣಲಿ ಮತ್ತು ಭಾರತಕ್ಕಾಗಿ ಇನ್ನೂ ಹೆಚ್ಚಿನ ಕೀರ್ತಿ ಹಾಗೂ ಪದಕಗಳನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Read More
Next Story