
ಜರ್ಮನಿಯ ದರ್ಪಕ್ಕೆ ಬ್ರೇಕ್: 2-1 ಗೋಲುಗಳಿಂದ ಗೆದ್ದು ಬೀಗಿದ ಈಕ್ವೆಡಾರ್
ಈಕ್ವೆಡಾರ್ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಇದಕ್ಕೂ ಮುನ್ನ 2006ರಲ್ಲಿ ಈ ಸಾಧನೆ ಮಾಡಲಾಗಿತ್ತು. ಜರ್ಮನಿ ವಿರುದ್ಧ ಈಕ್ವೆಡಾರ್ ಜಯಗಳಿಸಿದೆ.
2026ರ ಫಿಫಾ ವಿಶ್ವಕಪ್‌ನ ಅಖಾಡದಲ್ಲಿ ನಡೆದ ರೋಚಕ ಪಂದ್ಯದಲ್ಲಿ, ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಲಿಷ್ಠ ಜರ್ಮನಿಯ ತಂಡವನ್ನು ಮಣಿಸುವ ಮೂಲಕ ಈಕ್ವೆಡಾರ್ ಹೊಸ ಇತಿಹಾಸ ಸೃಷ್ಟಿಸಿದೆ. 2-1 ಗೋಲುಗಳ ಅಂತರದಿಂದ ಜರ್ಮನಿ ವಿರುದ್ಧ ಜಯಭೇರಿ ಬಾರಿಸಿದ ಈಕ್ವೆಡಾರ್, ಸುದೀರ್ಘ 20 ವರ್ಷಗಳ ನಂತರ ವಿಶ್ವಕಪ್‌ನ ನಾಕೌಟ್ ಹಂತಕ್ಕೆ ತೆರಳಿದೆ.
ಮೆಟ್ ಲೈಫ್ ಸ್ಟೇಡಿಯಂನಲ್ಲಿ ನೆರೆದಿದ್ದ 80,663ಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯ ಆರಂಭವಾಯಿತು. ಪಂದ್ಯದ ಆರಂಭದಲ್ಲಿ ಜರ್ಮನಿ ಸಂಪೂರ್ಣ ಮೇಲುಗೈ ಸಾಧಿಸುವ ಲಕ್ಷಣಗಳನ್ನು ತೋರಿತು. ಕೇವಲ 2ನೇ ನಿಮಿಷದಲ್ಲೇ ಲಿರಾಯ್ ಸಾನೆ ಅವರು ಗೋಲು ಬಾರಿಸಿ ಜರ್ಮನಿಯನ್ನು 1-0 ಮುನ್ನಡೆಗೆ ಕೊಂಡೊಯ್ದರು. ಇದು ಜರ್ಮನಿಯ ವಿಶ್ವಕಪ್ ಇತಿಹಾಸದ ಎರಡನೇ ಅತಿ ವೇಗದ ಗೋಲು ಎಂಬ ದಾಖಲೆಗೂ ಪಾತ್ರವಾಯಿತು. ಆದರೆ, ಜರ್ಮನಿಯ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಈಕ್ವೆಡಾರ್ ತಂಡದ ಮದ್ಯಂತರ ಆಟಗಾರ ನಿಲ್ಸನ್ ಅಂಗುಲೋ, ಪಂದ್ಯದ 9ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸುವ ಮೂಲಕ ಈಕ್ವೆಡಾರ್‌ಗೆ ಪಂದ್ಯದಲ್ಲಿ ಜೀವ ತುಂಬಿದರು. ಪೆಡ್ರೊ ವಿಟೆ ಅವರಿಂದ ಪಾಸ್ ಪಡೆದ ಅಂಗುಲೋ, ಜರ್ಮನಿಯ ಅಲೆಕ್ಸಾಂಡರ್ ಪಾವ್ಲೋವಿಕ್ ಅವರ ಕಾಲಿನ ಮಧ್ಯೆ ಚೆಂಡನ್ನು ನುಸುಳಿಸಿ, ಅನುಭವಿ ಗೋಲ್‌ಕೀಪರ್ ಮ್ಯಾನುಯೆಲ್ ನಾಯರ್ ಅವರನ್ನು ವಂಚಿಸಿ ನೆಟ್ ಸೇರಿಸಿದರು. ಈ ಮೂಲಕ ಈಕ್ವೆಡಾರ್ 1-1 ಸಮಬಲ ಸಾಧಿಸಿತು.
ದ್ವಿತೀಯಾರ್ಧದ ನಾಟಕೀಯ ತಿರುವುಗಳು
ಪಂದ್ಯದ ಎರಡನೇ ಅವಧಿಯಲ್ಲಿ ಕ್ರೀಡಾಭಿಮಾನಿಗಳಿಗೆ ಭಾರಿ ರೋಚಕತೆ ಕಾದಿತ್ತು. ದ್ವಿತೀಯಾರ್ಧದ ಆರಂಭದಲ್ಲೇ ಕೈ ಹಾವರ್ಟ್ಜ್ ಅವರನ್ನು ಜೋಯಲ್ ಆರ್ಡೊನೆಜ್ ಕೆಡವಿದ್ದಕ್ಕೆ ರೆಫರಿ ಟೋರಿ ಪೆನ್ಸೊ ಪೆನಾಲ್ಟಿ ನೀಡಿದ್ದರು. ಆದರೆ, ವಿಎಆರ್ ಪರಿಶೀಲನೆಯ ನಂತರ, ಅದಕ್ಕೂ ಮುನ್ನ ಲಿರಾಯ್ ಸಾನೆ ಅವರು ವಿಟೆ ವಿರುದ್ಧ ಫೌಲ್ ಮಾಡಿದ್ದನ್ನು ಗಮನಿಸಿದ ರೆಫರಿ, ಪೆನಾಲ್ಟಿ ನಿರ್ಧಾರವನ್ನು ರದ್ದುಗೊಳಿಸಿದರು. ಇದು ಈಕ್ವೆಡಾರ್‌ಗೆ ದೊಡ್ಡ ನಿರಾಳತೆಯನ್ನು ತಂದುಕೊಟ್ಟಿತು. ಪಂದ್ಯದ 77ನೇ ನಿಮಿಷದ ಆ ಕ್ಷಣ ಬರುವವರೆಗೆ ಉಭಯ ತಂಡಗಳೂ ಗೆಲುವಿಗಾಗಿ ಹರಸಾಹಸ ಪಟ್ಟವು. ಪೆಡ್ರೊ ವಿಟೆ ಅವರ ಕಾರ್ನರ್ ಕಿಕ್ ಅನ್ನು ಕೆವಿನ್ ರೊಡ್ರಿಗಸ್ ಅವರು ಹೆಡರ್ ಮೂಲಕ ಗೋಲಿನತ್ತ ತಿರುಗಿಸಿದರು. ಚೆಂಡು ಗೋಲ್‌ಕೀಪರ್ ಮ್ಯಾನುಯೆಲ್ ನಾಯರ್ ಅವರ ಕೈಗೆ ಸಿಗುವ ಮುನ್ನವೇ, ಗಾಂಜಾಲೊ ಪ್ಲಾಟಾ ತಮ್ಮ ಎಡಗಾಲಿನ ಟೋ ಬಳಸಿ ಚೆಂಡನ್ನು ಗೋಲು ಪೆಟ್ಟಿಗೆಯ ಮೇಲ್ಭಾಗಕ್ಕೆ ತಳ್ಳಿದರು. ಈ ನಿರ್ಣಾಯಕ ಗೋಲು ಈಕ್ವೆಡಾರ್‌ಗೆ 2-1 ಮುನ್ನಡೆ ತಂದುಕೊಟ್ಟಿತು. ಈಕ್ವೆಡಾರ್ ಕೋಚ್ ಸೆಬಾಸ್ಟಿಯನ್ ಬೆಕಾಸೆಸ್ ಅವರು ಸ್ಟ್ಯಾಂಡ್‌ಗೆ ಓಡಿ ಬಂದು ಸಂಭ್ರಮಿಸಿದ್ದು ಪಂದ್ಯದ ಮತ್ತೊಂದು ವಿಶೇಷವಾಗಿತ್ತು.
ಐತಿಹಾಸಿಕ ಸಾಧನೆ ಮತ್ತು ದಾಖಲೆಗಳು
ಈಕ್ವೆಡಾರ್ ತನ್ನ ಇತಿಹಾಸದಲ್ಲಿ ಎರಡನೇ ಬಾರಿಗೆ ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಇದಕ್ಕೂ ಮುನ್ನ 2006ರಲ್ಲಿ ಈ ಸಾಧನೆ ಮಾಡಲಾಗಿತ್ತು. ಕಳೆದ 11 ಪಂದ್ಯಗಳಿಂದ ಅಜೇಯವಾಗಿ ಗೆಲ್ಲುತ್ತಿದ್ದ ಜರ್ಮನಿಯ ವಿಜಯದ ಓಟಕ್ಕೆ ಈಕ್ವೆಡಾರ್ ಅಲ್ಪವಿರಾಮ ಹಾಕಿತು. ಈ ಪಂದ್ಯದೊಂದಿಗೆ 2026ರ ವಿಶ್ವಕಪ್‌ನ ಒಟ್ಟು ಪ್ರೇಕ್ಷಕರ ಸಂಖ್ಯೆ 3.58 ಕೋಟಿಗೆ ಏರಿತು, ಇದು 1994ರ ಅಮೆರಿಕ ವಿಶ್ವಕಪ್‌ನ ದಾಖಲೆಯನ್ನು ಮುರಿದಿದೆ. ಸೋಲಿನ ಹೊರತಾಗಿಯೂ, ಜರ್ಮನಿ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಐವರಿ ಕೋಸ್ಟ್ ತಂಡವೂ 6 ಅಂಕಗಳೊಂದಿಗೆ ಸಮನಾಗಿದ್ದರೂ, ಜರ್ಮನಿ ಗೋಲುಗಳ ವ್ಯತ್ಯಾಸದಲ್ಲಿ ಮೇಲುಗೈ ಸಾಧಿಸಿದೆ. ಈಕ್ವೆಡಾರ್ ನಾಲ್ಕು ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು, ಅತ್ಯುತ್ತಮ ಮೂರನೇ ತಂಡಗಳಲ್ಲಿ ಒಂದಾಗಿ ನಾಕೌಟ್‌ಗೆ ಪ್ರವೇಶ ಪಡೆದಿದೆ.
ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಜರ್ಮನಿ, ಮುಂಬರುವ ಸೋಮವಾರ ಮ್ಯಾಸಚೂಸೆಟ್ಸ್‌ನ ಫಾಕ್ಸ್‌ಬರೋದಲ್ಲಿ ರೌಂಡ್ ಆಫ್ 32 ಪಂದ್ಯವನ್ನು ಆಡಲಿದೆ. ಅಲ್ಲಿ ಜರ್ಮನಿ ತಂಡವು ಪರಾಗ್ವೆ, ಆಸ್ಟ್ರೇಲಿಯಾ ಅಥವಾ ಸ್ವೀಡನ್ ತಂಡಗಳಲ್ಲಿ ಯಾವುದಾದರೊಂದನ್ನು ಎದುರಿಸುವ ಸಾಧ್ಯತೆಯಿದೆ. 40ರ ಹರೆಯದ ಗೋಲ್‌ಕೀಪರ್ ಮ್ಯಾನುಯೆಲ್ ನಾಯರ್ ಅವರ ನಿವೃತ್ತಿಯ ನಂತರದ ಮರಳುವಿಕೆ ಈ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆಯಿತು.

