
fifa: ಗೋಲುಗಳ ಸುರಿಮಳೆ: 68 ವರ್ಷಗಳ ದಾಖಲೆ ಮುರಿದ ಫಿಫಾ ವಿಶ್ವಕಪ್ 2026..!
ಕೇವಲ 33 ಪಂದ್ಯಗಳಲ್ಲಿ 100 ಗೋಲುಗಳು ದಾಖಲಾಗುವ ಮೂಲಕ, ಫುಟ್‌ಬಾಲ್ ಇತಿಹಾಸದಲ್ಲಿ ಕಳೆದ 68 ವರ್ಷಗಳಲ್ಲಿ ಕಾಣದಂತಹ ದಾಖಲೆಯನ್ನು ಈ ಆವೃತ್ತಿ ನಿರ್ಮಿಸಿದೆ.
ಫುಟ್‌ಬಾಲ್ ಲೋಕದ ಮಹಾಕುಂಭ ಫಿಫಾ ವಿಶ್ವಕಪ್ 2026 ತನ್ನ ಆರಂಭಿಕ ದಿನಗಳಿಂದಲೇ ಗೋಲುಗಳ ಸುರಿಮಳೆಯೊಂದಿಗೆ ಹೊಸ ಇತಿಹಾಸವನ್ನು ಬರೆಯುತ್ತಿದೆ. ಈ ಟೂರ್ನಿಯಲ್ಲಿ ದಾಖಲಾಗಿರುವ ಗೋಲುಗಳ ವೇಗ ಮತ್ತು ಸಂಖ್ಯೆ ಫುಟ್‌ಬಾಲ್ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ. ಕೇವಲ 33 ಪಂದ್ಯಗಳಲ್ಲಿ 100 ಗೋಲುಗಳು ದಾಖಲಾಗುವ ಮೂಲಕ, ಫುಟ್‌ಬಾಲ್ ಇತಿಹಾಸದಲ್ಲಿ ಕಳೆದ 68 ವರ್ಷಗಳಲ್ಲಿ ಕಾಣದಂತಹ ದಾಖಲೆಯನ್ನು ಈ ಆವೃತ್ತಿ ನಿರ್ಮಿಸಿದೆ.
ಈ ಐತಿಹಾಸಿಕ ಸಾಧನೆಗೆ ವೇದಿಕೆಯಾಗಿದ್ದು ಹೂಸ್ಟನ್ ಕ್ರೀಡಾಂಗಣ. ನೆದರ್ಲೆಂಡ್ಸ್ ಮತ್ತು ಸ್ವೀಡನ್ ತಂಡಗಳ ನಡುವಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತನ್ನ ಪ್ರಾಬಲ್ಯ ಮೆರೆದಿತು. 5-1 ಅಂತರದಲ್ಲಿ ನೆದರ್ಲೆಂಡ್ಸ್ ಗೆಲುವು ಸಾಧಿಸಿದ ಈ ಪಂದ್ಯದಲ್ಲಿ, ನೆದರ್ಲೆಂಡ್ಸ್‌ನ ಸ್ಟಾರ್ ವಿಂಗರ್ ಕೋಡಿ ಗ್ಯಾಕ್ಪೋ ಬಾರಿಸಿದ ಗೋಲು ಟೂರ್ನಿಯ 100ನೇ ಗೋಲಾಗಿ ದಾಖಲಾಯಿತು. ಆ ಮೂಲಕ ವಿಶ್ವಕಪ್ ಇತಿಹಾಸದ ಪುಟಗಳಲ್ಲಿ ಈ ಪಂದ್ಯ ಸದಾ ನೆನಪಿನಲ್ಲಿ ಉಳಿಯಲಿದೆ. ವಿಶ್ವಕಪ್ ಇತಿಹಾಸವನ್ನು ಅವಲೋಕಿಸಿದರೆ, 1954ರ ಸ್ವಿಟ್ಜರ್ಲೆಂಡ್ ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 100 ಗೋಲುಗಳು ದಾಖಲಾಗಿದ್ದವು; ಆಗ ಕೇವಲ 20 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಲಾಗಿತ್ತು. ನಂತರ 1958ರ ಸ್ವೀಡನ್ ವಿಶ್ವಕಪ್‌ನಲ್ಲಿ 33 ಪಂದ್ಯಗಳ ಅವಧಿಯಲ್ಲಿ 100 ಗೋಲುಗಳು ದಾಖಲಾಗಿದ್ದವು. ಅಂದಿನಿಂದ ಈವರೆಗೆ, ಅಂದರೆ ಕಳೆದ 68 ವರ್ಷಗಳಲ್ಲಿ ಯಾವುದೇ ವಿಶ್ವಕಪ್ 35ಕ್ಕಿಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿರಲಿಲ್ಲ. ಇದೀಗ 2026ರ ಆವೃತ್ತಿಯು 1958ರ ದಾಖಲೆಯನ್ನು ಸರಿಗಟ್ಟುವ ಮೂಲಕ ಮತ್ತೊಮ್ಮೆ ಗೋಲುಗಳ ಮಹಾಪೂರವನ್ನೇ ಹರಿಸಿದೆ.
ಗೋಲುಗಳ ಸುರಿಮಳೆಗೆ ಪ್ರಮುಖ ಕಾರಣಗಳು
ಈ ಬಾರಿಯ ವಿಶ್ವಕಪ್‌ನಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗೋಲುಗಳು ದಾಖಲಾಗಲು ತಾಂತ್ರಿಕ, ಆಡಳಿತಾತ್ಮಕ ಮತ್ತು ಆಟದ ಸ್ವರೂಪದಲ್ಲಿನ ಬದಲಾವಣೆಗಳೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ. ಇದರಿಂದಾಗಿ ಬಲಿಷ್ಠ ಮತ್ತು ದುರ್ಬಲ ತಂಡಗಳ ನಡುವಿನ ಅಂತರ ಹೆಚ್ಚಾಗಿದೆ. ಉದಾಹರಣೆಗೆ ಜರ್ಮನಿಯು ಕುರಾಸಾವೊ ವಿರುದ್ಧ 7-1 ಗೋಲುಗಳಿಂದ ಮತ್ತು ಕೆನಡಾ ತಂಡವು ಖತಾರ್ ವಿರುದ್ಧ 6-0 ಅಂತರದಿಂದ ಜಯಗಳಿಸಿವೆ. ಇಂತಹ ಪಂದ್ಯಗಳಲ್ಲಿ ಬಲಿಷ್ಠ ತಂಡಗಳು ದುರ್ಬಲ ತಂಡಗಳ ವಿರುದ್ಧ ಗೋಲುಗಳ ಬೇಟೆಯನ್ನೇ ಆಡುತ್ತಿವೆ. ಫಿಫಾ ಈ ಬಾರಿ ಆಟದ ಅವಧಿಯ ವ್ಯರ್ಥವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಪಂದ್ಯದ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಈ ನೀತಿಯಿಂದಾಗಿ ಪಂದ್ಯದ ಅಂತ್ಯದಲ್ಲಿ ಗೋಲುಗಳು ದಾಖಲಾಗುವ ಪ್ರಮಾಣ ಹೆಚ್ಚಾಗಿದೆ. ದಾಖಲಾಗಿರುವ 100 ಗೋಲುಗಳಲ್ಲಿ ಸುಮಾರು ಶೇ.28ರಷ್ಟು ಗೋಲುಗಳು ಪಂದ್ಯದ ಕೊನೆಯ 15 ನಿಮಿಷಗಳಲ್ಲಿ ಮತ್ತು ಸ್ಟಾಪೇಜ್ ಸಮಯದಲ್ಲಿ ಮೂಡಿಬಂದಿರುವುದು ಆಟಗಾರರ ದಣಿಯದ ಹೋರಾಟಕ್ಕೆ ಸಾಕ್ಷಿಯಾಗಿದೆ.
ಫಿಫಾ ಜಾರಿಗೆ ತಂದಿರುವ ಐವರು ಆಟಗಾರರನ್ನು ಬದಲಾಯಿಸುವ ನಿಯಮದಿಂದಾಗಿ, ತಂಡಗಳು ಪಂದ್ಯದ ಉದ್ದಕ್ಕೂ ತಾಜಾ ಆಟಗಾರರನ್ನು ಅಂಕಣಕ್ಕಿಳಿಸಲು ಸಾಧ್ಯವಾಗುತ್ತಿದೆ. ಇದು ಪಂದ್ಯದ ತೀವ್ರತೆಯನ್ನು ಕೊನೆಯ ನಿಮಿಷದವರೆಗೂ ಕಾಯ್ದುಕೊಳ್ಳಲು ನೆರವಾಗುತ್ತಿದೆ. ಈ ಟೂರ್ನಿಯಲ್ಲಿ ಬಳಸುತ್ತಿರುವ ಅಡಿಡಾಸ್‌ನ ಹೊಸ ಫುಟ್‌ಬಾಲ್, ಗಾಳಿಯಲ್ಲಿ ಅನಿರೀಕ್ಷಿತವಾಗಿ ತಿರುವು ಪಡೆದುಕೊಳ್ಳುತ್ತಿದೆ ಎಂಬುದು ಆಟಗಾರರ ಅಭಿಪ್ರಾಯ. ಚೆಂಡಿನ ಏರೋಡೈನಾಮಿಕ್ಸ್ ಕಾರಣದಿಂದ ಅದು ವೇಗವಾಗಿ ಚಲಿಸುತ್ತಿದ್ದು, ಗೋಲ್‌ಕೀಪರ್‌ಗಳಿಗೆ ಅದನ್ನು ತಡೆಯುವುದು ಕಷ್ಟಸಾಧ್ಯವಾಗುತ್ತಿದೆ. ಬಾಕ್ಸ್‌ನ ಹೊರಗಿನಿಂದ ಬಾರಿಸಿದ 10ಕ್ಕೂ ಹೆಚ್ಚು ಗೋಲುಗಳು ಇದಕ್ಕೆ ಸಾಕ್ಷಿಯಾಗಿದೆ.
ಈ ವಿಶ್ವಕಪ್ ಆಟಗಾರರ ಕೌಶಲ ಮತ್ತು ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡುವ ತಂಡಗಳ ಬಲವನ್ನು ತೋರಿಸುತ್ತಿದೆ. ಈವರೆಗೆ ಕೇವಲ 33 ಪಂದ್ಯಗಳಲ್ಲಿ 100 ಗೋಲುಗಳಾಗಿದ್ದರೆ, ಮುಂಬರುವ ಪಂದ್ಯಗಳಲ್ಲಿ ಈ ಸಂಖ್ಯೆ ಎಲ್ಲಿಗೆ ತಲುಪಬಹುದು ಎಂಬುದು ಫುಟ್‌ಬಾಲ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

