
ಉಜ್ಬೇಕಿಸ್ತಾನ್ ವಿರುದ್ಧ 3-1 ಅಂತರದಿಂದ ಭರ್ಜರಿ ಜಯ ದಾಖಲಿಸಿದ ನಂತರ ಕಾಂಗೋ ಆಟಗಾರರು ಸಂಭ್ರಮಾಚರಣೆ ಮಾಡಿದರು.
ಫಿಫಾ ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಆಫ್ರಿಕಾ; ದಾಖಲೆಯ 9 ತಂಡಗಳು ನಾಕೌಟ್ ಹಂತಕ್ಕೆ ಲಗ್ಗೆ!
ಟ್ಯುನೀಷಿಯಾ ಹೊರತುಪಡಿಸಿ ಉಳಿದ ಒಂಬತ್ತು ತಂಡಗಳು ಮುಂದಿನ ಹಂತಕ್ಕೆ ಮುನ್ನಡೆದಿರುವುದು ಇಡೀ ಫುಟ್‌ಬಾಲ್ ಜಗತ್ತೇ ಆಫ್ರಿಕಾದತ್ತ ತಿರುಗಿ ನೋಡುವಂತೆ ಮಾಡಿದೆ.
2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಆಫ್ರಿಕಾ ಖಂಡದ ರಾಷ್ಟ್ರಗಳು ಅಭೂತಪೂರ್ವ ಇತಿಹಾಸ ಸೃಷ್ಟಿಸಿವೆ. ಭಾನುವಾರ ನಡೆದ ನಿರ್ಣಾಯಕ ಪಂದ್ಯಗಳಲ್ಲಿ ಆಸ್ಟ್ರಿಯಾ ವಿರುದ್ಧ ಅಲ್ಜೀರಿಯಾ 3-3 ಗೋಲುಗಳ ರೋಮಾಂಚಕ ಡ್ರಾ ಸಾಧಿಸಿದರೆ, ಉಜ್ಬೇಕಿಸ್ತಾನ್ ವಿರುದ್ಧ ಕಾಂಗೋ 3-1 ಅಂತರದ ಭರ್ಜರಿ ಜಯ ದಾಖಲಿಸಿತು. ಈ ಫಲಿತಾಂಶಗಳೊಂದಿಗೆ ಆಫ್ರಿಕಾ ಖಂಡದ ಒಟ್ಟು 9 ದೇಶಗಳು ಅಧಿಕೃತವಾಗಿ ಟೂರ್ನಿಯ 'ರೌಂಡ್ ಆಫ್ 32' (ನಾಕೌಟ್) ಹಂತಕ್ಕೆ ಅರ್ಹತೆ ಪಡೆದು ಹೊಸ ದಾಖಲೆ ಬರೆದಿವೆ.
ಈ ಬಾರಿಯ ವಿಶ್ವಕಪ್‌ಗೆ ಆಫ್ರಿಕಾದಿಂದ ದಾಖಲೆಯ 10 ರಾಷ್ಟ್ರಗಳು ಅರ್ಹತೆ ಪಡೆದಿದ್ದವು. ಈ ಪೈಕಿ ಟ್ಯುನೀಷಿಯಾ ಹೊರತುಪಡಿಸಿ ಉಳಿದ ಒಂಬತ್ತು ತಂಡಗಳು ಮುಂದಿನ ಹಂತಕ್ಕೆ ಮುನ್ನಡೆದಿರುವುದು ಇಡೀ ಫುಟ್‌ಬಾಲ್ ಜಗತ್ತೇ ಆಫ್ರಿಕಾದತ್ತ ತಿರುಗಿ ನೋಡುವಂತೆ ಮಾಡಿದೆ.
ಹಳೆಯ ದಾಖಲೆಗಳು ಧೂಳೀಪಟ
ವಿಶ್ವಕಪ್ ಇತಿಹಾಸದಲ್ಲಿ ಇದಕ್ಕಿಂತ ಮುನ್ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ಎರಡು ಆಫ್ರಿಕನ್ ದೇಶಗಳು ಮಾತ್ರ ನಾಕೌಟ್ ಹಂತ ತಲುಪಿದ ಉದಾಹರಣೆ ಇತ್ತು (2014 ಮತ್ತು 2022ರಲ್ಲಿ). ಆದರೆ 17 ದಿನಗಳ ಸುದೀರ್ಘ ಹಾಗೂ ರೋಚಕ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ನಂತರ, ಈ ಬಾರಿ ಆಫ್ರಿಕ ಖಂಡದ ಬರೋಬ್ಬರಿ 9 ತಂಡಗಳು ಅಂತಿಮ 32ರ ಘಟ್ಟ ತಲುಪಿ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿವೆ. ಮೊರಾಕೊ, ದಕ್ಷಿಣ ಆಫ್ರಿಕಾ, ಸೆನೆಗಲ್, ಐವರಿ ಕೋಸ್ಟ್, ಘಾನಾ, ಕೇಪ್ ವರ್ಡೆ, ಈಜಿಪ್ಟ್, ಕಾಂಗೋ ಮತ್ತು ಅಲ್ಜೀರಿಯಾ ನಾಕೌಟ್ ತಲುಪಿವೆ.
ಜಗತ್ತಿಗೆ ಸವಾಲೊಡ್ಡಿದ ಮೊರಾಕೊ
ನಾಲ್ಕು ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕನ್ ದೇಶ ಎಂಬ ಕೀರ್ತಿಗೆ ಪಾತ್ರವಾಗಿದ್ದ ಮೊರಾಕೊ, ಈ ಬಾರಿಯೂ ತನಗಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಬಲಿಷ್ಠ ಬ್ರೆಜಿಲ್ ತಂಡವನ್ನು 1-1 ಗೋಲುಗಳಿಂದ ಡ್ರಾ ಪಂದ್ಯದಲ್ಲಿ ಕಟ್ಟಿಹಾಕಿರುವ ಮೊರಾಕೊ, ಈ ಬಾರಿಯೂ ಪ್ರಶಸ್ತಿಯ ರೇಸ್‌ನಲ್ಲಿ ಮುನ್ನುಗ್ಗುವ ಸೂಚನೆ ನೀಡಿದೆ. ಇನ್ನು 2030ರ ಮುಂದಿನ ವಿಶ್ವಕಪ್‌ಗೆ ಮೊರಾಕೊ ಸಹ-ಆತಿಥ್ಯ ವಹಿಸುತ್ತಿರುವುದು ಮತ್ತೊಂದು ವಿಶೇಷ.
ಅಚ್ಚರಿ ಮೂಡಿಸಿದ ಕೇಪ್ ವರ್ಡೆ, ಕಾಂಗೋ
ಈ ವರ್ಷದ ಟೂರ್ನಿಯು ಆಫ್ರಿಕನ್ ಫುಟ್‌ಬಾಲ್‌ನ ನಿಜವಾದ ಆಳ ಮತ್ತು ಬಲವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಯಾರೂ ನಿರೀಕ್ಷಿಸದ ಕೇಪ್ ವರ್ಡೆ ಮತ್ತು ಕಾಂಗೋ ತಂಡಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ನಾಕೌಟ್ ಹಂತಕ್ಕೇರಿ ಅಚ್ಚರಿ ಮೂಡಿಸಿವೆ. ಕಾಂಗೋ ತಂಡವು ಮುಂದಿನ ಪಂದ್ಯದಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಎದುರಿಸಬೇಕಾದ ದೊಡ್ಡ ಸವಾಲನ್ನು ಹೊಂದಿದೆ. ಆದಾಗ್ಯೂ, ತಂಡವು ಪ್ರಸ್ತುತ ಐತಿಹಾಸಿಕ ವಿಜಯದ ಸಂಭ್ರಮದಲ್ಲಿದೆ.
"ಈಗ ಪ್ರತಿಯೊಂದು ಆಫ್ರಿಕನ್ ತಂಡವೂ ವಿಶ್ವಕಪ್ ಗೆಲ್ಲುವ ದೊಡ್ಡ ಕನಸನ್ನು ಕಾಣಬಹುದು. ಮುಂಬರುವ ಪಂದ್ಯಗಳು ನಮಗೆ ಅತ್ಯಂತ ಪ್ರಮುಖವಾಗಿವೆ. ನಮ್ಮ ತಂಡದಲ್ಲಿ ನೋಹ್ ಸದಿಕಿ, ನ್ಗಲಾಯೆಲ್ ಮುಕಾವು ಅವರಂತಹ ಯುವ ಆಟಗಾರರ ಪ್ರತಿಭೆಯನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ನಮ್ಮ ಒಕ್ಕೂಟವು ದೊಡ್ಡ ಗುರಿಯನ್ನು ತಲುಪಬಲ್ಲದು ಎಂಬುದಕ್ಕೆ ಇದೇ ಸಾಕ್ಷಿ." ಎಂದು ಕಾಂಗೋ ಫುಟ್‌ಬಾಲ್ ಆಟಗಾರ ಯೋನೆ ವಿಸ್ಸಾ ತಿಳಿಸಿದ್ದಾರೆ.
ವಿಶ್ವದ ಘಟಾನುಘಟಿ ತಂಡಗಳಾದ ಬ್ರೆಜಿಲ್, ಇಂಗ್ಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್ ವಿರುದ್ಧವೇ ಆಫ್ರಿಕನ್ ತಂಡಗಳು ಈ ಬಾರಿ ಪಾಯಿಂಟ್‌ಗಳನ್ನು ಕಸಿದುಕೊಂಡಿರುವುದು, ಮುಂಬರುವ ದಿನಗಳಲ್ಲಿ ವಿಶ್ವ ಫುಟ್‌ಬಾಲ್‌ನಲ್ಲಿ ಆಫ್ರಿಕಾ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

