
ಈಜಿಪ್ಟ್ ವಿರುದ್ಧ ಗೆದ್ದ ನಂತರ ಅರ್ಜೆಂಟೀನಾ ತಂಡದ ಆಟಗಾರರು ಮೆಸ್ಸಿಯನ್ನು ಎತ್ತಿ ಸಂಭ್ರಮಿಸಿದರು.
FIFA: ಮೆಸ್ಸಿ ಮ್ಯಾಜಿಕ್, ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಅರ್ಜೆಂಟೀನಾ
ಪಂದ್ಯದ ಆರಂಭದಿಂದಲೇ ಈಜಿಪ್ಟ್ ತಂಡ ಅರ್ಜೆಂಟೀನಾಗೆ ತೀವ್ರ ಪೈಪೋಟಿ ನೀಡಿತು. 15ನೇ ನಿಮಿಷದಲ್ಲೇ ಈಜಿಪ್ಟ್‌ನ ಯಾಸರ್ ಇಬ್ರಾಹಿಂ ಅದ್ಭುತ ಹೆಡರ್ ಮೂಲಕ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ತಮ್ಮ ಅದ್ಭುತ ಆಟದ ಮೂಲಕ ಅರ್ಜೆಂಟೀನಾ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದ್ದಾರೆ. ವಿಶ್ವಕಪ್‌ನ ಅತ್ಯಂತ ರೋಮಾಂಚನಕಾರಿ ಪಂದ್ಯದಲ್ಲಿ ಕೇವಲ 11 ನಿಮಿಷಗಳ ಆಟ ಬಾಕಿ ಇರುವಾಗ 2 ಗೋಲುಗಳಿಂದ ಹಿಂದುಳಿದಿದ್ದ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಈಜಿಪ್ಟ್ ವಿರುದ್ಧ 3-2 ಗೋಲುಗಳ ಐತಿಹಾಸಿಕ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಮುಂದಿನ ಶನಿವಾರ ಮಿಸೌರಿಯ ಕಾನ್ಸಾಸ್ ಸಿಟಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಸ್ವಿಟ್ಜರ್ಲೆಂಡ್ ತಂಡವನ್ನು ಎದುರಿಸಲಿದೆ.
ಆರಂಭಿಕ ಆಘಾತ, ಪೆನಾಲ್ಟಿ ಮಿಸ್!
ಪಂದ್ಯದ ಆರಂಭದಿಂದಲೇ ಈಜಿಪ್ಟ್ ತಂಡ ಅರ್ಜೆಂಟೀನಾಗೆ ತೀವ್ರ ಪೈಪೋಟಿ ನೀಡಿತು. 15ನೇ ನಿಮಿಷದಲ್ಲೇ ಈಜಿಪ್ಟ್‌ನ ಯಾಸರ್ ಇಬ್ರಾಹಿಂ ಅದ್ಭುತ ಹೆಡರ್ ಮೂಲಕ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದಾದ ಕೆಲವೇ ಕ್ಷಣಗಳಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ಕಿಕ್ ಮೂಲಕ ಸ್ಕೋರ್ ಸಮಬಲಗೊಳಿಸುವ ಸುವರ್ಣ ಅವಕಾಶ ಸಿಕ್ಕಿತು. ಆದರೆ, ಲಿಯೋನೆಲ್ ಮೆಸ್ಸಿ ಹೊಡೆದ ಪೆನಾಲ್ಟಿ ಶಾಟ್ ಅನ್ನು ಈಜಿಪ್ಟ್ ಗೋಲ್‌ಕೀಪರ್ ಮೊಸ್ತಫಾ ಶೋಬೈರ್ ತಡೆದರು.
ವಿಶ್ವಕಪ್‌ನ ಸಾರ್ವಕಾಲಿಕ ಅಗ್ರ ಸ್ಕೋರರ್ ಆಗಿದ್ದರೂ, ಮೆಸ್ಸಿ ತಮ್ಮ ವಿಶ್ವಕಪ್ ಇತಿಹಾಸದ 8 ಪೆನಾಲ್ಟಿಗಳಲ್ಲಿ 4ನೇ ಬಾರಿಗೆ ಗೋಲು ಗಳಿಸಲು ವಿಫಲರಾದರು. ಇದಾದ ಬಳಿಕ ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಈಜಿಪ್ಟ್‌ನ ಮೊಸ್ತಫಾ ಜಿಕೊ ಮತ್ತೊಂದು ಗೋಲು ಗಳಿಸಿ 2-0 ಮುನ್ನಡೆಯೊಂದಿಗೆ ಅರ್ಜೆಂಟೀನಾವನ್ನು ಸಂಕಷ್ಟಕ್ಕೆ ತಳ್ಳಿದರು.
ಮೆಸ್ಸಿ ಕಣ್ಣೀರು
39 ವರ್ಷದ ಲಿಯೋನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್ ಆಗಿರಲಿದ್ದು, ಪಂದ್ಯದ ಬಹುಪಾಲು ಸಮಯ ಅರ್ಜೆಂಟೀನಾ ಸೋತು ಹೊರಬೀಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಅರ್ಜೆಂಟೀನಾ ಪರ ಮೊದಲ ಗೋಲು ಗಳಿಸಿ ಆಟದ ಚಹರೆಯನ್ನೇ ಬದಲಿಸಿದರು.
ಅಂತಿಮ ಹಂತದಲ್ಲಿ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದ ಮೆಸ್ಸಿ, 83ನೇ ನಿಮಿಷದಲ್ಲಿ ವಿಶ್ವಕಪ್‌ನಲ್ಲಿ ತಮ್ಮ ದಾಖಲೆಯ 21ನೇ ಗೋಲು ಗಳಿಸುವ ಮೂಲಕ ಸ್ಕೋರ್ ಅನ್ನು 2-2 ರಿಂದ ಸಮಬಲಗೊಳಿಸಿದರು. ಪಂದ್ಯದ ಇಂಜುರಿ ಟೈಮ್‌ನಲ್ಲಿ ಎಂಜೊ ಫೆರ್ನಾಂಡಿಸ್ ಗೆಲುವಿನ ಗೋಲು ಬಾರಿಸುವ ಮೂಲಕ ತಂಡವನ್ನು ವಿಶ್ವಕಪ್‌ನ ಕ್ವಾಟರ್ ಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.
"ನಾವು ಮತ್ತೆ ವಿಶ್ವಕಪ್ ಗೆಲ್ಲಲು ಬಂದಿದ್ದೇವೆ"
ಗೆಲುವಿನ ಬಳಿಕ ಮಾತನಾಡಿದ ಗೋಲು ವೀರ ಎಂಜೊ ಫೆರ್ನಾಂಡಿಸ್, "ಇದು ಎಂದಿಗೂ ಛಲ ಬಿಡದ ಅದ್ಭುತ ಆಟಗಾರರ ಗುಂಪು. ಕತಾರ್ ವಿಶ್ವಕಪ್ ಮುಗಿದು ನಾಲ್ಕು ವರ್ಷಗಳಾಗಿವೆ, ನಾವು ಮತ್ತೊಂದು ವಿಶ್ವಕಪ್‌ನ್ನು ಆನಂದಿಸಲು ಮತ್ತು ಅದನ್ನು ಮತ್ತೊಮ್ಮೆ ಗೆಲ್ಲಲು ಇಲ್ಲಿಗೆ ಬಂದಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾವುಕರಾದ ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಾಲೋನಿ, "ಎಂತಹ ಆಟಗಾರರ ಗುಂಪು, ನಾನು ತುಂಬಾ ಭಾವುಕನಾಗಿದ್ದೇನೆ" ಎಂದು ಶ್ಲಾಘಿಸಿದರು.
1958 ಮತ್ತು 1962 ರಲ್ಲಿ ಬ್ರೆಜಿಲ್ ತಂಡ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ನಂತರ, ಆ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅರ್ಜೆಂಟೀನಾ ಈಗ ಕೇವಲ ಮೂರು ಹೆಜ್ಜೆ ದೂರದಲ್ಲಿದೆ.

