92 ವರ್ಷಗಳ ಐತಿಹಾಸಿಕ ಕಾಯುವಿಕೆ ಅಂತ್ಯ: ಮೊದಲ ಗೆಲುವು ದಾಖಲಿಸಿದ ಈಜಿಪ್ಟ್
x

92 ವರ್ಷಗಳ ಐತಿಹಾಸಿಕ ಕಾಯುವಿಕೆ ಅಂತ್ಯ: ಮೊದಲ ಗೆಲುವು ದಾಖಲಿಸಿದ ಈಜಿಪ್ಟ್

ಫಿಫಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಈಜಿಪ್ಟ್ ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.


Click the Play button to hear this message in audio format

ಫುಟ್‌ಬಾಲ್ ಕ್ರೀಡೆಯು ಈಜಿಪ್ಟ್‌ನ ಜನರ ಜೀವನದ ಅವಿಭಾಜ್ಯ ಅಂಗ. ಆದರೆ, ವಿಶ್ವಕಪ್ ವೇದಿಕೆಯಲ್ಲಿ ಮಾತ್ರ ಈಜಿಪ್ಟ್ ಫುಟ್‌ಬಾಲ್ ತಂಡವು ದಶಕಗಳಿಂದ ಕೇವಲ ನಿರಾಸೆ ಮತ್ತು ಕಣ್ಣೀರನ್ನೇ ಕಂಡಿತ್ತು. ಅಂತಹದೊಂದು ದೀರ್ಘಾವಧಿಯ ನಿರಾಶೆಯ ಕತ್ತಲೆಯನ್ನು ಭಾನುವಾರ ರಾತ್ರಿ ಕೆನಡಾದ ವ್ಯಾಂಕೂವರ್‌ನ 'ಬಿಸಿ ಪ್ಲೇಸ್' ಕ್ರೀಡಾಂಗಣದಲ್ಲಿ ಈಜಿಪ್ಟ್ ತಂಡದ ಆಟಗಾರರು ಯಶಸ್ವಿಯಾಗಿ ಭೇದಿಸಿದ್ದಾರೆ. 1934ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ನಂತರ, ಬರೋಬ್ಬರಿ 92 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಈಜಿಪ್ಟ್ ತಂಡವು ವಿಶ್ವಕಪ್ ಇತಿಹಾಸದ ತನ್ನ ಚೊಚ್ಚಲ ಗೆಲುವನ್ನು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಈಜಿಪ್ಟ್ ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

1934ರ ಇಟಲಿ ವಿಶ್ವಕಪ್‌ನಲ್ಲಿ ಈಜಿಪ್ಟ್ ಮೊದಲ ಬಾರಿಗೆ ಆಡಿದಾಗ ಅದು ಆಫ್ರಿಕಾದಿಂದ ಪ್ರತಿನಿಧಿಸಿದ ಮೊದಲ ದೇಶವಾಗಿತ್ತು. ಅಂದಿನಿಂದ ಇಂದಿನವರೆಗೆ ಹಲವು ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದರೂ, ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಹಲವು ತಲೆಮಾರುಗಳ ಆಟಗಾರರು, ಕೋಟ್ಯಂತರ ಅಭಿಮಾನಿಗಳ ಕನಸುಗಳು ಈ ಬಾರಿಯ ವಿಶ್ವಕಪ್‌ನಲ್ಲಿ ನನಸಾಗಿವೆ. ನ್ಯೂಜಿಲೆಂಡ್ ವಿರುದ್ಧದ ಈ ಗೆಲುವು ಕೇವಲ ಮೂರು ಅಂಕಗಳ ಗಳಿಕೆಯಲ್ಲ, ಇದು ಈಜಿಪ್ಟ್ ಫುಟ್‌ಬಾಲ್‌ನ ವಿವಿಧ ತಲೆಮಾರುಗಳನ್ನು ಜೋಡಿಸುವ ಒಂದು ಭಾವನಾತ್ಮಕ ಕೊಂಡಿಯಾಗಿದೆ. ಪಂದ್ಯದ ಮೊದಲಾರ್ಧದಲ್ಲಿ ನ್ಯೂಜಿಲೆಂಡ್ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪಂದ್ಯದ ಆರಂಭಿಕ ಅವಧಿಯಲ್ಲಿ ನ್ಯೂಜಿಲೆಂಡ್‌ನ ಫಿನ್ ಸುರ್ಮನ್ ಕಾರ್ನರ್ ಕಿಕ್ ಮೂಲಕ ಚೆಂಡನ್ನು ಈಜಿಪ್ಟ್‌ನ ಬಲೆಗೆ ಸೇರಿಸಿ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಈಜಿಪ್ಟ್ 0-1 ಹಿನ್ನಡೆಯಲ್ಲಿದ್ದಾಗ, ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಹಿಂದಿನ ಹಲವು ಪಂದ್ಯಗಳಂತೆಯೇ ಈ ಪಂದ್ಯವೂ ಕೈಜಾರಲಿದೆಯೇ ಎಂಬ ಭೀತಿ ಎದುರಾಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಈಜಿಪ್ಟ್ ತಂಡದ ಆಟಗಾರರು ಅಕ್ಷರಶಃ ಅಬ್ಬರಿಸಿದರು. 58ನೇ ನಿಮಿಷದಲ್ಲಿ ಮೊಹಮ್ಮದ್ ಹಾನಿ ನೀಡಿದ ಸುಂದರ ಕ್ರಾಸ್ ಅನ್ನು ಬಳಸಿಕೊಂಡು ಮುಸ್ತಫಾ ಜಿಕೋ ಹೆಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ತಳ್ಳಿ ಪಂದ್ಯಕ್ಕೆ ಸಮಬಲ ತಂದುಕೊಟ್ಟರು. ಈ ಗೋಲು ಈಜಿಪ್ಟ್ ತಂಡದ ಆಟಗಾರರಲ್ಲಿ ಹೊಸ ಹುಮ್ಮಸ್ಸು ತುಂಬಿತು.

ಮೊಹಮ್ಮದ್ ಸಾಲಾದ್ ಮಾಯಾಜಾಲ

ತಂಡದ ನಾಯಕ ಮತ್ತು ಜಾಗತಿಕ ಸೂಪರ್ ಸ್ಟಾರ್ ಮೊಹಮ್ಮದ್ ಸಾಲಾ ಅವರು ತಾವು ಏಕೆ ವಿಶ್ವದ ಶ್ರೇಷ್ಠ ಆಟಗಾರ ಎಂಬುದನ್ನು ಸಾಬೀತುಪಡಿಸಿದರು. 67ನೇ ನಿಮಿಷದಲ್ಲಿ ಮುಸ್ತಫಾ ಜಿಕೋ ಅವರೊಂದಿಗೆ ಒನ್-ಟು-ಪಾಸ್ ನಡೆಸಿದ ಸಾಲಾ, ಚಾಕಚಕ್ಯತೆಯಿಂದ ಚೆಂಡನ್ನು ಗೋಲು ಪೆಟ್ಟಿಗೆಯ ದೂರದ ಮೂಲೆಯತ್ತ ಒದ್ದು ಈಜಿಪ್ಟ್‌ಗೆ 2-1 ಮುನ್ನಡೆ ತಂದುಕೊಟ್ಟರು. ಆ ಕ್ಷಣ ಕ್ರೀಡಾಂಗಣದಲ್ಲಿ ನೆರೆದಿದ್ದ ಈಜಿಪ್ಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. 81ನೇ ನಿಮಿಷದಲ್ಲಿ ಮತ್ತೊಮ್ಮೆ ಸಾಲಾ ಅವರ ಕಾರ್ನರ್ ಕಿಕ್‌ನಿಂದ ಬಂದ ಚೆಂಡನ್ನು ಬದಲಿ ಆಟಗಾರ ಮಹಮೂದ್ ಟ್ರೆಜೆಗುಯೆಟ್ ಹೆಡರ್ ಮೂಲಕ ಗೋಲಾಗಿಸಿ, ನ್ಯೂಜಿಲೆಂಡ್‌ನ ಸೋಲನ್ನು ಖಚಿತಪಡಿಸಿದರು.

ಕೋಚ್ ಹುಸ್ಸಾಂ ಹಸನ್ ಅವರ ಭಾವನಾತ್ಮಕ ಪ್ರತಿಕ್ರಿಯೆ

ಪಂದ್ಯದ ನಂತರ ಮಾತನಾಡಿದ ಕೋಚ್ ಹುಸ್ಸಾಂ ಹಸನ್, ಈ ಗೆಲುವನ್ನು ಈಜಿಪ್ಟ್‌ನ ಕೋಟ್ಯಂತರ ಜನರ ಗೆಲುವು ಎಂದು ಕರೆದರು. ನನ್ನ ಭಾವನೆಗಳು ಈಜಿಪ್ಟ್ ಜನರ ಭಾವನೆಗಳೇ ಆಗಿವೆ. ನಾನು ಅವರಲ್ಲಿ ಒಬ್ಬ, ನಾನು ಅವರನ್ನು ಪ್ರೀತಿಸುತ್ತೇನೆ. ಕ್ರೀಡಾಂಗಣದಲ್ಲಿರುವವರು ಮತ್ತು ಈಜಿಪ್ಟ್‌ನಲ್ಲಿ ರಾತ್ರಿಯಿಡೀ ಎಚ್ಚರಿದ್ದು ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಈ ಗೆಲುವು ಸಮರ್ಪಿತ," ಎಂದು ಅವರು ಭಾವುಕರಾದರು. ಈಜಿಪ್ಟ್ ತಂಡದ ಗೆಲುವಿನ ನಂತರ ಅವರು ರಾಷ್ಟ್ರಧ್ವಜ ಹಿಡಿದು ಮೈದಾನವನ್ನು ಸುತ್ತಿದ ದೃಶ್ಯ ಅತ್ಯಂತ ಮನಕಲಕುವಂತಿತ್ತು. ಈ ಗೆಲುವಿನೊಂದಿಗೆ ಈಜಿಪ್ಟ್ ತಂಡವು 'ಜಿ' ಗುಂಪಿನಲ್ಲಿ 4 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಮೊದಲ ಪಂದ್ಯದಲ್ಲಿ ಬಲ್ಜಿಯಂ ವಿರುದ್ಧ 1-1 ಡ್ರಾ ಮಾಡಿಕೊಂಡಿದ್ದ ಈಜಿಪ್ಟ್, ಇದೀಗ ನಾಕೌಟ್ ಹಂತಕ್ಕೆ ಪ್ರವೇಶಿಸುವ ಬಲವಾದ ಕನಸನ್ನು ಕಾಣುತ್ತಿದೆ. ಗುಂಪಿನ ಇನ್ನೊಂದು ಪಂದ್ಯದಲ್ಲಿ ಇರಾನ್ ಮತ್ತು ಬಲ್ಜಿಯಂ ಗೋಲು ರಹಿತ ಡ್ರಾ ಮಾಡಿಕೊಂಡಿದ್ದು, ಈಜಿಪ್ಟ್ ತನ್ನ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಇರಾನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಈಜಿಪ್ಟ್‌ನ ನಾಕೌಟ್ ಭವಿಷ್ಯವನ್ನು ನಿರ್ಧರಿಸಲಿದೆ.

ಫುಟ್‌ಬಾಲ್: ಈಜಿಪ್ಟ್‌ನ ಬದುಕಿನ ಮಿಡಿತ

ಈಜಿಪ್ಟ್‌ನಲ್ಲಿ ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ಧರ್ಮದಂತೆ. ರಾಜಕೀಯ ಅಸ್ಥಿರತೆ, ಆರ್ಥಿಕ ಸವಾಲುಗಳು ಎದುರಾದಾಗಲೆಲ್ಲಾ ಫುಟ್‌ಬಾಲ್ ಈಜಿಪ್ಟ್ ಜನರನ್ನು ಒಂದುಗೂಡಿಸುವ ಮಾಧ್ಯಮವಾಗಿದೆ. 1934ರಿಂದ ಇಲ್ಲಿಯವರೆಗೆ ಈ ತಂಡ ಅನುಭವಿಸಿದ ಸೋಲುಗಳು ಹಲವು, ಆದರೆ ಸೋಲದ ಉತ್ಸಾಹ ಮಾತ್ರ ಆಟಗಾರರನ್ನು ಮತ್ತು ಅಭಿಮಾನಿಗಳನ್ನು ಕೈಬಿಟ್ಟಿರಲಿಲ್ಲ. 2026ರ ಈ ವಿಶ್ವಕಪ್ ಗೆಲುವು ಆ ದಶಕಗಳ ನೋವನ್ನು ಮರೆಸಿ, ಹೊಸ ಭರವಸೆಯನ್ನು ನೀಡಿದೆ. ಪಂದ್ಯದ ಕೊನೆಯ ಹಂತದಲ್ಲಿ ಡಿಫೆಂಡರ್ ಹುಸ್ಸಾಂ ಅಬ್ದೆಲ್ ಮಜೀದ್ ಅವರು ಗಾಯಕ್ಕೊಳಗಾಗಿ ಹೊರನಡೆಯಬೇಕಾಯಿತು. ಇದು ತಂಡಕ್ಕೆ ಸ್ವಲ್ಪ ಆತಂಕ ತಂದಿದ್ದರೂ, ಗೆಲುವಿನ ಸಂಭ್ರಮದ ಮುಂದೆ ಅದು ಮರೆಯಾಯಿತು. ಮುಂದಿನ ಇರಾನ್ ವಿರುದ್ಧದ ಪಂದ್ಯದಲ್ಲಿ ಈಜಿಪ್ಟ್ ಇದೇ ರೀತಿಯ ಲಯವನ್ನು ಕಾಯ್ದುಕೊಂಡರೆ, ಈಜಿಪ್ಟ್ ತಂಡವು ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ದೊಡ್ಡ ಸಾಧನೆಯನ್ನು ಮಾಡುವ ನಿರೀಕ್ಷೆಯಿದೆ.

Read More
Next Story