Yastika Bhatia creates history with century at Lord
x

ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಯಸ್ತಿಕಾ ಭಾಟಿಯಾ

ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಇತಿಹಾಸ ಬರೆದ ಯಸ್ತಿಕಾ ಭಾಟಿಯಾ; ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಭಾರತ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಭಾಟಿಯಾ ಕೇವಲ 158 ಎಸೆತಗಳಲ್ಲಿ 113 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು.


Click the Play button to hear this message in audio format

ಕಳೆದ ವರ್ಷ ವೃತ್ತಿಜೀವನಕ್ಕೇ ಕುತ್ತು ತರಬಹುದಾಗಿದ್ದ ಭೀಕರ ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಅಪ್ರತಿಮ ಪುನರಾಗಮನ ಮಾಡಿರುವ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ, ಕ್ರಿಕೆಟ್‌ನ ಕಾಶಿ ಎಂದೇ ಕರೆಯಲಾಗುವ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ಬಾರಿಸಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟರ್‌ ಎಂಬ ಅಭೂತಪೂರ್ವ ಹೆಗ್ಗಳಿಕೆಗೆ ಪಾತ್ರರಾಗಿರುವ ಯಾಸ್ತಿಕಾ, "ನನ್ನ ಶ್ರೇಷ್ಠ ಸಾಧನೆ ಇನ್ನೂ ಬರಬೇಕಿದೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಭಾಟಿಯಾ ಕೇವಲ 158 ಎಸೆತಗಳಲ್ಲಿ 113 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್ ಅನ್ನು 341 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಡಿಕ್ಲೇರ್ ಮಾಡುವ ಮುನ್ನ ಭಾಟಿಯಾ ಅಬ್ಬರಿಸಿದರು. ಇದರೊಂದಿಗೆ ಆತಿಥೇಯ ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಹಾಗೂ ಅಸಾಧ್ಯ ಗುರಿಯನ್ನು ನೀಡಲು ಭಾರತ ಯಶಸ್ವಿಯಾಯಿತು.

ಮೂರನೇ ದಿನದಾಟದ ಮುಕ್ತಾಯದ ನಂತರ ಮಾತನಾಡಿದ 25 ವರ್ಷದ ಎಡಗೈ ಬ್ಯಾಟರ್‌ ಯಸ್ತಿಕಾ ಭಾಟಿಯಾ ಭಾವುಕರಾದರು. "ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಮೊದಲ ಮಹಿಳಾ ಕ್ರಿಕೆಟರ್‌ ಎನಿಸಿಕೊಳ್ಳುವುದು ನಿಜಕ್ಕೂ ನಂಬಲಾಗದ ಸಂಗತಿ. ಕೇವಲ ಆರು ತಿಂಗಳ ಹಿಂದೆ ನಾನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದೆ. ಲಾರ್ಡ್ಸ್‌ನ ಹಾನರ್‌ ಬೋರ್ಡ್‌ನಲ್ಲಿ ನನ್ನ ಹೆಸರು ದಾಖಲಾಗಲಿದೆ ಎಂದು ಯಾರಾದರೂ ಹೇಳಿದ್ದರೆ ನಾನು ಖಂಡಿತ ನಂಬುತ್ತಿರಲಿಲ್ಲ. ನನ್ನ ಅತ್ಯುತ್ತಮ ಪ್ರದರ್ಶನ ಇನ್ನೂ ಹೊರಬರಬೇಕಿದೆ ಎಂದು ನಾನು ಯಾವಾಗಲೂ ನಂಬುತ್ತೇನೆ. ಇದು ಕೇವಲ ಆರಂಭವಷ್ಟೇ, ಮುಂದೆ ಇನ್ನೂ ಸಾಧಿಸುವುದು ಸಾಕಷ್ಟಿದೆ" ಎಂದು ತಿಳಿಸಿದರು.

ಲಾರ್ಡ್ಸ್‌ನ ಹಾನರ್‌ ಬೋರ್ಡ್‌ನಲ್ಲಿ ತನ್ನ ಹೆಸರನ್ನು ತೋರಿಸುತ್ತಿರುವ ಯಸ್ತಿಕಾ ಭಾಟಿಯಾ

ಕುಟುಂಬ, ತರಬೇತುದಾರರಿಗೆ ಕೃತಜ್ಞತೆ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಯಸ್ತಿಕಾ ಅವರ ಎಡ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಯಾಗಿದ್ದರಿಂದ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಿಂದಲೂ ಹೊರಗುಳಿಯಬೇಕಾಯಿತು. ಆ ಕಠಿಣ ದಿನಗಳನ್ನು ನೆನೆದ ಅವರು, ತಮಗೆ ಬೆನ್ನೆಲುಬಾಗಿ ನಿಂತ ಕುಟುಂಬ, ತರಬೇತುದಾರರು ಮತ್ತು ಬಿಸಿಸಿಐನ ಶ್ರೇಷ್ಠತಾ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದರು.

"ಶಸ್ತ್ರಚಿಕಿತ್ಸೆಯ ನಂತರ ಎರಡು ತಿಂಗಳು ನಾನು ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿದ್ದೆ. ಶೂನ್ಯದಿಂದ ನಾನು ಮತ್ತೆ ಎಲ್ಲವನ್ನೂ ಆರಂಭಿಸಬೇಕಾಯಿತು. ದೊಡ್ಡ ಪಂದ್ಯಾವಳಿಗಳನ್ನು ಮಿಸ್ ಮಾಡಿಕೊಳ್ಳುವುದು ಬೇಸರ ತರಿಸಿತ್ತು. ಆದರೆ ಆಟದ ಮೇಲಿನ ಪ್ರೀತಿ ಮತ್ತು ಸಕಾರಾತ್ಮಕ ಮನಸ್ಥಿತಿ ನನ್ನನ್ನು ಮತ್ತೆ ಮೈದಾನಕ್ಕೆ ತಂದು ನಿಲ್ಲಿಸಿದೆ" ಎಂದು ಹೇಳಿದರು.

ಗೆಲುವಿನ ಹೊಸ್ತಿಲಲ್ಲಿ ಭಾರತೀಯ ವನಿತೆಯರು

ಯಸ್ತಿಕಾ ಭಾಟಿಯಾ (113), ಉಪನಾಯಕಿ ಸ್ಮೃತಿ ಮಂಧಾನ (70) ಹಾಗೂ ರಿಚಾ ಘೋಷ್ (ಅಜೇಯ 50) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 341 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಮೂರನೇ ದಿನದ ಆಟದ ಮುಕ್ತಾಯಕ್ಕೆ 130 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿದೆ. ಭಾರತದ ಪರ ಸಯಾಲಿ ಮತ್ತು ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದು ಇಂಗ್ಲೆಂಡ್‌ಗೆ ಆಘಾತ ನೀಡಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಸ್ಮರಣೀಯ ಗೆಲುವು ದಾಖಲಿಸಲು ಭಾರತ ತಂಡಕ್ಕೆ ಈಗ ಕೇವಲ 4 ವಿಕೆಟ್‌ಗಳ ಅಗತ್ಯವಿದೆ.

Read More
Next Story