Wisden Cricket Awards | Four Indians including Gill, Pant named Cricketer of the Year!
x

ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಹಾಗೂ ವೇಗಿ ಮೊಹಮದ್‌ ಸಿರಾಜ್‌

Wisden Awards 2026| ಭಾರತದ ಗಿಲ್, ಪಂತ್ ಸೇರಿ ನಾಲ್ವರು 'ವರ್ಷದ ಶ್ರೇಷ್ಠ ಕ್ರಿಕೆಟಿಗರು'!

2025ರ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಆಟಗಾರರಿಗೆ ವಿಸ್ಡನ್ ಮನ್ನಣೆ ನೀಡಿದೆ.


Click the Play button to hear this message in audio format

ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ಗೌರವ ಎಂದು ಪರಿಗಣಿಸಲ್ಪಟ್ಟಿರುವ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ 2026ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಬಾರಿಯ ಐವರು ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

2025ರ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಆಟಗಾರರಿಗೆ ವಿಸ್ಡನ್ ಮನ್ನಣೆ ನೀಡಿದೆ. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್ ಸೇರಿ 430 ರನ್ ಸಿಡಿಸಿದ್ದ ಶುಭಮನ್ ಗಿಲ್ ಅವರ ಕ್ಲಾಸಿಕ್ ಬ್ಯಾಟಿಂಗ್‌ಗೆ ವಿಸ್ಡನ್ ಮೆಚ್ಚುಗೆ ಸೂಚಿಸಿದೆ. ಅಪಘಾತದ ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ರಿಷಬ್‌ ಪಂತ್, ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳನ್ನು ಬೆಂಡೆತ್ತಿದ ರೀತಿಗೆ ಈ ಅತ್ಯುನ್ನತ ಗೌರವ ಲಭಿಸಿದೆ.

ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಮ್ಯಾಜಿಕ್ ಮಾಡಿದ ರವೀಂದ್ರ ಜಡೇಜಾ ಸದ್ಯ ವಿಶ್ವದ ನಂಬರ್ 1 ಟೆಸ್ಟ್‌ ಆಲ್‌ರೌಂಡರ್ ಪಟ್ಟ ಅಲಂಕರಿಸಿದ್ದು, ಈ ಪ್ರಶಸ್ತಿ ಪಡೆದಿದ್ದಾರೆ. ಲಾರ್ಡ್ಸ್ ಮತ್ತು ಓವಲ್ ಮೈದಾನಗಳಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳ ನಿದ್ದೆಗೆಡಿಸಿದ್ದ ಮೊಹಮ್ಮದ್ ಸಿರಾಜ್ ವೇಗದ ಪಡೆಯ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದರು. ಅವರ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಶಸ್ತಿ ಲಭಿಸಿದೆ. ಇಂಗ್ಲೆಂಡ್‌ನ ಹಸೀಬ್ ಹಮೀದ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಇಂಗ್ಲಿಷ್ ಆಟಗಾರರಾಗಿದ್ದಾರೆ.

ಟೆಸ್ಟ್‌ ನಂಬರ್‌ 1 ಆಲ್‌ರೌಂಡರ್‌ ರವೀಂದ್ರ ಜಡೇಜಾ

ಭಾರತಕ್ಕೆ ಇತರ ಪ್ರಮುಖ ಪ್ರಶಸ್ತಿಗಳ ಗರಿ

ವಿಸ್ಡನ್‌ನ 163ನೇ ಆವೃತ್ತಿಯಲ್ಲಿ ಭಾರತದ ಯುವ ಪಡೆ ಮತ್ತು ಮಹಿಳಾ ಕ್ರಿಕೆಟ್ ಕೂಡ ಪ್ರಾಬಲ್ಯ ಮೆರೆದಿದೆ. ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್‌ ಪ್ರಶಸ್ತಿಗೆ ದೀಪ್ತಿ ಶರ್ಮಾ, ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಅಭಿಷೇಕ್ ಶರ್ಮಾ, ವಿಶ್ವದ ಪ್ರಮುಖ ಪುರುಷ ಕ್ರಿಕೆಟಿಗ ಪ್ರಶಸ್ತಿಗೆ ಮಿಚೆಲ್ ಸ್ಟಾರ್ಕ್ ಆಯ್ಕೆಯಾಗಿದ್ದಾರೆ.

ಮಹಿಳಾ ಕ್ರಿಕೆಟರ್‌ ದೀಪ್ತಿ ಶರ್ಮಾ

ವಿರಾಟ್ ಕೊಹ್ಲಿ ‘ವಿಸ್ಡನ್ ಕಿಂಗ್’

ಈ ಬಾರಿಯ ಪಟ್ಟಿಯಲ್ಲಿ ಕೊಹ್ಲಿ ಹೆಸರಿಲ್ಲದಿದ್ದರೂ, ವಿಸ್ಡನ್ ಇತಿಹಾಸದಲ್ಲಿ ಅವರ ಸಾಧನೆ ಅಜೇಯವಾಗಿದೆ. 2010ರ ದಶಕದ ಅತ್ಯುತ್ತಮ ಏಕದಿನ ಕ್ರಿಕೆಟಿಗ ಪ್ರಶಸ್ತಿ ಹಾಗೂ ಸತತ ಮೂರು ಬಾರಿ (2016-18) ‘ವಿಶ್ವದ ಮುಂಚೂಣಿ ಕ್ರಿಕೆಟಿಗ’ ಗೌರವ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ವಿರಾಟ್ ಅವರದ್ದಾಗಿದೆ.

ಆಯ್ಕೆಯ ಮಾನದಂಡವೇನು?

ಪ್ರತಿ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಕ್ರಿಕೆಟ್ ಸೀಸನ್‌ನಲ್ಲಿ ತೋರಿದ ಪ್ರದರ್ಶನವನ್ನು ಈ ಪ್ರಶಸ್ತಿಗೆ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಕಳೆದ ಸೀಸನ್‌ನಲ್ಲಿ ಭಾರತೀಯರು ಇಂಗ್ಲೆಂಡ್ ನೆಲದಲ್ಲಿ ತೋರಿದ ಅಪ್ರತಿಮ ಹೋರಾಟವೇ ಈ ಬಾರಿ ನಾಲ್ವರು ಭಾರತೀಯರು ಆಯ್ಕೆಯಾಗಲು ಕಾರಣವಾಗಿದೆ.

Read More
Next Story