
Vinesh Photgat: ಕುಸ್ತಿ ಅಖಾಡಕ್ಕೆ ಮರಳಲು ಅಡ್ಡಿ: ಭಾರತೀಯ ಕುಸ್ತಿ ಫೆಡರೇಶನ್ ವಿರುದ್ಧ ವಿನೇಶ್ ಗಂಭೀರ ಆರೋಪ
ಮುಂಬರುವ ಏಷ್ಯನ್ ಗೇಮ್ಸ್ (ಸೆಪ್ಟೆಂಬರ್) ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ (ಅಕ್ಟೋಬರ್) ಅರ್ಹತೆ ಪಡೆಯಲು ಈ ಓಪನ್ ರ್ಯಾಂಕಿಂಗ್ ಟೂರ್ನಿ ಅತ್ಯಂತ ನಿರ್ಣಾಯಕ.
ಪ್ಯಾರಿಸ್ ಒಲಿಂಪಿಕ್ಸ್‌ನ ಕಹಿ ಘಟನೆಯ ಬಳಿಕ, ಸುಮಾರು ಎರಡು ವರ್ಷಗಳ ನಂತರ ಮತ್ತೆ ಸ್ಪರ್ಧಾತ್ಮಕ ಕುಸ್ತಿ ಅಖಾಡಕ್ಕೆ ಮರಳಲು ಸಜ್ಜಾಗಿರುವ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್, ಭಾರತೀಯ ಕುಸ್ತಿ ಫೆಡರೇಶನ್ ಉದ್ದೇಶಪೂರ್ವಕವಾಗಿ ತಮ್ಮ ಹಾದಿಗೆ ಅಡ್ಡಿಯುಂಟುಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಕಂಬ್ಯಾಕ್‌ಗೆ ಅಡ್ಡಿಯಾಗುತ್ತಿರುವ ಎರಡು ಪ್ರಮುಖ ಬೆಳವಣಿಗೆಗಳನ್ನು ಬೆಟ್ಟು ಮಾಡಿರುವ ಅವರು, ಮುಂಬರುವ ಪ್ರತಿಷ್ಠಿತ ಟೂರ್ನಿಗಳಿಗೆ ಅರ್ಹತೆ ಪಡೆಯದಂತೆ ಫೆಡರೇಶನ್ ತೊಂದರೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೋಂದಣಿ ಪೋರ್ಟಲ್ ದಿಢೀರ್ ಬಂದ್
ಮುಂದಿನ ತಿಂಗಳು ನಡೆಯಲಿರುವ 'ನ್ಯಾಷನಲ್ ಓಪನ್ ರ್ಯಾಂಕಿಂಗ್ ಟೂರ್ನಿ'ಯ ಮೂಲಕ ಅಖಾಡಕ್ಕೆ ಮರಳಲು ವಿನೇಶ್ ತರಬೇತಿ ಪಡೆಯುತ್ತಿದ್ದಾರೆ. ಏಪ್ರಿಲ್ 8ರಂದು ಹೊರಡಿಸಲಾದ ಫೆಡರೇಷನ್ ಸುತ್ತೋಲೆಯ ಪ್ರಕಾರ ಏಪ್ರಿಲ್ 30ರವರೆಗೆ ನೋಂದಣಿಗೆ ಅವಕಾಶವಿತ್ತು. ಆದರೆ, ವಿನೇಶ್ ನೋಂದಣಿಗೆ ಮುಂದಾದಾಗ ಪೋರ್ಟಲ್ ಅದಾಗಲೇ ಮುಚ್ಚಲ್ಪಟ್ಟಿದೆ. ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
"ನಾನು ನ್ಯಾಷನಲ್ ಓಪನ್ ರ್ಯಾಂಕಿಂಗ್ ಟೂರ್ನಿಯ ಮೂಲಕ ವಾಪಸ್ ಬರುವ ವಿಶ್ವಾಸದಲ್ಲಿದ್ದೆ. ಏಪ್ರಿಲ್ 30 ರವರೆಗೆ ನೋಂದಣಿ ತೆರೆದಿರಬೇಕಿತ್ತು. ಆದರೆ ನಾನು ಪ್ರಯತ್ನಿಸಿದಾಗ ಪೋರ್ಟಲ್ ಕ್ಲೋಸ್ ಆಗಿತ್ತು. ಆಡಳಿತ ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ" ಎಂದು ವಿನೇಶ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಭೂಷಣ್ ತವರು ಕ್ಷೇತ್ರದಲ್ಲಿ ಟೂರ್ನಿ
ಈ ಟೂರ್ನಿಯು ಮೇ 10 ರಿಂದ ಮೇ 12 ರವರೆಗೆ ಉತ್ತರ ಪ್ರದೇಶದ ಗೊಂಡಾದ ನಂದಿನಿನಗರ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ವಿಶೇಷವೆಂದರೆ, ಈ ಸ್ಥಳವು ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಯಾಗಿದೆ. 2023ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರಸ್ತುತ ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಉದ್ದೇಶಪೂರ್ವಕ ತಡೆ; ವಿನೇಶ್ ಆರೋಪ
ಮುಂಬರುವ ಏಷ್ಯನ್ ಗೇಮ್ಸ್ (ಸೆಪ್ಟೆಂಬರ್) ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ (ಅಕ್ಟೋಬರ್) ಅರ್ಹತೆ ಪಡೆಯಲು ಈ ಓಪನ್ ರ್ಯಾಂಕಿಂಗ್ ಟೂರ್ನಿ ಅತ್ಯಂತ ನಿರ್ಣಾಯಕವಾಗಿದೆ. "ಇದು ನನ್ನನ್ನು ತಡೆಯುವ ಉದ್ದೇಶಪೂರ್ವಕ ಪ್ರಯತ್ನದಂತೆ ಭಾಸವಾಗುತ್ತಿದೆ" ಎಂದಿರುವ ವಿನೇಶ್, ಈ ಹಿಂದೆ ಫೆಡರೇಶನ್ ಕಪ್‌ನಲ್ಲೂ ಆಯ್ಕೆ ಮಾನದಂಡಗಳನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿದ್ದರಿಂದ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ನೆನಪಿಸಿದ್ದಾರೆ.
ಫೆಡರೇಷನ್ ಅಧ್ಯಕ್ಷರ ಸ್ಪಷ್ಟನೆ
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್, "ಯಾವುದೇ ಕ್ರೀಡಾಪಟುವನ್ನು ತಡೆಯುವ ಉದ್ದೇಶ ನಮಗಿಲ್ಲ. ಇತರ ಕೆಲವು ಕುಸ್ತಿಪಟುಗಳಿಗೂ ನೋಂದಣಿ ವೇಳೆ ಇದೇ ಸಮಸ್ಯೆ ಎದುರಾಗಿತ್ತು, ಅವರು ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಿದಾಗ ಅದನ್ನು ಬಗೆಹರಿಸಲಾಗಿದೆ. ಟೂರ್ನಿಯು ಎಲ್ಲರಿಗೂ ಮುಕ್ತವಾಗಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ. 2025ರ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು 2026ರ ಫೆಡರೇಶನ್ ಕಪ್ ತಪ್ಪಿಸಿಕೊಂಡ ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ಕ್ಯಾಂಪ್‌ಗೆ ಆಯ್ಕೆಯಾಗಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟಿದ್ದರೂ, ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ಅನರ್ಹಗೊಂಡಿದ್ದ ವಿನೇಶ್, ಕಳೆದ ಡಿಸೆಂಬರ್‌ನಲ್ಲಿ ಮತ್ತೆ ಕುಸ್ತಿಯತ್ತ ಮುಖ ಮಾಡುವುದಾಗಿ ಪ್ರಕಟಿಸಿದ್ದರು. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗುರಿಯೊಂದಿಗೆ ಅವರು ಮತ್ತೆ ಸಜ್ಜಾಗುತ್ತಿದ್ದಾರೆ.

