
ತಂದೆಯೊಂದಿಗೆ ವೈಭವ್ ಸೂರ್ಯವಂಶಿ
ಭಾರತ ಟಿ20 ತಂಡಕ್ಕೆ 15ರ ಹರೆಯದ ವೈಭವ್ ಆಯ್ಕೆ; ಪೋಷಕರ ಪ್ರಯಾಣಕ್ಕೆ ಬಿಸಿಸಿಐ ವಿಶೇಷ ಅನುಮತಿ
ವೈಭವ್ ಸೂರ್ಯವಂಶಿ ಕೇವಲ 23 ಐಪಿಎಲ್ ಪಂದ್ಯಗಳಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿ ಅಬ್ಬರಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಅವರು ಭಾರತದ ಪರ ಕಣಕ್ಕಿಳಿಯಲಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಗೆ ವೇದಿಕೆ ಸಿದ್ಧಗೊಂಡಿದೆ. ಕೇವಲ 15 ವರ್ಷದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ಅವರನ್ನು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಭಾರತದ ಹಿರಿಯರ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ವೈಭವ್ ಸಜ್ಜಾಗಿದ್ದಾರೆ.
ವೈಭವ್ ಬಗ್ಗೆ ಬಿಸಿಸಿಐ ವಿಶೇಷ ಕಾಳಜಿ!
ವೈಭವ್ ಇನ್ನೂ ಅಪ್ರಾಪ್ತ ವಯಸ್ಕನಾಗಿರುವುದರಿಂದ ಬಿಸಿಸಿಐ ಮಂಡಳಿಯು ಅವರ ಬಗ್ಗೆ ವಿಶೇಷ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕ್ರಿಕೆಟ್ ಇತಿಹಾಸದಲ್ಲೇ ಅಪರೂಪ ಎನ್ನುವಂತೆ, ಈ ವಿದೇಶಿ ಪ್ರವಾಸಗಳಲ್ಲಿ ವೈಭವ್ ಅವರೊಂದಿಗೆ ಪ್ರಯಾಣಿಸಲು ಅವರ ಪೋಷಕರಿಗೆ ಬಿಸಿಸಿಐ ವಿಶೇಷ ಅನುಮತಿ ನೀಡಿದೆ.
ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ಅವನು ಇನ್ನು ಚಿಕ್ಕವನಿದ್ದಾನೆ. ಹಿರಿಯರ ತಂಡದೊಂದಿಗೆ ಪ್ರಯಾಣಿಸುವಾಗ ಉಳಿದವರೆಲ್ಲರೂ ವಯಸ್ಕರಾಗಿರುತ್ತಾರೆ. ಹಾಗಾಗಿ ಅವನ ಪೋಷಕರು ಅಥವಾ ಕುಟುಂಬದ ಯಾರಾದರೂ ಒಬ್ಬರು ಜೊತೆಗಿದ್ದರೆ ಸೂಕ್ತ ಎಂದು ನಾವು ಭಾವಿಸಿದ್ದೇವೆ. ಹಿರಿಯ ಆಟಗಾರರೊಂದಿಗೆ ಹೊಂದಿಕೊಳ್ಳಲು ಅವನಿಗೆ ಸ್ವಲ್ಪ ಸಮಯ ಬೇಕಾಗಬಹುದು, ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೂ ಅವರ ಕುಟುಂಬದ ಪ್ರಯಾಣವನ್ನು ಬಿಸಿಸಿಐ ಬೆಂಬಲಿಸಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ
ಸ್ವ ಸಾಮರ್ಥ್ಯದಿಂದ ಆಯ್ಕೆ: ಅಗರ್ಕರ್
ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ವೈಭವ್ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ಲೇ ಆಫ್ ಹಂತದವರೆಗೂ ಏಕಾಂಗಿಯಾಗಿ ಮುನ್ನಡೆಸಿದ ವೈಭವ್ ಅವರ ಆಟವನ್ನು ಅಗರ್ಕರ್ ಶ್ಲಾಘಿಸಿದ್ದಾರೆ. "ವೈಭವ್ ತಮ್ಮ ಅಸಾಧಾರಣ ಪ್ರದರ್ಶನದಿಂದ ತಾವಾಗಿಯೇ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಐಪಿಎಲ್‌ನಂತಹ ಅತ್ಯಂತ ಸ್ಪರ್ಧಾತ್ಮಕ ಮತ್ತು ಹೆಚ್ಚಿನ ಒತ್ತಡದ ವಾತಾವರಣದಲ್ಲಿ ಅವರು ತೋರಿರುವ ಸ್ಥಿರತೆ ನಿಜಕ್ಕೂ ವಿಶೇಷವಾದದ್ದು" ಎಂದು ತಿಳಿಸಿದ್ದಾರೆ.
ಸಚಿನ್ ಅವರ 37 ವರ್ಷಗಳ ಹಳೇ ದಾಖಲೆಗೆ ಕುತ್ತು!
ವೈಭವ್ ಸೂರ್ಯವಂಶಿ ಕೇವಲ 23 ಐಪಿಎಲ್ ಪಂದ್ಯಗಳಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿ ಅಬ್ಬರಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಅವರು ಭಾರತದ ಪರ ಕಣಕ್ಕಿಳಿದರೆ, 'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿಸಲಿದ್ದಾರೆ. 1989ರಲ್ಲಿ ಸಚಿನ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ ಅವರಿಗೆ 16 ವರ್ಷ 207 ದಿನಗಳಾಗಿತ್ತು. ಆದರೆ ವೈಭವ್ ಕೇವಲ 15ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಲು ಹೊರಟಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕ
ಈ ಪ್ರವಾಸದ ಟಿ20 ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ವಿಶ್ವಕಪ್ ಗೆದ್ದಿದ್ದ ಭಾರತ ಟಿ20 ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಅವರು ಇತ್ತೀಚಿನ ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಭರ್ಜರಿ ಫಾರ್ಮ್‌ನಲ್ಲಿರುವ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಯುವ ವೇಗಿ ಪ್ರಿನ್ಸ್ ಯಾದವ್ ಅವರಿಗೂ ತಂಡದಲ್ಲಿ ಚೊಚ್ಚಲ ಅವಕಾಶ ಸಿಕ್ಕಿದೆ.

