
ಐದು ಪ್ರಶಸ್ತಿ ಪಡೆದ ವೈಭವ್ ಸೂರ್ಯವಂಶಿ
ಕೊಹ್ಲಿ, ಗೇಲ್ ದಾಖಲೆ ಧೂಳೀಪಟ; ಒಂದೇ ಸೀಸನ್‌ನಲ್ಲಿ 5 ಪ್ರಶಸ್ತಿ ಮುಡಿಗೇರಿಸಿಕೊಂಡ ವೈಭವ್!
ಒಂದೇ ಸೀಸನ್‌ನಲ್ಲಿ ಬರೋಬ್ಬರಿ 5 ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರನಾಗಿ ವೈಭವ್ ಹೊರಹೊಮ್ಮಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಬೆನ್ನಲ್ಲೇ ಕ್ರಿಕೆಟ್ ಜಗತ್ತು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಆರ್ಸಿಬಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಸಂಭ್ರಮಿಸಿದರೆ, ಇತ್ತ ವೈಯಕ್ತಿಕ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಒಂದೇ ಸೀಸನ್‌ನಲ್ಲಿ ಬರೋಬ್ಬರಿ 5 ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರನಾಗಿ ವೈಭವ್ ಹೊರಹೊಮ್ಮಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ಒಂದೇ ಸೀಸನ್‌ನಲ್ಲಿ ತಲಾ 4 ಪ್ರಶಸ್ತಿಗಳನ್ನು ಜಯಿಸಿದ್ದು ದಾಖಲೆಯಾಗಿತ್ತು. ಆದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಬಿಹಾರದ ಈ ಯುವ ಎಡಗೈ ದಾಂಡಿಗ, ದಿಗ್ಗಜರ ಆ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಆರೆಂಜ್ ಕ್ಯಾಪ್ ವಿಜೇತ ವೈಭವ್ ಸೂರ್ಯವಂಶಿ
ಪ್ರಶಸ್ತಿಗಳ ಸುರಿಮಳೆ
ಟೂರ್ನಿಯುದ್ದಕ್ಕೂ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆಗೆ ಬರೋಬ್ಬರಿ 5 ಬಾರಿ ನಡೆದು ಬಂದು ಒಟ್ಟು 55 ಲಕ್ಷ ರೂಪಾಯಿ ನಗದು ಹಾಗೂ ಭರ್ಜರಿ ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿಕೊಂಡರು.
ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್
ಇಡೀ ಟೂರ್ನಿಯಲ್ಲಿ ಅತ್ಯಂತ ಪ್ರಭಾವಶಾಲಿ ಆಟಗಾರನಾಗಿ ಮೂಡಿಬಂದ ವೈಭವ್, ಒಟ್ಟು 436.5 ಎಂವಿಪಿ ಅಂಕಗಳನ್ನು ಗಳಿಸುವ ಮೂಲಕ ಸೀಸನ್‌ನ ಅತ್ಯಮೂಲ್ಯ ಆಟಗಾರ ಎನಿಸಿಕೊಂಡರು. 16 ಪಂದ್ಯಗಳಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ ಒಟ್ಟು 776 ರನ್ ಸಿಡಿಸಿ, ಈ ಸೀಸನ್‌ನ 'ರನ್ ಸರದಾರ'ನಾದರು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ (15 ವರ್ಷ, 65 ದಿನ) ಆರೆಂಜ್ ಕ್ಯಾಪ್ ಗೆದ್ದ ವಿಶ್ವದಾಖಲೆ ಇವರದ್ದಾಯಿತು.
ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್
ಈ ಸೀಸನ್‌ನಲ್ಲಿ ಬರೋಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್‌ಗೆ ಈ ಪ್ರಶಸ್ತಿ ಒಲಿಯಿತು. ಆ ಮೂಲಕ 10 ಲಕ್ಷ ರೂ. ಮತ್ತು ಟಾಟಾ ಸಿಯೆರಾ ಕಾರು ಪಡೆದರು. ಕೇವಲ 16 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 72 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಕ್ರಿಸ್ ಗೇಲ್ (59 ಸಿಕ್ಸ್) ಅವರ ಸಾರ್ವಕಾಲಿಕ ದಾಖಲೆಯನ್ನು ವೈಭವ್ ಮುರಿದರು. ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ಇವರ ಪಾಲಾಯಿತು.
ಹಲವು ದಾಖಲೆಗಳ ಸರದಾರ
ಕೇವಲ ಪ್ರಶಸ್ತಿ ಮಾತ್ರವಲ್ಲದೆ ಈ ಸೀಸನ್‌ನಲ್ಲಿ ವೈಭವ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೇವಲ 440 ಎಸೆತಗಳಲ್ಲಿ 1000 ರನ್ ಪೂರೈಸುವ ಮೂಲಕ ಆ್ಯಂಡ್ರೆ ರಸೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪವರ್‌ಪ್ಲೇ (ಮೊದಲ 6 ಓವರ್) ಅವಧಿಯಲ್ಲೇ ಬರೋಬ್ಬರಿ 521 ರನ್ ಚಚ್ಚಿದ ಮೊದಲ ಬ್ಯಾಟರ್ ಇವರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್ ಸಹಿತ 97 ರನ್ ಸಿಡಿಸಿದ್ದ ವೈಭವ್, ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 47 ಎಸೆತಗಳಲ್ಲಿ 96 ರನ್ ಚಚ್ಚಿದ್ದರು.
ಸಚಿನ್, ವಿರಾಟ್ ಪ್ರಶಂಸೆ
ವೈಭವ್ ಅವರ ಈ ವಿಶ್ವರೂಪದ ಬ್ಯಾಟಿಂಗ್ ಪ್ರದರ್ಶನ ಕಂಡು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಒತ್ತಡ ಎಂಬ ಪದ ನನ್ನ ನಿಘಂಟಿನಲ್ಲೇ ಇಲ್ಲ, ಚೆಂಡು ಹೊಡೆಯುವಂತಿದ್ದರೆ ನಾನು ಬ್ಯಾಟ್ ಬೀಸುತ್ತೇನೆ" ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ವೈಭವ್ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಲೀಗ್ ಹರಾಜಿನಲ್ಲಿ ಕೇವಲ 1.10 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದ ವೈಭವ್, ತಮ್ಮ ಖರೀದಿ ಬೆಲೆಯ ಅರ್ಧದಷ್ಟು ಮೊತ್ತವನ್ನು ಪ್ರಶಸ್ತಿಯ ರೂಪದಲ್ಲೇ ಬಾಚಿಕೊಂಡಿರುವುದು ವಿಶೇಷ.

