Shreyas Iyer is the new captain of Indias T20; 15-year-old Vaibhav gets his first chance!
x

ಭಾರತದ ಟಿ-20 ತಂಡದ ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ತಂಡಕ್ಕೆ ಆಯ್ಕೆಯಾಗಿರುವ ವೈಭವ್‌ ಸೂರ್ಯವಂಶಿ

ಶ್ರೇಯಸ್ ಅಯ್ಯರ್ ಭಾರತ ಟಿ20 ಹೊಸ ನಾಯಕ; 15ರ ಬಾಲಕ ವೈಭವ್‌ಗೆ ಚೊಚ್ಚಲ ಅವಕಾಶ!

ಸೂರ್ಯಕುಮಾರ್ ಯಾದವ್ ಜೊತೆಗೆ ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ಕುಲದೀಪ್ ಯಾದವ್ ಅವರಂತಹ ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟಿರುವುದು ಭಾರಿ ಕುತೂಹಲ ಮೂಡಿಸಿದೆ.


Click the Play button to hear this message in audio format

ಮುಂಬರುವ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸ ಸೇರಿದಂತೆ ಪ್ರಮುಖ ಸರಣಿಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು, ಟಿ20 ತಂಡದಲ್ಲಿ ಭಾರಿ ಬದಲಾವಣೆ ತರಲಾಗಿದೆ. ಹಾಲಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಶಾಕ್ ನೀಡಿರುವ ಬಿಸಿಸಿಐ, ಅವರ ಬದಲಿಗೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ಹೊಸ ನಾಯಕನನ್ನಾಗಿ ನೇಮಿಸಿದೆ. ಯುವ ಆಟಗಾರ ತಿಲಕ್ ವರ್ಮಾ ಹೊಸ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯ ಬಳಿಕ ಒಟ್ಟು 4 ವಿಭಿನ್ನ ಸರಣಿಗಳಿಗೆ (ಐರ್ಲೆಂಡ್, ಇಂಗ್ಲೆಂಡ್, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಮತ್ತು ಭಾರತ 'ಎ' ತಂಡದ ಶ್ರೀಲಂಕಾ ಪ್ರವಾಸ) ತಂಡಗಳನ್ನು ಪ್ರಕಟಿಸಲಾಯಿತು.

16 ಸದಸ್ಯರ ಬಲಿಷ್ಠ ಟಿ20 ತಂಡ

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಒಂದೇ ತಂಡವನ್ನು ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ಜೊತೆಗೆ ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್ ಮತ್ತು ಕುಲದೀಪ್ ಯಾದವ್ ಅವರಂತಹ ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟಿರುವುದು ಭಾರಿ ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಸದ್ಯ ಬೆಂಗಳೂರಿನ ಎನ್‌ಸಿಇನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿತ್ರಕೃಪೆ; ಬಿಸಿಸಿಐ

ಭಾರತ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ನಿತಿನ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್ ಹಾಗೂ ವೈಭವ್ ಸೂರ್ಯವಂಶಿ.

ಐಪಿಎಲ್ ಹೀರೋ ವೈಭವ್‌ಗೆ ಚೊಚ್ಚಲ ಅವಕಾಶ!

ಈ ಬಾರಿಯ ಆಯ್ಕೆಯ ಅತ್ಯಂತ ದೊಡ್ಡ ಆಕರ್ಷಣೆ ಎಂದರೆ 15 ವರ್ಷದ ಎಡಗೈ ಓಪನಿಂಗ್ ಬ್ಯಾಟರ್ ವೈಭವ್ ಸೂರ್ಯವಂಶಿ. ಐಪಿಎಲ್ 2026 ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ ಈ ವಿಸ್ಮಯ ಬಾಲಕ, 16 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ ಬರೋಬ್ಬರಿ 776 ರನ್ ಚಚ್ಚಿ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದರು. ಕ್ರಿಸ್ ಗೇಲ್ ಅವರ ಅತ್ಯಧಿಕ ಸಿಕ್ಸರ್‌ಗಳ ದಾಖಲೆಯನ್ನು ಮುರಿದ ಇವರು ಐಪಿಎಲ್‌ನ 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' (MVP) ಹಾಗೂ 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.

ವೈಭವ್‌ ಸೂರ್ಯವಂಶಿ (ಚಿತ್ರ ಕೃಪೆ: ಬಿಸಿಸಿಐ)

ಇದೀಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿ, ಕಿರಿಯ ವಯಸ್ಸಿಗೆ ಭಾರತ ತಂಡ ಸೇರಿದ ಇತಿಹಾಸ ನಿರ್ಮಿಸಿದ್ದಾರೆ. ಇವರೊಂದಿಗೆ ದೇಶೀ ಕ್ರಿಕೆಟ್‌ನ ಮತ್ತೊಬ್ಬ ಪ್ರತಿಭೆ ಪ್ರಿನ್ಸ್ ಯಾದವ್ ಅವರಿಗೂ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ.

ಜಪಾನ್ ಏಷ್ಯನ್ ಗೇಮ್ಸ್‌ಗೆ ಬುಮ್ರಾ ಎಂಟ್ರಿ

2026ರ ಜಪಾನ್ ಏಷ್ಯನ್ ಗೇಮ್ಸ್‌ ಟಿ20 ಕ್ರಿಕೆಟ್‌ ಸರಣಿಗೂ ಶ್ರೇಯಸ್ ಅಯ್ಯರ್ ಅವರೇ ನಾಯಕರಾಗಲಿದ್ದಾರೆ. ಇಂಗ್ಲೆಂಡ್-ಐರ್ಲೆಂಡ್ ಸರಣಿಯಲ್ಲಿ ಆಡದ ವಿಶ್ವದ ನಂಬರ್ 1 ವೇಗಿ ಜಸ್ಪ್ರಿತ್ ಬುಮ್ರಾ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ತಂಡದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಿನ್ಸ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ 'ಎ' ತಂಡ ಪ್ರಕಟ

ಶ್ರೀಲಂಕಾ ವಿರುದ್ಧದ ಬಹುದಿನಗಳ (ಮಲ್ಟಿ-ಡೇ) ಪಂದ್ಯಗಳಿಗಾಗಿ ಭಾರತ 'ಎ' ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ನಾಯಕರಾಗಿ ಹಾಗೂ ಕರ್ನಾಟಕದ ದೇವದತ್ ಪಡಿಕ್ಕಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಸಾಯಿ ಸುದರ್ಶನ್ ಅವರಂತಹ ಪ್ರಮುಖ ಆಟಗಾರರಿದ್ದಾರೆ.

Read More
Next Story