
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಮಾಜಿ ಆಟಗಾರ ಎಸ್. ಶ್ರೀಶಾಂತ್
'ಫಿಕ್ಸರ್ ಅಷ್ಟೇ ಅಲ್ಲ, ದೇಶದ್ರೋಹಿ ಎಂದೂ ಕರೆದಿದ್ದರು': ಗಂಭೀರ್ ವಿರುದ್ಧ ಶ್ರೀಶಾಂತ್ ಆರೋಪ!
ಗಂಭೀರ್ ಮಾಡಿರುವ "ಫಿಕ್ಸರ್" ಕಾಮೆಂಟ್, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿವಾದಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ಬಿಸಿಸಿಐ ಶ್ರೀಶಾಂತ್ಗೆ ಜೀವಮಾನದ ನಿಷೇಧ ಹೇರಿತ್ತು. ಆದರೆ ಏಳು ವರ್ಷಗಳ ಬಳಿಕ ವಾಪಸ್ ಪಡೆದಿತ್ತು.
ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಹಾಗೂ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಹಳೇ ವಿವಾದ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಡಿಸೆಂಬರ್ 2023 ರಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಪಂದ್ಯದ ವೇಳೆ ನಡೆದಿದ್ದ ಜಗಳದ ಕುರಿತು ಶ್ರೀಶಾಂತ್ ಈಗ ಹೊಸ ಮತ್ತು ಅತ್ಯಂತ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.
ಬೌನ್ಸರ್‌ನಿಂದ ಶುರುವಾದ ಜಗಳ!
ಆ ರೋಚಕ ಪಂದ್ಯದ ಘಟನೆಯನ್ನು ನೆನಪಿಸಿಕೊಂಡ ಶ್ರೀಶಾಂತ್, "ಗೌತಿ ಮೊದಲ ಎಸೆತದಲ್ಲೇ ಮುನ್ನುಗ್ಗಿ ಬಂದು ಆಡಿದರು. ಅವರಿಗೆ ನನ್ನ ಆಟ ಚೆನ್ನಾಗಿ ಗೊತ್ತಿತ್ತು. ಕೋಚಿಂಗ್ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಆಟಗಾರನಾಗಿ ಅವರು ಅತ್ಯುತ್ತಮವಾಗಿದ್ದರು. ಆ ಶಾಟ್ ಬೆನ್ನಲ್ಲೇ ನಾನು ಅವರಿಗೆ ಒಂದು ತೀಕ್ಷ್ಣವಾದ ಬೌನ್ಸರ್ ಎಸೆದೆ. ಅಲ್ಲಿಂದ ಈ ವಾಗ್ವಾದ ಆರಂಭವಾಯಿತು," ಎಂದು ತಿಳಿಸಿದ್ದಾರೆ.
'ನೀನೊಬ್ಬ ದೇಶದ್ರೋಹಿ'
ಶ್ರೀಶಾಂತ್ ಅವರ ಪ್ರಕಾರ, ಬೌನ್ಸರ್ ಎಸೆದ ನಂತರ ಗಂಭೀರ್ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡು ವೈಯಕ್ತಿಕ ನಿಂದನೆಗೆ ಇಳಿದರಂತೆ. "ಗಂಭೀರ್ ನನ್ನ ಬಳಿ ಬಂದು 'ನಾನು ನಿನ್ನ ಮಾಲೀಕ' ಎಂದು ಹೇಳಿ, ನಂತರ 'ಫಿಕ್ಸರ್' ಎಂದು ಪದೇ ಪದೇ ಕರೆದರು. ಆರಂಭದಲ್ಲಿ ನಾನು ಅವರನ್ನು ಸಮಾಧಾನದಿಂದಲೇ ನೋಡಲು ಪ್ರಯತ್ನಿಸಿದೆ. ಆದರೆ ಅವರು ನಿಂದನೀಯ ಭಾಷೆ ಬಳಸಿ 'ಫಿಕ್ಸರ್' ಜೊತೆಗೆ ನನ್ನನ್ನು 'ದೇಶದ್ರೋಹಿ' ಎಂದೂ ಕರೆದರು," ಎಂದು ಗಂಭೀರ ಆರೋಪ ಮಾಡಿದ್ದಾರೆ.
ಐತಿಹಾಸಿಕ ಹೀರೊಗಳ ನಡುವೆ ಬಿರುಕು
ವಿಶೇಷವೆಂದರೆ, ಗೌತಮ್ ಗಂಭೀರ್ ಮತ್ತು ಎಸ್. ಶ್ರೀಶಾಂತ್ ಇಬ್ಬರೂ ಭಾರತ ತಂಡ 2007 ರ ಟಿ20 ವಿಶ್ವಕಪ್ ಮತ್ತು 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿರುವುದು ಎದ್ದು ಕಾಣುತ್ತಿದೆ.
ಗಂಭೀರ್ ಮಾಡಿರುವ "ಫಿಕ್ಸರ್" ಕಾಮೆಂಟ್, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿವಾದಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ಬಿಸಿಸಿಐ ಶ್ರೀಶಾಂತ್ಗೆ ಜೀವಮಾನದ ನಿಷೇಧ ಹೇರಿತ್ತಾದರೂ, ನಂತರ ಅದನ್ನು 7 ವರ್ಷಗಳಿಗೆ ಕಡಿತಗೊಳಿಸಲಾಗಿತ್ತು. 2020 ರಲ್ಲಿ ಇವರ ಮೇಲಿನ ನಿಷೇಧ ಕೊನೆಗೊಂಡಿತ್ತು.
ಗೌತಮ್ ಗಂಭೀರ್ ಸದ್ಯ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಯಶಸ್ವಿ ಮುನ್ನಡೆ ಸಾಧಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು 2025 ರ ಚಾಂಪಿಯನ್ಸ್ ಟ್ರೋಫಿ ಹಾಗೂ ಇತ್ತೀಚಿನ 2026 ರ ಟಿ20 ವಿಶ್ವಕಪ್ನಂತಹ ಪ್ರಮುಖ ಐಸಿಸಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ. ಮತ್ತೊಂದೆಡೆ, ಶ್ರೀಶಾಂತ್ ಸಕ್ರಿಯ ಕ್ರಿಕೆಟ್ ನಿರೂಪಕರಾಗಿ, ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿ ಹಾಗೂ ವಿವಿಧ ಲೆಜೆಂಡ್ಸ್ ಲೀಗ್ಗಳಲ್ಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.ಈ ಹಿಂದೆ ಮೈದಾನದಲ್ಲಿ ಗಂಭೀರ್ ತಮ್ಮನ್ನು "ಫಿಕ್ಸರ್" ಎಂದು ಕರೆದಿದ್ದರು ಎಂದು ಆರೋಪಿಸಿದ್ದ ಶ್ರೀಶಾಂತ್, ಇತ್ತೀಚಿನ 'ಲಲ್ಲಂಟಾಪ್' ಸಂದರ್ಶನದಲ್ಲಿ ಮತ್ತೊಂದು ಪ್ರಮುಖ ವಿಷಯ ಬಿಚ್ಚಿಟ್ಟಿದ್ದಾರೆ. ತೀವ್ರ ವಾಗ್ದಾಳಿಯ ಸಂದರ್ಭದಲ್ಲಿ ಗಂಭೀರ್ ತಮ್ಮನ್ನು 'ದೇಶದ್ರೋಹಿ' ಎಂದು ಕರೆದಿದ್ದರು ಎಂದು ಶ್ರೀಶಾಂತ್ ಆರೋಪಿಸಿದ್ದಾರೆ.

