
ಹರ್ಭಜನ್ ಸಿಂಗ್ ಅವರು ಈ ಹಳೆಯ ಘಟನೆಯನ್ನು ಬಳಸಿಕೊಂಡು ಟೆಲಿವಿಷನ್ ಜಾಹೀರಾತೊಂದರಲ್ಲಿ ನಟಿಸುವ ಮೂಲಕ ಆರ್ಥಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಗಂಭೀರ ಆರೋಪ ಮಾಡಿದ್ದಾರೆ.
ಹರ್ಭಜನ್ ಸಿಂಗ್ ವಿರುದ್ಧ ಎಸ್. ಶ್ರೀಶಾಂತ್ ಆಕ್ರೋಶ: 'ಸ್ಲ್ಯಾಪ್‌ಗೇಟ್' ಜಾಹೀರಾತಿನಿಂದ 1 ಕೋಟಿ ರೂ. ಗಳಿಕೆ ಆರೋಪ
ಹರ್ಭಜನ್ ಸಿಂಗ್ ಅವರು ಈ ಹಳೆಯ ಘಟನೆಯನ್ನು ಬಳಸಿಕೊಂಡು ಟೆಲಿವಿಷನ್ ಜಾಹೀರಾತೊಂದರಲ್ಲಿ ನಟಿಸುವ ಮೂಲಕ ಆರ್ಥಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಗಂಭೀರ ಆರೋಪ ಮಾಡಿದ್ದಾರೆ.
2008ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಕ ಆವೃತ್ತಿಯ ಕುಖ್ಯಾತ 'ಸ್ಲ್ಯಾಪ್‌ಗೇಟ್' (ಕಪಾಳಮೋಕ್ಷ) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹರ್ಭಜನ್ ಸಿಂಗ್ ಅವರು ಈ ಹಳೆಯ ಘಟನೆಯನ್ನು ಬಳಸಿಕೊಂಡು ಟೆಲಿವಿಷನ್ ಜಾಹೀರಾತೊಂದರಲ್ಲಿ ನಟಿಸುವ ಮೂಲಕ ಆರ್ಥಿಕ ಲಾಭ ಮಾಡಿಕೊಂಡಿದ್ದಾರೆ ಎಂದು ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಮಲಯಾಳಂ ಸುದ್ದಿ ವಾಹಿನಿ 'ಮಾತೃಭೂಮಿ'ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್ ಈ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ಇಲ್ಲಿಯವರೆಗೆ ಯಾವುದೇ ಸಂದರ್ಶನದಲ್ಲಿ ಭಜ್ಜಿ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ಅವರು ಆ ಹಳೆಯ ಕಪಾಳಮೋಕ್ಷದ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಜಾಹೀರಾತೊಂದನ್ನು ಮಾಡಿದ್ದಾರೆ. ಇದರಿಂದ ಅವರು ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಹಣ ಸಂಪಾದಿಸಿದ್ದಾರೆ," ಎಂದು ಶ್ರೀಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್
ಕೇವಲ ಜಾಹೀರಾತು ಮಾಡಿದ್ದಲ್ಲದೆ, ಹರ್ಭಜನ್ ಸಿಂಗ್ ತಮಗೆ ಕರೆ ಮಾಡಿ ಆ ಜಾಹೀರಾತಿನ ವಿಡಿಯೋವನ್ನು ತಮ್ಮ (ಶ್ರೀಶಾಂತ್) ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಟೋರಿಯಾಗಿ ಹಾಕುವಂತೆ ಕೇಳಿಕೊಂಡಿದ್ದರು ಎಂದು ಶ್ರೀಶಾಂತ್ ತಿಳಿಸಿದ್ದಾರೆ. "ಯಾರಾದರೂ ನಿಮಗೆ ಕೇಡು ಬಗೆದರೆ ಅವರನ್ನು ಕ್ಷಮಿಸಿಬಿಡಿ, ಆದರೆ ಆ ಘಟನೆಯನ್ನು ಎಂದಿಗೂ ಮರೆಯಬೇಡಿ ಎಂದು ನನ್ನ ಪೋಷಕರು ಕಲಿಸಿದ್ದಾರೆ. ನಾನು ಅವರನ್ನು ಕ್ಷಮಿಸಿದ್ದೇನೆ ಆದರೆ ಮರೆತಿಲ್ಲ" ಎಂದು ಹೇಳಿರುವ ಶ್ರೀಶಾಂತ್, ಹರ್ಭಜನ್ ಸಿಂಗ್ ಅವರನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಬ್ಲಾಕ್ ಮಾಡಿದ್ದಾರೆ.
ಏನಿದು ಐಪಿಎಲ್ ಸ್ಲ್ಯಾಪ್‌ಗೇಟ್ ವಿವಾದ?
2008ರ ಏಪ್ರಿಲ್‌ನಲ್ಲಿ ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮುಕ್ತಾಯದ ವೇಳೆ ಈ ಘಟನೆ ನಡೆದಿತ್ತು. ಪಂದ್ಯದ ನಂತರದ ಹಸ್ತಲಾಘವದ ವೇಳೆ ಮುಂಬೈ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಪಂಜಾಬ್ ತಂಡದ ಆಟಗಾರನಾಗಿದ್ದ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ಮೈದಾನದಲ್ಲೇ ಶ್ರೀಶಾಂತ್ ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಆಗ ವ್ಯಾಪಕವಾಗಿ ವೈರಲ್ ಆಗಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಹರ್ಭಜನ್ ಸಿಂಗ್ ಅವರಿಗೆ ಆ ಋತುವಿನ ಉಳಿದ ಪಂದ್ಯಗಳಿಂದ ನಿಷೇಧ ಹೇರಿದ್ದಲ್ಲದೆ, ಪಂದ್ಯದ ಸಂಪೂರ್ಣ ಸಂಭಾವನೆಯನ್ನೂ ಕಡಿತಗೊಳಿಸಲಾಗಿತ್ತು.
18 ವರ್ಷಗಳ ನಂತರ ಈಗ ಮತ್ತೆ ಈ ವಿಚಾರವು, ಹರ್ಭಜನ್ ಸಿಂಗ್ ಅವರ ಜಾಹೀರಾತಿನ ಮೂಲಕ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.

