
ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಂಭ್ರಮ ಮುಗಿಲುಮುಟ್ಟಿತ್ತು.
"ಸ್ಮೃತಿ ಅಕ್ಕ ಬಹಳಷ್ಟು ನೋವು ಅನುಭವಿಸಿದ್ದಾರೆ, ಈ ಕಪ್ ಅವರಿಗೇ ಅರ್ಪಣೆ": ಶ್ರೇಯಾಂಕಾ ಭಾವುಕ ಮಾತು
ವೈಯಕ್ತಿಕ ನೋವಿನ ನಡುವೆಯೂ ಮೈದಾನಕ್ಕಿಳಿದ ಸ್ಮೃತಿ, ತಮ್ಮ ವೃತ್ತಿಪರತೆಯನ್ನು ಮೆರೆದರು. ಫೈನಲ್ ಪಂದ್ಯದಲ್ಲಿ ಜಾರ್ಜಿಯಾ ವೋಲ್ (79 ರನ್) ಅವರೊಂದಿಗೆ ಜತೆಯಾಟವಾಡಿದ ಸ್ಮೃತಿ, ಆಕರ್ಷಕ 87 ರನ್ ಸಿಡಿಸಿದರು.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026ರ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಂಭ್ರಮ ಮುಗಿಲುಮುಟ್ಟಿತ್ತು. ಈ ಐತಿಹಾಸಿಕ ಗೆಲುವಿನ ನಡುವೆ, ಆರ್ಸಿಬಿ ಆಲ್ ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ನಾಯಕಿ ಸ್ಮೃತಿ ಮಂಧಾನ ಅವರ ಬಗ್ಗೆ ಆಡಿದ ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ.
ಕಳೆದ ಕೆಲ ತಿಂಗಳುಗಳಿಂದ ವೈಯಕ್ತಿಕ ಜೀವನದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದ್ದರೂ, ಎದೆಗುಂದದೆ ತಂಡವನ್ನು ಮುನ್ನಡೆಸಿದ ಸ್ಮೃತಿ ಮಂಧಾನ ಅವರಿಗೆ ಈ ಟ್ರೋಫಿಯನ್ನು ಅರ್ಪಿಸುವುದಾಗಿ ಶ್ರೇಯಾಂಕಾ ಪಾಟೀಲ್ ತಿಳಿಸಿದ್ದಾರೆ.
"ಇದು ಸ್ಮೃತಿಗಾಗಿ..." - ಶ್ರೇಯಾಂಕಾ ಪಾಟೀಲ್
ಪಂದ್ಯದ ನಂತರದ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಾಂಕಾ, "ನಾನು ಈ ಗೆಲುವನ್ನು ಸ್ಮೃತಿಗೆ ಅರ್ಪಿಸಲು ಬಯಸುತ್ತೇನೆ. ಕಳೆದ ಒಂದೂವರೆ ತಿಂಗಳಲ್ಲಿ ಅವರು ವೈಯಕ್ತಿಕವಾಗಿ ಬಹಳಷ್ಟು ನೋವು ಮತ್ತು ಕಠಿಣ ಸಂದರ್ಭಗಳನ್ನು ಎದುರಿಸಿದ್ದಾರೆ. ಆದರೂ ಅವರು ಎಲ್ಲಿಯೂ ಕುಗ್ಗದೆ ನಮ್ಮನ್ನು ಮುನ್ನಡೆಸಿದರು. ಹೀಗಾಗಿ ಈ ಗೆಲುವು ಅವರಿಗೆ ಮತ್ತು ನಮಗೆಲ್ಲರಿಗೂ ಬಹಳ ವಿಶೇಷವಾಗಿದೆ," ಎಂದು ಭಾವುಕರಾಗಿ ನುಡಿದರು. ಇದೇ ವೇಳೆ ತಂಡದ ಮುಖ್ಯ ಕೋಚ್ ಮಲೋಲನ್ ರಂಗರಾಜನ್ ಅವರ ಮಾರ್ಗದರ್ಶನವನ್ನೂ ಶ್ರೇಯಾಂಕಾ ಸ್ಮರಿಸಿದರು. ಇದು ಮುಖ್ಯ ಕೋಚ್ ಆಗಿ ಅವರಿಗೆ ಮೊದಲ ಟೂರ್ನಿಯಾಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಕಪ್ ಗೆದ್ದಿರುವುದು ವಿಶೇಷ ಎಂದರು.
ಸ್ಮೃತಿ ಎದುರಿಸಿದ್ದ ಆ "ಕಠಿಣ" ಸಮಯ ಯಾವುದು?
ಮೈದಾನದಲ್ಲಿ ರನ್ ಮಳೆ ಹರಿಸಿದ ಸ್ಮೃತಿ ಮಂಧಾನ, ಮೈದಾನದ ಹೊರಗೆ ಮಾನಸಿಕವಾಗಿ ಜರ್ಜರಿತವಾಗಿದ್ದರು. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ಸ್ಮೃತಿ ಮಂಧಾನ ಅವರ ವಿವಾಹ ನಿಶ್ಚಯವಾಗಿತ್ತು. 2025r ನವೆಂಬರ್ 23 ರಂದು ಸಾಂಗ್ಲಿಯಲ್ಲಿ ಅದ್ಧೂರಿ ವಿವಾಹಕ್ಕೆ ತಯಾರಿ ಕೂಡ ನಡೆದಿತ್ತು. ಆದರೆ, ಮದುವೆ ದಿನದಂದೇ ಬೆಳಿಗ್ಗೆ ಸ್ಮೃತಿ ಅವರ ತಂದೆಗೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ವಿವಾಹವನ್ನು ಮುಂದೂಡಲಾಯಿತು. ಇದರ ಬೆನ್ನಲ್ಲೇ ಪಲಾಶ್ ಕೂಡ ತೀವ್ರ ಒತ್ತಡದಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಈ ಜೋಡಿ ಸಂಕಷ್ಟಗಳನ್ನು ಎದುರಿಸಿದ ಎರಡೂ ಕುಟುಂಬಗಳು ಅಂತಿಮವಾಗಿ ವಿವಾಹವನ್ನು ರದ್ದುಗೊಳಿಸಲು ನಿರ್ಧರಿಸಿದವು. ಡಿಸೆಂಬರ್ 7 ರಂದು ಇನ್ಸ್ಟಾಗ್ರಾಮ್ ಮೂಲಕ ಸ್ಮೃತಿ ಮಂಧಾನ ಈ ವಿಷಯವನ್ನು ಖಚಿತಪಡಿಸಿದ್ದರು. ಈ ಸಮಯದಲ್ಲಿ ಹಬ್ಬಿದ ವದಂತಿಗಳು ಮತ್ತು ಟೀಕೆಗಳ ನಡುವೆಯೂ ಸ್ಮೃತಿ ಮೌನವಾಗಿಯೇ ಉಳಿದಿದ್ದರು. ಅವರ ಬೆಂಬಲಕ್ಕೆ ನಿಂತಿದ್ದ ಜೆಮಿಮಾ ರೋಡ್ರಿಗಸ್, ಬಿಗ್ ಬ್ಯಾಷ್ ಲೀಗ್ನಿಂದಲೂ ಹಿಂದೆ ಸರಿದು ಭಾರತದಲ್ಲೇ ಉಳಿದಿದ್ದರು.
ನಾಯಕಿಯ ಆಟಕ್ಕೆ ಸಾಕ್ಷಿಯಾದ ಫೈನಲ್
ವೈಯಕ್ತಿಕ ನೋವಿನ ನಡುವೆಯೂ ಮೈದಾನಕ್ಕಿಳಿದ ಸ್ಮೃತಿ, ತಮ್ಮ ವೃತ್ತಿಪರತೆಯನ್ನು ಮೆರೆದರು. ಫೈನಲ್ ಪಂದ್ಯದಲ್ಲಿ ಜಾರ್ಜಿಯಾ ವೋಲ್ (79 ರನ್) ಅವರೊಂದಿಗೆ ಜತೆಯಾಟವಾಡಿದ ಸ್ಮೃತಿ, ಆಕರ್ಷಕ 87 ರನ್ ಸಿಡಿಸಿದರು. ಇವರಿಬ್ಬರ ಜೊತೆಯಾಟವು ಆರ್ಸಿಬಿ ತಂಡವು ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಲು ನೆರವಾಯಿತು. ಅಂತಿಮವಾಗಿ ಆರ್ಸಿಬಿ ದಾಖಲೆಯ ರನ್ ಚೇಸ್ ಮಾಡುವ ಮೂಲಕ ಎರಡನೇ ಬಾರಿಗೆ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

