IPL | A new milestone in IPL history; RCB ready for 100th match at home
x

ಎಂ.ಚಿನ್ನಸ್ವಾಮಿ ಕ್ರೀಡಾಂಗಣ 

IPL | ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು; ತವರು ನೆಲದಲ್ಲಿ 100ನೇ ಪಂದ್ಯ ಆಡಿದ ಆರ್‌ಸಿಬಿ

ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆರ್‌ಸಿಬಿಗೆ ಹಲವು ಸುಂದರ ಕ್ಷಣಗಳನ್ನೂ ನೀಡಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಸಿಡಿಸಿದ ಅಜೇಯ 175 ರನ್‌ಗಳು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇಂದಿಗೂ ದಾಖಲೆಯಾಗಿದೆ.


Click the Play button to hear this message in audio format

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಶನಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದೊಂದಿಗೆ, ತವರು ನೆಲದಲ್ಲಿ 100 ಐಪಿಎಲ್ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಲಿದೆ.

ಐಪಿಎಲ್ ಟೂರ್ನಿಯು 19 ವರ್ಷ ಪೂರೈಸುತ್ತಿರುವ ವಿಶೇಷ ಸಂದರ್ಭದಲ್ಲಿ ನಡೆಯುತ್ತಿರುವ ಈ ಪಂದ್ಯವು ಆರ್‌ಸಿಬಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏ. 18, 2008 ರಂದು ಇದೇ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆಡುವ ಮೂಲಕ ಆರ್‌ಸಿಬಿ ತನ್ನ ಐಪಿಎಲ್ ಪಯಣ ಆರಂಭಿಸಿತ್ತು. ಅಂದು ಬ್ರೆಂಡನ್ ಮೆಕಲಮ್ ಅವರ ಸ್ಫೋಟಕ 158 ರನ್ ನೆರವಿನಿಂದ ಕೆಕೆಆರ್ ಭರ್ಜರಿ ಜಯ ಸಾಧಿಸಿತ್ತು. ಅಂದು ಆರ್‌ಸಿಬಿ ಕೇವಲ 140 ರನ್‌ಗಳಿಗೆ ಆಲೌಟ್ ಆಗಿತ್ತು, ಇದು ಈ ಮೈದಾನದಲ್ಲಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.

2008ರಲ್ಲಿ ಕೆಕೆಆರ್‌ ಹಾಗೂ ಆರ್‌ಸಿಬಿ ನಡುವೆ ನಡೆದ ಮೊದಲ ಪಂದ್ಯ

ಆದರೆ, ಇದೇ ಮೈದಾನ ಆರ್‌ಸಿಬಿಗೆ ಹಲವು ಸುಂದರ ಕ್ಷಣಗಳನ್ನೂ ನೀಡಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಸಿಡಿಸಿದ ಅಜೇಯ 175 ರನ್‌ಗಳು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇಂದಿಗೂ ದಾಖಲೆಯಾಗಿದೆ. ಅಂದು ಆರ್‌ಸಿಬಿ 263 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು, ಆ ಋತುವಿನಲ್ಲೇ ಅತಿ ಹೆಚ್ಚು ಮೊತ್ತವಾಗಿ ದಾಖಲಾಗಿತ್ತು.

2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ನಡದೆ ಪಂದ್ಯದಲ್ಲಿ ಕ್ರಿಸ್‌ ಗೆಯ್ಲ್‌ ಅಜೇಯ 175 ರನ್‌ ಗಳಿಸಿದ್ದರು.

48 ಪಂದ್ಯಗಳಲ್ಲಿ ಗೆಲುವು

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಇದುವರೆಗೆ ಆಡಿರುವ ಪಂದ್ಯಗಳ ಪೈಕಿ 48ರಲ್ಲಿ ಗೆಲುವು ಸಾಧಿಸಿದ್ದರೆ, 46ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದ್ದು ನಾಲ್ಕು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಅತಿ ಹೆಚ್ಚು ತವರು ಪಂದ್ಯಗಳನ್ನಾಡಿದ ಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕೆಕೆಆರ್ (ಈಡನ್ ಗಾರ್ಡನ್ಸ್ - 98 ಪಂದ್ಯಗಳು) ಮತ್ತು ಮುಂಬೈ ಇಂಡಿಯನ್ಸ್ (ವಾಂಖೆಡೆ - 95 ಪಂದ್ಯಗಳು) ಇವೆ.

2008ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ

ಹಸಿರು ಜೆರ್ಸಿಯಲ್ಲಿ ಮಿಂಚಲಿದೆ ಆರ್‌ಸಿಬಿ

ಈ ವಿಶೇಷ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು, ಆರ್‌ಸಿಬಿ ತಂಡವು ತನ್ನ 'ಗ್ರೀನ್ ಇನಿಶಿಯೇಟಿವ್' ಅಭಿಯಾನದ ಭಾಗವಾಗಿ ಶನಿವಾರದ ಪಂದ್ಯದಲ್ಲಿ ಸಾಂಪ್ರದಾಯಿಕ ಜೆರ್ಸಿಯ ಬದಲು ವಿಶೇಷ 'ಹಸಿರು ಜೆರ್ಸಿ' ಧರಿಸಿ ಕಣಕ್ಕಿಳಿಯಲಿದೆ.

ಸಾಂದರ್ಭಿಕ ಚಿತ್ರ

ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ತಂಡವು ಐದು ಪಂದ್ಯಗಳಲ್ಲಿ ನಾಲ್ಕು ಜಯದೊಂದಿಗೆ 8 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಇಂದು ನಡೆಯಲಿರುವ ಈ ಐತಿಹಾಸಿಕ ಪಂದ್ಯದಲ್ಲಿ ಗೆದ್ದು, ಟೂರ್ನಿಯಲ್ಲಿನ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ರಜತ್‌ ಪಾಟಿದಾರ್‌ ನೇತೃತ್ವದ ತಂಡ ತುದಿಗಾಲಲ್ಲಿದೆ.

Read More
Next Story