
ಐಪಿಎಲ್ ಟಿಕೆಟ್ ಕಾಳಸಂತೆ ಮಾರಾಟ ಆರೋಪ: ಕೆಎಸ್‌ಸಿಎ ಕೊಟ್ಟ ಸ್ಪಷ್ಟನೆ ಏನು?
ಪ್ರಸ್ತುತ ಪೊಲೀಸರ ತನಿಖೆ ಎದುರಿಸುತ್ತಿರುವ ಸಂಸ್ಥೆಗಳಿಗೂ ಅಥವಾ ಬಂಧಿತ ವ್ಯಕ್ತಿಗಳಿಗೂ ಕೆಎಸ್‌ಸಿಎಗೂ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಸಂಬಂಧವಿಲ್ಲ ಎಂದು ಕೆಎಸ್‌ಸಿಎ ಹೇಳಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿ, ಅವುಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಭೇದಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾದ ವ್ಯಕ್ತಿಗೂ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಸಂಬಂಧವಿದೆ, ಕೆಎಸ್‌ಸಿಎ ಸದಸ್ಯರೇ ಈ ಟಿಕೆಟ್ ದಂಧೆಯ ಹಿಂದಿದ್ದಾರೆ ಎಂಬ ಗಂಭೀರ ಆರೋಪಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು.
ಇದೀಗ ಈ ಎಲ್ಲಾ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA), ಅಧಿಕೃತ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳ ವರದಿಗಳಿಗೆ ಸ್ಪಷ್ಟನೆ ನೀಡಿದೆ.
ಕೆಎಸ್‌ಸಿಎ (KSCA) ನೀಡಿರುವ ಸ್ಪಷ್ಟನೆಗಳೇನು?
ಮಾಧ್ಯಮಗಳ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದ್ದಾರೆ. 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ಫ್ರಾಂಚೈಸಿಗೆ ಸಂಬಂಧಿಸಿದಂತೆ ಕೆಎಸ್‌ಸಿಎ ಯಾವುದೇ ಟಿಕೆಟ್ ಏಜೆನ್ಸಿಯಾಗಲೀ ಅಥವಾ ಟಿಕೆಟ್ ಮಾರಾಟ ಮಾಡುವ ಪ್ರಾಧಿಕಾರವಾಗಲೀ ಅಲ್ಲ. ಸಾರ್ವಜನಿಕರಿಗೆ ಟಿಕೆಟ್ ಮಾರಾಟ ಮಾಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಫ್ರಾಂಚೈಸಿ ಮತ್ತು ಅವರ ಅಧಿಕೃತ ಟಿಕೆಟಿಂಗ್ ಪಾಲುದಾರರ ಮೂಲಕವೇ ನಡೆಯುತ್ತದೆ ಎಂದು ಹೇಳಿದ್ದಾರೆ.
ಕೆಎಸ್‌ಸಿಎಗೆ ಕೇವಲ ಸೀಮಿತ ಪ್ರಮಾಣದ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಈ ಟಿಕೆಟ್‌ಗಳನ್ನು ಕೇವಲ ಕ್ರಿಕೆಟ್ ಆಡುವ ಕ್ಲಬ್‌ಗಳು, ಕಾಯಂ ಸದಸ್ಯರು ಹಾಗೂ ಕೆಎಸ್‌ಸಿಎಗೆ ಸೇವೆ ಸಲ್ಲಿಸುವ ಕೆಲವು ಶಾಸನಬದ್ಧ/ಸರ್ಕಾರಿ ಪ್ರಾಧಿಕಾರಗಳಿಗೆ ಮಾತ್ರ ಒದಗಿಸಲಾಗುತ್ತದೆ. ಕೆಎಸ್‌ಸಿಎ ಯಾವುದೇ ಕಾರಣಕ್ಕೂ ಸಾಮಾನ್ಯ ಸಾರ್ವಜನಿಕರಿಗೆ ನೇರವಾಗಿ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಪೊಲೀಸರ ತನಿಖೆ ಎದುರಿಸುತ್ತಿರುವ ಸಂಸ್ಥೆಗಳಿಗೂ (ಖಾಸಗಿ ಕಂಪನಿಗಳು) ಅಥವಾ ಬಂಧಿತ ವ್ಯಕ್ತಿಗಳಿಗೂ ಕೆಎಸ್‌ಸಿಎಗೂ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಟಿಕೆಟ್ ಕಾಳಸಂತೆ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಕೆಎಸ್‌ಸಿಎಯ ಸದಸ್ಯರಲ್ಲ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸುತ್ತದೆ ಎಂದು ವಿನಯ್ ಮೃತ್ಯುಂಜಯ ಅವರು ಹೇಳಿಕೆ ನೀಡಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ ಎಂದ ಕೆಎಸ್‌ಸಿಎ
"ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧ ತನಿಖಾಧಿಕಾರಿಗಳು ಸಮಗ್ರ ವಿಚಾರಣೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೆಎಸ್‌ಸಿಎ ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ. ಬಿ.ಕೆ. ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ, ಕೆಎಸ್‌ಸಿಎ ಸಮಗ್ರತೆ ಮತ್ತು ಉನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಹಾಗೂ ಕರ್ನಾಟಕದಲ್ಲಿ ಕ್ರಿಕೆಟ್‌ನ ನಿರಂತರ ಅಭಿವೃದ್ಧಿಗೆ ಬದ್ಧವಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿನ್ನೆಲೆ ಏನು?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ನಕಲಿ ಕಂಪನಿಗಳ ಹೆಸರಿನಲ್ಲಿ 'ಟಿಕೆಟ್ ಜೀನಿ' ಮೂಲಕ ಬೃಹತ್ ಪ್ರಮಾಣದಲ್ಲಿ ಖರೀದಿಸಿ, 15,000 ದಿಂದ 19,000 ರೂ.ಗಳವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಕ್ರೀಡಾಂಗಣದ ಕ್ಯಾಂಟೀನ್ ಕಾರ್ಮಿಕ ಚಂದ್ರಶೇಖರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ, "ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ (ಪರೀಕ್ಷಿತ್) ಎಂಬಾತನೇ ತನಗೆ ಟಿಕೆಟ್ ನೀಡಿದ್ದ" ಎಂದು ಹೇಳಿಕೆ ನೀಡಿದ್ದನು. ಈ ಆಧಾರದ ಮೇಲೆ ಮಾಧ್ಯಮಗಳಲ್ಲಿ ಕೆಎಸ್‌ಸಿಎ ವಿರುದ್ಧ ವರದಿಗಳು ಪ್ರಸಾರವಾಗಿದ್ದವು.

