KSCA disappointed that Bengaluru did not get IPL playoffs
x

ಎಂ.ಚಿನ್ನಸ್ವಾಮಿ ಕ್ರೀಡಾಂಗಣ 

IPL 2026| ಐಪಿಎಲ್ ಪ್ಲೇಆಫ್‌ಗಳು ಬೆಂಗಳೂರಿಗೆ ಸಿಗದಿದ್ದಕ್ಕೆ ಕೆಎಸ್‌ಸಿಎ ಬೇಸರ

ಪ್ರಸ್ತುತ ಐಪಿಎಲ್ ಹಂಗಾಮಿನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯಗಳು ಸುಗಮ ಆಯೋಜನೆ, ಪ್ರೇಕ್ಷಕರ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಮತ್ತು ಒಟ್ಟಾರೆ ಅಭಿಮಾನಿಗಳ ಅನುಭವಕ್ಕಾಗಿ ವ್ಯಾಪಕ ಪ್ರಶಂಸೆ ಪಡೆದಿವೆ ಎಂದು ಸಂಸ್ಥೆ ಹೇಳಿದೆ.


Click the Play button to hear this message in audio format

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳನ್ನು ಬೆಂಗಳೂರಿಗೆ ನೀಡದಿರುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಈ ನಿರ್ಧಾರಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಸಂಪೂರ್ಣ ಸಿದ್ಧವಾಗಿತ್ತು ಎಂದು ಸಂಘ ತಿಳಿಸಿದೆ.

ಈ ಕುರಿತು ಕೆಎಸ್‌ಸಿಎ ಅಧ್ಯಕ್ಷ ಹಾಗೂ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಬಿಸಿಸಿಐ ಜೊತೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಅಲ್ಲದೆ, ಪ್ಲೇಆಫ್‌ಗಳನ್ನು ಆತಿಥ್ಯ ವಹಿಸಲು ಸಂಸ್ಥೆಯ ಸಿದ್ಧತೆ, ಆಸಕ್ತಿ ಮತ್ತು ಇಚ್ಛೆಯನ್ನು ಬಿಸಿಸಿಐಗೆ ಅಧಿಕೃತವಾಗಿ ತಿಳಿಸಲಾಗಿತ್ತು ಎಂದು ಕೆಎಸ್‌ಸಿಎ ಸ್ಪಷ್ಟಪಡಿಸಿದೆ.

ಪ್ರಸ್ತುತ ಐಪಿಎಲ್ ಹಂಗಾಮಿನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯಗಳು ಸುಗಮ ಆಯೋಜನೆ, ಪ್ರೇಕ್ಷಕರ ನಿಯಂತ್ರಣ, ಕಾರ್ಯಾಚರಣಾ ದಕ್ಷತೆ ಮತ್ತು ಒಟ್ಟಾರೆ ಅಭಿಮಾನಿಗಳ ಅನುಭವಕ್ಕಾಗಿ ವ್ಯಾಪಕ ಪ್ರಶಂಸೆ ಪಡೆದಿವೆ ಎಂದು ಸಂಸ್ಥೆ ಹೇಳಿದೆ. ಇದು ಮಹತ್ವದ ಹಾಗೂ ದೊಡ್ಡ ಮಟ್ಟದ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸುವ ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಂಘ ಹೇಳಿದೆ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ಐಪಿಎಲ್​ ಋತುವಿನ ಕಾರ್ಯಾಚರಣೆಯ ಚೌಕಟ್ಟು ಹಾಗೂ ಆಯೋಜನಾ ಸಿದ್ಧತೆಗಳ ಬಗ್ಗೆ ಕೆಎಸ್‌ಸಿಎ ಬಿಸಿಸಿಐಗೆ ಸಮಗ್ರ ಪತ್ರ ಬರೆದಿತ್ತು. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಅನುಸರಿಸಲಾಗುತ್ತಿರುವ ಬಹುತೇಕ ವ್ಯವಸ್ಥೆಗಳು ಮತ್ತು ಪ್ರೋಟೋಕಾಲ್‌ಗಳನ್ನು ಈ ಸಲವೂ ಅಷ್ಟೇ ಸಮರ್ಪಕವಾಗಿ ಜಾರಿಗೆ ತರಲಾಗಿತ್ತು ಎಂದು ಕೆಎಸ್‌ಸಿಎ ಹೇಳಿದೆ.

ವಾಸ್ತವ ಆಧರಿತ ಪತ್ರ

ಸಂಸ್ಥೆ ಬಿಸಿಸಿಐಗೆ ಕಳುಹಿಸಿದ್ದ ಪತ್ರ ಸಂಪೂರ್ಣವಾಗಿ ವಾಸ್ತವಾಧಾರಿತ, ಕಾರ್ಯಾಚರಣಾತ್ಮಕ ಮತ್ತು ಸ್ಪಷ್ಟನೆ ನೀಡುವ ಉದ್ದೇಶ ಹೊಂದಿತ್ತು ಎಂದು ಪ್ರಕಟಣೆ ಹೇಳುತ್ತದೆ. ಹೈ-ಪ್ರೊಫೈಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಮತ್ತು ಹಿತಾಸಕ್ತಿದಾರರ ಅವಶ್ಯಕತೆಗಳ ಬಗ್ಗೆ ಪಾರದರ್ಶಕತೆ ಮೂಡಿಸುವ ಉದ್ದೇಶವೇ ಅದರ ಹಿಂದಿತ್ತು ಎಂದು ಕೆಎಸ್‌ಸಿಎ ವಿವರಿಸಿದೆ.

ಬಿಸಿಸಿಐ ಪ್ಲೇಆಫ್ ಪಂದ್ಯಗಳನ್ನು ಬೇರೆ ಕೇಂದ್ರಗಳಿಗೆ ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಂಡಿದೆ ಎಂದು ಕೆಎಸ್‌ಸಿಎ ತಿಳಿಸಿದೆ. ಈ ನಿರ್ಧಾರದ ನಿಖರ ಕಾರಣಗಳನ್ನು ಬಿಸಿಸಿಐ ತನ್ನೊಂದಿಗೆ ಅಧಿಕೃತವಾಗಿ ಹಂಚಿಕೊಂಡಿಲ್ಲದಿದ್ದರೂ, ಮಂಡಳಿಯ ನಿರ್ಧಾರಾಧಿಕಾರವನ್ನು ಪೂರ್ಣ ಗೌರವದಿಂದ ಸ್ವೀಕರಿಸುತ್ತೇವೆ ಎಂದು ಸಂಘ ಹೇಳಿದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ವದ ಪಂದ್ಯಗಳನ್ನು ಆಯೋಜಿಸಲು ತಾವು ಮುಂದೆಯೂ ಸಂಪೂರ್ಣ ಸಿದ್ಧವಾಗಿದ್ದೇವೆ ಎಂದು ಕೆಎಸ್‌ಸಿಎ ಪುನರುಚ್ಚರಿಸಿದೆ. ಬಿಸಿಸಿಐ, ಫ್ರಾಂಚೈಸಿಗಳು, ಸರ್ಕಾರದ ಪ್ರಾಧಿಕಾರಗಳು ಹಾಗೂ ಇತರ ಹಿತಾಸಕ್ತಿದಾರರೊಂದಿಗೆ ಸಹಕಾರ ಮುಂದುವರಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Read More
Next Story