
ಚಿನ್ನಸ್ವಾಮಿ ಕ್ರೀಡಾಂಗಣದ ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಯನ್ನು ಸಿಸಿಬಿ ಭೇದಿಸಿದೆ.
IPL Black Ticket| ಐಪಿಎಲ್ ಟಿಕೆಟ್ ಬ್ಲ್ಯಾಕ್ ಮಾರಾಟ ದಂಧೆ| ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ಗೆ ಸಂಕಷ್ಟ
ಚಿನ್ನಸ್ವಾಮಿ ಕ್ರೀಡಾಂಗಣದ ಐಪಿಎಲ್ ಟಿಕೆಟ್ ಬ್ಲ್ಯಾಕ್ ದಂಧೆಯನ್ನು ಸಿಸಿಬಿ ಭೇದಿಸಿದೆ. ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಡಿಎನ್‌ಎ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಹಗರಣದ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರೊಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದ್ದು, ಆರ್‌ಸಿಬಿ ಟಿಕೆಟ್ ನಿರ್ವಹಣೆ ಮಾಡುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಸಂಸ್ಥೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಕೆಎಸ್‌ಸಿಎ ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸಿಸಿಬಿ ಪೊಲೀಸರು ಡಿಎನ್‌ಎ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.
ಕ್ಯಾಂಟೀನ್ ಕಾರ್ಮಿಕನ ಮೂಲಕ ದಂಧೆ
ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದ ವೇಳೆ, ಆತ ಕೆಎಸ್‌ಸಿಎ ಸದಸ್ಯ ಹರಿಕೇಶ್ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಚಂದ್ರಶೇಖರ್ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದವನಾಗಿದ್ದು, ಆತನ ಮೂಲಕ ಹರಿಕೇಶ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ತನಿಖೆಯ ವೇಳೆ, ಗಣೇಶ್ ಹರಿಕೇಶ್ ಅವರು 'ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಅಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್' ಮತ್ತು 'ಧರಣಿ ಕಂಪ್ಯೂಟರ್ಸ್' ಎಂಬ ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕಂಪನಿಗಳ ಮೂಲಕ ಟಿಕೆಟ್ ಪಡೆದು, ನಂತರ ಚಂದ್ರಶೇಖರ್ ಸಹಾಯದಿಂದ ಅವುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಡಿಎನ್‌ಎ ಸಂಸ್ಥೆಯ ಮೇಲೆ ಅನುಮಾನ
ಪ್ರಾಥಮಿಕ ತನಿಖೆಯ ಪ್ರಕಾರ, ಆರ್‌ಸಿಬಿಯ ಮೊದಲ ಪಂದ್ಯದ ವೇಳೆ 81 ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡಲಾಗಿದೆ. ಮುಂದಿನ ಪಂದ್ಯಕ್ಕಾಗಿ 100 ಟಿಕೆಟ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು. ಒಟ್ಟಾರೆಯಾಗಿ 17 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 181 ಟಿಕೆಟ್‌ಗಳನ್ನು ಖರೀದಿಸಲಾಗಿದ್ದು, ಅದರಲ್ಲಿ ಕನಿಷ್ಠ 100 ಟಿಕೆಟ್‌ಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಕೆಟ್ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಕೈಗೆ ಇಷ್ಟು ದೊಡ್ಡ ಪ್ರಮಾಣದ ಟಿಕೆಟ್‌ಗಳು ಹೇಗೆ ತಲುಪಿದವು ಎಂಬ ಬಗ್ಗೆ ವಿವರಣೆ ನೀಡುವಂತೆ ಸಿಸಿಬಿ ನೋಟಿಸ್ ನೀಡಿದೆ. ಅಲ್ಲದೆ, ಟಿಕೆಟ್ ಪಡೆದ ಎರಡು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

