
IPL 2026: ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚಿನ ಪ್ರದರ್ಶನ; ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಅಗ್ರಸ್ಥಾನ !
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿರುವ ವಿರಾಟ್ ಕೊಹ್ಲಿ ಎಂದಿನಂತೆ ಅಬ್ಬರಿಸುತ್ತಿದ್ದು, ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರತಿ ಸೀಸನ್‌ನಲ್ಲೂ ʼಈ ಸಲ ಕಪ್ ನಮ್ದೇʼ ಎನ್ನುವ ಅಭಿಮಾನಿಗಳ ಕನಸಿಗೆ 19ನೇ ಆವೃತ್ತಿಯಲ್ಲೂ ಆರ್‌ಸಿಬಿ ಆಟಗಾರರು ಮೈದಾನದಲ್ಲಿ ಜೀವ ತುಂಬುತ್ತಿದ್ದಾರೆ. ಪ್ರಸಕ್ತ ಐಪಿಎಲ್ ಸರಣಿಯಲ್ಲಿ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಟೂರ್ನಿಯ ಆರಂಭದಿಂದಲೂ ಸಂಘಟಿತ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ, ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸುವ ಮೂಲಕ ಗರಿಷ್ಠ ಅಂಕಗಳನ್ನು ಕಲೆಹಾಕಿದೆ. ನಾಲ್ಕು ಪಂದ್ಯಗಳ ಗೆಲುವಿನಲ್ಲಿ ಉತ್ತಮ ರನ್‌ರೇಟ್ ಕೂಡ ಹೊಂದಿರುವುದು ಇತರ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಲು ನೆರವಾಗಿದೆ.
ತಂಡ ಆಲ್‌ರೌಂಡರ್ ಪ್ರದರ್ಶನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿರುವ ವಿರಾಟ್ ಕೊಹ್ಲಿ ಎಂದಿನಂತೆ ಅಬ್ಬರಿಸುತ್ತಿದ್ದು, ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ನಾಯಕ ರಜತ್ ಪಾಟೀದರ್, ಆರಂಭಿಕ ಆಟಗಾರ ಸಾಲ್ಟ್, ಆಲ್‌ರೌಂಡರ್ ಟಿಮ್ ಡೇವಿಡ್ ಹಾಗೂ ಉಪನಾಯಕ ಜಿತೇಶ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿಯ ಬೌಲಿಂಗ್ ಪಡೆ ಬಲಿಷ್ಠವಾಗಿದ್ದು, ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದೆ. ಪಂದ್ಯದ ಅಂತಿಮ ಓವರ್‌ಗಳಲ್ಲಿನ ಶಿಸ್ತುಬದ್ಧ ಬೌಲಿಂಗ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ವಿರಾಟ್ ಕೊಹ್ಲಿ
ಫೀಲ್ಡಿಂಗ್ ಮ್ಯಾಜಿಕ್
ಆರ್‌ಸಿಬಿ ಆಡಿರುವ ಐದೂ ಪಂದ್ಯಗಳ ಪೈಕಿ ನಾಲ್ಕು ಪಂದ್ಯದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ಅತ್ಯುತ್ತಮ ಕ್ಷೇತ್ರರಕ್ಷಣೆಯೂ ಪ್ರಮುಖ ಸ್ಥಾನಪಡೆದಿದೆ. ಎಸ್‌ಆರ್‌ಎಚ್ ವಿರುದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಲ್ಟ್ ಹಿಡಿದ ಕ್ಯಾಚ್ ಎಲ್ಲರನ್ನು ಚಕಿತಗೊಳಿಸಿತ್ತು. ಸಿಎಸ್‌ಕೆ ವಿರುದ್ಧ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹಿಡಿದ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಚುರುಕಾಗಿ ಕ್ಷೇತ್ರರಕ್ಷಣೆ ಮೂಲಕ ಎದುರಾಳಿ ಆಟಗಾರರು ರನ್ ಕದಿಯುವುದನ್ನು ತಡೆಯುತ್ತಿರುವುದು ಗೆಲುವಿನ ಅಂತರವನ್ನು ಹೆಚ್ಚಿಸುತ್ತಿದೆ.
ಐಪಿಎಲ್ ಅಂಕಪಟ್ಟಿ (ಕೃಪೆ: ಎಕ್ಸ್)
ಅಂಕಪಟ್ಟಿಯಲ್ಲಿ ಯಾವ ತಂಡಗಳು ಎಲ್ಲಿವೆ ?
ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಸೀಸನ್‌ನಲ್ಲಿ ಇದುವರೆಗೂ ಒಟ್ಟು 23 ಪಂದ್ಯಗಳು ನಡೆದಿವೆ. ಐದು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕ ಪಡೆದಿದ್ದು ಪ್ರಥಮ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್, ಮೂರನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್, ನಾಲ್ಕನೇ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸ್ಥಾನ ಪಡೆದಿದೆ.
ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದು, ಎರಡು ಪಂದ್ಯದಲ್ಲಿ ಸೋಲು ಅನುಭವಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನ, ಗುಜರಾತ್ ಟೈಟನ್ಸ್ ಆರನೇ ಸ್ಥಾನ, ಲಕ್ನೋ ಸೂಪರ್‌ಜೆಂಟ್ಸ್ ಏಳನೇ ಸ್ಥಾನ, ಚೈನ್ನೈ ಸೂಪರ್ ಕಿಂಗ್ಸ್ ಎಂಟನೇ ಸ್ಥಾನ, ಮುಂಬೈ ಇಂಡಿಯನ್ಸ್ ಒಂಬತ್ತನೇ ಸ್ಥಾನ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತು, ಒಂದು ಪಂದ್ಯ ಟೈ ಮಾಡಿಕೊಂಡು ಕೊನೆಯ ಸ್ಥಾನದಲ್ಲಿದೆ.

