
ಹಿರಿಯ ಕ್ರೀಡಾ ವಿಶ್ಲೇಷಕ ಜೋಸೆಫ್ ಹೂವರ್
ಐಪಿಎಲ್ ಫೈನಲ್ ಅಹಮದಾಬಾದ್‌ಗೆ ಸ್ಥಳಾಂತರದ ಹಿಂದೆ ರಾಜಕೀಯ: ಜೋಸೆಫ್ ಹೂವರ್ ಕಿಡಿ
ಐಪಿಎಲ್ ಸಂಪ್ರದಾಯದಂತೆ ಕಳೆದ ಬಾರಿ ಕಪ್ ಗೆದ್ದ ಚಾಂಪಿಯನ್ ತಂಡದ ತವರು ನೆಲದಲ್ಲಿಯೇ ಫೈನಲ್ ಪಂದ್ಯ ನಡೆಯಬೇಕು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಪಂದ್ಯವನ್ನು ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವನ್ನು ಏಕಾಏಕಿ ಅಹಮದಾಬಾದ್‌ಗೆ ಸ್ಥಳಾಂತರಿಸಿರುವುದರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಅಡಗಿದೆ ಎಂದು ಹಿರಿಯ ಕ್ರೀಡಾ ವಿಶ್ಲೇಷಕ ಜೋಸೆಫ್ ಹೂವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ದಿ ಫೆಡರಲ್ ಕರ್ನಾಟಕ'ದ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಸಿಸಿಐ (BCCI) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಐಪಿಎಲ್ ಸಂಪ್ರದಾಯದಂತೆ ಕಳೆದ ಬಾರಿ ಕಪ್ ಗೆದ್ದ ಚಾಂಪಿಯನ್ ತಂಡದ ತವರು ನೆಲದಲ್ಲಿಯೇ ಫೈನಲ್ ಪಂದ್ಯ ನಡೆಯಬೇಕು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಪಂದ್ಯವನ್ನು ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಐಪಿ ಟಿಕೆಟ್ ನೆಪವೊಡ್ಡಿದ ಬಿಸಿಸಿಐ!
ಪಂದ್ಯ ಸ್ಥಳಾಂತರಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಹೆಚ್ಚುವರಿ ಹಾಗೂ ವಿಐಪಿ ಟಿಕೆಟ್‌ಗಳ ಬೇಡಿಕೆಯ ಕಾರಣ ನೀಡಿರುವುದನ್ನು ಹೂವರ್ ತಳ್ಳಿಹಾಕಿದ್ದಾರೆ. "ಶಾಸಕರು ವಿಐಪಿ ಟಿಕೆಟ್ ಕೇಳಿದ್ದಾರೆ ಎಂಬ ಆರೋಪವನ್ನು ನಾನು ಒಪ್ಪುವುದಿಲ್ಲ. ಬಿಸಿಸಿಐ ಕಾರ್ಯದರ್ಶಿಯ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಹಾಗಾದರೆ ಅಹಮದಾಬಾದ್‌ನಲ್ಲಿ ವಿಐಪಿಗಳಿಗೆ ಟಿಕೆಟ್ ನೀಡುವುದಿಲ್ಲವೇ? ಈ ಬಗ್ಗೆ ಬಿಸಿಸಿಐ ಮೊದಲು ಸ್ಪಷ್ಟನೆ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಮೌನ ಮುರಿಯಬೇಕಿದೆ ಕೆಎಸ್ಸಿಎ
"ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ನೇರವಾಗಿ ಕೆಎಸ್ಸಿಎ ಮೇಲೆ ಆರೋಪ ಮಾಡಿದ್ದಾರೆ. ಹೀಗಾಗಿ ಈಗ ಕೆಎಸ್ಸಿಎ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ಸಂಸ್ಥೆಯು ಸಾರ್ವಜನಿಕವಾಗಿ ಈ ಬಗ್ಗೆ ಉತ್ತರಿಸಬೇಕು ಮತ್ತು ಸ್ಪಷ್ಟನೆ ನೀಡಬೇಕು. ಪಂದ್ಯ ಸ್ಥಳಾಂತರದ ಹಿಂದೆ ರಾಜಕೀಯವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ವೇಳೆ ಕೆಎಸ್ಸಿಎ ಈ ಬಗ್ಗೆ ಮಾತನಾಡದೇ ಮೌನ ವಹಿಸಿದರೆ, ಪಂದ್ಯ ಕೈತಪ್ಪಿದ ಸಂಪೂರ್ಣ ತಪ್ಪು ಅವರ ಮೇಲೆಯೇ ಬೀಳಲಿದೆ" ಎಂದು ಹೂವರ್ ಎಚ್ಚರಿಸಿದ್ದಾರೆ.
ರಾಜ್ಯದ ಮರ್ಯಾದೆ ಮತ್ತಷ್ಟು ಹರಾಜು
"ಇತ್ತೀಚೆಗಷ್ಟೇ ಆರ್ ಸಿಬಿ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ಇಡೀ ದೇಶದ ಮುಂದೆ ಕರ್ನಾಟಕದ ಮಾನ ಮರ್ಯಾದೆ ಹೋಗಿದೆ. ಈಗ ನಿಯಮದ ಪ್ರಕಾರ ನಮ್ಮಲ್ಲೇ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿರುವುದರಿಂದ ರಾಜ್ಯಕ್ಕೆ ಮತ್ತಷ್ಟು ಮುಖಭಂಗವಾಗಿದೆ. ಇದು ನಿಜಕ್ಕೂ ಬೇಸರದ ಸಂಗತಿ" ಎಂದು ಹೂವರ್ ಬೇಸರ ವ್ಯಕ್ತಪಡಿಸಿದ್ದಾರೆ.

