
ಸಾಂದರ್ಭಿಕ ಚಿತ್ರ
ಐಪಿಎಲ್ ಆಟಗಾರರಿಗೆ 'ಹನಿಟ್ರ್ಯಾಪ್' ಭೀತಿ: ಫ್ರಾಂಚೈಸಿಗಳಿಗೆ 8 ಪುಟಗಳ ಮಾರ್ಗಸೂಚಿ ಪ್ರಕಟಿಸಿದ ಬಿಸಿಸಿಐ
ಉನ್ನತ ಮಟ್ಟದ ಕ್ರೀಡಾ ವಾತಾವರಣದಲ್ಲಿ 'ಹನಿಟ್ರ್ಯಾಪ್' ಮಾಡುವ ಜಾಲಗಳು ಸಕ್ರಿಯವಾಗಿರುವ ಸಾಧ್ಯತೆಗಳಿರುವುದರಿಂದ ಫ್ರಾಂಚೈಸಿಗಳು ಹಾಗೂ ಆಟಗಾರರು ಸದಾ ಎಚ್ಚರದಿಂದಿರಬೇಕು ಎಂದು ಬಿಸಿಸಿಐ ಸೂಚಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಭದ್ರತಾ ಉಲ್ಲಂಘನೆ, ಹನಿಟ್ರ್ಯಾಪ್ ಭೀತಿ ಮತ್ತು ಇ-ಸಿಗರೇಟ್ ಬಳಕೆಯ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಎಲ್ಲಾ 10 ಫ್ರಾಂಚೈಸಿಗಳಿಗೆ ಕಠಿಣ ನಿಯಮಗಳ (SOP) ಸುತ್ತೋಲೆ ಹೊರಡಿಸಿದೆ. ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಭದ್ರತೆ, ಶಿಷ್ಟಾಚಾರ ಉಲ್ಲಂಘನೆ ಹಾಗೂ 'ಹನಿಟ್ರ್ಯಾಪ್'ನಂತಹ ಗಂಭೀರ ಅಪಾಯಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಎಲ್ಲಾ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ವರದಿ ಮಾಡಿರುವ ಕೆಲವು ಗಂಭೀರ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ಈ ಕುರಿತು ಎಚ್ಚರಿಕೆ ನೀಡಿದೆ. ಗುರುವಾರ (ಮೇ 7) ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು 10 ಫ್ರಾಂಚೈಸಿಗಳ ಸಿಇಒಗಳಿಗೆ 8 ಪುಟಗಳ ಸುತ್ತೋಲೆ ರವಾನಿಸಿದ್ದು, ವೃತ್ತಿಪರತೆ, ಶಿಸ್ತು ಮತ್ತು ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಒಂದು ವೇಳೆ ಈ ನಿಯಮಗಳನ್ನು ನಿರ್ಲಕ್ಷಿಸಿದರೆ ಫ್ರಾಂಚೈಸಿಗಳು ಹಾಗೂ ಬಿಸಿಸಿಐನ ಪ್ರತಿಷ್ಠೆಗೆ ಧಕ್ಕೆಯಾಗುವುದರ ಜೊತೆಗೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು ಇಲ್ಲಿವೆ.
1. ಅನಧಿಕೃತ ವ್ಯಕ್ತಿಗಳ ಭೇಟಿಗೆ ಬ್ರೇಕ್
ಆಟಗಾರರ ಹೋಟೆಲ್ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳು ಭೇಟಿ ನೀಡುತ್ತಿರುವುದು ಬಿಸಿಸಿಐನ ಪ್ರಮುಖ ಕಳವಳವಾಗಿದೆ. ಟೀಮ್ ಮ್ಯಾನೇಜರ್‌ನ ಗಮನಕ್ಕೆ ತಾರದೆ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಕೊಠಡಿಗಳಿಗೆ ಹೊರಗಿನವರನ್ನು ಬಿಡುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ಟೀಮ್ ಮ್ಯಾನೇಜರ್‌ನ ಲಿಖಿತ ಅನುಮತಿಯಿಲ್ಲದೆ ಆಟಗಾರರ ಕೊಠಡಿಗೆ ಯಾರನ್ನೂ ಬಿಡುವಂತಿಲ್ಲ. ಅತಿಥಿಗಳನ್ನು ಹೋಟೆಲ್‌ನ ಲಾಬಿ ಅಥವಾ ಸ್ವಾಗತ ಕೊಠಡಿಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಭೇಟಿಯಾಗಬೇಕು.
2. ಹನಿಟ್ರ್ಯಾಪ್ ಬಗ್ಗೆ ಎಚ್ಚರ
ಉನ್ನತ ಮಟ್ಟದ ಕ್ರೀಡಾ ವಾತಾವರಣದಲ್ಲಿ 'ಹನಿಟ್ರ್ಯಾಪ್' ಮಾಡುವ ಜಾಲಗಳು ಸಕ್ರಿಯವಾಗಿರುವ ಸಾಧ್ಯತೆಗಳಿರುವುದರಿಂದ ಫ್ರಾಂಚೈಸಿಗಳು ಹಾಗೂ ಆಟಗಾರರು ಸದಾ ಎಚ್ಚರದಿಂದಿರಬೇಕು ಎಂದು ಬಿಸಿಸಿಐ ಸೂಚಿಸಿದೆ. ಇಂತಹ ಘಟನೆಗಳು ಲೈಂಗಿಕ ದುರ್ವರ್ತನೆ ಸೇರಿದಂತೆ ಭಾರತೀಯ ಕಾನೂನುಗಳ ಅಡಿಯಲ್ಲಿ ಗಂಭೀರ ಆರೋಪಗಳಿಗೆ ಗುರಿಮಾಡುವ ಅಪಾಯವಿರುವುದರಿಂದ ಫ್ರಾಂಚೈಸಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
3. ಮಾಲೀಕರಿಗೂ ಬಿಸಿ ಮುಟ್ಟಿಸಿದ ಮಂಡಳಿ
ಪಂದ್ಯದ ವೇಳೆ ಕೆಲ ತಂಡದ ಮಾಲೀಕರು ಆಟಗಾರರ ಡಗೌಟ್, ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರ ಜೊತೆ ಸಂವಹನ ನಡೆಸುವುದು ಹಾಗೂ ತಬ್ಬಿಕೊಳ್ಳುವುದು ಮಾಡುತ್ತಿರುವುದು ಕಂಡುಬಂದಿದೆ. ಎಷ್ಟೇ ಒಳ್ಳೆಯ ಉದ್ದೇಶದಿಂದ ಮಾಡಿದ್ದರೂ, ಇದು 'ಆಟಗಾರರ ಮತ್ತು ಪಂದ್ಯದ ಅಧಿಕಾರಿಗಳ ಪ್ರವೇಶ' ಶಿಷ್ಟಾಚಾರದ ನೇರ ಉಲ್ಲಂಘನೆಯಾಗಿದೆ. ನಿಯೋಜಿತ ಮಾರ್ಗಗಳನ್ನು ಹೊರತುಪಡಿಸಿ, ಮಾಲೀಕರು ಆಟಗಾರರು ಅಥವಾ ಅಧಿಕಾರಿಗಳೊಂದಿಗೆ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
4. ಇ-ಸಿಗರೇಟ್, ವೇಪಿಂಗ್ ಕಟ್ಟುನಿಟ್ಟಿನ ನಿಷೇಧ
ಇತ್ತೀಚೆಗಷ್ಟೇ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನ ಬಾಲ್ಕನಿಯಲ್ಲಿ ವೇಪಿಂಗ್ (ಇ-ಸಿಗರೇಟ್ ಬಳಕೆ) ಮಾಡಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಯಾರ ಹೆಸರನ್ನೂ ಪ್ರಸ್ತಾಪಿಸದ ಬಿಸಿಸಿಐ, ಇ-ಸಿಗರೇಟ್ ಬಳಕೆಯು ಭಾರತೀಯ ಕಾನೂನಿನ ಅಡಿ ಅಪರಾಧವಾಗಿದೆ. ಆದ್ದರಿಂದ ಡ್ರೆಸ್ಸಿಂಗ್ ರೂಮ್, ಡಗೌಟ್, ಹೋಟೆಲ್ ಮತ್ತು ಅಭ್ಯಾಸದ ಸ್ಥಳಗಳು ಸೇರಿದಂತೆ ಟೂರ್ನಿಯ ಯಾವುದೇ ಸ್ಥಳಗಳಲ್ಲಿ ಇ-ಸಿಗರೇಟ್ ಅಥವಾ ಯಾವುದೇ ನಿಷೇಧಿತ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಬ್ಯಾನ್ ಮಾಡಲಾಗಿದೆ ಎಂದು ಕಡ್ಡಿಮುರಿದಂತೆ ಹೇಳಿದೆ.

