
ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಮೊಬೈಲ್ ಬಳಸುತ್ತಿರುವುದು.
IPL 2026 | ನಿಯಮ ಉಲ್ಲಂಘನೆ; ರಾಜಸ್ಥಾನ್ ರಾಯಲ್ಸ್ ಮ್ಯಾನೇಜರ್‌ಗೆ ಬಿಸಿಸಿಐನಿಂದ 1 ಲಕ್ಷ ರೂ. ದಂಡ!
ಐಪಿಎಲ್ ನಿಯಮಾವಳಿಗಳ ಪ್ರಕಾರ, ಡಗೌಟ್ ಹಾಗೂ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಂವಹನ ಸಾಧನಗಳನ್ನು ಬಳಸುವಂತಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪಂದ್ಯಗಳ ನಡುವೆ ಶಿಸ್ತಿನ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮ ಕೈಗೊಂಡಿದೆ.
ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಕುಳಿತುಕೊಳ್ಳುವ ಡಗೌಟ್‌ನಲ್ಲಿ ಪ್ರದೇಶದಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ 1 ಲಕ್ಷ ರೂಪಾಯಿ ದಂಡ ಹಾಗೂ ಕಠಿಣ ಎಚ್ಚರಿಕೆ ನೀಡಲಾಗಿದೆ.
ಏನಿದು ಘಟನೆ ?
ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು. ತಂಡದ ಡಗೌಟ್‌ನಲ್ಲಿ ಕುಳಿತಿದ್ದ ರೋಮಿ ಭಿಂದರ್ ಮೊಬೈಲ್ ಫೋನ್ ಬಳಸುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ, ತಕ್ಷಣವೇ ವಿವರಣೆ ಕೇಳಿತ್ತು. ಭಿಂದರ್ ನೀಡಿದ ವಿವರಣೆಯು ತೃಪ್ತಿಕರವಾಗಿಲ್ಲದ ಕಾರಣ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಈ ಶಿಸ್ತು ಕ್ರಮವನ್ನು ದೃಢಪಡಿಸಿದ್ದಾರೆ.
ಡಗೌಟ್‌ನಲ್ಲಿ ಫೋನ್ ನಿಷೇಧ ಏಕೆ?
ಐಪಿಎಲ್ ನಿಯಮಾವಳಿಗಳ ಪ್ರಕಾರ, ಡಗೌಟ್ ಹಾಗೂ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಂವಹನ ಸಾಧನಗಳನ್ನು ಬಳಸುವಂತಿಲ್ಲ. ಪಂದ್ಯದ ಸಮಗ್ರತೆಯನ್ನು ಕಾಪಾಡಲು ಮತ್ತು ಬೆಟ್ಟಿಂಗ್ ಅಥವಾ ಭ್ರಷ್ಟಾಚಾರದಂತಹ ಚಟುವಟಿಕೆಗಳನ್ನು ತಡೆಯಲು ಪಂದ್ಯದ ಅವಧಿಯಲ್ಲಿ ಈ ನಿರ್ಬಂಧವಿರುತ್ತದೆ. ಆಟಗಾರರು ಮತ್ತು ಸಿಬ್ಬಂದಿ ಕ್ರೀಡಾಂಗಣ ಪ್ರವೇಶಿಸುವ ಮುನ್ನವೇ ತಮ್ಮ ಫೋನ್‌ಗಳನ್ನು ಎಸಿಯು ಅಧಿಕಾರಿಗಳ ಬಳಿ ಠೇವಣಿ ಇಡಬೇಕು. "ಯಾವುದೇ ಭ್ರಷ್ಟ ಉದ್ದೇಶದ ಸೂಚನೆ ಇಲ್ಲದಿದ್ದರೂ, ಪಂದ್ಯದ ಸುರಕ್ಷತೆ ಮತ್ತು ಶಿಸ್ತಿನ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಎಚ್ಚರಿಕೆ ನೀಡಿದ ಬಿಸಿಸಿಐ
1 ಲಕ್ಷ ರೂ. ದಂಡ ಪಾವತಿಸುವುದರ ಜತೆಗೆ, ಮುಂದಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸಿದರೆ ಐಪಿಎಲ್‌ನಿಂದಲೇ ಹೊರಗಿಡುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೋಮಿ ಭಿಂದರ್‌ಗೆ ಎಚ್ಚರಿಸಲಾಗಿದೆ. "ನಿಯಮಗಳನ್ನು ಪಾಲಿಸುವುದು ಎಲ್ಲರಿಗೂ ಕಡ್ಡಾಯ, ಇಲ್ಲಿ ಯಾವುದೇ ವಿನಾಯಿತಿ ಇಲ್ಲ" ಎಂದು ಮಂಡಳಿ ಸ್ಪಷ್ಟಪಡಿಸಿದೆ.

