
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ
IPL 2026 | ಬೆಂಗಳೂರಿಗರಿಗೆ ಬಿಗ್ ಶಾಕ್; ಚಿನ್ನಸ್ವಾಮಿಯಲ್ಲಿ ನಡೆಯಲ್ಲ ಐಪಿಎಲ್ ಫೈನಲ್!
ಕ್ವಾಲಿಫೈಯರ್ - 1ರಲ್ಲಿ ಅಂಕಪಟ್ಟಿಯ ಟಾಪ್ 2 ತಂಡಗಳ ನಡುವೆ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್‌ಗೆ ಲಗ್ಗೆ ಇಡುತ್ತಾರೆ. ಎಲಿಮಿನೇಟರ್ 3 ಮತ್ತು 4ನೇ ಸ್ಥಾನದ ತಂಡಗಳ ನಡುವಿನ ಹಣಾಹಣಿಯಲ್ಲಿ ಸೋತವರು ಟೂರ್ನಿಯಿಂದ ಹೊರಬೀಳುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಸೀಸನ್‌ನ ರೋಚಕ ಘಟ್ಟಕ್ಕೆ ವೇದಿಕೆ ಸಿದ್ಧವಾಗಿದೆ. ಆದರೆ, ಕಳೆದ ಬಾರಿಯ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಫೈನಲ್ ಪಂದ್ಯ ನಡೆಯುವುದಿಲ್ಲ ಎಂಬುದು ಅಧಿಕೃತವಾಗಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಫೈನಲ್ ಬೆಂಗಳೂರಿನಲ್ಲಿ ನಡೆಯಲಿದೆ ಎಂಬ ಭರವಸೆ ನೀಡಿದ್ದರಾದರೂ, ಅಂತಿಮವಾಗಿ ಬಿಸಿಸಿಐ ಅಹಮದಾಬಾದ್‌ಗೆ ಮಣೆ ಹಾಕಿದೆ.
ಪ್ಲೇಆಫ್ ಹಾಗೂ ಫೈನಲ್ ವೇಳಾಪಟ್ಟಿ
ಬಿಸಿಸಿಐ ಪ್ರಕಟಿಸಿರುವಂತೆ ಮೇ 26ರಿಂದ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಕ್ವಾಲಿಫೈಯರ್- 1 ಮೇ 26ರಂದು ಧರ್ಮಶಾಲಾ, ಮೇ 27ಕ್ಕೆ ಎಲಿಮಿನೇಟರ್ ಹಾಗೂ ಮೇ 29ಕ್ಕೆ ಕ್ವಾಲಿಫೈಯರ್ - 2 ಪಂದ್ಯಗಳು ನ್ಯೂ ಚಂಡೀಗಢದ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೇ 31ರಂದು ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ
ಬೆಂಗಳೂರಿಗೆ ಕೈತಪ್ಪಲು ಕಾರಣವೇನು?
ಸಾಮಾನ್ಯವಾಗಿ ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಫೈನಲ್ ನಡೆಯುವುದು ಐಪಿಎಲ್ ಸಂಪ್ರದಾಯ. ಆದರೆ, ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಎಂಎಲ್‌ಎ ಟಿಕೆಟ್ ಹಂಚಿಕೆ ವಿವಾದದ ನಡುವೆ ಉಂಟಾಗಿರುವ ಗೊಂದಲಗಳು ಬಿಸಿಸಿಐ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾದ ಕಿರಿಕಿರಿ ಹಾಗೂ ಭದ್ರತಾ ಕಾರಣಗಳಿಂದಾಗಿ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಧರ್ಮಶಾಲ ಕ್ರೀಡಾಂಗಣ
ಪ್ಲೇಆಫ್ ಪಂದ್ಯಗಳ ಲೆಕ್ಕಾಚಾರ
ಕ್ವಾಲಿಫೈಯರ್ - 1ರಲ್ಲಿ ಅಂಕಪಟ್ಟಿಯ ಟಾಪ್ 2 ತಂಡಗಳ ನಡುವೆ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್‌ಗೆ ಲಗ್ಗೆ ಇಡುತ್ತಾರೆ. ಎಲಿಮಿನೇಟರ್ 3 ಮತ್ತು 4ನೇ ಸ್ಥಾನದ ತಂಡಗಳ ನಡುವಿನ ಹಣಾಹಣಿಯಲ್ಲಿ ಸೋತವರು ಟೂರ್ನಿಯಿಂದ ಹೊರಬೀಳುತ್ತಾರೆ. ಕ್ವಾಲಿಫೈಯರ್ 2ನಲ್ಲಿ ಎಲಿಮಿನೇಟರ್ ವಿಜೇತರು ಮತ್ತು ಕ್ವಾಲಿಫೈಯರ್ 1ರಲ್ಲಿ ಸೋತವರ ನಡುವೆ ನಡೆಯುವ ಪಂದ್ಯ. ಇಲ್ಲಿ ಗೆದ್ದವರು ಅಂತಿಮವಾಗಿ ಫೈನಲ್‌ನಲ್ಲಿ ಸೆಣಸುತ್ತಾರೆ. ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಸಂಭ್ರಮ ನೋಡಬೇಕೆಂಬ ಅಭಿಮಾನಿಗಳ ಕನಸು ಕನಸಾಗೇ ಉಳಿಯಲಿದೆ.

