IPL 2026 Final: Today is the IPL Mahasamara; RCB-Gujarat eyes on 2nd trophy!
x

ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದರ್‌ ಹಾಗೂ ಜಿಟಿ ತಂಡದ ನಾಯಕ ಶುಭಮನ್‌ ಗಿಲ್‌

IPL 2026 Final: ಇಂದು ಐಪಿಎಲ್ ಮಹಾಸಮರ; 2ನೇ ಟ್ರೋಫಿ ಮೇಲೆ ಆರ್‌ಸಿಬಿ-ಗುಜರಾತ್ ಕಣ್ಣು!

ಇಂದಿನ ಪಂದ್ಯದಲ್ಲಿ ಕೇವಲ ಗೆಲುವು ಮಾತ್ರವಲ್ಲ, ಇತಿಹಾಸ ಬರೆಯುವ ಸುವರ್ಣಾವಕಾಶ ಉಭಯ ತಂಡಗಳ ಮುಂದಿದೆ. ಈ ಪಂದ್ಯದಲ್ಲಿ ಯಾರು ಗೆದ್ದರೂ ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.


Click the Play button to hear this message in audio format

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಹಾ ಹಬ್ಬದ ಕ್ಲೈಮ್ಯಾಕ್ಸ್ ದಿನ ಬಂದೇ ಬಿಟ್ಟಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಎರಡನೇ ಟ್ರೋಫಿ ಮೇಲೆ ಎರಡು ತಂಡಗಳ ಕಣ್ಣು!

ಇಂದಿನ ಪಂದ್ಯದಲ್ಲಿ ಕೇವಲ ಗೆಲುವು ಮಾತ್ರವಲ್ಲ, ಇತಿಹಾಸ ಬರೆಯುವ ಸುವರ್ಣಾವಕಾಶ ಉಭಯ ತಂಡಗಳ ಮುಂದಿದೆ. ಈ ಪಂದ್ಯದಲ್ಲಿ ಯಾರು ಗೆದ್ದರೂ ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಗುಜರಾತ್ ಟೈಟಾನ್ಸ್ ಲೀಗ್‌ಗೆ ಪದಾರ್ಪಣೆ ಮಾಡಿದ ಚೊಚ್ಚಲ ವರ್ಷದಲ್ಲೇ (2022) ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟ್ರೋಫಿ ಎತ್ತಿಹಿಡಿದು ಎಲ್ಲರನ್ನು ಬೆರಗುಗೊಳಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಶಕಗಳ ಟ್ರೋಫಿ ಬರವನ್ನು ನೀಗಿಸಿ, ಕಳೆದ ಸೀಸನ್‌ನಲ್ಲಿ (2025) ಮೊದಲ ಬಾರಿಗೆ ಐಪಿಎಲ್ ಮುಕುಟ ಧರಿಸಿದ್ದ ಆರ್‌ಸಿಬಿ, ಈಗ ಸತತ 2ನೇ ಬಾರಿ ಚಾಂಪಿಯನ್ ಆಗುವ ತವಕದಲ್ಲಿದೆ.

ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ

ತವರು ಮೈದಾನದಲ್ಲಿ ಗುಜರಾತ್‌ಗೆ ಬೆಂಬಲ?

ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ತನ್ನ ತವರು ಮೈದಾನದ ಬೆಂಬಲ ಸಿಗಲಿದೆ. ಆದರೆ, ಅದ್ಭುತ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡಕ್ಕೆ ವಿಶ್ವದಾದ್ಯಂತ ಇರುವ ಅಭಿಮಾನಿಗಳ ಪ್ರಾರ್ಥನೆ ಮತ್ತು ಬೆಂಬಲ ಬ್ಯಾಕಿಂಗ್ ನೀಡಿದೆ.

ಪಿಚ್ ರಿಪೋರ್ಟ್ ಮತ್ತು ಹವಾಮಾನ

ಅಹಮದಾಬಾದ್‌ನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದ್ದು, ರನ್ ಮಳೆ ಹರಿಯುವ ಸಾಧ್ಯತೆ ಇದೆ. ಸಂಜೆ ಇಬ್ಬನಿ ಪ್ರಭಾವ ಇರುವುದರಿಂದ ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆರ್‌ಸಿಬಿ ಪ್ಲಸ್ ಪಾಯಿಂಟ್ ಏನು ?

ಕಳೆದ ಬಾರಿಯ ಚಾಂಪಿಯನ್ಸ್ ಆಗಿರುವುದರಿಂದ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್‌ ಪಾಟಿದರ್‌, ದೇವದತ್‌ ಪಡಿಕ್ಕಲ್‌ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದು, ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌ ಕುಮಾರ್‌ ಹಾಗೂ ಆಸೀಸ್‌ ವೇಗಿ ಜೋಶ್ ಹೇಜಲ್​ವುಡ್ ಬಲ ತಂದುಕೊಡಲಿದ್ದಾರೆ.

ಗುಜರಾತ್ ಬಲ ಏನು ?

ಸಮತೋಲಿತ ಬೌಲಿಂಗ್ ದಾಳಿ ಮತ್ತು ಕೊನೆಯ ಓವರ್‌ಗಳವರೆಗೆ ಹೋರಾಡುವ ಜಿದ್ದಾಜಿದ್ದಿನ ಮನೋಭಾವ ಇವರ ಶಕ್ತಿಯಾಗಿದೆ. ಒಟ್ಟಾರೆಯಾಗಿ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಗಿಫ್ಟ್ ಸಿಟಿ ಗುಜರಾತ್ ನಡುವಿನ ಈ ಹೈವೋಲ್ಟೇಜ್ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ನೀಡುವುದಂತೂ ಗ್ಯಾರಂಟಿ. ಇಂದು ರಾತ್ರಿ ಐಪಿಎಲ್‌ನ ಹೊಸ ಸಾಮ್ರಾಟ ಯಾರು ಎಂಬುದು ನಿರ್ಧಾರವಾಗಲಿದೆ.

Read More
Next Story