
ಟಿ20 ವಿಶ್ವಕಪ್ 2026: ನ್ಯೂಜಿಲೆಂಡ್ ಬಗ್ಗುಬಡಿದು ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಸೂರ್ಯ ಪಡೆ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬರೋಬ್ಬರಿ 96 ರನ್ಗಳ ಬೃಹತ್ ಅಂತರದಿಂದ ಮಣಿಸಿದ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊಟ್ಟಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಭವ್ಯ ಗೆಲುವಿನೊಂದಿಗೆ ಭಾರತ ಒಟ್ಟು ಮೂರು ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿದ್ದ ಭಾರತ, ಇತ್ತೀಚೆಗೆ 2024ರಲ್ಲಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಕಪ್ ಎತ್ತಿ ಹಿಡಿದಿತ್ತು. ಇದೀಗ 2026ರಲ್ಲಿ ಮೂರನೇ ಟ್ರೋಫಿ ಜಯಿಸುವ ಮೂಲಕ, ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿದೆ.
ಭಾರತದ ಬ್ಯಾಟರ್ಗಳ ಸ್ಪೋಟಕ ಆಟ
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 255 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಕೇವಲ 45 ಎಸೆತಗಳಲ್ಲಿ 8 ಸಿಕ್ಸರ್ ನೆರವಿನಿಂದ 89 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 52 ರನ್ ಗಳಿಸಿ ಮೊದಲ ವಿಕೆಟ್ಗೆ 7.1 ಓವರ್ಗಳಲ್ಲಿ 98 ರನ್ಗಳ ಸ್ಪೋಟಕ ಜೊತೆಯಾಟವಾಡಿದರು. ನಂತರ ಬಂದ ಇಶಾನ್ ಕಿಶನ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ 25 ಎಸೆತಗಳಲ್ಲಿ 54 ರನ್ ಚಚ್ಚಿದರು. ಅಂತಿಮ ಓವರ್ಗಳಲ್ಲಿ ಶಿವಂ ದುಬೆ ಎದುರಿಸಿದ ಕೇವಲ 8 ಎಸೆತಗಳಲ್ಲಿ 26 ರನ್ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಕಿವೀಸ್ ಪಡೆಯನ್ನು ಕಟ್ಟಿಹಾಕಿದ ಬುಮ್ರಾ, ಅಕ್ಷರ್
ಭಾರತ ನೀಡಿದ 256 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು 19 ಓವರ್ಗಳಲ್ಲಿ ಕೇವಲ 159 ರನ್ಗಳಿಗೆ ಸರ್ವಪತನ ಕಂಡು 96 ರನ್ಗಳ ಹೀನಾಯ ಸೋಲು ಅನುಭವಿಸಿತು. ಕಿವೀಸ್ ಪರ ಟಿಮ್ ಸೈಫರ್ಟ್ ಕೇವಲ 26 ಎಸೆತಗಳಲ್ಲಿ 52 ರನ್ ಹಾಗೂ ನಾಯಕ ಮಿಚೆಲ್ ಸ್ಯಾಂಟನರ್ 43 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ, ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ. ಭಾರತದ ಪರ ಮಾರಕ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡದ ಬೆನ್ನೆಲುಬು ಮುರಿದರು.

