
ಮಹಿಳಾ ಏಷ್ಯಾಕಪ್: ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ ತಂಡ- ಬಿಸಿಸಿಐ ನಿರ್ಧಾರಕ್ಕೆ ಕೋಚ್ ಬೆಂಬಲ
ಮಹಿಳಾ ಏಷ್ಯಾಕಪ್ 2026 ಗೆದ್ದ ಭಾರತ ತಂಡ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಬಿಸಿಸಿಐ ನಿರ್ಧಾರಕ್ಕೆ ಭಾರತ ತಂಡದ ಕೋಚ್ ಅಮೋಲ್ ಮುಜುಮ್ದಾರ್ ಬೆಂಬಲ ಕೊಟ್ಟಿದ್ದಾರೆ.
ಮಹಿಳಾ ಏಷ್ಯಾಕಪ್ 2026ರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದಿರುವ ಭಾರತ ತಂಡ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರವನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಗೊಂಡಿತ್ತು ಎಂದು ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಸ್ಪಷ್ಟಪಡಿಸಿದ್ದಾರೆ.
ಭಾರತ ತಂಡ ಬಿಸಿಸಿಐ ನಿರ್ಧಾರದೊಂದಿಗೆ ನಿಂತಿದೆ. ಟ್ರೋಫಿ ಪ್ರದಾನ ಸಮಾರಂಭದಲ್ಲಿ ನಡೆದ ಬೆಳವಣಿಗೆಗಳು ಏಷ್ಯಾಕಪ್ ಗೆದ್ದಿರುವ ಭಾರತದ ಸಾಧನೆಯನ್ನು ಯಾವುದೇ ರೀತಿಯಲ್ಲೂ ಕುಗ್ಗಿಸುವುದಿಲ್ಲ ಎಂದು ಮುಜುಮ್ದಾರ್ ಹೇಳಿದ್ದಾರೆ.
ಇದು BCCI ನಿರ್ಧಾರ ಎಂದ ಕೋಚ್
"ಈ ನಿಲುವನ್ನು ಬಿಸಿಸಿಐ ತೆಗೆದುಕೊಂಡಿದೆ. ನಾವು ಅದರೊಂದಿಗೆ ನಿಂತಿದ್ದೇವೆ. ನಮಗೆ ಈ ಪಂದ್ಯಾವಳಿ ಮುಗಿದಿದೆ. ನಾವು ಚಾಂಪಿಯನ್‌ಗಳು. ಅದೊಂದೇ ನಮಗೆ ಸಾಕು. 2026ರ ಏಷ್ಯಾಕಪ್ ಚಾಂಪಿಯನ್ ಭಾರತ ಎಂಬುದು ಜಗತ್ತಿಗೆ ತಿಳಿದಿದೆ. ನಮ್ಮ ಪಾಲಿಗೆ ಪಂದ್ಯಾವಳಿ ಅಧಿಕೃತವಾಗಿ ಮುಗಿದಿದೆ. ನಾವು ಚಾಂಪಿಯನ್ ಆಗಿರುವುದಕ್ಕೆ ಸಂತೋಷವಾಗಿದೆ. ಈಗ ಏಷ್ಯನ್ ಗೇಮ್ಸ್ ಕಡೆಗೆ ಗಮನ ಹರಿಸುತ್ತೇವೆ" ಎಂದು ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮುಜುಮ್ದಾರ್ ಹೇಳಿದರು.
"ನಾವು ಚಾಂಪಿಯನ್ ಆಗಿರುವುದಕ್ಕೆ ಬಹಳ ಸಂತೋಷವಾಗಿದೆ. ತಂಡದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಹೆಮ್ಮೆ ಇದೆ. ಆಟಗಾರರು ಮಾತ್ರವಲ್ಲದೆ, ಸಹಾಯಕ ಸಿಬ್ಬಂದಿಯ ಕೊಡುಗೆಯೂ ಅತ್ಯಂತ ಮಹತ್ವದ್ದಾಗಿದೆ" ಎಂದು ಅವರು ಹೇಳಿದರು.
ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಭಾರತ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆದರೆ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡ ಟ್ರೋಫಿ ಸ್ವೀಕರಿಸದೇ ಉಳಿಯಿತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಪಂದ್ಯ ವೀಕ್ಷಿಸಲು ಮೈದಾನದಲ್ಲಿದ್ದರು. ಭಾರತ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಅವರು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರೊಂದಿಗೆ ಕುಳಿತಿದ್ದರು.
ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಸುತ್ತ ಸೇರಿ ಸಂಭ್ರಮಿಸಿದರು. ರಾಜೀವ್ ಶುಕ್ಲಾ ಮತ್ತು ದೇವಜಿತ್ ಸೈಕಿಯಾ ಕೂಡ ತಂಡದ ಸಂಭ್ರಮದಲ್ಲಿ ಭಾಗಿಯಾದರು. ಇದೇ ವೇಳೆ ನಖ್ವಿ ಮೈದಾನದಲ್ಲಿದ್ದ ಇತರ ಗಣ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾದಾಗ ನಖ್ವಿ ಶ್ರೀಲಂಕಾ ನಾಯಕಿ ಚಮಾರಿ ಅಥಪತ್ತು ಅವರಿಗೆ ರನ್ನರ್‌ಅಪ್ ಬಹುಮಾನದ ಚೆಕ್ ಹಸ್ತಾಂತರಿಸಿದರು. ಬಳಿಕ ಅಥಪತ್ತು ಹಾಗೂ ಮಾಜಿ ಶ್ರೀಲಂಕಾ ಕ್ರಿಕೆಟಿಗ ಫರ್ವೇಜ್ ಮಹರೂಫ್ ಅವರ ಮಾತುಕತೆಯೊಂದಿಗೆ ಸಮಾರಂಭ ಅಂತ್ಯಗೊಂಡಿತು.
ನಂತರ ನಖ್ವಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಇತರ ಅಧಿಕಾರಿಗಳೊಂದಿಗೆ ಮೈದಾನದಿಂದ ನಿರ್ಗಮಿಸಿದರು. ಆದರೆ ಈ ವೇಳೆಗೆ ಭಾರತ ತಂಡಕ್ಕೆ ಟ್ರೋಫಿ ಅಥವಾ ವಿಜೇತರ ಪದಕಗಳು ಹಸ್ತಾಂತರವಾಗಿರಲಿಲ್ಲ.
ಎರಡು ಆಯ್ಕೆ ನೀಡಿದ್ದ BCCI
ಭಾರತ ತಂಡ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಆರಂಭದಿಂದಲೇ ಒಪ್ಪಿರಲಿಲ್ಲ. ಆದರೆ ಟ್ರೋಫಿ ಪ್ರದಾನ ಸಮಾರಂಭ ಸುಗಮವಾಗಿ ನಡೆಯಲು ಎರಡು ಆಯ್ಕೆಗಳನ್ನು ನೀಡಲಾಗಿತ್ತು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಮೊದಲನೆಯದಾಗಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಉಪಾಧ್ಯಕ್ಷ ಖಾಲಿದ್ ಅಲ್ ಜರೂನಿ ಅವರು ಭಾರತ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ಪ್ರಸ್ತಾಪವನ್ನು ಮುಂದಿಡಲಾಗಿತ್ತು. ಆದರೆ ಈ ಪ್ರಸ್ತಾಪವನ್ನು ನಖ್ವಿ ತಿರಸ್ಕರಿಸಿದರು.
ಇತ್ತೀಚಿನ ಪದ್ಧತಿಯಂತೆ ಪ್ರಶಸ್ತಿ ಗೆದ್ದ ಕ್ರಿಕೆಟ್ ಮಂಡಳಿಯ ಪ್ರತಿನಿಧಿಯೇ ಟ್ರೋಫಿ ಹಸ್ತಾಂತರಿಸುವ ಮತ್ತೊಂದು ಆಯ್ಕೆಯನ್ನೂ ಬಿಸಿಸಿಐ ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪಕ್ಕೂ ನಖ್ವಿ ಒಪ್ಪಲಿಲ್ಲ.
2025ರ ಪುರುಷರ ಏಷ್ಯಾಕಪ್‌ನಲ್ಲೂ ಇದೇ ನಡೆದಿತ್ತು
2025ರ ಸೆಪ್ಟೆಂಬರ್‌ನಲ್ಲಿ ನಡೆದ ಪುರುಷರ ಏಷ್ಯಾಕಪ್ ಫೈನಲ್‌ನ ವಿವಾದ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿತ್ತು.
ಭಾರತ ತಂಡವು ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಸಂಬಂಧದ ಹಿನ್ನೆಲೆಯಲ್ಲಿ ಮೊಹ್ಸಿನ್ ನಖ್ವಿ ಬದಲಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರಿಂದ ಟ್ರೋಫಿ ಸ್ವೀಕರಿಸಲು ಬಯಸಿತ್ತು ಎಂದು ವರದಿಯಾಗಿತ್ತು. ಆದರೆ ನಖ್ವಿ ಈ ಮನವಿಯನ್ನು ತಿರಸ್ಕರಿಸಿ, ಭಾರತೀಯ ನಾಯಕ ಅವರಿಂದಲೇ ಟ್ರೋಫಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಇದರಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಕೊನೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧಿಕಾರಿಯೊಬ್ಬರು ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದು, ಭಾರತೀಯ ಆಟಗಾರರು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ತೆರಳದೆ ಉಳಿದಿದ್ದರು.

